ರಾಜ್ಯಸಭೆ ಛೇರ್ಮನ್ ಸೀಟ್​ನತ್ತ ಫೈಲ್ ಎಸೆದ ತನ್ನ ಕೃತ್ಯವನ್ನ ಸಮರ್ಥಿಸಿಕೊಂಡ ಕಾಂಗ್ರೆಸ್ ಸಂಸದ

ಮೊನ್ನೆ ರಾಜ್ಯಸಭೆಯಲ್ಲಿ ರೈತರ ಪ್ರತಿಭಟನೆ ವಿಚಾರದಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಕೆಲ ವಿಪಕ್ಷ ಸದಸ್ಯರು ಸದನದ ಬಾವಿಗೆ ಇಳಿದು ಗದ್ದಲ ನಡೆಸಿದ್ದರು. ಈ ವೇಳೆ ಬಾಜ್ವಾ ಛೇರ್ಮನ್​ರತ್ತ ಕಡತ ಎಸೆದಿದ್ದರು. ತಮ್ಮ ಈ ಕೃತ್ಯವನ್ನು ಬಾಜ್ವಾ ಸಮರ್ಥಿಸಿಕೊಂಡಿದ್ದಾರೆ.

ರಾಜ್ಯಸಭೆಯಲ್ಲಿ ನಡೆದ ಗದ್ದಲ

ರಾಜ್ಯಸಭೆಯಲ್ಲಿ ನಡೆದ ಗದ್ದಲ

 • Share this:
  ನವದೆಹಲಿ, ಆ. 12: ಮೊನ್ನೆ ರಾಜ್ಯಸಭೆಯ ಕಲಾಪದ ವೇಳೆ ಗದ್ದಲ ನಡೆಸಿದ ವಿಪಕ್ಷಗಳ ಕೆಲ ಸದಸ್ಯರ ಪೈಕಿ ಕಾಂಗ್ರೆಸ್ ಸಂಸದ ಪ್ರತಾಪ್ ಸಿಂಗ್ ಬಾಜ್ವಾ ಅವರು ಟೇಬಲ್ ಮೇಲೆ ಹತ್ತಿ ರೂಲ್​ಬುಕ್ ಅನ್ನು ಛೇರ್ಮನ್ ಸೀಟ್​ನತ್ತ ಎಸೆದು ದುರ್ವರ್ತನೆ ತೋರಿದ್ದರು. ನಿನ್ನೆ ರಾಜ್ಯಸಭಾ ಛೇರ್ಮನ್ ಈ ಘಟನೆಯನ್ನ ಉಲ್ಲೇಖಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಸದನದ ಮರ್ಯಾದೆಗೆ ಮಾಡಿದ ಕೇಡು ಎಂದು ಬೇಸರಪಟ್ಟಿದ್ದರು. ಆದರೆ, ಕಾಂಗ್ರೆಸ್ ಸಂಸದ ಪ್ರತಾಪ್ ಸಿಂಗ್ ಬಾಜ್ವಾ ತಮ್ಮ ವರ್ತನೆಯನ್ನ ಸಮರ್ಥಿಸಿಕೊಂಡಿದ್ದಾರೆ. ಆ ಘಟನೆ ಬಗ್ಗೆ ನಾನ್ಯಾಕೆ ವ್ಯಥೆ ಪಡಬೇಕು ಎಂದು ಕೇಳಿದ ಅವರು, ನಾನು ಮಾಡಿದ್ದರಲ್ಲಿ ಯಾವ ತಪ್ಪೂ ಇರಲಿಲ್ಲ ಎಂದು ಹೇಳಿದ್ದಾರೆ.

  ನ್ಯೂಸ್18 ಜೊತೆ ಮಾತನಾಡಿದ ಬಾಜ್ವಾ, “ನಾನ್ಯಾಕೆ ಕ್ಷಮೆ ಕೇಳಬೇಕು? ಕಳೆದ 20 ತಿಂಗಳುಗಳಿಂದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಧ್ವನಿ ಎಲ್ಲರಿಗೂ ಕೇಳಿಸಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ನಾನು ಪಶ್ಚಾತಾಪ ಪಡುವಂಥದ್ದೇನಿಲ್ಲ. ಅವರು ಏನು ಬೇಕಾದರೂ ಕ್ರಮ ಕೈಗೊಳ್ಳಲಿ” ಎಂದಿದ್ದಾರೆ. ಮತ್ತೊಂದು ಸುದ್ದಿವಾಹಿನಿ ಜೊತೆ ಮಾತನಾಡುತ್ತಾ ಪ್ರತಾಪ್ ಸಿಂಗ್ ಬಾಜ್ವಾ ತಮ್ಮ ವರ್ತನೆಯನ್ನ ಬಲವಾಗಿ ಸಮರ್ಥಿಸಿಕೊಂಡರು. “ನೂರಕ್ಕೆ ನೂರು ನನಗೆ ಯಾವ ಪಶ್ಚಾತಾಪ ಇಲ್ಲ. ನೀವು ಬೇಕಾದರೆ ನನ್ನನ್ನ ಬಂಧಿಸಿ, ಶೂಟ್ ಮಾಡಿ. ರೈತರ ಧ್ವನಿ ಎಲ್ಲಿಯವರೆಗೆ ಕೇಳಿಸಿಕೊಳ್ಳುವುದಿಲ್ಲವೋ ಇಂಥ ಕೃತ್ಯವನ್ನ ನೂರು ಬಾರಿ ಬೇಕಾದರೂ ಮಾಡುತ್ತೇನೆ” ಎಂದು ಸ್ಪಷ್ಟಪಡಿಸಿದರು.

  ಕೇಂದ್ರ ಸರ್ಕಾರ ರೂಪಿಸಿರುವ ಮೂರು ಕೃಷಿ ಕಾಯ್ದೆ ವಿಚಾರಗಳ ಬಗ್ಗೆ ರಾಜ್ಯಸಭೆಯಲ್ಲಿ ಮೊನ್ನೆ ಚರ್ಚೆ ನಡೆಯುತ್ತಿದ್ದ ವೇಳೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಸದಸ್ಯರು ಪ್ರತಿಭಟನೆ ಮಾಡತೊಡಗಿದರು. ಸದನದ ಬಾವಿಗೆ ಇಳಿದು ಘೋಷಣೆ ಕೂಗತೊಡಗಿದರು. ರಾಜ್ಯಸಭೆ ಸ್ಪೀಕರ್ ಚೇರ್​ನ ಕೆಳಗಿನ ಸಾಲಿನಲ್ಲಿ ಅಧಿಕಾರಿಗಳು ಕೂರುವ ಟೇಬಲ್ ಮೇಲೆ ಹಲವರು ಹತ್ತಿ ನಿಂತು ಕೂಗಾಡಿದರು. ಈ ವೇಳೆ, ಪ್ರತಾಪ್ ಸಿಂಗ್ ಬಾಜ್ವಾ ಅವರು ಟೇಬಲ್ ಮೇಲೆ ನಿಂತು ನಿಯಮಪುಸ್ತಕದ ಕಡತವನ್ನ ಸ್ಪೀಕರ್ ಚೇರ್​ನತ್ತ ಎಸೆದಿದ್ದರು. ಕೊನೆಗೆ ರಾಜ್ಯಸಭೆ ಕಲಾಪವನ್ನ ಮುಂದೂಡಬೇಕಾಯಿತು.

  ಇದನ್ನೂ ಓದಿ: ಒಲಿಂಪಿಕ್ಸ್ ಹಾಕಿ ಆಟಗಾರರಿಗೆ ಪಂಜಾಬ್​ನಲ್ಲಿ ಭಾಂಗ್ರಾ ಡ್ಯಾನ್ಸ್ ಮೂಲಕ ಅದ್ದೂರಿ ಸ್ವಾಗತ

  ಈ ವಿಚಾರವನ್ನು ನಿನ್ನೆ ರಾಜ್ಯಸಭೆ ಕಲಾಪದ ಆರಂಭದಲ್ಲಿ ಪ್ರಸ್ತಾಪಿಸಿದ ರಾಜ್ಯಸಭೆ ಛೇರ್ಮನ್ ವೆಂಕಯ್ಯ ನಾಯ್ಡು, ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ದೇವಸ್ಥಾನದಲ್ಲಿ ಪಾವಿತ್ರ್ಯತೆ ಕಾಪಾಡಲು ಗರ್ಭಗುಡಿಗೆ ಭಕ್ತರು ಪ್ರವೇಶ ಮಾಡುವುದಿಲ್ಲ. ಹಾಗೆಯೇ, ಸದನದ ಪಾವಿತ್ರ್ಯತೆಯನ್ನ ಸದಸ್ಯರು ಕಾಪಾಡುವುದು ಅವರ ಜವಾಬ್ದಾರಿ. ನಿನ್ನೆ ಕೆಲ ಸದಸ್ಯರು ತಮ್ಮ ವರ್ತನೆ ಮೂಲಕ ಮನೆಯ ಪಾವಿತ್ರ್ಯತೆ ಹಾಳು ಮಾಡಿದರು. ನಿನ್ನೆ ರಾತ್ರಿ ನನಗೆ ನಿದ್ದೆಯೇ ಬರಲಿಲ್ಲ ಎಂದು ವೆಂಕಯ್ಯ ನಾಯ್ಡು ಹೇಳಿದರು.

  ವೆಂಕಯ್ಯ ನಾಯ್ಡು ಹೇಳಿಕೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಸಂಸದ ಪ್ರತಾಪ್ ಸಿಂಗ್ ಬಾಜ್ವಾ ಅವರು ನಿನ್ನೆಯೇ ತಮ್ಮ ವರ್ತನೆಯನ್ನ ಸಮರ್ಥಿಸಿಕೊಂಡಿದ್ದರು. ಇಂದು ಅದನ್ನೇ ಅವರು ಪುನರುಚ್ಚರಿಸಿದ್ದಾರೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:Vijayasarthy SN
  First published: