ಕಾಂಗ್ರೆಸ್​ನಿಂದ ಜಿತಿನ್ ಉಚ್ಛಾಟನೆಗೆ ಯತ್ನ; ಭಿನ್ನಮತೀಯರ ಟಾರ್ಗೆಟ್​ಗೆ ಸಿಬಲ್ ಅಸಮಾಧಾನ

ಕಾಂಗ್ರೆಸ್​ನಲ್ಲಿ ನಾಯಕತ್ವ ಬದಲಾವಣೆ ಆಗಬೇಕೆಂದು ಒತ್ತಾಯಿಸಿ ಪತ್ರ ಬರೆದಿದ್ದ 23 ಮಂದಿಯ ಪೈಕಿ ಒಬ್ಬರಾದ ಜಿತಿನ್ ಪ್ರಸಾದ ಅವರ ಉಚ್ಛಾಟನೆಗೆ ಉತ್ತರ ಪ್ರದೇಶದ ಕಾಂಗ್ರೆಸ್​ನೊಳಗೆ ಪ್ರಯತ್ನವಾಗುತ್ತಿದೆ.

ಜಿತಿನ್ ಪ್ರಸಾದ

ಜಿತಿನ್ ಪ್ರಸಾದ

  • News18
  • Last Updated :
  • Share this:
ನವದೆಹಲಿ(ಆ. 27): ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆಯಾಗಬೇಕೆಂದು ಪತ್ರ ಬರೆದಿದ್ದ 23 ಮಂದಿಗೆ ಪಕ್ಷದಲ್ಲಿ ಭವಿಷ್ಯ ಮಸುಕಾಯಿತು ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಅದಕ್ಕೆ ಪುಷ್ಟಿ ನೀಡುವಂತೆ ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ ಜಿತಿನ್ ಪ್ರಸಾದ ಅವರನ್ನ ಉಚ್ಛಾಟಿಸುವ ಪ್ರಯತ್ನಗಳು ನಡೆದಿರುವುದು ಬೆಳಕಿಗೆ ಬಂದಿದೆ. ಜಿತಿನ್ ಪ್ರಸಾದ ಅವರ ಉಚ್ಛಾಟನೆಯಾಗಬೇಕೆಂದು ಒತ್ತಾಯಿಸಿ ಉತ್ತರ ಪ್ರದೇಶದ ಲಖೀಮ್​ಪುರ್ ಖೇರಿ ಜಿಲ್ಲಾ ಕಾಂಗ್ರೆಸ್ ಸಮಿತಿ ನಿರ್ಣಯ ಹೊರಡಿಸಿದೆ.

ನೇಪಾಳ ಗಡಿಭಾಗದಲ್ಲಿರುವ ಲಖೀಮ್​ಪುರ್ ಖೇರಿ ಉತ್ತರ ಪ್ರದೇಶದ ಅತಿದೊಡ್ಡ ಜಿಲ್ಲೆ ಎನಿಸಿದೆ. ಜಿತಿನ್ ಪ್ರಸಾದ ಅವರು ಈ ಜಿಲ್ಲೆಯಲ್ಲಿರುವ ದೌರಾಹ್ರ ಲೋಕಸಭಾ ಕ್ಷೇತ್ರದಿಂದ 11 ವರ್ಷಗಳ ಹಿಂದೆ ಸಂಸದರಾಗಿ ಆಯ್ಕೆಯಾಗಿದ್ದರು. ಈಗ ಈ ಜಿಲ್ಲೆಯ ಕಾಂಗ್ರೆಸ್ ಕಮಿಟಿ ಹೊರಡಿಸಿರುವ ನಿರ್ಣಯದಲ್ಲಿ ಜಿತಿನ್ ಪ್ರಸಾದ ಅವರನ್ನಷ್ಟೇ ಅಲ್ಲ ಭಿನ್ನಾಭಿಪ್ರಾಯದ ಪತ್ರ ಬರೆದಿದ್ದ ಎಲ್ಲಾ 23 ಮಂದಿ ವಿರುದ್ಧವೂ ಶಿಸ್ತಿನ ಕ್ರಮವಾಗಿ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಆಗ್ರಹಿಸಲಾಗಿದೆ.

ಲಖೀಮ್​ಪುರ್ ಖೇರಿಯ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಜಿತಿನ್ ಪ್ರಸಾದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರೆಂದು ಸ್ಥಳೀಯ ಸುದ್ದಿವಾಹಿನಿಗಳು ಬಿತ್ತರಿಸಿವೆ.

ಇದನ್ನೂ ಓದಿ: ಕೊರೋನಾ ಕಾರಣದಿಂದ ದೇಶಾದ್ಯಂತ ಮೊಹರಂ ಮೆರವಣಿಗೆಗೆ ಅವಕಾಶ ನಿರಾಕರಿಸಿದ ಸುಪ್ರೀಂಕೋರ್ಟ್

ನಾಯಕತ್ವ ಬದಲಾವಣೆಯ ಕೂಗಿನಲ್ಲಿ ಮುಂಚೂಣಿಯಲ್ಲಿದ್ದ ಕಪಿಲ್ ಸಿಬಾಲ್ ಅವರು ಈ ಬೆಳವಣಿಗೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿತಿನ್ ಪ್ರಸಾದ ಅವರನ್ನ ಉತ್ತರ ಪ್ರದೇಶದಲ್ಲಿ ಅಧಿಕೃತವಾಗಿ ಗುರಿಯಾಗಿ ಮಾಡುತ್ತಿರುವುದು ದುರದೃಷ್ಟಕರ. ಕಾಂಗ್ರೆಸ್ ಪಕ್ಷ ತನ್ನ ಮೇಲೆಯೇ ದಾಳಿ ಮಾಡಿಕೊಂಡು ಶಕ್ತಿ ವ್ಯಯಿಸುವುದಕ್ಕಿಂತ ಬಿಜೆಪಿಯ ಮೇಲೆ ಸರ್ಜಿಕಲ್ ದಾಳಿ ಮಾಡುವ ಅಗತ್ಯತೆ ಇದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಸಕ್ರಿಯವಾಗಿರುವ, ಪೂರ್ಣಾವಧಿಯ ಹಾಗೂ ಎಲ್ಲರಿಗೂ ಸಿಗುವಂತಹ ಅಧ್ಯಕ್ಷರು ಬೇಕಿದೆ ಎಂದು ಒತ್ತಾಯಿಸಿ ಕಾಂಗ್ರೆಸ್​ನ 23 ಮಂದಿ ಸಹಿಹಾಕಿದ ಪತ್ರವನ್ನು ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಳುಹಿಸಲಾಗಿತ್ತು. ಗಾಂಧಿ ಕುಟುಂಬದ ನಿಷ್ಠಾವಂತ ನಾಯಕರೆನ್ನಲಾಗುವ ಗುಲಾಂ ನಬಿ ಆಜಾದ್ ಅವರು ಈ ಭಿನ್ನಮತೀಯರ ಪತ್ರದ ಸೂತ್ರಧಾರರಾಗಿದ್ದರು. ಕಪಿಲ್ ಸಿಬಲ್, ವೀರಪ್ಪ ಮೊಯಿಲಿ, ಜಿತಿನ್ ಪ್ರಸಾದ ಮೊದಲಾದವರು ಪತ್ರಕ್ಕೆ ಸಹಿಹಾಕಿದ್ದರು.

ಇದನ್ನೂ ಓದಿ: ರಷ್ಯಾದಲ್ಲಿ ಮುಂದಿನ ತಿಂಗಳು ಭಾರತ, ಪಾಕಿಸ್ತಾನ ಮತ್ತು ಚೀನಾ ಒಟ್ಟಿಗೆ ಸಮರಾಭ್ಯಾಸ

ನಾಲ್ಕು ದಿನಗಳ ಹಿಂದೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಬ್ಲ್ಯೂಸಿ) ಸಭೆಯಲ್ಲಿ ಈ ಪತ್ರ ಜೋರು ಸದ್ದು ಮಾಡಿತು. ಸೋನಿಯಾ ಗಾಂಧಿ ಅವರು ತಾವು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದರು. ನೂತನ ಅಧ್ಯಕ್ಷರ ಆಯ್ಕೆಗೂ ಸೂಚಿಸಿದರು. ಈ ವೇಳೆ, ರಾಹುಲ್ ಗಾಂಧಿ ಅವರು ಭಿನ್ನಮತದ ಪತ್ರದ ಬಗ್ಗೆ ಹೆಚ್ಚು ಅಸಮಾಧಾನ ವ್ಯಕ್ತಪಡಿಸಿದರು. ತಮ್ಮ ಅಳಲನ್ನು ವ್ಯಕ್ತಪಡಿಸುವ ಸಮಯ ಇದಾಗಿರಲಿಲ್ಲ. ಸೋನಿಯಾ ಗಾಂಧಿ ಆಸ್ಪತ್ರೆಯಲ್ಲಿದ್ದಾಗ ಹಾಗೂ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ರಾಜಕೀಯ ಬಿಕ್ಕಟ್ಟು ಎದುರಿಸುವಂತಹ ಸಂದಿಗ್ಧ ಸಂದರ್ಭದಲ್ಲಿ ಈ ಪತ್ರ ಬರೆಯುವ ಅಗತ್ಯ ಇರಲಿಲ್ಲ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.

ಏಳು ಗಂಟೆ ಕಾಲ ನಡೆದ ಸಿಡಬ್ಲ್ಯೂಸಿ ಸಭೆಯಲ್ಲಿ ಅಂತಿಮವಾಗಿ ಯಾವುದೇ ನಾಯಕತ್ವ ಬದಲಾವಣೆಯ ನಿಲುವು ಬರಲಿಲ್ಲ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆದಿಯಾಗಿ ಬಹುತೇಕ ಎಲ್ಲಾ ಸದಸ್ಯರೂ ಕೂಡ ಸೋನಿಯಾ ಗಾಂಧಿ ಅವರೇ ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ಅಭಿಪ್ರಾಯಪಟ್ಟರು. ಮುಂದಿನ ದಿನಗಳಲ್ಲಿ ನೂತನ ಕಾಂಗ್ರೆಸ್ ಅಧ್ಯಕ್ಷರು ಆಯ್ಕೆಯಾಗುವವರೆಗೂ ಸೋನಿಯಾ ಗಾಂಧಿ ಅವರೇ ಹಂಗಾಮಿಯಾಗಿ ಮುಂದುವರಿಯುವುದೆಂದು ಅಂತಿಮವಾಗಿ ನಿರ್ಧರಿಸಲಾಯಿತು.
Published by:Vijayasarthy SN
First published: