news18-kannada Updated:December 23, 2020, 1:01 PM IST
ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ.
ನವ ದೆಹಲಿ; ಕೇಂದ್ರ ಸರ್ಕಾರ ಕೂಡಲೇ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ದೆಹಲಿಯ ಹೊರ ವಲಯದಲ್ಲಿ ಆರಂಭಿಸಿರುವ ರೈತ ಚಳುವಳಿ 27ನೇ ದಿನಕ್ಕೆ ಕಾಲಿಟ್ಟಿದೆ. ರೈತ ಮುಖಂಡರು ಮತ್ತು ಸರ್ಕಾರದ ನಡುವೆ ನಡೆದ 6 ಸುತ್ತಿನ ಮಾತುಕತೆಯೂ ವಿಫಲವಾಗಿದ್ದು, ರೈತರ ಬೇಡಿಕೆಗೆ ಸರ್ಕಾರ ಬಗ್ಗುವಂತೆ ಕಾಣುತ್ತಿಲ್ಲ. ಮತ್ತೊಂದೆಡೆ ರೈತರು ಸಹ ತಮ್ಮ ಹೋರಾಟವನ್ನು ಕೈಬಿಡುವ ಮನಸ್ಸು ಮಾಡಿಲ್ಲ. ಈ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಭಾರತ್ ಬಂದ್ ನಡೆಸಲಾಗಿತ್ತು. ಅಲ್ಲದೆ, ಕಾಂಗ್ರೆಸ್ ಸೇರಿದಂತೆ ದೇಶದ ಎಲ್ಲಾ ವಿರೋಧ ಪಕ್ಷಗಳೂ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದವು. ಇದೀಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಕಾಂಗ್ರೆಸ್ ಕೃಷಿ ಕಾಯ್ದೆ ವಿರುದ್ಧ ರೈತರಿಂದ 2 ಕೋಟಿ ಸಹಿ ಸಂಗ್ರಹಿಸಿದೆ. ಅಲ್ಲದೆ, ನೂತನ ಕೃಷಿ ಕಾನೂನನ್ನು ರದ್ದು ಮಾಡುವಂತೆ ರಾಷ್ಟ್ರಪತಿಗೆ ನಾಳೆ ಮನವಿ ಸಲ್ಲಿಸಲಿದೆ ಎನ್ನಲಾಗುತ್ತಿದೆ.
ನಾಳೆ ಬೆಳಗ್ಗೆ 10.45ಕ್ಕೆ ರಾಷ್ಟ್ರಪತಿಗಳನ್ನು ಭೇಟಿ ಮಾಡಲಿರುವ ರಾಹುಲ್ ಗಾಂಧಿ ನೇತೃತ್ವದ ನಿಯೋಗ 2 ಕೋಟಿ ರೈತರು ಸಹಿ ಹಾಕಿರುವ ದಾಖಲೆಗಳನ್ನು ರಾಷ್ಟ್ರಪತಿಗೆ ನೀಡಲಿದೆ. ಅಲ್ಲದೆ, ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತರಲು ಮುಂದಾಗಿರುವ 3 ಕೃಷಿ ಮಸೂದೆಗಳನ್ನು ಹಿಂಪಡೆಯುವಂತೆ ಸೂಚಿಸಿ ಎಂದು ಮನವಿ ಮಾಡಲಿದೆ ಎಂದು ಕಾಂಗ್ರೆಸ್ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ : ರೈತರ ಬೇಡಿಕೆ ಈಡೇರುವವರೆಗೆ ಬ್ರಿಟನ್ ಪ್ರಧಾನಿ ಭಾರತಕ್ಕೆ ಬರುವುದು ಬೇಡ; ರೈತರಿಂದ ಇಂಗ್ಲೆಂಡ್ ಸಂಸದರಿಗೆ ಪತ್ರ!
ಈ ನಡುವೆ ರೈತ ಹೋರಾಟವೂ ಸಹ ದಿನದಿಂದ ದಿನಕ್ಕೆ ತೀವ್ರವಾಗುತ್ತಲೇ ಇದೆ. ಈವರೆಗೆ ಹೋರಾಟದಲ್ಲಿ ಪಾಲ್ಗೊಂಡಿದ್ದ ಸುಮಾರು 24 ರೈತರು ಚಳಿಗಾಳಿಗೆ ಮೃತಪಟ್ಟಿದ್ದು, ಓರ್ವ ಸಿಖ್ ಧರ್ಮಗುರು ಆತ್ಮಹತ್ಯೆ ಮಾಡಿಕೊಂಡಿರುವುದು ಈ ಹೋರಾಟಕ್ಕೆ ಬೇರೆ ದಾರಿ ತೋರಿದೆ ಎನ್ನಲಾಗುತ್ತಿದೆ.
ಇದಲ್ಲದೆ, ಜನವರಿ 26 ಗಣರಾಜ್ಯೋತ್ಸ ದಿನ ಹತ್ತಿರವಾಗುತ್ತಿದ್ದು, ಈ ವರ್ಷ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಆದರೆ, ಭಾರತದಲ್ಲಿನ ರೈತರ ಸಮಸ್ಯೆ ಬಗೆಹರಿಯುವವರೆಗೂ ಇಂಗ್ಲೆಂಡ್ ಪ್ರಧಾನಿ ಭಾರತಕ್ಕೆ ಬರುವುದು ಬೇಡ ಎಂದು ಒತ್ತಾಯಿಸಿ ಬ್ರಿಟನ್ ಸಂಸದರಿಗೆ ಪತ್ರ ಬರೆಯಲು ಹೋರಾಟ ನಿರತ ರೈತರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ರೈತ ಹೋರಾಟಗಾರರು ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
Published by:
MAshok Kumar
First published:
December 23, 2020, 12:57 PM IST