ಜೈಪುರ (ಜೂ.11): ಕೊರೋನಾ ವೈರಸ್ಗೆ ಇಡೀ ಭಾರತ ತತ್ತರಿಸಿದೆ. ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಈ ಮಧ್ಯೆ ರಾಜಸ್ಥಾನದಲ್ಲಿ ರೆಸಾರ್ಟ್ ರಾಜಕಾರಣ ಆರಂಭವಾಗುವ ಲಕ್ಷಣ ಗೋಚರವಾಗಿದೆ. ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ತನ್ನೆಲ್ಲ ಶಾಸಕರನ್ನು ರೆಸಾರ್ಟ್ಗೆ ಕರೆದೊಯ್ದು ಸಭೆ ನಡೆಸಿದೆ.
ಜೂನ್ 19ರಂದು ರಾಜ್ಯಸಭಾ ಚುನಾವಣೆ ನಡೆಯುತ್ತಿದೆ. ಅದಕ್ಕೂ ಮೊದಲು ಈ ರಾಜಕೀಯ ಬೆಳವಣಿಗೆ ನಡೆದಿದೆ. ಈ ವಿಚಾರವಾಗಿ ರಾಜಸ್ಥಾನ ಕಾಂಗ್ರೆಸ್ನ ಮುಖ್ಯ ವಿಪ್ ಮಹೇಶ್ ಜೋಶಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದು, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಇಂದಿನಿಂದ ತಿರುಪತಿ ತಿಮ್ಮಪ್ಪನ ದರ್ಶನ ಆರಂಭ: ನಿತ್ಯ 6 ಸಾವಿರ ಭಕ್ತರಿಗೆ ಮಾತ್ರ ಅವಕಾಶ
“ಕರ್ನಾಟಕ ಮತ್ತು ಮಧ್ಯಪ್ರದೇಶದಂತೆಯೇ ರಾಜಸ್ಥಾನದಲ್ಲಿಯೂ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬುದು ನನ್ನ ಗಮನಕ್ಕೆ ಬಂದಿದೆ,” ಎಂದು ಮಹೇಶ್ ಜೋಶಿ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಯಾರು ಪ್ರಯತ್ನಗಳನ್ನು ಮಾಡುತ್ತಿದ್ದಾರೆಂದು ಅವರು ನಿರ್ದಿಷ್ಟಪಡಿಸಿಲ್ಲ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಎಸಿಬಿ ಡಿಜಿ ಪ್ರತಿಕ್ರಿಯಿಸಿದ್ದು, “ನಾವು ದೂರನ್ನು ಸ್ವೀಕರಿಸಿದ್ದೇವೆ. ಈ ವಿಚಾರವಾಗಿ ನಾವು ಸೂಕ್ತ ತನಿಖೆ ನಡೆಸುತ್ತೇವೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ,” ಎಂದರು.
ಬಿಜೆಪಿ ತಿರುಗೇಟು:
ಕರ್ನಾಟಕ ಹಾಗೂ ಮಧ್ಯಪ್ರದೇಶ ಮಾದರಿಯಲ್ಲೇ ರಾಜಸ್ಥಾನದಲ್ಲೂ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳುವ ಮೂಲಕ ಇದರ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಕಾಂಗ್ರೆಸ್ ಪರೋಕ್ಷವಾಗಿ ಆರೋಪ ಮಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ತಿರುಗೇಟು ನೀಡಿದೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ರಾಜಸ್ಥಾನ ಮುಖ್ಯಸ್ಥ ಸತೀಶ್ ಪೂಣಿಯಾ, ಕಾಂಗ್ರೆಸ್ಗೆ ಇಲ್ಲಿ ಅಭದ್ರತೆ ಕಾಡುತ್ತಿದೆ. ಅವರ ಮನೆಯವರೇ ಅವರ ಮಾತನ್ನು ಕೇಳುತ್ತಿಲ್ಲ. ಕಾಂಗ್ರೆಸ್ಗೆ ತಮ್ಮ ಎಂಎಲ್ಎಗಳ ಮೇಲೆ ನಂಬಿಕೆಯೇ ಇಲ್ಲ ಎಂದರು.
ಗುಜರಾತ್ನಲ್ಲೂ ರೆಸಾರ್ಟ್ ರಾಜಕಾರಣ:
ರಾಜ್ಯಸಭಾ ಚುನಾವಣೆಗೂ ಮುನ್ನ ಗುಜರಾತ್ನಲ್ಲೂ ರೆಸಾರ್ಟ್ ರಾಜಕೀಯ ಆರಂಭಗೊಂಡಿದೆ. ಕಾಂಗ್ರೆಸ್ ತನ್ನ 17 ಎಂಎಲ್ಎಗಳನ್ನು ರಾಜ್ಕೋಟ್ನಲ್ಲಿರುವ ಫಾರ್ಮ್ಹೌಸ್ಗೆ ಶಿಫ್ಟ್ ಮಾಡಿದೆ. ಬಿಜೆಪಿ ತನ್ನ ಶಾಸಕರನ್ನು ಸೆಳೆದುಕೊಂಡರೆ ಎನ್ನುವ ಭಯಕ್ಕೆ ಈ ರೀತಿ ಮಾಡಿದೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ