ವಿಪಕ್ಷಗಳ ನಾಯಕನಾಗಿ ಪಶ್ಚಿಮಬಂಗಾಳದ ಅಧೀರ್ ರಂಜನ್​ ಚೌಧುರಿ ಆಯ್ಕೆ ಮಾಡಿದ ಕಾಂಗ್ರೆಸ್

ಈ ಸ್ಥಾನಕ್ಕೆ ಅಧೀರ್ ಚೌಧುರಿ ಹೆಸರಿನ ಜೊತೆಗೆ ಕೇರಳ ನಾಯಕ ಕೆ.ಸುರೇಶ್, ಪಕ್ಷದ ವಕ್ತಾರ ಮನೀಷ್ ತಿವಾರಿ, ಮತ್ತು ತಿರುವನಂತಪುರಂ ಸಂಸದ ಶಶಿ ತರೂರ್ ಹೆಸರು ಚಾಲ್ತಿಯಲ್ಲಿದ್ದವು. 

HR Ramesh | news18
Updated:June 18, 2019, 4:03 PM IST
ವಿಪಕ್ಷಗಳ ನಾಯಕನಾಗಿ ಪಶ್ಚಿಮಬಂಗಾಳದ ಅಧೀರ್ ರಂಜನ್​ ಚೌಧುರಿ ಆಯ್ಕೆ ಮಾಡಿದ ಕಾಂಗ್ರೆಸ್
ಅಧೀರ್ ರಂಜನ್ ಚೌಧುರಿ
  • News18
  • Last Updated: June 18, 2019, 4:03 PM IST
  • Share this:
ನವದೆಹಲಿ: ಪಶ್ಚಿಮಬಂಗಾಳದ ಹಿರಿಯ ನಾಯಕ ಅಧೀರ್ ರಂಜನ್​ ಚೌಧುರಿ ಅವರನ್ನು ಲೋಕಸಭೆ ವಿರೋಧ ಪಕ್ಷದ ನಾಯಕನನ್ನಾಗಿ ಇಂದು ಕಾಂಗ್ರೆಸ್​ ಹೆಸರು ಘೋಷಿಸಿದೆ. ಈ ಸ್ಥಾನ ಸ್ವೀಕರಿಸುವಂತೆ ರಾಹುಲ್​ ಗಾಂಧಿ ಅವರಿಗೆ ಎಷ್ಟೇ ಮನವಿ ಮಾಡಿದರೂ ಅವರು ಒಪ್ಪದಿದ್ದಾಗ ಈ ಸ್ಥಾನವನ್ನು ಪಕ್ಷದ ಮತ್ತೊಬ್ಬ ಮುಖಂಡನಿಗೆ ನೀಡಲಾಗಿದೆ.

ಇಂದು ಬೆಳಗ್ಗೆಯಿಂದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈ ವಿಚಾರವಾಗಿ ಸುದೀರ್ಘವಾಗಿ ಚರ್ಚೆ ನಡೆಸಿದ ಬಳಿಕ ಲೋಕಸಭೆಗೆ ಪತ್ರ ಬರೆದಿದ್ದಾರೆ. ವಿರೋಧ ಪಕ್ಷಗಳಲ್ಲಿ ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್​, ವಿರೋಧ ಪಕ್ಷದ ಪ್ರತಿನಿಧಿಯನ್ನಾಗಿ ಅಧೀರ್ ರಂಜನ್ ಚೌಧುರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಒಂದು ರಾಷ್ಟ್ರ, ಒಂದು ಚುನಾವಣೆ ಐಡಿಯಾ ಮೇಲೆ ಚರ್ಚೆ ಮಾಡಲು ನಾಳೆ ಕರೆದಿರುವ ಸಭೆಯ ಬಗ್ಗೆಯೂ ಪಕ್ಷ ಗಮನ ಹರಿಸಿದೆ. ಹಿಂದಿನಿಂದಲೂ ಕಾಂಗ್ರೆಸ್​ ಇದನ್ನು ವಿರೋಧಿಸಿಕೊಂಡು ಬಂದಿದೆ. ಈ ವಿಚಾರವಾಗಿ ಕಾಂಗ್ರೆಸ್​ ಪ್ರಾಯೋಗಿಕ, ಸಾಗಣಿಕೆ ಮತ್ತು ಕಾನೂನಾತ್ಮಕ ಕೋನಗಳಿಂದ ನೋಡಬೇಕು ಎಂದು ವಾದಿಸಿಕೊಂಡು ಬರುತ್ತಿದೆ.

ಇದನ್ನು ಓದಿ: ಲೋಕಸಭೆ ಸ್ಪೀಕರ್ ಆಗಿ ಬಿಜೆಪಿಯಿಂದ ಎರಡನೇ ಬಾರಿ ಸಂಸದರಾಗಿರುವ ಓಂ ಬಿರ್ಲಾ ಆಯ್ಕೆ ಬಹುತೇಕ ಖಚಿತ

ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆ ವಿಪಕ್ಷಗಳ ನಾಯಕರಾಗಿದ್ದರು. ಆದರೆ, ಅವರು ಈ ಬಾರಿಯ ಚುನಾವಣೆಯಲ್ಲಿ ಸೋತಿದ್ದಾರೆ. ಹೀಗಾಗಿ ಈ ಸ್ಥಾನವನ್ನು ಯಾರು ನಿಭಾಯಿಸಲಿದ್ದಾರೆ ಎಂಬ ಪ್ರಶ್ನೆ ಎದ್ದಾಗ, ರಾಹುಲ್ ಗಾಂಧಿ ಅವರೇ ವಹಿಸಿಕೊಳ್ಳಬೇಕು ಎಂದು ಕೂಗು ಪಕ್ಷದಲ್ಲಿ ಕೇಳಿಬಂದಿತ್ತು. ಆದರೆ, ರಾಹುಲ್ ಈ ಸ್ಥಾನ ವಹಿಸಿಕೊಳ್ಳಲು ಹಿಂದೇಟು ಹಾಕಿದ ಕಾರಣಕ್ಕೆ ಈಗ ಅಧೀರ್ ರಂಜನ್ ಚೌಧುರಿಯನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ನೇತೃತ್ವ ವಹಿಸಿಕೊಂಡಿದ್ದ ರಾಹುಲ್ ಪಕ್ಷದ ಹೀನಾಯ ಸೋಲಿಗೆ ಹೊಣೆ ಹೊತ್ತು ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದರು. ಆದರೆ, ಅವರ ರಾಜೀನಾಮೆಯನ್ನು ಪಕ್ಷದ ಮುಖಂಡರು ಒಪ್ಪಲಿಲ್ಲ.

ಈ ಸ್ಥಾನಕ್ಕೆ ಅಧೀರ್ ಚೌಧುರಿ ಹೆಸರಿನ ಜೊತೆಗೆ ಕೇರಳ ನಾಯಕ ಕೆ.ಸುರೇಶ್, ಪಕ್ಷದ ವಕ್ತಾರ ಮನೀಷ್ ತಿವಾರಿ, ಮತ್ತು ತಿರುವನಂತಪುರಂ ಸಂಸದ ಶಶಿ ತರೂರ್ ಹೆಸರು ಚಾಲ್ತಿಯಲ್ಲಿದ್ದವು. ಐದು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಚೌಧುರಿ ಅವರ ಅನುಭವ ಹಾಗೂ ಸಂಸತ್ತು ಮತ್ತು ಪಕ್ಷದಲ್ಲಿನ ಅವರ ಸೇವೆಯನ್ನು ಗುರುತಿಸಿ ಚೌಧುರಿ ಅವರ ಹೆಸರನ್ನು ಈ ಸ್ಥಾನಕ್ಕೆ ಅಂತಿಮಗೊಳಿಸಲಾಗಿದೆ.
First published:June 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ