HOME » NEWS » National-international » COMBATIVE MAMATA BANERJEE DECIDES NOT TO SEND CHIEF SECY POLICE CHIEF TO DELHI DESPITE HOME MINISTRY SUMMONS MAK

ಜೆಪಿ ನಡ್ಡಾ ಕಾರಿನ ಮೇಲೆ ದಾಳಿ; ಕೇಂದ್ರದ ಸಭೆಗೆ ಅಧಿಕಾರಿಗಳನ್ನು ಕಳಿಸದಿರಲು ಮಮತಾ ಬ್ಯಾನರ್ಜಿ ನಿರ್ಧಾರ

ಬಂಗಾಳದಿಂದ ಯಾವುದೇ ಅಧಿಕಾರಿ ದೆಹಲಿಗೆ ತೆರಳಿ ಗೃಹ ಸಚಿವಾಲಯದ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಕಾರ್ಯದರ್ಶಿ ಗೃಹ ಸಚಿವಾಲಯಕ್ಕೆ ಸ್ಪಷ್ಟಪಡಿಸಿದ್ದಾರೆ. 

news18-kannada
Updated:December 11, 2020, 6:52 PM IST
ಜೆಪಿ ನಡ್ಡಾ ಕಾರಿನ ಮೇಲೆ ದಾಳಿ; ಕೇಂದ್ರದ ಸಭೆಗೆ ಅಧಿಕಾರಿಗಳನ್ನು ಕಳಿಸದಿರಲು ಮಮತಾ ಬ್ಯಾನರ್ಜಿ ನಿರ್ಧಾರ
ದಾಳಿಗೆ ಕಾರಿನ ಗಾಜು ಜಖಂ ಆಗಿರುವುದು.
  • Share this:
ಕೋಲ್ಕತ್ತಾ (ಡಿಸೆಂಬರ್​ 11); ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಗುರುವಾರ ಕೋಲ್ಕತ್ತಾಗೆ ಆಗಮಿಸಿದ್ದಾಗ ಕೆಲವರು ಅವರ ಕಾರು ಮತ್ತು ಬೆಂಗಾವಲು ಪಡೆಯ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇದರಿಂದ ಜೆಪಿ ನಡ್ಡಾ ಅವರ ಕಾರಿನ ಗಾಜು ಜಖಂ ಆಗಿತ್ತು. ಈ ಸುದ್ದಿ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಹೀಗಾಗಿ ಭದ್ರತಾ ವೈಫಲ್ಯದ ಕುರಿತು ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಸರ್ಕಾರದಿಂದ ವರದಿ ಕೇಳಿತ್ತು. ಅಲ್ಲದೆ, ಬಂಗಾಳದ ಪೊಲೀಸ್​ ಮಹಾ ನಿರ್ದೇಶಕ ಸೇರಿದಂತೆ ಹಿರಿಯ ಅಧಿಕಾರಿಗಳು ಕೇಂದ್ರ ಗೃಹ ಸಚಿವಾಲಯದ ಎದುರು ವಿಚಾರಣೆಗೆ ಹಾಜರಾಗಬೇಕು ಎಂದು ಸಮನ್ಸ್​ ಜಾರಿ ಮಾಡಲಾಗಿತ್ತು. ಆದರೆ, ಬಂಗಾಳದಿಂದ ಯಾವುದೇ ಅಧಿಕಾರಿ ದೆಹಲಿಗೆ ತೆರಳಿ ಗೃಹ ಸಚಿವಾಲಯದ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಕಾರ್ಯದರ್ಶಿ ಗೃಹ ಸಚಿವಾಲಯಕ್ಕೆ ಸ್ಪಷ್ಟಪಡಿಸಿದ್ದಾರೆ. 

ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆಯುವ ಮೂಲಕ ಮಾಹಿತಿ ನೀಡಿರುವ ಬಂಗಾಳ ಸರ್ಕಾರದ ಉನ್ನತ ಅಧಿಕಾರಿ ಅಲಪನ್ ಬಂಡ್ಯೋಪಾಧ್ಯಾಯ, "ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರವು ಈಗಾಗಲೇ ಈ ಸಮಸ್ಯೆಯನ್ನು ಅತ್ಯಂತ ಗಂಭೀರತೆಯಿಂದ ಪರಿಹರಿಸುತ್ತಿದೆ. ದಾಳಿಗೆ ಸಂಬಂಧಿಸಿದಂತೆ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು ಏಳು ಜನರನ್ನು ಬಂಧಿಸಲಾಗಿದೆ. ಅಲ್ಲದೆ, ಗೃಹ ಸಚಿವಾಲಯ ಡಿಸೆಂಬರ್​14 ರಂದು ಕರೆದಿರುವ ಸಭೆಯಲ್ಲಿ ರಾಜ್ಯದ ಅಧಿಕಾರಿಗಳ ಉಪಸ್ಥಿತಿ  ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಗುರುವಾರ ಬಂಗಾಳಕ್ಕೆ ಆಗಮಿಸಿದ್ದ ಜೆಪಿ ನಡ್ಡಾ ಅವರಿಗೆ ಝಡ್ ಕ್ಯಾಟಗರಿ ಭದ್ರತೆ ನೀಡಲಾಗಿದೆ. ಅವರಿಗೆ ಬುಲೆಟ್​ ಫ್ರೂಫ್ ಕಾರ್​ ನೀಡಲಾಗಿತ್ತು. ಬೆಂಗಾವಲು ಮತ್ತು ಭದ್ರತಾ ಅಧಿಕಾರಿಗಳನ್ನೂ ನೇಮಕ ಮಾಡಲಾಗಿತ್ತು. ಅವರು ಚಲಿಸುವ ಮಾರ್ಗದಲ್ಲಿ ನಾಲ 4 ಎಸ್‌ಪಿಗಳು, 8 ಡೆಪ್ಯೂಟಿ ಎಸ್‌ಪಿಗಳು, 14 ಇನ್ಸ್‌ಪೆಕ್ಟರ್‌ಗಳು, 70 ಸಬ್‌ಇನ್ಸ್‌ಪೆಕ್ಟರ್‌ಗಳು, 40 ಆರ್‌ಎಎಫ್ ಸಿಬ್ಬಂದಿ, 259 ಕಾನ್‌ಸ್ಟೆಬಲ್‌ಗಳು ಮತ್ತು 350 ಇತರೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿತ್ತು. ಭದ್ರತೆಯ ಮೇಲ್ವಿಚಾರಣೆಗೆ ಡಿಐಜಿಯನ್ನು ನಿಯೋಜಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಜೆಪಿ ನಡ್ಡಾ ವಾಹನಗಳ ಜೊತೆಗೆ ಇತರೆ ವಾಹನಗಳನ್ನೂ ನಿಯೋಜಿಸಿದ ಕಾರಣ ಪರಿಸ್ಥಿತಿ ಬಿಗಡಾಯಿಸಿತು ಎಂದು ಬಂಗಾಳ ಸರ್ಕಾರ ಈಗಾಗಲೇ ಕೇಂದ್ರಕ್ಕೆ ವರದಿ ಸಲ್ಲಿಸಿದೆ.

ಈ ದಾಳಿ ಆಡಳಿತರೂಢ ಟಿಎಂಸಿ ಪಕ್ಷದ ಪ್ರಾಯೋಜಿತ ದಾಳಿಯಾಗಿದ್ದು, ಟಿಎಂಸಿ ಕಾರ್ಯಕರ್ತರು ತಮ್ಮ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಬಿಜೆಪಿ ನಾಯಕರು ಗಾಯಗೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ‘. ಅಲ್ಲದೆ, ಘಟನೆ ಸಂಬಂಧ ಕಿಡಿಕಾರಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ, "ಇದೊಂದು ಪ್ರಾಯೋಜಿತ ಹಿಂಸಾಚಾರ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಭದ್ರತಾ ವೈಫಲ್ಯದ ಕುರಿತು ಪಶ್ಚಿಮ ಬಂಗಾಳ ಸರ್ಕಾರದಿಂದ ವರದಿ ಕೇಳಿದ್ದು, ರಾಜ್ಯ ಸರ್ಕಾರ ರಾಜ್ಯದ ಜನರಿಗೆ ಉತ್ತರಿಸಬೇಕಿದೆ ಎಂದು ವಾಗ್ದಾಳಿ ನಡೆಸಿದ್ದರು.

ತಮ್ಮ ಮೇಲೆ ದಾಳಿಯಾಗಿದೆ ಎಂದು ತಮ್ಮ ಕಾರಿನ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಘಟನೆಯ ಬಗ್ಗೆ ಮಾತನಾಡಿರುವ ಜೆ.ಪಿ. ನಡ್ಡಾ, "ಇಟ್ಟಿಗೆ ಹಾಗೂ ಕಲ್ಲುಗಳಿಂದ ನಮ್ಮ ಮೇಲೆ ದಾಳಿ ನಡೆಸಲಾಗಿದ್ದು, ಕಾರಿನ ಗಾಜು ಮತ್ತು ಕಿಟಕಿ ಸಂಪೂರ್ಣ ಜಖಂ ಆಗಿದೆ. ನಾನು ಬದುಕಿ ಸಭೆಗೆ ಹಾಜರಾದದ್ದೇ ದುರ್ಗಾ ಮಾತೆಯ ಕೃಪೆಯಿಂದ" ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ : ಕೋಲ್ಕತ್ತಾದಲ್ಲಿ ಜೆಪಿ ನಡ್ಡಾ ಕಾರಿನ ಮೇಲೆ ಕಲ್ಲಿನಿಂದ ದಾಳಿ; ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ಆಕ್ರೋಶ

ಆದಾಗ್ಯೂ, ಬಿಜೆಪಿ ನಾಯಕರ ಆರೋಪವನ್ನು ತಳ್ಳಿಹಾಕಿರುವ ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ​, "ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ಹಿಂದೂಗಳ ಮತಗಳನ್ನು ಸೆಳೆಯುವ ಸಲುವಾಗಿ ರಾಜ್ಯದಲ್ಲಿ ಉದ್ದೇಶಪೂರ್ವಕ ಪ್ರಚೋಧನೆಯನ್ನು ಮಾಡುತ್ತಿದೆ. ಬಿಜೆಪಿ ಹಿಂದೂ ಧರ್ಮವನ್ನು ದ್ವೇಷಪೂರಿತಗೊಳಿಸುತ್ತಿದೆ. ಅಲ್ಲದೆ, ಇಂತಹ ದಾಳಿಗಳ ವಿಡಿಯೋಗಳನ್ನು ಇವರೇ ಸೃಷ್ಟಿಸಿ ಮಾಧ್ಯಮಗಳಿಗೆ ನೀಡುತ್ತಾರೆ, ಅಲ್ಲದೆ ಪಾಕಿಸ್ತಾನ ಇಸ್ರೇಲ್ ನೇಪಾಳ ನಮ್ಮ ಮೇಲೆ ದಾಳಿ ಮಾಡಿದೆ ಎಂದು ನಾಟಕವಾಡುತ್ತಾರೆ" ಎಂದು ಕಿಡಿಕಾರಿದ್ದಾರೆ.

ಬಿಜೆಪಿ ನಾಯಕ ಜೆಪಿ ನಡ್ಡಾ ಕೋಲ್ಕತ್ತಾದ ದಕ್ಷಿಣ 24 ಪರಗಣದ ಡೈಮಂಡ್ ಹಾರ್ಬರ್‌ಗೆ ಪ್ರಯಾಣಿಸುತ್ತಿದ್ದಾಗ ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ದಾಳಿ ನಡೆದಿದೆ. ಡೈಮಂಡ್ ಹಾರ್ಬರ್ ಮುಖ್ಯಮಂತ್ರಿಯ ಸೋದರಳಿಯ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಸಂಸದೀಯ ಕ್ಷೇತ್ರವಾಗಿದೆ.
Published by: MAshok Kumar
First published: December 11, 2020, 6:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories