ಕೇರಳ ವಿಚಾರದಲ್ಲಿ ಕೇಂದ್ರದ್ದು ಮಲತಾಯಿ ಧೋರಣೆಯಾ? ಇಲ್ಲಿದೆ ವಿವಿಧ ರಾಜ್ಯಗಳಿಗೆ ಕೇಂದ್ರ ಕೊಟ್ಟ ಪರಿಹಾರ ಪ್ಯಾಕೇಜ್ ವಿವರ


Updated:August 18, 2018, 12:06 PM IST
ಕೇರಳ ವಿಚಾರದಲ್ಲಿ ಕೇಂದ್ರದ್ದು ಮಲತಾಯಿ ಧೋರಣೆಯಾ? ಇಲ್ಲಿದೆ ವಿವಿಧ ರಾಜ್ಯಗಳಿಗೆ ಕೇಂದ್ರ ಕೊಟ್ಟ ಪರಿಹಾರ ಪ್ಯಾಕೇಜ್ ವಿವರ

Updated: August 18, 2018, 12:06 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 18): ಶತಮಾನದ ಅತ್ಯಂತ ಭೀಕರ ಪ್ರವಾಹಕ್ಕೆ ಸಿಲುಕಿರುವ ದೇವರ ನಾಡು ಕೇರಳ ಅಕ್ಷರಶಃ ನಡುಗಡ್ಡೆಯಾಗಿದೆ. ಪ್ರಕೃತಿಯ ರುದ್ರನರ್ತನಕ್ಕೆ ತತ್ತರಿಸಿಹೋಗುತ್ತಿರುವ ಕೇರಳದಲ್ಲಿ ಜನ ರಕ್ಷಣಾ ಕಾರ್ಯದಲ್ಲಿ ಅಲ್ಲಿನ ಸರಕಾರ ಹೈರಾಣಾಗಿ ಹೋಗಿದೆ. ರಕ್ಷಣಾ ಕಾರ್ಯಾಚರಣೆಗೆ ಕೇರಳ ಸರಕಾರಕ್ಕೆ ಸಂಪನ್ಮೂಲದ ಕೊರತೆ ಬಾಧಿಸುತ್ತಿದೆ. ರಕ್ಷಣಾ ಕಾರ್ಯಗಳಿಗೆ ನೆರವಾಗಿರುವ ಕೇಂದ್ರ ಸರಕಾರ 52 ಎನ್​​ಡಿಆರ್​ಎಫ್ ತಂಡಗಳು, 339 ಮೋಟಾರ್ ಬೋಟ್​ಗಳು, ಸಾವಿರಾರು ದೋಣಿ, ಲೈಫ್​ಜ್ಯಾಕೆಟ್​ಗಳು, 27 ಲೈಟ್ ಟವರ್ ಇತ್ಯಾದಿ ಸಂಪನ್ಮೂಲಗಳನ್ನ ಒದಗಿಸಿದೆ. ಆದರೆ, ಕೇರಳದಲ್ಲಿ ಸುಮಾರು 10 ಸಾವಿರ ಕೋಟಿ ರೂ.ನಷ್ಟು ಹಾನಿಯಾಗಿರುವ ಅಂದಾಜಿದೆ. ಎರಡು ಸಾವಿರ ರೂ ಪರಿಹಾರಧನ ಒದಗಿಸುವಂತೆ ಕೇರಳವು ಕೇಂದ್ರಕ್ಕೆ ಬೇಡಿಕೆ ಇಟ್ಟಿತು. ಇದಕ್ಕೆ ಪ್ರತಿಯಾಗಿ ಕೇಂದ್ರ 500 ರೂ ಮಧ್ಯಂತರ ಪರಿಹಾರ ಧನ ಘೋಷಿಸಿದ್ದಾರೆ. ರಕ್ಕಸ ಹೊಟ್ಟೆಗೆ ಅರೆಕಾಸು ಮಜ್ಜಿಗೆ ಕೊಟ್ಟಂತೆ ಕೇರಳಕ್ಕೆ ಪರಿಹಾರ ಸಿಕ್ಕಿದೆ ಎಂದು ವಿಪಕ್ಷಗಳು ಟೀಕಿಸುತ್ತಿವೆ. ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ಕೇಂದ್ರ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ.

ಇತ್ತೀಚಿನ ದಿನಗಳಲ್ಲಿ ವಿವಿಧ ರಾಜ್ಯಗಳ ಪ್ರಕೃತಿ ವಿಕೋಪಗಳಿಗೆ ಕೇಂದ್ರ ಸರಕಾರ ಇದೇ ರೀತಿಯ ಸ್ಪಂದನೆ ನೀಡಿದೆ. ಬಿಜೆಪಿ ಆಡಳಿತವಿರುವ ಗುಜರಾತ್, ಅಸ್ಸಾಂ ಮತ್ತು ಬಿಹಾರ ರಾಜ್ಯಗಳಿಗೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಅಥವಾ ನಿರ್ಲಕ್ಷ್ಯತನವನ್ನು ಕೇರಳಕ್ಕೂ ಕೊಟ್ಟಿದೆ.

ಗುಜರಾತ್ ರಾಜ್ಯದಲ್ಲಿ ಕಳೆದ ವರ್ಷದ ಜುಲೈ 25ರಂದು ಭೀಕರ ನೆರೆ ಬಡಿದು 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು. ಆಗ ಕೇಂದ್ರವು 500 ಕೋಟಿ ರೂ ಮಧ್ಯಂತರ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿತು. ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಜೊತೆ ಪ್ರಧಾನಿ ಖುದ್ದಾಗಿ ಕೂತು ವೈಮಾನಿಕ ಸಮೀಕ್ಷೆ ನಡೆಸಿದರು.

ಇನ್ನು, ಅಸ್ಸಾಮ್ ರಾಜ್ಯದಲ್ಲೂ ಕಳೆದೆರಡು ತಿಂಗಳಲ್ಲಿ ಪ್ರವಾಹ ಎರಗಿತ್ತು. ಇಲ್ಲಿಯೂ ಕೇಂದ್ರ ಸರಕಾರ 300 ಕೋಟಿ ರೂ.ಗೂ ಹೆಚ್ಚು ಹಣವನ್ನು ಮಧ್ಯಂತರ ಪರಿಹಾರವಾಗಿ ಬಿಡುಗಡೆ ಮಾಡಿತು. ಬಿಹಾರದ ಮಳೆ ಪ್ರವಾಹದ ಪ್ರಕೃತಿ ವಿಕೋಪಕ್ಕೆ ಪರಿಹಾರವಾಗಿ ಕೇಂದ್ರವು 500 ಕೋಟಿ ರೂ ಬಿಡುಗಡೆ ಮಾಡಿತು. ವಿಕೋಪಕ್ಕೆ ಬಲಿಯಾದವರ ಕುಟುಂಬಗಳಿಗೆ ತಲಾ 2 ಲಕ್ಷ ರೂ ಪರಿಹಾರವನ್ನೂ ಘೋಷಿಸಿತು.

ಈಗ ಕಮ್ಯೂನಿಸ್ಟರ ಆಡಳಿತವಿರುವ ಕೇರಳಕ್ಕೂ ಕೇಂದ್ರದಿಂದ 500 ಕೋಟಿ ರೂ ಪರಿಹಾರ ಧನ ಬಿಡುಗಡೆಯಾಗಿದೆ. ಕೇರಳ ಸಿಎಂ ಪಿನಾರಯಿ ವಿಜಯನ್ ಅವರ ಜೊತೆ ಪ್ರಧಾನಿ ಮೋದಿ ಜಂಟಿ ವೈಮಾನಿಕ ಸಮೀಕ್ಷೆ ನಡೆಸುವ ಯೋಜನೆ ಇತ್ತಾದರೂ ಬೇರೆ ಕಾರಣಗಳಿಗೆ ಅದು ರದ್ದಾಯಿತು. ಆದರೂ ಪಿನಾರಯಿ ವಿಜಯನ್ ಜೊತೆ ತುರ್ತು ಸಭೆ ನಡೆಸಿದ ಮೋದಿ ಅವರು ಕೇರಳಕ್ಕೆ ಬೇಕಾದ ಎಲ್ಲಾ ಅಗತ್ಯ ನೆರವನ್ನೂ ಒದಗಿಸುವ ಭರವಸೆ ನೀಡಿದ್ಧಾರೆ.
First published:August 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ