ಚಿದಂಬರಂಗಿಲ್ಲ ರಿಲೀಫ್​; ನವೆಂಬರ್​ 27ರ ವರೆಗೆ ನ್ಯಾಯಾಂಗ ಬಂಧನ ಮುಂದೂಡಿಕೆ

P Chidambaram: ಐಎನ್​ಎಕ್ಸ್​ ಮೀಡಿಯಾ ಸಂಸ್ಥೆ ವಿದೇಶಿ ಮೂಲಗಳಿಂದ ರೂ. 305 ಕೋಟಿಯನ್ನು 2007ರಲ್ಲಿ ಸ್ವೀಕರಿಸಿತ್ತು. ಈ ವೇಳೆ ಚಿದಂಬರಂ ಕೇಂದ್ರದ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅವರ ಪ್ರಭಾವವನ್ನು ಬಳಸಿಕೊಂಡು ಅವ್ಯವಹಾರ ನಡೆಸಲಾಗಿದೆ ಎಂಬ ಗಂಭೀರ ಆರೋಪ ಅವರ ಮೇಲಿದೆ.

Sharath Sharma Kalagaru | news18-kannada
Updated:November 13, 2019, 5:32 PM IST
ಚಿದಂಬರಂಗಿಲ್ಲ ರಿಲೀಫ್​; ನವೆಂಬರ್​ 27ರ ವರೆಗೆ ನ್ಯಾಯಾಂಗ ಬಂಧನ ಮುಂದೂಡಿಕೆ
ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ
  • Share this:
ನವದೆಹಲಿ: ಒಂದೆಡೆ ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟ್​ ಬಿಗ್​ ರಿಲೀಫ್​ ನೀಡಿದರೆ, ಮತ್ತೊಂದೆಡೆ ದೆಹಲಿ ಕೋರ್ಟ್​ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂರನ್ನು ನವೆಂಬರ್​ 27ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಐಎನ್​ಎಕ್ಸ್​ ಮೀಡಿಯಾ ಖಾಸಗಿ ಲೇವಾದೇವಿ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿದಂಬರಂಗೆ ಸದ್ಯಕ್ಕೆ ರಿಲೀಫ್​ ಸಿಗುವಂತೆ ಕಾಣಿಸುತ್ತಿಲ್ಲ. 

ಕಳೆದ ತಿಂಗಳು ಆರೋಗ್ಯ ಸ್ಥಿತಿಯನ್ನು ಉಲ್ಲೇಖಿಸಿ ಚಿದಂಬರಂ ಮಧ್ಯಂತರ ಜಾಮೀನು ಕೋರಿದ್ದರು. ಆದರೆ ಇದನ್ನು ಪರಿಗಣಿಸದ ನ್ಯಾಯಾಲಯ ನವೆಂಬರ್​ 13ರವರೆಗೆ ನ್ಯಾಯಾಂಗ ಬಂಧನದ ಆದೇಶ ನೀಡಿತ್ತು. ಇಂದು ನ್ಯಾಯಾಂಗ ಬಂಧನ ಅಂತ್ಯವಾದ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆ ಆಲಿಸಿದ ನ್ಯಾಯಾಲಯ, ಚಿದಂಬರಂರ ನ್ಯಾಯಾಂಗ ಬಂಧನವನ್ನು ಮುಂದೂಡಿದೆ. ಈ ಮೂಲಕ ಕಾಂಗ್ರೆಸ್​ ಹಿರಿಯ ನಾಯಕನಿಗೆ ಬಂಧ ಮುಕ್ತಿ ಸದ್ಯಕ್ಕಿಲ್ಲ ಎಂಬುದು ಖಚಿತವಾಗಿದೆ.

ಜತೆಗೆ ಜಾರಿ ನಿರ್ದೇಶನಾಲಯ ಕಳೆದ ಬಾರಿ ಕೋರ್ಟ್​ಗೆ ಹಾಜರುಪಡಿಸಿದ ವೇಳೆ ಒಂದು ದಿನ ವಿಚಾರಣೆ ನಡೆಸಲು ಕಸ್ಟಡಿಗೆ ಕೇಳಿತ್ತು. ಇದಕ್ಕೂ ಕೋರ್ಟ್​ ಒಪ್ಪಿಗೆ ನೀಡಿರಲಿಲ್ಲ.

ಇದನ್ನೂ ಓದಿ: ಡಿಗ್ರಿ ಪಾಸಾದವರಿಗೆ ಇಲ್ಲಿದೆ ಸರ್ಕಾರಿ ಕೆಲಸ; 10 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅನಾರೋಗ್ಯದ ಹಿನ್ನೆಲೆಯಲ್ಲಿ ಕೋರ್ಟ್​ ತಿಹಾರ್​ ಜೈಲು ಅಧಿಕಾರಿಗಳಿಗೆ ಕೆಲ ಸೂಚನೆಗಳನ್ನು ನೀಡಿತ್ತು. ಚಿದಂಬರಂಗೆ ಔಷದಿ, ವೆಸ್ಟರ್ನ್​ ಟಾಯ್ಲೆಟ್​, ಭದ್ರತೆ ಮತ್ತು ಪ್ರತ್ಯೇಕ ಸೆಲ್​ ನೀಡುವಂತೆ ಆದೇಶಿಸಿತ್ತು. ಮನೆ ಅಡುಗೆಯನ್ನೂ ಅವರಿಗೆ ನೀಡುವಂತೆ ಕೋರ್ಟ್​ ಸೂಚಿಸಿತ್ತು.

ಆಗಸ್ಟ್​ 21ರಂದು 74 ವರ್ಷದ ಚಿದಂಬರಂರನ್ನು ಸಿಬಿಐ ಚೆನ್ನೈನ ನಿವಾಸದಲ್ಲಿ ಬಂಧಿಸಿತ್ತು. ಅದಾದ ನಂತರ ಜಾಮೀನು ಎಂಬುದು ಮಾಜಿ ಸಚಿವರಿಗೆ ಮರೀಚಿಕೆಯಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ಭೀಷ್ಮ ಶಪಥ; ಅನರ್ಹ ಶಾಸಕರನ್ನು ಸೋಲಿಸುವ ತನಕ ಗಡ್ಡ ಬೋಳಿಸಲ್ಲ!ಏನಿದು ಪ್ರಕರಣ?:

2017ರ ಮೇ 15ರಂದು ಐಎನ್​ಎಕ್ಸ್​ ಮಿಡಿಯಾ ಖಾಸಗಿ ಲೇವಾದೇವಿ ಪ್ರಕರಣ ಚಿದಂಬರಂ ವಿರುದ್ಧ ದಾಖಲಾಗಿತ್ತು. ಐಎನ್​ಎಕ್ಸ್​ ಮೀಡಿಯಾ ಸಂಸ್ಥೆ ವಿದೇಶಿ ಮೂಲಗಳಿಂದ ರೂ. 305 ಕೋಟಿಯನ್ನು 2007ರಲ್ಲಿ ಸ್ವೀಕರಿಸಿತ್ತು. ಈ ವೇಳೆ ಚಿದಂಬರಂ ಕೇಂದ್ರದ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅವರ ಪ್ರಭಾವವನ್ನು ಬಳಸಿಕೊಂಡು ಅವ್ಯವಹಾರ ನಡೆಸಲಾಗಿದೆ ಎಂಬ ಗಂಭೀರ ಆರೋಪ ಅವರ ಮೇಲಿದೆ.

First published: November 13, 2019, 5:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading