ಭಾರತದೊಂದಿಗೆ ಕಲಹ ಸೇರಿದಂತೆ ಚೀನಾ ಅಧ್ಯಕ್ಷರ ಕಿತಾಪತಿ ಧೋರಣೆಗೆ ವಿರೋಧ; ಹಿರಿಯ ನಾಯಕಿ ಕ್ಸಿಯಾ ಉಚ್ಛಾಟನೆ
ಸೆಂಟ್ರಲ್ ಪಾರ್ಟಿ ಸ್ಕೂಲ್ನ ಮಾಜಿ ಪ್ರೊಫೆಸರ್ ಆದ 68 ವರ್ಷದ ಕ್ಸಿಯಾ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಬಹಳ ವಿರೋಧಿಸುತ್ತಾ ಬಂದಿದ್ದಾರೆ. ತತ್ಪರಿಣಾಮವಾಗಿ ಕಮ್ಯೂನಿಸ್ಟ್ ಪಕ್ಷ ಆಕೆಯನ್ನು ಉಚ್ಛಾಟಿಸಿದೆ.
ವಾಷಿಂಗ್ಟನ್: ಚೀನಾದ ಕಮ್ಯೂನಿಸ್ಟ್ ಆಡಳಿತದಲ್ಲಿ ಭಿನ್ನಾಭಿಪ್ರಾಯಗಳಿಗೆ, ಸ್ವತಂತ್ರ ವಿಚಾರಗಳಿಗೆ ಮನ್ನಣೆ ಇಲ್ಲ ಎಂಬ ಆರೋಪಗಳಿಗೆ ಇಂಬು ನೀಡುವಂತೆ ಅಲ್ಲಿನ ಆಡಳಿತಾರೂಢ ಕಮ್ಯೂನಿಷ್ಟ್ ಪಕ್ಷದಿಂದ ಹಿರಿಯ ನಾಯಕಿಯೊಬ್ಬರನ್ನು ಉಚ್ಛಾಟಿಸಲಾಗಿದೆ. ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳೊಂದಿಗೆ ತಂಟೆಕೋರತನ ಮಾಡುವ ಚೀನಾದ ನೀತಿಯನ್ನು ಬಲವಾಗಿ ವಿರೋಧಿಸುತ್ತಾ ಬರುತ್ತಿದ್ದ ಕಾಯ್ ಕ್ಸಿಯಾ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ. ತಮ್ಮ ಭಾಷಣಗಳ ಮೂಲಕ ಕ್ಸಿಯಾ ಅವರು ದೇಶದ ಮಾನ ಹರಾಜು ಹಾಕುತ್ತಿದ್ದಾರೆಂಬ ಕಾರಣವೊಡ್ಡಿ ಅವರ ಮೇಲೆ ಈ ಶಿಸ್ತಿನ ಕ್ರಮ ಕೈಗಳ್ಳಲಾಗಿದೆ. ಕಾಯ್ ಕ್ಸಿಯಾ ಅವರು ಇದೀಗ ಅಮೆರಿಕದಲ್ಲಿದ್ದಾರೆ.
ಸೆಂಟ್ರಲ್ ಪಾರ್ಟಿ ಸ್ಕೂಲ್ನ ಮಾಜಿ ಪ್ರೊಫೆಸರ್ ಆದ 68 ವರ್ಷದ ಕ್ಸಿಯಾ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಬಹಳ ವಿರೋಧಿಸುತ್ತಾ ಬಂದಿದ್ದಾರೆ. ತಮ್ಮ ಕೆಲ ಭಾಷಣಗಳಲ್ಲಿ ಅವರು ಬಹಿರಂಗವಾಗಿ ಟೀಕೆಗಳನ್ನ ಮಾಡಿದ್ದಾರೆ. ತತ್ಪರಿಣಾಮವಾಗಿ ಕಮ್ಯೂನಿಸ್ಟ್ ಪಕ್ಷ ಈ ಕ್ರಮ ಕೈಗೊಂಡಿದೆ.
ತಮ್ಮ ವೈಫಲ್ಯಗಳನ್ನ ಮುಚ್ಚಿಹಾಕಲು ಮತ್ತು ಪಕ್ಷದಲ್ಲಿ ತಮ್ಮ ಬಲವರ್ದನೆ ಮಾಡಿಕೊಳ್ಳಲು ಚೀನಾ ಅಧ್ಯಕ್ಷರು ಅಂತಾರಾಷ್ಟ್ರೀಯ ಸಂಘರ್ಷ ವಾತಾವರಣ ನಿರ್ಮಿಸುತ್ತಿದ್ದಾರೆ ಎಂಬುದು ಕ್ಸಿಯಾ ಅವರ ಆರೋಪ. ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ಭಾರತದೊಂದಿಗೆ ಚೀನಾ ಸೇನೆ ನಡೆಸಿದ ಗಡಿ ಸಂಘರ್ಷ, ಅಮೆರಿಕದ ಬಗ್ಗೆ ಚೀನೀ ಜನರಲ್ಲಿ ಧ್ವೇಷ ಭಾವನೆ ಹೆಚ್ಚಿಸುವುದು ಇತ್ಯಾದಿ ಕೆಲಸಗಳನ್ನ ಕ್ಸಿ ಜಿನ್ಪಿಂಗ್ ಮಾಡುತ್ತಿದ್ದಾರೆಂದು ಉಚ್ಛಾಟಿತ ನಾಯಕಿ ಪತ್ರಿಕೆಯೊಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
“ಆಂತರಿಕವಾಗಿ ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟಿನ ಸ್ಥಿತಿ ಹಾಗೂ ಪಕ್ಷದೊಳಗೆ ನಡೆಯುತ್ತಿರುವ ವಿದ್ಯಮಾನಗಳ ಹಿನ್ನೆಲೆಯಲ್ಲಿ ಚೀನಾ ಜನರ ಗಮನವನ್ನು ಬೇರೆಡೆ ಸೆಳೆಯಲು ಬೇರೆ ದೇಶಗಳೊಂದಿಗೆ ಸಂಘರ್ಷಕ್ಕೆ ಮುಂದಾಗಿದ್ಧಾರೆ. ಅಮೆರಿಕ ವಿರೋಧಿ ಭಾವನೆ ಬಿತ್ತುವುದು ಹಾಗೂ ಭಾರತದೊಂದಿಗೆ ಗಡಿ ಸಂಘರ್ಷ ನಡೆಸುವುದು ಇತ್ಯಾದಿ ಕೆಲಸಗಳು ಇದಕ್ಕೆ ಉದಾಹರಣೆ” ಎಂದವರು ತಿಳಿಸಿದ್ಧಾರೆ.
ಅಷ್ಟೇ ಅಲ್ಲ, ಎರಡು ಅವಧಿಗೆ ಮಾತ್ರ ಅಧ್ಯಕ್ಷ ಹುದ್ದೆಯಲ್ಲಿರಬಹುದು ಎಂಬ ನಿಯಮವನ್ನು ಕಿತ್ತು ಹಾಕಿ ಅಜೀವಪರ್ಯಂತ ಅಧ್ಯಕ್ಷ ಸ್ಥಾನದಲ್ಲಿರಲು ಅನುವಾಗುವಂತೆ ತಿದ್ದುಪಡಿ ಮಾಡಿದ ಕ್ಸಿ ಜಿನ್ಪಿಂಗ್ ಕ್ರಮವನ್ನೂ ಕಾಯ್ ಕ್ಸಿಯಾ ಬಲವಾಗಿ ವಿರೋಧಿಸಿದ್ದಾರೆ. ಕೊರೋನಾ ವೈರಸ್ ಸೋಂಕಿನ ಬಗ್ಗೆ ಜನವರಿ 7ರಂದೇ ಮಾಹಿತಿ ಗೊತ್ತಾದರೂ ಅನೇಕ ದಿನಗಳ ಕಾಲ ರಹಸ್ಯವಾಗಿಟ್ಟುಕೊಂಡು ಇವತ್ತು ಇಡೀ ಜಗತ್ತಿಗೆ ಪಸರಿಸುವಂತೆ ಮಾಡಲಾಗಿದೆ ಎಂದೂ ಅವರು ಗುಡುಗಿದ್ದಾರೆ.
ಕಾಯ್ ಕ್ಸಿಯಾ ಅವರು ಕೆಲಸ ಮಾಡುತ್ತಿದ್ದ ಸೆಂಟ್ರಲ್ ಪಾರ್ಟಿ ಸ್ಕೂಲ್ ಚೀನಾದ ಪ್ರಮುಖ ಶಿಕ್ಷಣ ಸಂಸ್ಥೆ ಎನಿಸಿದೆ. ಇಲ್ಲಿ ಕಮ್ಯೂನಿಸ್ಟ್ ಪಕ್ಷದ ಚಿಂತನೆಯ ವಿಚಾರಗಳ ನಿಷ್ಕರ್ಷೆಯಾಗುತ್ತದೆ. ಕ್ಸಿ ಜಿನ್ಪಿಂಗ್ ಅವರು 2012ರಲ್ಲಿ ಚೀನಾ ಅಧ್ಯಕ್ಸ ಸ್ಥಾನಕ್ಕೇರುವ ಮುನ್ನ ಈ ಸ್ಕೂಲ್ನ ಮುಖ್ಯಸ್ಥರಾಗಿದ್ದರು.
ಚೀನಾದಲ್ಲಿ ಏಕಪಕ್ಷ ಆಡಳಿತವಿದೆ. ಅಲ್ಲಿರುವ ಏಕೈಕ ರಾಜಕೀಯ ಪಕ್ಷವೆಂದರೆ ಕಮ್ಯೂನಿಸ್ಟ್ ಪಕ್ಷ ಮಾತ್ರವೇ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವಂತೆ ಜನರಿಂದ ನಾಯಕರ ಆಯ್ಕೆ ಆಗುವುದಿಲ್ಲ. ಅಲ್ಲಿನ ಕಮ್ಯೂನಿಸ್ಟ್ ಪಕ್ಷದಿಂದಲೇ ನಾಯಕರ ಆಯ್ಕೆಯಾಗುತ್ತದೆ. ಅಧ್ಯಕ್ಷರ ಆಯ್ಕೆಯನ್ನೂ ಪಕ್ಷವೇ ಮಾಡುತ್ತದೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ