Supreme Court| ಕೋಮುದ್ವೇಷವನ್ನು ಬಿತ್ತುವ ಕೆಲ ವರದಿಗಳು ದೇಶಕ್ಕೆ ಕೆಟ್ಟ ಹೆಸರು ಬರಲು ಕಾರಣವಾಗಿದೆ; ಸುಪ್ರೀಂ ಕಳವಳ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದನ್ನೂ ಧರ್ಮದ ಆಯಾಮದಲ್ಲಿ ನೋಡುವ ಪ್ರವೃತ್ತಿ ಮಾಧ್ಯಮಗಳಲ್ಲಿ ಕಂಡುಬರುತ್ತಿದೆ. ಪರಿಣಾಮ ಇಂತಹ ವರದಿಗಳ ಅಂತಿಮ ಫಲವಾಗಿ ದೇಶಕ್ಕೆ ಕೆಟ್ಟ ಹೆಸರು ಪ್ರಾಪ್ತವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ನವ ದೆಹಲಿ (ಸೆಪ್ಟೆಂಬರ್​ 02); ದೇಶದಲ್ಲಿ ಇತ್ತೀಚೆಗೆ ಕೋಮುದ್ವೇಷ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಒಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಹಲವಾರು ಸಂದೇಶಗಳು ಕೋಮು ಸೌಹಾರ್ದತೆಯನ್ನು ಕೆಡಿಸುತ್ತಿದ್ದರೆ, ಮತ್ತೊಂದೆಡೆ ಕೋಮು ಸೌಹಾರ್ದತೆಯನ್ನು ಕದಡುವ, ಧರ್ಮಗಳ ಕುರಿತು ದ್ವೇಷ ಭಾವನೆ ಬಿತ್ತುವ ವರದಿಗಳು ಸಹ ಬಹಿರಂಗವಾಗಿಯೇ ಬಿತ್ತರವಾಗುತ್ತಿದೆ. ಆದರೆ, ಇಂತಹ ವರದಿಗಳಿಂದ ದೇಶಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಸುಪ್ರೀಂ ಕೋರ್ಟ್ (Supreme Court|) ಇಂದು ಆತಂಕ ವ್ಯಕ್ತಪಡಿಸಿದೆ. ದೆಹಲಿಯಲ್ಲಿ ನಡೆದ ತಬ್ಲೀಗಿ ಜಮಾತ್‌ನಿಂದಾಗಿ (Tablighi Jamaat) ಕೋವಿಡ್‌ ಸೋಂಕು (Covid 19) ಹರಡಿತು ಎಂದು ಹಬ್ಬಿಸಿದ ವರದಿಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಕೈಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯ ಇಂತಹದ್ದೊಂದು ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಅಲ್ಲದೆ, ಎಲ್ಲಾ ಮಾಧ್ಯಮಗಳೂ ಸಹ ಜವಾಬ್ದಾರಿಯುತವಾಗಿ ತಮ್ಮ ಕೆಲಸವನ್ನು ನಿರ್ವಹಿಸಬೇಕು ಎಂದೂ ಸೂಚಿಸಿದೆ.

  ತಬ್ಲೀಗಿ ಜಮಾತ್‌ನಿಂದಾಗಿ ಕೋವಿಡ್‌ ಸೋಂಕು ಹರಡಿತು ಎಂದು ಹಬ್ಬಿಸಿದ ವರದಿಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಬಳಿಕ ಮಾತನಾಡಿರುವ ಕೋರ್ಟ್​, "ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದನ್ನೂ ಧರ್ಮದ ಆಯಾಮದಲ್ಲಿ ನೋಡುವ ಪ್ರವೃತ್ತಿ ಮಾಧ್ಯಮಗಳಲ್ಲಿ ಕಂಡುಬರುತ್ತಿದೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆಯಲ್ಲ. ಮಾಧ್ಯಮಗಳ ದೃಷ್ಟಿಕೋನದಲ್ಲಿ ಎಲ್ಲಾ ಧರ್ಮಗಳೂ ಸಮನಾಗಿರಬೇಕು. ಆದರೆ, ಪ್ರಸ್ತುತ ಪರಿಸ್ಥಿತಿ ಹಾಗಿಲ್ಲ. ಪರಿಣಾಮ ಇಂತಹ ವರದಿಗಳ ಅಂತಿಮ ಫಲವಾಗಿ ದೇಶಕ್ಕೆ ಕೆಟ್ಟಹೆಸರು ಪ್ರಾಪ್ತವಾಗುತ್ತದೆ" ಎಂದು ಎಚ್ಚರಿಕೆ ನೀಡಿದೆ.

  ಇದೇ ವೇಳೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ಟಿಟ್ಟರ್‌, ಯೂಟ್ಯೂಬ್‌ಗಳನ್ನು ಉಲ್ಲೇಖಿಸಿರುವ ಸುಪ್ರೀಂಕೋರ್ಟ್, ವೆಬ್‌ ಪೋರ್ಟಲ್‌ಗಳ ಕುರಿತೂ ಸಹ ಬೇಸರ ವ್ಯಕ್ತಪಡಿಸಿದೆ. "ಸರ್ಕಾರಿ ಸಂಸ್ಥೆಗಳ ಕುರಿತು, ನ್ಯಾಯಾಧೀಶರ ಕುರಿತು, ಯಾವುದೇ ವಿಚಾರವಾದರೂ ವೆಬ್‌ ಪೋರ್ಟಲ್‌ಗಳು ಮನಬಂದಂತೆ ಬರೆಯುತ್ತಿವೆ. ಪ್ರಸ್ತುತ ದಿನಗಳಲ್ಲಿ ಅನೇಕ ವೆಬ್‌ ಪೋರ್ಟಲ್‌ಗಳು ವಿಶ್ವಾಸಾರ್ಹವಲ್ಲ. ಇವರಿಗೆ ಸಾಮಾನ್ಯ ಜನರ ಬಗ್ಗೆ ಯಾವುದೇ ಕಾಳಜಿ ಅವುಗಳಿಗಿಲ್ಲ. ಇವರು ನೀಡುವ ವರದಿಯೂ ವಿಶ್ವಾಸಾರ್ಹವಲ್ಲ. ಕೋಮುದ್ವೇಷದ ಅನೇಕ ವರದಿಗಳು ಸಮಾಜದ ಸೌಹಾರ್ದತೆಯನ್ನೂ ಕದಡಿದೆ ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ. ತಬ್ಲೀಗಿ ಜಮಾತ್‌ ಕುರಿತು ಹಬ್ಬಿಸಿದ ಸುಳ್ಳು ಸುದ್ದಿಗಳನ್ನು ಕೋರ್ಟ್ ಕಟುವಾಗಿ ಟೀಕಿಸಿದೆ.

  ಇದನ್ನೂ ಓದಿ: Uttar Pradesh Election: ಅಯೋಧ್ಯೆಯಿಂದ ಅಸಾದುದ್ದೀನ್ ಓವೈಸಿ ಪ್ರವಾಸ ಆರಂಭ

  ಸರ್ಕಾರವನ್ನು ಪ್ರತಿನಿಧಿಸಿ ಮಾತನಾಡಿದ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ, "ಕೋಮು ಸೌಹಾರ್ದತೆ ಕದಡುವ ಸುದ್ದಿಗಳಷ್ಟೇ ಅಲ್ಲ, ಸುಳ್ಳು ಸುದ್ದಿಗಳನ್ನೂ ಪೋರ್ಟಲ್ ಗಳಲ್ಲಿ ಕಾಣಬಹುದು ಎಂದಿದ್ದಾರೆ.

  ಇನ್ನೂ ಈ ಬಗ್ಗೆ ಮಾತನಾಡಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಎನ್‌.ವಿ.ರಮಣ "ಇಂದು ಯಾರು ಬೇಕಾದರೂ ಯೂಟ್ಯೂಬ್ ಚಾನೆಲ್‌ ತೆರೆಯಬಹುದಾಗಿದ್ದು, ಯೂಟ್ಯೂಬ್‌ಗೆ ಹೋಗಿ ನೋಡಿದರೆ ಎಷ್ಟೊಂದು ಸುಳ್ಳುಗಳನ್ನು ಬಿತ್ತಲಾಗುತ್ತಿದೆ ಎಂಬುದು ತಿಳಿಯುತ್ತಿದೆ. ಸುಳ್ಳು ಸುದ್ದಿಗಳು ಹಾಗೂ ವೆಬ್‌ ಪೋರ್ಟಲ್‌ಗಳಿಗೆ ಕಡಿವಾಣ ಹಾಕುವ ಪ್ರಯತ್ನಗಳು ನಡೆಯುತ್ತಿಲ್ಲ. ಕನಿಷ್ಟ ಪಕ್ಷ ನ್ಯಾಷನಲ್‌ ಬ್ರಾಡ್ ಕಾಸ್ಟಿಂಗ್‌ ಸ್ಟಾಂಡರ್ಡ್‌ ಅಥಾರಿಟಿಯಾದರೂ ಜನರ ಕುರಿತು ಕಾಳಜಿ ತೋರಬೇಕು" ಸರ್ಕಾರಕ್ಕೆ ಸೂಚಿಸಿದ್ದಾರೆ.

  ಇದನ್ನೂ ಓದಿ: Afghanistan- ಪಂಜಶಿರ್ ಪ್ರಾಂತ್ಯದಲ್ಲಿ 13 ತಾಲಿಬಾನ್ ಉಗ್ರರನ್ನು ಸಂಹರಿಸಿದ ಪ್ರತಿರೋಧ ಪಡೆ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: