ಜೈಪುರ(ಜು.19): ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಗೊಳಿಸಲು ಸಂಚು ರೂಪಿಸಿದ್ದಾರೆ ಎಂಬ ಆರೋಪ ಹೊತ್ತ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕೂಡಲೇ ರಾಜೀನಾಮೆ ನೀಡಲಿದೆ ಎಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಆಗ್ರಹಿಸಿದೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿರುವ ಕಾಂಗ್ರೆಸ್ ಮುಖಂಡ ಅಜಯ್ ಮಕೇನ್, ಶಾಸಕ ಭನ್ವರ್ ಲಾಲ್ ಶರ್ಮಾಗೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಬಿಜೆಪಿಗೆ ಬರುವಂತೆ ಆಫರ್ ನೀಡಿದ್ಧಾರೆ. ಶೇಖಾವತ್ ಭನ್ವರ್ ಲಾಲ್ ಶರ್ಮಾ ಮತ್ತು ಸಂಜಯ್ ಜೈನ್ಗೆ ಫೋನ್ ಮಾಡಿ ನಡೆಸಿದ ಸಂಭಾಷಣೆಯ ಆಡಿಯೋ ಟೇಪ್ ಲಭ್ಯವಾಗಿದೆ. ಇದರ ವಿರುದ್ಧ ಎಸಿಬಿಗೆ ದೂರು ನೀಡಿದ್ದೇವೆ ಎಂದರು.
ಹಾಗೆಯೇ ಆಡಿಯೋ ಟೇಪ್ನಲ್ಲಿ ಧ್ವನಿ ತಮ್ಮದಲ್ಲ ಎಂದು ಗಜೇಂದ್ರ ಸಿಂಗ್ ಶೇಖಾವತ್ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಈ ಧ್ವನಿ ಗಜೇಂದ್ರ ಸಿಂಗ್ ಅವರದ್ದು ಅಲ್ಲದಿದ್ದರೇ ಪೊಲೀಸರಿಗೆ ಧ್ವನಿ ಮಾದರಿ ನೀಡಲು ಹಿಂಜರಿಯುತ್ತಿರುವುದು ಏಕೇ? ಎಂದು ಪ್ರಶ್ನಿಸಿದ್ದಾರೆ.
ಶೇಖಾವತ್ ಕೂಡಲೇ ರಾಜೀನಾಮೆ ನೀಡಬೇಕು. ಇವರಿಗೆ ಕೇಂದ್ರ ಸಚಿವರಾಗಿ ಮುಂದುವರಿಯಲು ಯಾವುದೇ ನೈತಿಕ ಹಕ್ಕಿಲ್ಲ. ಎಸಿಬಿ ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ್ಗಳಿವೆ. ಹೀಗಾಗಿ ಗಜೇಂದ್ರ ಸಿಂಗ್ ರಾಜೀನಾಮೆ ನೀಡಲಿ ಎಂದರು.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಲ್ಲಿನ ರಾಜ್ಯಪಾಲರನ್ನು ಭೇಟಿ ಮಾಡಿ ವಿಶ್ವಾಸಮತ ಯಾಚನೆಗೆ ಅವಕಾಶ ಕೋರಿದ್ದಾರೆ. ಆದರೆ, ಇದರ ಬೆನ್ನಿಗೆ 18 ಜನ ಸಚಿನ್ ಪೈಲಟ್ ಬಣದ ಕಾಂಗ್ರೆಸ್ ಶಾಸಕರು ಶುಕ್ರವಾರ ಸಂಜೆಯಿಂದ ನಾಪತ್ತೆಯಾಗಿದ್ದು, ಬಿಜೆಪಿ ಆಡಳಿತವಿರುವ ಕರ್ನಾಟಕಕ್ಕೆ ಇವರನ್ನು ರವಾನಿಸಿರಬಹುದೇ? ಎಂಬ ಸಂದೇಹ ಇದೀಗ ಮನೆ ಮಾಡಿದೆ. ಅಲ್ಲದೆ, ರಾಜಸ್ಥಾನ ಸರ್ಕಾರವನ್ನು ಉರುಳಿಸಲು ಎರಡನೇ ಸುತ್ತಿನ ಚಟುವಟಿಕೆಗಳು ಆರಂಭವಾಗಿವೆಯೇ? ಎಂಬ ಅನುಮಾನಗಳೂ ಬಲಗೊಳ್ಳುತ್ತಿವೆ.
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ್ದಕ್ಕಾಗಿ ಇತ್ತೀಚೆಗೆ ಸಚಿನ್ ಪೈಲಟ್ ಅವರನ್ನು ಡಿಸಿಎಂ ಮತ್ತು ಪಕ್ಷದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿತ್ತು. ಇದರ ಬೆನ್ನಿಗೆ ಸಚಿನ್ ಪೈಲಟ್ ತಾವು ಬಿಜೆಪಿ ಸೇರ್ಪಡೆಯಾಗುವುದಿಲ್ಲ ಎಂದು ತಿಳಿಸಿದ್ದಗ್ಯೂ ಅವರನ್ನು ಶಾಸಕ ಸ್ಥಾನದಿಂದ ಏಕೆ ವಜಾ ಮಾಡಬಾರದು ಎಂದು ಸ್ಪೀಕರ್ ನೋಟಿಸ್ ನೀಡಿದ್ದರು. ಇದು ಸಾಮಾನ್ಯವಾಗಿ ಅವರನ್ನು ಕೆರಳಿಸಿತ್ತು.
ಇದನ್ನೂ ಓದಿ: ರಾಜಸ್ಥಾನದಿಂದ ದಿಢೀರ್ ಕಾಣೆಯಾದ ಸಚಿನ್ ಪೈಲಟ್ ಬಣದ 18 ಶಾಸಕರು; ಕರ್ನಾಟಕಕ್ಕೆ ಆಗಮಿಸಿರುವ ಶಂಕೆ?
ಇದಲ್ಲದೆ, ಸಚಿನ್ ಪೈಲಟ್ ಬಣದ ಜೊತೆ ಗುರುತಿಸಿಕೊಂಡಿರುವ ಭನ್ವರ್ ಲಾಲ್ ಶರ್ಮಾ ಮತ್ತು ವಿಶ್ವೇಂದ್ರ ಸಿಂಗ್ ಎಂಬ ಇಬ್ಬರು ಶಾಸಕರು ಪಕ್ಷಾಂತರ ಮಾಡುವ ಕುರಿತು ಬಿಜೆಪಿ ನಾಯಕ ಗಜೇಂದ್ರ ಶೇಖಾವತ್ ಜೊತೆಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಲೀಕ್ ಆಗಿದ್ದು, ಇಬ್ಬರನ್ನೂ ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ಬೆಳವಣಿಗೆಯಿಂದಲೂ ಸಚಿನ್ ಪೈಲಟ್ ಬಣ ಕೆರಳಿದೆ, ಪರಿಣಾಮ 18 ಶಾಸಕರ ಬಹುಮತ ಯಾಚನೆಗೂ ಮುನ್ನ ದಿಢೀರ್ ಕಾಣೆಯಾಗಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ