Congress Crisis: ಸುಷ್ಮಿತಾ ದೇವ್ ರಾಜೀನಾಮೆಗೆ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆ ಏನು?

ಮೂಲಗಳ ಪ್ರಕಾರ ಸುಷ್ಮಿತಾ ದೇವ್ ಟಿಎಂಸಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಕಾಂಗ್ರೆಸ್ ನಾಯಕರು ಸುಷ್ಮಿತಾ ದೇವ್ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಸುಷ್ಮಿತಾ ದೇವ್

ಸುಷ್ಮಿತಾ ದೇವ್

  • Share this:
ನವದೆಹಲಿ, ಆ. 16: ಅಸ್ಸಾಮ್​ನ ಮಾಜಿ ಸಂಸದೆ ಅಖಿಲ ಭಾರತ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಿತಾ ದೇವ್ ಅವರು ಪಕ್ಷ ತೊರೆದಿರುವುದು ಕಾಂಗ್ರೆಸಿನಲ್ಲಿ ಸಂಚಲನ ಮೂಡಿಸಿದೆ. ಮೂಲಗಳ ಪ್ರಕಾರ ಅವರು ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ನಡುವೆ ಕಾಂಗ್ರೆಸ್ ನಾಯಕರು ಸುಷ್ಮಿತಾ ದೇವ್ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಅವರು ಸುಷ್ಮಿತಾ ದೇವ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ‌. ಇನ್ನೂ ಕೆಲ ನಾಯಕರು ಸುಷ್ಮಿತಾ ದೇವ್ ಪಕ್ಷ ತ್ಯಜಿಸಿದ್ದನ್ನು ಪಕ್ಷದ ಹಿರಿಯ ನಾಯಕರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ.

ಇಂದು ಕಾಂಗ್ರೆಸ್ ಪಕ್ಷ ತ್ಯಜಿಸುವ ಬಗ್ಗೆ ಘೋಷಿಸಿ‌ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕೃತಜ್ಞತಾ ಪತ್ರವನ್ನು ಬರೆದಿರುವ ಸುಷ್ಮಿತಾ ದೇವ್‌ ಸದ್ಯ ಕೋಲ್ಕತಾದಲ್ಲಿ ಇದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನ ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಸುಷ್ಮಿತಾ ದೇವ್ ಅವರು ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದರೆ ತೃಣಮೂಲ ಕಾಂಗ್ರೆಸ್ ಪಕ್ಷ ಸೇರುವುದು ಖಚಿತವಾದಂತೆ. ಸುಷ್ಮಿತಾ ದೇವ್ ಟಿಎಂಸಿ ಸೇರಿದರೆ ಅಸ್ಸಾಮ್​ನಲ್ಲಿ ಅವರೇ ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.

ಸುಷ್ಮಿತಾ ದೇವ್ ಕಾಂಗ್ರೆಸ್ ತ್ಯಜಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಅವರು, 'ಸುಷ್ಮಿತಾ ದೇವ್ ಅವರಿಂದ ರಾಜೀನಾಮೆ ನೀಡಿರುವ ಬಗ್ಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಯಾವುದೇ ಪತ್ರ ಬಂದಿಲ್ಲ. ಸುಶ್ಮಿತಾ ದೇವ್ ಅವರು ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಪ್ರಬುದ್ಧರಾಗಿದ್ದಾರೆ' ಎಂದು ಹೇಳಿದ್ದಾರೆ. ಅಲ್ಲದೆ 'ನಾನು ಸುಶ್ಮಿತಾ ದೇವ್ ಜೊತೆ ಮಾತನಾಡಲು ಪ್ರಯತ್ನಿಸಿದೆ, ಅವರ ಫೋನ್ ಆಫ್ ಆಗಿತ್ತು. ಆಕೆ ಒಬ್ಬ ಸಮರ್ಪಿತ ಕಾಂಗ್ರೆಸ್ ಕಾರ್ಯಕರ್ತೆ ಮತ್ತು ಬಹುಶಃ ಇವತ್ತಿಗೂ ಅವರು ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತೆ ಇರಬಹುದು. ಅವರೊಂದಿಗೆ ಮಾತನಾಡುವವರೆಗೆ ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ' ಎಂದು ತಿಳಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷ ಸುಷ್ಮಿತಾ ದೇವ್ ಅವರನ್ನು ಸಂಪರ್ಕಿಸುವ, ಮನವೊಲಿಸುವ ಪ್ರಯತ್ನ ಮಾಡುತ್ತಿದೆ ಎಂಬ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯೋತ್ಸವಕ್ಕೆ ಅಡ್ಡಿ- ಎಸ್​ಡಿಪಿಐ ಪಕ್ಷ ನಿಷೇಧಿಸುವಂತೆ ಚುನಾವಣಾ ಆಯೋಗಕ್ಕೆ ದೂರು

ಇನ್ನೊಂದೆಡೆ ಇತ್ತೀಚೆಗೆ ಪಕ್ಷದ ನಾಯಕತ್ವದ ಬಗ್ಗೆ ಪದೇ ಪದೇ ಮಾತನಾಡುತ್ತಿರುವ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ಸುಶ್ಮಿತಾ ದೇವ್ ಕಾಂಗ್ರೆಸ್ ತ್ಯಜಿಸಿದ ಘಟನೆಯ ಹಿನ್ನಲೆಯಲ್ಲಿ 'ಪಕ್ಷದ ನಾಯಕತ್ವವು ಕಣ್ಣು ಮುಚ್ಚಿ' ಕುಳಿತಿದೆ ಎಂದು ವ್ಯಾಖ್ಯಾನಿಸಿದ್ದಾರೆ.‌ ಪಕ್ಷವನ್ನು ಬಲಪಡಿಸುವ ನಮ್ಮ ಪ್ರಯತ್ನಗಳಿಗೆ ನಮ್ಮನ್ನು 'ಹಿರಿಯರು' ಎಂದು ದೂಷಿಸಲಾಗಿದೆ. ಈಗ ಯುವಕರೇ ಪಕ್ಷವನ್ನು ತ್ಯಜಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು ಸುಶ್ಮಿತಾ ದೇವ್ ಕಾಂಗ್ರೆಸ್ ತ್ಯಜಿಸಿದ ಬೆಳವಣಿಗೆಯನ್ನು 'ಅತ್ಯಂತ ದುರದೃಷ್ಟಕರ' ಎಂದು ಕರೆದಿದ್ದಾರೆ. "ಇದು ನಿಜವಾಗಿದ್ದರೆ ಅದು ಅತ್ಯಂತ ದುರದೃಷ್ಟಕರ. ಏಕೆ ಸುಶ್ಮಿತದೇವಿ? ನಿಮ್ಮ ಹಿಂದಿನ ಸಹೋದ್ಯೋಗಿಗಳು ಮತ್ತು ಸ್ನೇಹಿತರು ವಿಶೇಷವಾಗಿ 1991ರಲ್ಲಿ ನೀವು ಮೊದಲ ಸಲ DUSU ಚುನಾವಣೆಗೆ ಸ್ಪರ್ಧಿಸಿದಾಗ ಈ ಲಕೋನಿಕ್ ಪತ್ರಕ್ಕಿಂತ ಉತ್ತಮ ವಿವರಣೆಗೆ ಅರ್ಹರಾಗಿದ್ದೀರಾ?" ಎಂದು ಟ್ವಿಟರ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.

"ಸುಶ್ಮಿತಾ ದೇವ್ ಒಬ್ಬ ಸಮರ್ಪಿತ ಕಾಂಗ್ರೆಸ್ ನಾಯಕಿ, ಅವರು ಅಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ಭಾವಿಸಿರಲಿಲ್ಲ. ನಾವು ಕುಟುಂಬದಂತೆಯೇ ಇದ್ದೆವು. ಪಕ್ಷದ ವಿರುದ್ಧ ಏನಾದರೂ ಇದ್ದರೆ, ಅವರು ಚರ್ಚಿಸಬೇಕಿತ್ತು. ನಾನು ಅವರ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮತ್ತು ರಾಜೀನಾಮೆಯನ್ನು ಹಿಂಪಡೆಯುವಂತೆ ವಿನಂತಿಸುತ್ತೇನೆ" ಎಂದು ಅಸ್ಸಾಂ ಕಾಂಗ್ರೆಸ್ ಸಂಸದ ರಿಪುನ್ ಬೋರಾ ಹೇಳಿದ್ದಾರೆ.
ಸುಶ್ಮಿತಾ ದೇವ್ ಅವರಂತಹ ನಾಯಕಿ ಪಕ್ಷಕ್ಕೆ ಏಕೆ ರಾಜೀನಾಮೆ ನೀಡಿದರು ಎಂಬುದನ್ನು ಪಕ್ಷವು ಗಂಭೀರವಾಗಿ ಯೋಚಿಸಬೇಕು. ಇದರ ಬಗ್ಗೆ ಬೊಬ್ಬೆ ಹೊಡೆಯುವುದರಲ್ಲಿ ಅರ್ಥವಿಲ್ಲ" ಎಂದು ಕಾಂಗ್ರೆಸ್ ಲೋಕಸಭಾ ಸಂಸದ ಕಾರ್ತಿ ಚಿದಂಬರಂ ಟ್ವೀಟ್ ಮಾಡಿದ್ದಾರೆ. ಈ ನಡುವೆ ಸುಷ್ಮಿತಾ ದೇವ್ ಬಿಜೆಪಿ ಸೇರುತ್ತಿಲ್ಲ ಮತ್ತು ಪಕ್ಷದ ಯಾವುದೇ ಹಿರಿಯ ನಾಯಕರೊಂದಿಗೆ ಸಂಪರ್ಕದಲ್ಲಿ ಇಲ್ಲ ಎಂದು ಸಿಲ್ಚಾರ್ ಬಿಜೆಪಿ ಸಂಸದ ರಾಜದೀಪ್ ರಾಯ್ ಹೇಳಿದ್ದಾರೆ.

ವರದಿ: ಧರಣೀಶ್ ಬೂಕನಕೆರೆ
Published by:Vijayasarthy SN
First published: