ರಾಮನ ಫೋಟೋಗೆ ಚಪ್ಪಲಿ ಹಾರ; ಪೆರಿಯಾರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ರಜನಿಕಾಂತ್​ ವಿರುದ್ಧ ದೂರು ದಾಖಲು

ಪೆರಿಯಾರ್ ನೇತೃತ್ವದಲ್ಲಿ 1971ರಲ್ಲಿ ಮೌಢ್ಯತೆಯ ನಿರ್ಮೂಲನೆಗೆ ನಡೆದ ಮೆರವಣಿಗೆಯಲ್ಲಿ ಸೀತೆ ಮತ್ತು ಶ್ರೀರಾಮನ ಬೆತ್ತಲೆ ಫೋಟೋಗಳನ್ನು ಪ್ರದರ್ಶಿಸಿದ್ದರು. ಆ ಫೋಟೋಗಳಿಗೆ ಚಪ್ಪಲಿಗಳ ಹಾರ ಹಾಕಿ ಮೆರವಣಿಗೆ ನಡೆಸಿದ್ದರು ಎಂದು ರಜನಿಕಾಂತ್‌ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ರಜನಿಕಾಂತ್

ರಜನಿಕಾಂತ್

  • Share this:
ಚೆನ್ನೈ (ಜ. 18): ಸಮಾಜ ಪರಿವರ್ತಕ ಪೆರಿಯಾರ್ ರಾಮಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಷ್ಟೇ ಅಲ್ಲದೆ, ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿರುವ ಆರೋಪದಲ್ಲಿ ಸೂಪರ್​ಸ್ಟಾರ್ ರಜನಿಕಾಂತ್ ವಿರುದ್ಧ ದೂರು ದಾಖಲಿಸಲಾಗಿದೆ.

ದ್ರಾವಿಡರ್ ವಿದುತಲೈ ಕಳಗಂ ಎಂಬ ಸಂಘಟನೆಯ ಸದಸ್ಯರು ರಜನಿಕಾಂತ್ ವಿರುದ್ಧ ದೂರು ನೀಡಿದ್ದಾರೆ. ತಮಿಳು ನಿಯತಕಾಲಿಕೆಯ 50ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದ ರಜನಿಕಾಂತ್, ಪೆರಿಯಾರ್ ನೇತೃತ್ವದಲ್ಲಿ 1971ರಲ್ಲಿ ಮೌಢ್ಯತೆಯ ನಿರ್ಮೂಲನೆಗೆ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಇದಕ್ಕಾಗಿ ನಡೆದ ಮೆರವಣಿಗೆಯಲ್ಲಿ ಸೀತೆ ಮತ್ತು ಶ್ರೀರಾಮನ ಬೆತ್ತಲೆ ಫೋಟೋಗಳನ್ನು ಪ್ರದರ್ಶಿಸಿದ್ದರು. ಆ ಫೋಟೋಗಳಿಗೆ ಚಪ್ಪಲಿಗಳ ಹಾರ ಹಾಕಿ ಮೆರವಣಿಗೆ ನಡೆಸಿದ್ದರು ಎಂದು ರಜನಿಕಾಂತ್‌ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಕೇರಳಿಗರು ರಾಹುಲ್ ಗಾಂಧಿಯನ್ನು ಮತ್ತೊಮ್ಮೆ ಗೆಲ್ಲಿಸಿದರೆ ಮೋದಿಗೇ ಲಾಭ: ರಾಮಚಂದ್ರ ಗುಹಾ

ಈ ಮೂಲಕ ತಮಿಳುನಾಡಿನ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದ ರಜನಿಕಾಂತ್​ ಅವರ ವಿರುದ್ಧ ದೂರು ದಾಖಲಾಗಿದೆ. ಪೆರಿಯಾರ್ ಅವರ ಬಗ್ಗೆ ಸುಳ್ಳು ಸುದ್ದಿ ಹರಡಿರುವ ರಜನಿಕಾಂತ್ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಈ ಕುರಿತು ಬೇಷರತ್ ಕ್ಷಮಾಪಣೆ ಕೋರಬೇಕು. ಇಲ್ಲದಿದ್ದರೆ ರಜನಿಕಾಂತ್ ಮನೆ ಮುಂದೆ ಗೇರಾವ್ ಹಾಕಲಾಗುವುದು ಎಂದು ದ್ರಾವಿಡರ್ ವಿದುತಲೈ ಕಳಗಂ ಸಂಘಟನೆಯವರು ಎಚ್ಚರಿಕೆ ನೀಡಿದ್ದಾರೆ.

ಸಮುದಾಯಗಳ ನಡುವೆ ದ್ವೇಷದ ಬೀಜ ಬಿತ್ತುವ ಹೇಳಿಕೆ ನೀಡಿರುವ ರಜಿನಾಂತ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಡಿಕೆ ಸಂಘಟನೆಯವರು ಆಗ್ರಹಿಸಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡಿರುವ ರಜನಿಕಾಂತ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.

(ವರದಿ: ಪೂರ್ಣಿಮಾ ಮುರಳಿ)
First published: