Congress Chintan Shibir: ಒಂದು ಕುಟುಂಬಕ್ಕೆ ಒಂದು ಟಿಕೆಟ್‌‌, ಒಬ್ಬರಿಗೆ 5 ವರ್ಷ ಮಾತ್ರ ಅಧಿಕಾರ- ಸೋನಿಯಾ ಗಾಂಧಿ

ಒಬ್ಬರಿಗೆ 5 ವರ್ಷ ಮಾತ್ರ ಅಧಿಕಾರ, ಯುವಕರಿಗೆ ಹೆಚ್ಚಿನ ಆದ್ಯತೆ, ರಾಜ್ಯಸಭಾ ಅವಧಿಗೆ ಮಿತಿಹೇರುವುದು ಸೇರಿ ಹಲವು ವಿಷಯಗಳ ಬಗ್ಗೆ ಗಂಭೀರವಾದ ಚಿಂತನ ಮಂಥನ ನಡೆಸಿ ನಿರ್ಧಾರ ಮಾಡಲಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಸೋನಿಯಾ ಗಾಂಧಿ

ಸೋನಿಯಾ ಗಾಂಧಿ

  • Share this:
ನವದೆಹಲಿ, ಮೇ 13: ಇಂದಿನಿಂದ ಮೂರು ದಿನ ರಾಜಸ್ಥಾನದ (Rajasthan) ಉದಯಪುರದಲ್ಲಿ (Udaipur) ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ (AICC President Sonia Gandhi) ಅವರ ನೇತೃತ್ವದಲ್ಲಿ ಚಿಂತನ ಶಿಬರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದಲ್ಲಿ ಅಮೂಲಾಗ್ರ ಬದಲಾವಣೆ ತರಲು ಮುಂದಾಗಿದೆ. ಮುಂಬರುವ ಚುನಾವಣೆಗಳು, ಒಂದು ಕುಟುಂಬಕ್ಕೆ ಒಂದು ಟಿಕೆಟ್‌‌ (One Family One Ticket), ಒಬ್ಬರಿಗೆ 5 ವರ್ಷ ಮಾತ್ರ ಅಧಿಕಾರ, ಯುವಕರಿಗೆ ಹೆಚ್ಚಿನ ಆದ್ಯತೆ, ರಾಜ್ಯಸಭಾ ಅವಧಿಗೆ ಮಿತಿಹೇರುವುದು ಸೇರಿ ಹಲವು ವಿಷಯಗಳ ಬಗ್ಗೆ ಗಂಭೀರವಾದ ಚಿಂತನ ಮಂಥನ ನಡೆಸಿ ನಿರ್ಧಾರ ಮಾಡಲಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಚುನಾವಣೆಗಳ ಬಗ್ಗೆ ಚರ್ಚೆ

2024ರ ಲೋಕಸಭಾ ಚುನಾವಣೆಗೆ ಹಾಗೂ ಅದಕ್ಕೂ ಮೊದಲು ಬರುವ ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್ಗಢ ಹಾಗೂ ರಾಜಸ್ಥಾನಗಳ ವಿಧಾನಸಭಾ ಚುನಾವಣೆಗಳಿಗೆ ಯಾವ ರೀತಿಯಲ್ಲಿ ಪಕ್ಷ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಚರ್ಚೆ ಮಾಡಲಾಗುತ್ತದೆ. ವಿಧಾನಸಭಾ ಚುನಾವಣೆಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಲೋಕಸಭಾ ಚುನಾವಣೆಗೆ ಪಕ್ಷದ ಪರ ವಾತಾವರಣ ನಿರ್ಮಿಸುವ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ.

ಒಂದು ಕುಟುಂಬಕ್ಕೆ ಒಂದು ಟಿಕೆಟ್‌‌

ಕಾಂಗ್ರೆಸ್ ಮೇಲೆ ವಂಶಪಾರಂಪರ್ಯ ರಾಜಕಾರಣದ ಆರೋಪ ಹೊರಿಸುವುದು ಬಿಜೆಪಿಗೆ ಸಲೀಸಾಗಿಬಿಟ್ಟಿದೆ. ಸಂಖ್ಯೆಯ ದೃಷ್ಟಿಯಲ್ಲಿ ಬಿಜೆಪಿಯಲ್ಲೂ ಅಷ್ಟೇ ದೊಡ್ಡ ಪ್ರಮಾಣದ ವಂಶಪಾರಂಪರ್ಯ ರಾಜಕಾರಣ ಇದ್ದರೂ ಪ್ರಮುಖ ಹುದ್ದೆಗಳಲ್ಲಿ ಎದ್ದು ಕಾಣುವಂತೆ ಇಲ್ಲ. ಇದೇ ಹಿನ್ನೆಲೆಯಲ್ಲಿ ಈಗ ಕಾಂಗ್ರೆಸ್ ಕೂಡ ಒಂದು ಕುಟುಂಬಕ್ಕೆ ಒಂದು ಟಿಕೆಟ್‌‌ ಎಂಬ ನಿಯಮ ಅಳವಡಿಸಿಕೊಳ್ಳುವ ಚಿಂತನೆ ನಡೆಸಿದೆ. ಈ ಚಿಂತನಾ ಶಿಬಿರದಲ್ಲಿ ಒಂದು ಕುಟುಂಬಕ್ಕೆ ಒಂದು ಟಿಕೆಟ್‌‌ ನಿಯಮ ಅಳವಡಿಕೆ ಬಗ್ಗೆ ವಿಸ್ತೃತವಾಗಿ ಚರ್ಚೆಯಾಗಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Mann ki Baatನಲ್ಲಿ ಪ್ರಧಾನಿ ಮೋದಿ ಮಾತನಾಡಲು ದೇಶದ ಜನರು ಸಲಹೆ ನೀಡಬಹುದು

ಒಬ್ಬರಿಗೆ 5 ವರ್ಷ ಮಾತ್ರ ಅಧಿಕಾರ

ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ನಿರಂತರವಾಗಿ ಅಧಿಕಾರ ಅನುಭವಿಸುತ್ತಿದ್ದಾರೆ, ಕೆಲವರು ಬಹಳಷ್ಟು ಕೆಲಸ ಮಾಡಿಯೂ ಏನೂ ಸಿಗದಂತಾಗಿದ್ದಾರೆ. ಇದರಿಂದಾಗಿ ಕೆಲವರು ಪಕ್ಷ ಬಿಡುತ್ತಿದ್ದಾರೆ. ಹೊಸದಾಗಿ ಪಕ್ಷ ಸೇರಲು ಅನ್ಯ ಪಕ್ಷಗಳ ನಾಯಕರು ಮನಸ್ಸು ಮಾಡುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಒಬ್ಬರಿಗೆ 5 ವರ್ಷ ಮಾತ್ರ ಅಧಿಕಾರ ಇರಬೇಕು. ನಂತರ ಅವರು 3 ವರ್ಷ ಕೂಲಿಂಗ್ ಪಿರೆಡ್ ನಲ್ಲಿದ್ದು ಬಳಿಕ ಮತ್ತೆ ಅಧಿಕಾರ ಹೊಂದಬೇಕು ಎಂಬ ನಿಯಮ ತರುವುದರ ಬಗ್ಗೆಯೂ ಚರ್ಚೆ ನಡೆಯಲಿದೆ.

ರಾಜ್ಯಸಭಾ ಸದಸ್ಯರ ಅವಧಿಗೆ ಮಿತಿ!

ಪಕ್ಷದಲ್ಲಿ ಎಲ್ಲರಿಗೂ ಅವಕಾಶ, ಅಧಿಕಾರ ನೀಡಬೇಕು ಎಂಬ ಹಿನ್ನೆಲೆಯಲ್ಲಿ ರಾಜ್ಯಸಭಾ ಸ್ಥಾನವನ್ನು ಒಬ್ಬರಿಗೆ 2 ಅಥವಾ 3 ಅವಧಿ ಮಾತ್ರ ನೀಡಬೇಕು. ಸದ್ಯ ಕೆಲವರು ಐದಾರು ಬಾರಿ ಅವಕಾಶ ಹೊಂದಿದ್ದಾರೆ. ಇದರಿಂದ ಯುವಕರಿಗೆ ಅವಕಾಶ ಇಲ್ಲದಂತಾಗಿದೆ ಎಂದು ರಾಜ್ಯಸಭಾ ಸದಸ್ಯರ ಅವಧಿಗೆ ಮಿತಿ ಏರುವ ಬಗ್ಗೆ, 70 ಅಥವಾ 75 ವರ್ಷ ಮೀರಿದವರಿಗೆ ಅವಕಾಶ ನೀಡದಿರುವ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ‌.

ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆ ಚರ್ಚೆ

ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಕೇಂದ್ರ ಚುನಾವಣಾ ಸಮಿತಿ, ಎಐಸಿಸಿ ಪದಾಧಿಕಾರಿಗಳಿಂದ ಹಿಡಿದು, ರಾಜ್ಯ, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ವರೆಗೆ ಎಲ್ಲಾ ಹಂತಗಳಲ್ಲಿ ಶೇಕಡಾ 50ರಷ್ಟು ಯುವಕರಿಗೆ ಆದ್ಯತೆ ನೀಡುವ ಬಗ್ಗೆ ಚರ್ಚೆ ಮಾಡಲಾಗುತ್ತದೆ‌. ಯುವಕರು ಎಂದು ಪರಿಗಣಿಸುವಾಗ 50 ವರ್ಷದವರೆಗೂ ಪರಿಗಣಿಸಲು ನಿರ್ಧರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Taj Mahal: ಎಲ್ಲ ಪ್ರಸಿದ್ಧ ತಾಣಗಳ ಹಿಂದಿಕ್ಕಿ ತಾಜ್ ಮಹಲ್ ನಂಬರ್ 1

ಕಾಂಗ್ರೆಸ್ ಪಕ್ಷ ಸುಧಾರಣೆಯ ಅವಶ್ಯಕತೆಯಿದೆ

ಕಾಂಗ್ರೆಸ್ ಚಿಂತನ ಶಿಬಿರ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಕಾಂಗ್ರೆಸ್ ಪಕ್ಷ ಸುಧಾರಣೆಯಾಗಬೇಕಾದ ಅವಶ್ಯಕತೆಯಿದೆ. ಸಾಮೂಹಿಕ ಪ್ರಯತ್ನದಿಂದ ಮಾತ್ರ ಸುಧಾರಣೆ ಸಾಧ್ಯ. ಕಾಂಗ್ರೆಸ್ ಪಕ್ಷ ನಮಗೆಲ್ಲರಿಗೂ ಸಾಕಷ್ಟು ನೀಡಿದೆ.‌ ಈಗ ಪಕ್ಷದ ಋಣ ತೀರಿಸುವ ಸಮಯ ಬಂದಿದೆ. ಚುನಾವಣಾ ವೈಫಲ್ಯವನ್ನು ನಾವು ಮರೆಯಬಾರದು. ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
Published by:Pavana HS
First published: