ರಾಜಸ್ಥಾನ ಚುನಾವಣೆ: ‘ಬಿಎಸ್​ಪಿ’ಯೊಂದಿಗೆ ಚುನಾವಣಾಪೂರ್ವ ಮೈತ್ರಿಗೆ ಕಾಂಗ್ರೆಸ್​ ಹಿಂದೇಟು.?


Updated:June 14, 2018, 12:24 AM IST
ರಾಜಸ್ಥಾನ ಚುನಾವಣೆ: ‘ಬಿಎಸ್​ಪಿ’ಯೊಂದಿಗೆ ಚುನಾವಣಾಪೂರ್ವ ಮೈತ್ರಿಗೆ ಕಾಂಗ್ರೆಸ್​ ಹಿಂದೇಟು.?

Updated: June 14, 2018, 12:24 AM IST
-ಗಣೇಶ್​ ನಚಿಕೇತು, ನ್ಯೂಸ್​-18 ಕನ್ನಡ

ನವದೆಹಲಿ(ಜೂನ್​​.13): ಬಿಜೆಪಿ ಭದ್ರಕೋಟೆಯಾಗಿರುವ ರಾಜಸ್ಥಾನವನ್ನು ತೆಕ್ಕೆಗೆ ಪಡೆಯಲು ಕೈ ಪಾಳಯ ಕಸರತ್ತು ನಡೆಸುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಅಧಿಕಾರಕ್ಕೇರಲು ಚಿಂತಿಸಿರುವ ದೆಹಲಿ ಕಾಂಗ್ರೆಸ್​ ಹೈಕಮಾಂಡ್​ ಬಿಎಸ್​ಪಿಯೊಂದಿಗೆ ಮೈತ್ರಿಗೆ ಸಿದ್ದತೆ ನಡೆಸಿಕೊಳ್ಳಲು ಸೂಚಿಸಿದೆ. ಆದರೆ, ಈ ಬೆನ್ನಲ್ಲೆ ಸ್ಪಂದಿಸಬೇಕಿದ್ದ ಸ್ಥಳೀಯ ಕಾಂಗ್ರೆಸ್​ ನಾಯಕರು ಬಿಎಸ್​ಪಿ ಜೊತೆಗೆ ಮೈತ್ರಿ ಅನವಶ್ಯಕ ಎಂದು ಹೇಳುತ್ತಿದ್ದಾರೆ.

ರಾಜಸ್ಥಾನವನ್ನು ಮರುಭೂಮಿ ಪ್ರದೇಶ ಎಂದು ಕರೆಯಲಾಗುತ್ತದೆ. ಈ ಮರುಭೂಮಿಯನ್ನು ಆಕ್ರಮಿಸಿಕೊಳ್ಳಲು ಬಿಎಸ್​ಪಿ ಅನಾಧಿ ಕಾಲದಿಂದಲೂ ಕಸರತ್ತು ನಡೆಸುತ್ತಿದೆ. ಆನೆ ಪಾಳಯ 1993ರಿಂದಲೂ ಮರುಭೂಮಿಯಲ್ಲಿ  ರಾಜಕೀಯದ ಫಲವತ್ತಾದ ಬೆಳೆ ಬೆಳೆಯಲು ಯತ್ನಿಸುತ್ತಿದೆ. ಆದರೆ ಎಷ್ಟೇ ಪ್ರಯತ್ನಪಟ್ಟರು ಚುನಾವಣೆಯಲ್ಲಿ ಗೆಲುವು ಕಾಣುತ್ತಿಲ್ಲ ಎನ್ನುವುದು ಬಿಎಸ್​ಪಿಗೆ ಬೇಸರ ಮೂಡಿಸಿದೆ.

ಬಿಎಸ್​ಪಿ ಹಿಡಿತದಲ್ಲಿದ್ದ ಉತ್ತರಪ್ರದೇಶ ಬಿಜೆಪಿ ಪಾಲಾದಂತೆ, ದೇಶದ 22 ರಾಜ್ಯಗಳಲ್ಲೂ ಬಿಜೆಪಿ ಅಧಿಕಾರ ಹಿಡಿದಿದೆ. ಸದ್ಯ ಕಮಲವನ್ನು ಮಲಗಿಸಿ ಕಾಂಗ್ರೆಸ್ ಅಧಿಕಾರಕ್ಕೇರಲು​ ಕಾಂಗ್ರೆಸ್​ ನಾಯಕರು ರಣತಂತ್ರ ಹೆಣೆದಿದ್ದಾರೆ. ಈ ಹಿನ್ನಲೆಯಲ್ಲಿ 2019ರ ಲೋಕಸಭಾ ಚುನಾವಣೆ ಸೇರಿದಂತೆ ಯಾವುದೇ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ​ಮೈತ್ರಿಗೆ ಸಿದ್ದವಾಗಿದೆ. ಮೈತ್ರಿಯ ಮೂಲಕವಾದರು, ಬೇರೆ ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ತಂತ್ರ ಹೂಡಿದೆ.

ಹೀಗಾಗಿ ರಾಜಸ್ಥಾನದಲ್ಲಿ ಹೈಕಮಾಂಡ್​ ಬಿಎಸ್​ಪಿ ಜೊತೆ ಕೈಜೋಡಿಸಲು ಚಿಂತಿಸಿದ್ದು, ಇದರ ಬೆನ್ನಲ್ಲೇ ಸ್ಥಳೀಯ ಕಾಂಗ್ರೆಸ್​ ನಾಯಕರು ಬಿಎಸ್​ಪಿ ಜೊತೆಗೆ ಸಖ್ಯ ಬೆಳೆಸಲು ನೋ ಎಂದಿದ್ದಾರೆ ಎನ್ನಲಾಗುತ್ತಿದೆ. ರಾಜಸ್ಥಾನದಲ್ಲಿ ಶೇ.17 ರಷ್ಟು ದಲಿತ ಮತದಾರರಿದ್ದು, ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದಾರೆ. ಹೀಗಾಗಿ ದಲಿತ ಮತಗಳನ್ನು ಪಡೆಯಲು ಕಾಂಗ್ರೆಸ್​ ಬಿಎಸ್​ಪಿ ಜೊತೆಗೆ ಮೈತ್ರಿ ಅನಿವಾರ್ಯವಾಗಿದೆ.

ಈಗಾಲೇ ರಾಜ್ಯದಲ್ಲಿ ಒಟ್ಟು 34 ಎಸ್​ಸಿ, ಎಸ್​ಟಿ ಮೀಸಲಾತಿ ಕ್ಷೇತ್ರಗಳಿದ್ದು, ಅವುಗಳ ಪೈಕಿ ಎರಡು ಕ್ಷೇತ್ರಗಳು ಹೊರತುಪಡಿಸಿ ಎಲ್ಲವೂ ಆಡಳಿತರೂಢ ಬಿಜೆಪಿ ಪಾಲಾಗಿವೆ. ಒಂದೆಡೆ ಕಾಂಗ್ರೆಸ್​ ಹೈಕಮಾಂಡ್​ ಬಿಎಸ್​ಪಿ ಜೊತೆಗೆ ಮೈತ್ರಿಗೆ ಸಿದ್ಧತೆಗೊಳಿಸಿ ಎಂದರೆ, ಇನ್ನೊಂದೆಡೆ ಮಾಜಿ ಕಾಂಗ್ರೆಸ್​ ಸಚಿವ, ದಲಿತ ನಾಯಕ ಬಾಬುಲಾಲ್​ ಬಿಎಸ್​ಪಿಯೊಂದಿಗೆ ಮೈತ್ರಿ ಅವಶ್ಯಕವಿಲ್ಲ ಎಂದು ಹೇಳಿದ್ದಾರೆ.

ನಾವು ಬಿಜೆಪಿಯನ್ನು ಸೋಲಿಸಬೇಕಿದೆ ನಿಜ, ಆದರೆ ಯಾವುದೇ ಪಕ್ಷದೊಂದಿಗೆ ಚುನಾವಣಾಪೂರ್ವ ಮೈತ್ರಿಗೆ ಹೋಗಬೇಕಿಲ್ಲ ಎಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​ ಮೀಸಲಾತಿ ಕ್ಷೇತ್ರಗಳಲ್ಲಿ ಸೋತಿದೆ. ನಾವು ಈ ಬಾರಿ ಗೆಲ್ಲಬೇಕಿದೆ. ಹಾಗಾಗಿ ದಲಿತ ಮತಗಳಿಗೆ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ.
Loading...

ಈ ಸಂಬಂಧ ಪ್ರತಿಕ್ರಿಯಿಸಿದ ಮತ್ತೋರ್ವ ಕಾಂಗ್ರೆಸ್​ ನಾಯಕ,ರಾಜಸ್ಥಾನ ನೆರೆಹೊರೆಯ ರಾಜ್ಯಗಳಾಗಿರುವ ಮಧ್ಯಪ್ರದೇಶ ಮತ್ತು ಚತ್ತೀಸ್​ಘಡಕ್ಕಿಂತ ಭಿನ್ನವಾದುದು. ಸಾಮಾನ್ಯವಾಗಿ ದಲಿತರು ಕಾಂಗ್ರೆಸ್​ ಬೆಂಬಲಿಸಿ ಮತ ಚಲಾಯಿಸುತ್ತಾರೆ. ಆದರೆ ಸದ್ಯ ದಲಿತ ಸಮುದಾಯದ ಕೆಲ ನಾಯಕರಲ್ಲಿ ಹುಟ್ಟಿಕೊಂಡ ಭಿನ್ನಾಭಿಪ್ರಾಯದ ಹಿನ್ನಲೆಯಲ್ಲಿ ಮತ ವಿಭಜನೆಯಾಗುತ್ತಿದೆ ಎಂದಿದ್ದಾರೆ.

ಇನ್ನು ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಕಾಂಗ್ರೆಸ್​ ಖಂಡಿಸುತ್ತಿಲ್ಲ. ಜಾತಿ ದರ್ಪದ ವಿರುದ್ಧ ಮೌನಮುರಿಯುತ್ತಿಲ್ಲ. ದಲಿತರು ಭಾರತ್​ ಬಂದ್​ ಆಚರಿಸಿದ ಸಂದರ್ಭದಲ್ಲಿ ದಲಿತ ನಾಯಕ ಮತ್ತು ಮಾಜಿ ಸಚಿವ ಭರೋಸಿ ಲಾಲ್ ಜತವ್ ಮನೆ ದ್ವಂಸ ಮಾಡಿದಾಗಲೂ ಕಾಂಗ್ರೆಸ್​ ಖಂಡಿಸಿಲ್ಲ. ಹೀಗಾಗಿ ಸಹಜವಾಗಿ ಕಾಂಗ್ರೆಸ್​ ಮೇಲೆ ತೀವ್ರ ಆಕ್ರೋಶವಿದೆ ಎಂದು ಆಂತಕ ವ್ಯಕ್ತಪಡಿಸಿದರು.

ಇನ್ನು ಬಿಎಸ್​ಪಿ 2013ರ ವಿಧಾನಸಭಾ ಚುನಾವಣೆಯಲ್ಲಿ 182 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಈ ಪೈಕಿ ಕೇವಲ ಮೂರು ಸೀಟು ಮಾತ್ರ ಗೆಲ್ಲಲಾಯಿತು. ಶೇ.3.37 ಮತಗಳನ್ನು ಬಿಎಸ್​ಪಿ ಪಡೆದಿತ್ತು. ಜನ ಗೆಲ್ಲದ ಬಿಎಸ್​ಪಿಗೆ ಮತಚಾಲಾಯಿಸಿ, ಮತದ ಮೌಲ್ಯವನ್ನು ಯಾಕೆ ಕಳೆದುಕೊಳ್ಳಬೇಕು ಎಂದು ಯೋಚಿಸುತ್ತಿದ್ದಾರೆ ಎಂದು ಮತ್ತೋರ್ವ ಕಾಂಗ್ರೆಸ್​ ನಾಯಕ ವ್ಯಂಗ್ಯವಾಡಿದ್ದಾರೆ.

ಒಂದೆಡೆ ಕಾಂಗ್ರೆಸ್​ ಹೈಕಮಾಂಡ್​ ಬಿಜೆಪಿಯನ್ನ ಸೋಲಿಸಲು ಮೈತ್ರಿಗೆ ಮುಂದಾದರೆ, ಮತ್ತೊಂದೆಡೆ ಸ್ಥಳೀಯ ಕೈ ನಾಯಕರು ಮೈತ್ರಿಮಾಡಿಕೊಳ್ಳುವುದರಿಂದ ಪಕ್ಷಕ್ಕೆ ಎಷ್ಟು ಮತಗಳು ಸಿಗಲಿವೆ ಎಂದು ಯೋಚಿಸುತ್ತಿದ್ದಾರೆ. ಹೀಗಾಗಿ ರಾಜಸ್ಥಾನದಲ್ಲಿ ಕಾಂಗ್ರೆಸ್​ - ಬಿಎಸ್​ಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮೇಲ್ನೋಟಕ್ಕೆ ಕಂಡರು ಮೈತ್ರಿಯಾಗುವ ಸಾಧ್ಯತೆಗಳು ಹೆಚ್ಚಿವೆ.
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...