ಬೆಂಗಳೂರು(ಸೆ. 17): ಕ್ರಿಸ್ತಪೂರ್ವ 10 ಸಾವಿರ ವರ್ಷಗಳ ಹಿಂದಿನಿಂದ ಭಾರತದ ಸಂಸ್ಕೃತಿ ಮತ್ತು ವಿಕಾಸದ ಬಗ್ಗೆ ಅಧ್ಯಯನ ಮಾಡಲು ಕೇಂದ್ರ ಸರ್ಕಾರ ರಚಿಸಿರುವ ತಜ್ಞರ ಸಮಿತಿ ಬಗ್ಗೆ ಅಪಸ್ವರ ಹೆಚ್ಚುತ್ತಿದೆ. ಈ ಸಮಿತಿಯಲ್ಲಿರುವ ಎಲ್ಲಾ 16 ಸದಸ್ಯರೂ ಕೂಡ ಉತ್ತರ ಭಾರತೀಯರೇ ಆಗಿದ್ದಾರೆ. ದಕ್ಷಿಣ ಭಾರತೀಯರು ಕೆಂಡಾಮಂಡಲಗೊಂಡಿದ್ದಾರೆ. ದ್ರಾವಿಡ ಇತಿಹಾಸವೇ ಅತ್ಯಂತ ಪುರಾತನನಾಗಿದ್ದು, ಡ್ರಾವಿಡರೇ ಈ ದೇಶದ ಮೂಲನಿವಾಸಿಗಳೆಂಬುದು ದಕ್ಷಿಣ ಭಾರತೀಯರ ನಂಬಿಕೆ. ಈ ಹಿನ್ನೆಲೆಯಲ್ಲಿ ಭಾರತದ 12 ಸಾವಿರ ವರ್ಷಗಳ ಇತಿಹಾಸದ ಅಧ್ಯಯನಕ್ಕೆ ದ್ರಾವಿಡ ನಾಡುಗಳ ಒಬ್ಬ ಪ್ರತಿನಿಧಿಯನ್ನೂ ಒಳಗೊಳ್ಳಲಾಗಿಲ್ಲ ಎಂಬ ಟೀಕೆ ಕೇಳಿಬರುತ್ತಿದೆ.
ಭಾರತದ ಪುರಾತನ ಇತಿಹಾಸದ ಅಧ್ಯಯನ ಮಾಡಲು ತಜ್ಞರ ಸಮಿತಿ ನೇಮಿಸಿ ಕೇಂದ್ರ ಸಂಸ್ಕೃತಿ ಸಚಿವಾಲಯ ನಿನ್ನೆ ಅಧಿಸೂಚನೆ ಹೊರಡಿಸಿದೆ. ಕೆ.ಎನ್. ದೀಕ್ಷಿತ್, ಆರ್.ಎಸ್. ಬಿಷ್ತ್, ಬಿ.ಆರ್. ಮಣಿ, ಸಂತೋಷ್ ಶುಕ್ಲಾ, ಆರ್.ಕೆ. ಪಾಂಡೆ, ಮಕ್ಕನ್ ಲಾಲ್, ಜಿ.ಎನ್. ಶ್ರೀವಾಸ್ತವ, ಮುಕುಂದಮ್ ಶರ್ಮಾ, ಪಿ.ಎನ್. ಶಾಸ್ತ್ರಿ, ಆರ್.ಸಿ. ಶರ್ಮಾ, ಕೆ.ಕೆ. ಮಿಶ್ರಾ, ಬಲರಾಮ್ ಶುಕ್ಲ, ಆಜಾದ್ ಕೌಶಿಕ್ ಮತ್ತು ಎಂ.ಆರ್. ಶರ್ಮಾ ಅವರು ಈ ಸಮಿತಿಯಲ್ಲಿದ್ದಾರೆ.
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಈ ಸಮಿತಿ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ದ್ರಾವಿಡರನ್ನು ಸಮಿತಿಯಲ್ಲಿ ಒಳಗೊಳ್ಳದೆ ಅವಮಾನ ಮಾಡಲಾಗಿದೆ ಎಂದು ಟೀಕಿಸಿದ್ದಾರೆ. ಭಾರತದ ಇತಿಹಾಸವನ್ನು ಉತ್ತರ ಭಾರತೀಯ ಇತಿಹಾಸವನ್ನಾಗಿ ಮಾಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಚಿಸಿರುವ ಆರ್ಯನ್ ಸಮಿತಿ ಇದಾಗಿದೆ ಎಂದು ಖಂಡಿಸಿ ಸರಣಿ ಟ್ವೀಟ್ ಮಾಡಿದ್ದಾರೆ. ನ್ಯೂಸ್18 ಜೊತೆ ಮಾತನಾಡಿದ ಹೆಚ್ಡಿಕೆ, ಈ ಸಮಿತಿಯ ಉದ್ದೇಶವನ್ನೇ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಭಾರತೀಯ ಇತಿಹಾಸ ಅಧ್ಯಯನ ಸಮಿತಿಯಲ್ಲಿ ಕನ್ನಡಿಗರಿಗಿಲ್ಲ ಅವಕಾಶ - ಕೇಂದ್ರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ
“ಈ ಸಮಿತಿಯ ಉದ್ದೇಶ ಮತ್ತು ಗುರಿ ಬಗ್ಗೆ ನನಗೆ ಭಾರೀ ಸಂಶಯ ಇದೆ. ಈ ಸಮಿತಿಯಲ್ಲಿ ಬರೀ ಉತ್ತರ ಭಾರತೀಯರು ಇರುವುದಷ್ಟೇ ಅಲ್ಲ, ನಮ್ಮ ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆ ಬಗ್ಗೆ ಪೂರ್ವಗ್ರಹ ಧೋರಣೆ ಹೊಂದಿರುವವರೇ ತುಂಬಿದ್ಧಾರೆ… ಭಾರತದ ಎರಡು ಅತ್ಯಂತ ಹಳೆಯ ಸಂಸ್ಕೃತಿ ಮತ್ತು ರಾಜ್ಯಗಳಾದ ಕರ್ನಾಟಕ ಮತ್ತು ತಮಿಳುನಾಡಿನ ಒಬ್ಬ ಸದಸ್ಯರೂ ಈ ಸಮಿತಿಯಲ್ಲಿಲ್ಲ. ನಾವು ದ್ರಾವಿಡರಾಗಿದ್ದು, ದಕ್ಷಿಣದ ಒಬ್ಬ ದ್ರಾವಿಡನನ್ನೂ ಸಮಿತಿಯಲ್ಲಿ ಒಳಗೊಳ್ಳಲಾಗಿಲ್ಲ. ಕೇಂದ್ರ ಸರ್ಕಾರದ ಉದ್ದೇಶದ ಬಗ್ಗೆ ಬಲವಾದ ಅನುಮಾನ ಮೂಡುತ್ತದೆ. ಅಲ್ಲದೆ, ಸಮಿತಿಯಲ್ಲಿ ಒಬ್ಬ ಮಹಿಳಾ ಸದಸ್ಯರೂ ಇಲ್ಲ” ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ಕಾಂಗ್ರೆಸ್ ಸಂಸದ ಮಾಣಿಕ್ಯಂ ಠಾಗೋರ್ ಅವರು ಈ ಸಮಿತಿ ರಚನೆಯನ್ನು ಪ್ರಶ್ನಿಸಿದ್ದು, ಭಾರತದ ದಕ್ಷಿಣ ಮತ್ತು ಪೂರ್ವ ಭಾಗಕ್ಕೆ ಆಗಿರುವ ಅವಮಾನ ಎಂದು ಖಂಡಿಸಿದ್ದಾರೆ.
“ಆರೆಸ್ಸೆಸ್ಗೆ ತೃಪ್ತಿಪಡಿಸಲು ಇತಿಹಾಸವನ್ನು ಅಧ್ಯಯನ ಮಾಡುತ್ತಿರುವಂತೆ ತೋರುತ್ತಿದೆ. ದಕ್ಷಿಣ ಮತ್ತು ಪೂರ್ವ ಭಾಗದ ಪ್ರಾತಿನಿಧ್ಯ ಇಲ್ಲದೆ ಭಾರತದ ಪುರಾತನ ಇತಿಹಾಸವನ್ನು ಹೇಗೆ ಅಧ್ಯಯನ ಮಾಡಲು ಸಾಧ್ಯ? ಇವು ಭಾರತದ ಬಹಳ ಹಳೆಯ ಪ್ರದೇಶಗಳಾಗಿವೆ. ನಮ್ಮ ಪುರಾತನ ಸಂಸ್ಕೃತಿಯ ಅಧ್ಯಯನದ ಹೆಸರಲ್ಲಿ ಬಿಜೆಪಿ ನಮ್ಮ ದೇಶವನ್ನು ಇನ್ನಷ್ಟು ವಿಭಜನೆ ಮಾಡುತ್ತಿದೆ” ಎಂದು ಮಾಣಿಕ್ಯಂ ಠಾಗೋರ್ ವಿಷಾದ ವ್ಯಕ್ತಪಡಿಸಿದ್ಧಾರೆ.
ಸಂಸತ್ನ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸುತ್ತೇನೆ. ದಕ್ಷಿಣ ಮತ್ತು ಪೂರ್ವ ಭಾಗದ ತಜ್ಞರನ್ನೂ ಸಮಿತಿಯಲ್ಲಿ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸುತ್ತೇನೆ ಎಂದು ಹೇಳಿದ ಕಾಂಗ್ರೆಸ್ ಸಂಸದ, ಸಮಿತಿಯಲ್ಲಿ ದೇಶದ ಎಲ್ಲಾ 30 ರಾಜ್ಯಗಳಿಂದ ಹಾಗೂ 22 ಅಧಿಕೃತ ಭಾಷೆಗಳಿಂದ ಕನಿಷ್ಠ ಒಬ್ಬ ಸದಸ್ಯರಾದರೂ ಇರಬೇಕೆಂದು ಆಗ್ರಹ ಮಾಡಿದ್ದಾರೆ.
ಇದನ್ನೂ ಓದಿ: PM Modi Birthday - ನರೇಂದ್ರ ಮೋದಿಗೆ 70 ವರ್ಷ; ಇಲ್ಲಿದೆ ಅವರು ಬೆಳೆದುಬಂದ ಹಾದಿ
ಕೇಂದ್ರ ಸರ್ಕಾರದ ಈ ಇತಿಹಾಸ ಅಧ್ಯಯನ ಸಮಿತಿಯ ಉದ್ದೇಶದ ಬಗ್ಗೆ ಹಲವು ಕನ್ನಡ ಮತ್ತು ತಮಿಳು ಹೋರಾಟಗಾರರು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ. ದಕ್ಷಿಣ ಭಾರತೀಯರು ಇಲ್ಲದ ಈ ಸಮಿತಿ ಮಾಡುವ ಅಧ್ಯಯನದ ಅಂಶಗಳನ್ನ ದಕ್ಷಿಣ ಭಾರತೀಯರು ಒಪ್ಪಿಕೊಳ್ಳಬಾರದು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಭಾರತದ ಇತಿಹಾಸವನ್ನು ಉತ್ತರ ಭಾರತೀಯ ಇತಿಹಾಸವನ್ನಾಗಿ ಮಾಡಲು ಆರೆಸ್ಸೆಸ್ ನಿಯಂತ್ರಿತ ಸಮಿತಿ ಮೂಲಕ ಮಾಡಿರುವ ಹುನ್ನಾರ ಇದು ಎಂದು ಕೆಲವರು ಹೇಳುತ್ತಿದ್ದಾರೆ.
“ದ್ರಾವಿಡ ಜನಾಂಗ, ಇತಿಹಾಸ ಮತ್ತು ಸಂಸ್ಕೃತಿಯ ಅಸ್ತಿತ್ವವನ್ನು ಆರೆಸ್ಸೆಸ್ ಯಾವತ್ತೂ ಒಪ್ಪಿಕೊಂಡಿಲ್ಲ. ಈಗ ಈ ಸಮಿತಿ ಮೂಲಕ ಇದನ್ನು ಅಧಿಕೃತ ಮಾಡುವ ದುರುದ್ದೇಶ ಇದೆ” ಎಂಬುದು ತಮಿಳು ಮತ್ತು ಕನ್ನಡ ಭಾಷಾ ಹೋರಾಟಗಾರರ ಆರೋಪ.
ಒಂದು ವೇಳೆ ಕೇಂದ್ರ ಸರ್ಕಾರ ಈ ಸಮಿತಿಯ ಪುನಾರಚನೆ ಮಾಡದೇ ಹೋದಲ್ಲಿ ಮುಂಬರುವ ದಿನಗಳಲ್ಲಿ ದೊಡ್ಡ ಆಂದೋಲನವಾಗಿ ರೂಪುಗೊಳ್ಳುವ ಸಾಧ್ಯತೆಯಂತೂ ತೋರುತ್ತಿದೆ.
- ಡಿ.ಪಿ. ಸತೀಶ್, CNN-News18 ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ