ಪ್ರಯಾಗ್ರಾಜ್: ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ (Uttar Pradesh) ದುಷ್ಕರ್ಮಿಗಳ ಗುಂಡಿನ ದಾಳಿಗೆ ಹತನಾದ ದರೋಡೆಕೋರ ಅತೀಕ್ ಅಹ್ಮದ್‌ನನ್ನು (Atiq Ahmed) ಹುತಾತ್ಮ ಎಂದು ಬಣ್ಣಿಸಿದ ಕಾಂಗ್ರೆಸ್ (Congress) ಕೌನ್ಸಿಲರ್ ಅಭ್ಯರ್ಥಿ ರಾಜ್‌ಕುಮಾರ್ ಸಿಂಗ್ ಅಲಿಯಾಸ್ ರಜ್ಜು ಭಯ್ಯಾ (Rajkumar singh) ಮಾಫಿಯಾ ಡಾನ್ಗೆ ಭಾರತ ರತ್ನ ನೀಡಬೇಕೆಂದು ಒತ್ತಾಯಿಸಿದ್ದಾನೆ. ಅತೀಕ್ಗೆ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಕೊಡಬೇಕೆಂದಿರುವ ಕಾಂಗ್ರೆಸ್ ನಾಯಕ ಜೊತೆಗೆ ಅತೀಕ್ ಅಹ್ಮದ್ ದೇಹವನ್ನು ತ್ರಿವರ್ಣ ಧ್ವಜದಲ್ಲಿ ಸುತ್ತಿಡಬೇಕಿತ್ತು ಎಂದು ಹೇಳಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದಾರೆ. ಅದ್ಯಕ್ಕೆ ಆತನನ್ನು ಪೊಲೀಸರು ಬಂಧಿಸಿದ್ದರೆ, ಕಾಂಗ್ರೆಸ್ ಪಕ್ಷವೂ ಉಚ್ಛಾಟನೆ ಮಾಡಿದೆ.
ಪಕ್ಷದಿಂದ 6 ವರ್ಷ ಉಚ್ಛಾಟನೆ
ದರೋಡೆಕೋರನಿಗೆ ದೇಶದ ಪ್ರತಿಷ್ಠಿತ ಗೌರವ ಸಿಗಬೇಕೆಂದಿದ್ದಲ್ಲದೆ, ತ್ರಿವರ್ಣಧ್ವಜದಲ್ಲಿ ಮುಚ್ಚಿಡಬೇಕೆಂದಿದ್ದ ರಾಜ್ ಕುಮಾರ್ನನ್ನು ಕಾಂಗ್ರೆಸ್ ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ. ಹಾಗಾಗಿ ಮುಂಬರುವ ಮುನ್ಸಿಪಲ್ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಈಗ ಸ್ವತಂತ್ರ ಅಭ್ಯರ್ಥಿಯನ್ನು ಬೆಂಬಲಿಸುತ್ತಿದೆ. ನಗರಸಭೆಯ 43ನೇ ವಾರ್ಡ್ನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಜಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸರು ಅಭ್ಯರ್ಥಿಯನ್ನು ಬಂಧಿಸಿದ್ದಾರೆ.
ಭಾರತ ರತ್ನ ಕೊಡಬೇಕೆಂದು ಆಗ್ರಹ
ರಾಜ್‌ಕುಮಾರ್ ಅಲಿಯಾಸ್ ರಜ್ಜು ಭಯ್ಯಾ ಅವರು ಅತೀಕ್ ಅಹ್ಮದ್ ಅವರನ್ನು ಹತ್ಯೆ ಮಾಡಲಾಗಿದೆ, ಅವರು ಹುತಾತ್ಮರಾಗಿದ್ದಾರೆ ಎಂದಿರುವ ಆತ ಮಾಜಿ ಶಾಸಕ ಹಾಗೂ ಸಂಸದರಿಗೆ ಭಾರತ ರತ್ನ ನೀಡಬೇಕು ಹೇಳಿಕೆ ನೀಡಿದ್ದರು. ಮುಲಾಯಂ ಸಿಂಗ್ ಯಾದವ್ ಅವರಿಗೆ ಪದ್ಮವಿಭೂಷಣ ಸಿಗಬಹುದಾದರೆ, ಅತೀಕ್ ಅಹ್ಮದ್ ಅವರಿಗೆ ಭಾರತ ರತ್ನ ಏಕೆ ಸಿಗಬಾರದು? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾದ ಕಾರಣ ಸಿಎಂ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಬೇಕು ಎಂದು ಹೇಳಿದ್ದರು.
ರಾಜ್‌ಕುಮಾರ್ ಸಿಂಗ್ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ . ಈ ಬಾರಿ ಮುನ್ಸಿಪಲ್ ಚುನಾವಣೆಯಲ್ಲಿ ವಾರ್ಡ ನಂ.43ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ಈಗ ಅವರನ್ನು ಪಕ್ಷ ಉಚ್ಛಾಟಿಸಿದೆ. ಪಕ್ಷದ ಚಿಹ್ನೆ ಸಿಕ್ಕಿರುವುದರಿಂದ ಈ ಚಿಹ್ನೆಯಿಂದಲೇ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ವತಂತ್ರ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಘೋಷಿಸಿದೆ. ರಜ್ಜು ಭಯ್ಯಾ ಅವರು ಈ ಹಿಂದೆಯೂ ಕೌನ್ಸಿಲರ್ ಚುನಾವಣೆಗೆ ಸ್ಪರ್ಧಿಸಿದ್ದರು. ಆರೋಪಿ ರಾಜ್‌ಕುಮಾರ್ ಅತಿಕ್ ಸಮಾಧಿ ಬಳಿ ಹೋಗಿ ತ್ರಿವರ್ಣ ಧ್ವಜವನ್ನು ಅದರ ಮೇಲಿಟ್ಟು, ಸೆಲ್ಯೂಟ್ ಹೊಡೆದಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈಯಕ್ತಿಕ ಹೇಳಿಕೆ ಎಂದ ಪಕ್ಷ
ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರದೀಪ್ ಮಿಶ್ರಾ ಅಂಶುಮಾನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮಾಫಿಯಾ ಡಾನ್ ಅತೀಕ್ಗೆ ಸಂಬಂಧಿಸಿದಂತೆ ರಜ್ಜು ಹೇಳಿಕೆಯನ್ನು ಖಂಡಿಸಲಾಗಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಇದು ರಜ್ಜು ಅವರ ವೈಯಕ್ತಿಕ ಹೇಳಿಕೆ, ಪಕ್ಷಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ರಜ್ಜು ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟಿಸಲಾಗಿದೆ ಎಂದು ತಿಳಿಸಿದ್ದಾರೆ.
ಅತೀಕ್ ಅಹ್ಮದ್ ಯಾರು?
ಅತೀಕ್ ಅಹ್ಮದ್ 1962 ರಲ್ಲಿ ಅಂದಿನ ಅಲಹಾಬಾದ್ ಅಂದರೆ ಈಗಿನ ಪ್ರಯಾಗ್ ರಾಜ್ನ ಚಾಕಿಯಾ ಪ್ರದೇಶದಲ್ಲಿ ಜನಿಸಿದ. ತಂದೆ ಫಿರೋಜ್ ಅಹಮದ್ ಜೀವನೋಪಾಯಕ್ಕಾಗಿ ಟಾಂಗಾ ನಡೆಸುತ್ತಿದ್ದರು. ಅತೀಕ್ 10ನೇ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ, ನಂತರ ಓದನ್ನು ಸಂಪೂರ್ಣವಾಗಿ ತೊರೆದಿದ್ದ ಆತ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ. ನಂತರ ಕುಖ್ಯಾತ ರೌಡಿ ಚಾಂದ್ ಬಾಬಾನನ್ನು ಕೊಂದು ಅಲಹಾಬಾದ್ನಲ್ಲಿ ಡಾನ್ ಆಗಿ ಮೆರೆದಾಡಿದ್ದ.
ಇದನ್ನೂ ಓದಿ: Atiq Ahmed Killers: ಅತೀಕ್ ಅಹ್ಮದ್ ಶೂಟೌಟ್‌ನ ಮೂವರು ಆರೋಪಿಗಳಿಗಿದೆ ಖತರ್ನಾಕ್ ಇತಿಹಾಸ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ