ನವದೆಹಲಿ : ಜವಾಹರ್ ಲಾಲ್ ನೆಹರೂ (Jawaharlal Nehru) ದೇಶದ ಮೊದಲ ಪ್ರಧಾನಮಂತ್ರಿ, ಅವರೊಬ್ಬ ಶ್ರೇಷ್ಠ ವ್ಯಕ್ತಿ, ಆದರೂ ಅವರ ಕುಟುಂಬ ಹಾಗೂ ಪಕ್ಷದವರೂ ಅವರ ಉಪನಾಮವನ್ನು (Surname) ಎಲ್ಲೂ ಏಕೆ ಬಳಸುವುದಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಗುರುವಾರ ರಾಜ್ಯಸಭೆಯಲ್ಲಿ ಪ್ರಶ್ನಿಸಿದ್ದರು. ಮೋದಿ ಅವರ ಈ ಹೇಳಿಕೆಗೆ ಕಾಂಗ್ರೆಸ್ ನಾಯಕರು (Congress Leaders) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾರಾದರೂ ತಾಯಿಯ ಅಜ್ಜನ ಉಪನಾಮವನ್ನು ತಮ್ಮ ಹೆಸರಿನ ಮುಂದೆ ಬಳಸುತ್ತಾರೆಯೆ? ಎಂದು ತಿರುಗೇಟು ನೀಡಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ (India's Culture) ಯಾರು ತಾಯಿಯ ಅಜ್ಜನ ಉಪನಾಮವನ್ನು ಬಳಸುವುದಿಲ್ಲ, ಮೋದಿಯವರಿಗೆ ಇದನ್ನ ಅರ್ಥಮಾಡಿಕೊಳ್ಳುವಷ್ಟು ಸಾಮಾನ್ಯ ತಿಳುವಳಿಕೆ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಸುರ್ಜೇವಾಲ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಾಜ್ಯ ಸಭೆಯ ಭಾಷಣದ ವೇಳೆ ನೆಹರೂ ಉಪನಾಮವನ್ನು ಬಳಸದಿರುವುದರ ಬಗ್ಗೆ ಮಾಡಿದ್ದ ಪ್ರಶ್ನೆಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲ, ಮೋದಿಯವರಿಗೆ ಭಾರತೀಯ ಸಂಸ್ಕೃತಿಯ ಕುರಿತು ಮೂಲಭೂತ ತಿಳುವಳಿಕೆ ಇಲ್ಲ, ಆ ದೇವರು ಮಾತ್ರ ಈ ದೇಶವನ್ನು ಉಳಿಸಬಲ್ಲರು ಎಂದು ವ್ಯಂಗ್ಯವಾಡಿದ್ದಾರೆ.
ತಾಯಿಯ ಅಜ್ಜನ ಹೆಸರನ್ನು ಯಾರು ಬಳಸುತ್ತಾರೆ?
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರ್ಜೇವಾಲ " ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತಿರುವ ಮೋದಿ ಅವರಿಗೆ ಭಾರತದ ಸಂಸ್ಕೃತಿ ಬಗ್ಗೆ ತಿಳಿದಿಲ್ಲವೇ ಅಥವಾ ಅರ್ಥವಾಗುವುದಿಲ್ಲವೆ. ಅವರ ಈ ರೀತಿ ಹೀಗೆ ಮಾತನಾಡುತ್ತಾರೆ... ಯಾರು ತಾಯಿಯ ಅಜ್ಜನ ಉಪನಾಮವನ್ನು ಬಳಸುತ್ತಾರೆ? ಎಂದು ನೀವು ದೇಶದ ಯಾವುದೇ ವ್ಯಕ್ತಿಯನ್ನು ಕೇಳಿ ತಿಳಿದುಕೊಳ್ಳಿ ಎಂದು ಹೇಳಿದರು.
ಮುಂದುವರಿದು ಮೋದಿ ಅವರಿಗೆ ಭಾರತದ ಸಂಸ್ಕೃತಿಯ ಬಗ್ಗೆ ಮೂಲಭೂತ ತಿಳುವಳಿಕೆಯೂ ಇಲ್ಲದಿದ್ದರೆ, ಆ ದೇವರು ಮಾತ್ರ ಈ ದೇಶವನ್ನು ಕಾಪಾಡಬೇಕು ಎಂದು ಸುರ್ಜೇವಾಲ ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಸಂಘಟನಾ ಕಾರ್ಯದರ್ಶಿ ವೇಣುಗೋಪಾಲ್ ಕೂಡ ಮೋದಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಸಂಸತ್ತಿನಲ್ಲಿ ಸತ್ಯವನ್ನು ತಿರುಚಲು ಪ್ರಯತ್ನಿಸುತ್ತಿರುವುದು ದುರದೃಷ್ಟಕರ. ಅವರ ಮುಖ್ಯ ಅಜೆಂಡಾ ಗಾಂಧಿ ಕುಟುಂಬದ ಮೇಲೆ ದಾಳಿ ಮಾಡುವುದು. ಇದು ಅವರ ವೈಯಕ್ತಿಕ ಅಜೆಂಡಾ. ಹಾಗಾಗಿಯೇ ಈ ರೀತಿ ಮಾತನಾಡುತ್ತಿದ್ದಾರೆ.
ಸದನದಲ್ಲಿ ದೇಶದ ಪ್ರಸ್ತುತ ಪರಿಸ್ಥಿತಿಯಿಂದ ಗಮನವನ್ನು ಸಂಪೂರ್ಣವಾಗಿ ಬೇರೆಡೆಗೆ ತಿರುಗಿಸುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಪ್ರತಿಪಕ್ಷಗಳು ಕೇಳುತ್ತಿರುವ ಹಲವು ಪ್ರಶ್ನೆಗಳಿಗೆ ಉತ್ತರಿಸಲಾಗದೆ ಗಾಂಧಿ ಪರಿವಾರದ ವಿರುದ್ಧ ಮಾತನಾಡಿ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಆದರೆ ಅವರನ್ನು ಯಾವುದೇ ಕಾರಣವಿಲ್ಲದೆ ಸದನದಿಂದ ಹೊರಹಾಕಲಾಯಿತು. ಅವರಿಬ್ಬರು ಒಂದೇ ಒಂದು ಅಸಂಸದೀಯ ಬಳಸಿರಲಿಲ್ಲ ಆದರೂ ಅವರನ್ನು ಹೊರ ಕಳುಹಿಸಲಾಗಿದೆ. ಇದೆಲ್ಲಾ ಜನರ ದಿಕ್ಕು ತಪ್ಪಿಸುವ ತಂತ್ರವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಮೋದಿ ಹೇಳಿದ್ದೇನು?
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸುವ ವೇಳೆ, ಪ್ರಧಾನಿ ನರೇಂದ್ರ ಮೋದಿ ಗಾಂಧಿ ಪರಿವಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಯಾವುದೇ ಕಾರ್ಯಕ್ರಮವೊಂದರಲ್ಲಿ ನೆಹರೂ ಅವರ ಹೆಸರನ್ನು ಉಲ್ಲೇಖಿಸದಿದ್ದರೆ, ಕಾಂಗ್ರೆಸ್ ಆಕ್ರೋಶಗೊಳ್ಳುತ್ತಿತ್ತು. ಆದರೆ, ನೆಹರೂ ಅವರ ತಲೆಮಾರಿನವರು ನೆಹರೂ ಉಪನಾಮವನ್ನು ಬಳಸಲು ಏಕೆ ಹೆದರುತ್ತಾರೆ? ಅಂತಹ ಮಹಾನ್ ವ್ಯಕ್ತಿಯ ಉಪನಾಮವನ್ನು ಬಳಸಲು ನಾಚಿಕೆಯೇ? ಎಂದು ಪ್ರಶ್ನಿಸಿದ್ದರು.
ನೆಹರೂ ಹೆಸರು ಬಳಸಲು ಅವಮಾನವೇ?
ದೇಶದಲ್ಲಿ 600 ಯೋಜನೆಗಳು ಗಾಂಧಿ-ನೆಹರೂ ಕುಟುಂಬದ ಹೆಸರಿನಲ್ಲಿವೆ ಎಂದು ನಾನು ತಿಳಿದುಕೊಂಡಿದ್ದೇನೆ. ಆದರೆ, ಒಬ್ಬ ವ್ಯಕ್ತಿ ಸಹ ನೆಹರೂ ಉಪನಾಮವನ್ನು ಏಕೆ ಇಡುವುದಿಲ್ಲ ಎಂಬುದು ನನಗೆ ತುಂಬಾ ಆಶ್ಚರ್ಯವನ್ನುಂಟು ಮಾಡಿದೆ. ನೆಹರೂ ಅಂತಹ ಖ್ಯಾತ ವ್ಯಕ್ತಿಯಾಗಿದ್ದರೆ ಅವರ ಉಪನಾಮ ಬಳಸುವುದರಿಂದ ಅವಮಾನ ಏಕೆ? ಎಂದು ಮೋದಿ ಪ್ರಶ್ನಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ