ಬೋಪಯ್ಯ ನೇಮಕ ರದ್ದು ಕೋರಿ ಕಾಂಗ್ರೆಸ್-ಜೆಡಿಎಸ್ ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ಬೆಳಗ್ಗೆ 10.30ಕ್ಕೆ ವಿಚಾರಣೆ


Updated:May 19, 2018, 12:00 AM IST
ಬೋಪಯ್ಯ ನೇಮಕ ರದ್ದು ಕೋರಿ ಕಾಂಗ್ರೆಸ್-ಜೆಡಿಎಸ್ ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ಬೆಳಗ್ಗೆ 10.30ಕ್ಕೆ ವಿಚಾರಣೆ
ಸರ್ವೋಚ್ಚ ನ್ಯಾಯಾಲಯ

Updated: May 19, 2018, 12:00 AM IST
-ಧರಣೀಶ್ ಬೂಕನಕೆರೆ, ನ್ಯೂಸ್ 18 ಕನ್ನಡ

ನವದೆಹಲಿ(ಮೇ.19): ಹಂಗಾಮಿ ಸ್ಪೀಕರ್ ಆಗಿ ಕೆ.ಜಿ. ಬೋಪಯ್ಯ ನೇಮಕದ ಬೆನ್ನಲ್ಲೇ ನಿರೀಕ್ಷೆಯಂತೆ ಕಾಂಗ್ರೆಸ್ ಸುಪ್ರೀಂಕೋರ್ಟ್ ಬಾಗಿಲು ತಟ್ಟಿದೆ. ಎರಡು ಮುಖ್ಯ ಅಂಶಗಳನ್ನ ಇಟ್ಟುಕೊಂಡು ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆಯನ್ನ ಇಂದು ಬೆಳಗ್ಗೆ 10.30ಕ್ಕೆ ನಿಗದಿಪಡಿಸಲಾಗಿದೆ.

ಸ್ಪೀಕರ್ ಆಯ್ಕೆಯಲ್ಲಿ ಶಾಸಕರ ಹಿರಿತನ ಮತ್ತು ವಿಶ್ವಾಸದ ಅಂಶಗಳನ್ನಿಟ್ಟುಕೊಂಡು ಕಾಂಗ್ರೆಸ್ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್​ಗೆ ದೂರನ್ನ ಸಲ್ಲಿಸಿದೆ. ಸದನದಲ್ಲಿ ಪಕ್ಷಾತೀತವಾಗಿ ಹಿರಿಯ ಸದಸ್ಯರನ್ನ ಸ್ಪೀಕರ್ ಆಗಿ ನೇಮಕ ಮಾಡಬೇಕು. ಬೋಪಯ್ಯ ಕೇವಲ 3 ಬಾರಿ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. 2014ರಲ್ಲಿ ಬಿಜೆಪಿ ಬಹುಮತ ಪಡೆದಿದ್ರೂ 9 ಬಾರಿ ಲೋಕಸಭೆ ಪ್ರವೇಶಿಸಿದ ಕಮಲ್ ನಾಥ್ ಅವರನ್ನ ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿತ್ತು ಎಂಬ ಉಲ್ಲೇಖವನ್ನ ಅರ್ಜಿಯಲ್ಲಿ ಮಾಡಲಾಗಿತ್ತು. ಅದೇ ರೀತಿ ಸದ್ಯ ಕರ್ನಾಟಕ ವಿಧಾನಸಭೆಯ 222 ಶಾಸಕರ ಪೈಕಿ ಹಿರಿಯ ಸದಸ್ಯರಾದ ಆರ್.ವಿ. ದೇಶಪಾಂಡೆಯನ್ನ ಆಯ್ಕೆ ಮಾಡಬೇಕು. ಆದರೆ, ರಾಜಭವನ ಕೆ.ಜಿ. ಬೋಪಯ್ಯ ಅವರನ್ನ ಆಯ್ಕೆ ಮಾಡಿದೆ.

ಈ ಹಿಂದೆ ಹಂಗಾಮಿ ಸ್ಪೀಕರ್ ಆಗಿ ಕೆಲಸ ಮಾಡಿದ್ದ ಬೋಪಯ್ಯ ಅವರ ನಡವಳಿಕೆಗಳು ವಿಶ್ವಾಸಾರ್ಹವಾಗಿಲ್ಲ. 11 ಶಾಸಕರನ್ನ ಬೋಪಯ್ಯ ಅಮಾನತು ಮಾಡಿದ್ದರು. ಈ ಆದೇಶವನ್ನ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಬೇರೆ ಬೇರೆ ಅವಧಿಯಲ್ಲೂ ಬೋಪಯ್ಯ ಅವರ ನಡವಳಿಕೆಗಳು ವಿಶ್ವಾಸಾರ್ಹವಾಗಿಲ್ಲ ಎಂಬ ಅಂಶಗಳನ್ನ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ನಾಳೆ ವಿಶ್ವಾಸಮತಯಾಚನೆ ಇರುವುದರಿಂದ ತುರ್ತು ಅರ್ಜಿ ವಿಚಾರಣೆ ನಡೆಸಬೇಕೆಂದು ಸುಪ್ರೀಂಕೋರ್ಟ್​ಗೆ ಹಿರಿಯ ವಕೀಲರು ಮನವಿ ಮಾಡಿದ್ದಾರೆ. ಹಂಗಾಮಿ ಸ್ಪೀಕೆರ್ ಆಗಿ ನೇಮಕವಾಗಿರುವ ಬೋಪಯ್ಯ ಅವರ ಆಯ್ಕೆಯನ್ನ ರದ್ದು ಮಾಡಿ ಹಿರಿಯ ಶಾಸಕರನ್ನ ನೇಮಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
First published:May 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...