ದೆಹಲಿ ಸಿಎಂ ಹಾಗೂ ಎಎಪಿ ರಾಷ್ಟ್ರೀಯ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಉತ್ತರಾಖಂಡ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಮುಂದಿನ ವರ್ಷ ನಡೆಯುವ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿರುವ ಎಎಪಿ ಸಿಎಂ ಅಭ್ಯರ್ಥಿಯನ್ನು ಪ್ರಕಟಿಸಿದೆ. ಕರ್ನಲ್ ಅಜಯ್ ಕೊಥಿಯಾಲ್ ಅವರು ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸಿಎಂ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
ಭಾರತೀಯ ಸೇನೆಯ ನುರಿತ ಅಧಿಕಾರಿ ಹಾಗೂ ಉತ್ತರಾಖಂಡದಲ್ಲಿರುವ ನೆಹರು ಇನ್ಸಿಟಿಟ್ಯೂಟ್ ಆಫ್ ಮೌಂಟೈನಿರಿಂಗ್ (ಎನ್ಐಎಂ)ನ ಪ್ರಾಂಶುಪಾಲರಾಗಿದ್ದ ಕರ್ನಲ್ ಕೊಥಿಯಾಲ್ ಅವರು ಇದೇ ವರ್ಷ ಏಪ್ರಿಲ್ 20ರಂದು ಎಎಪಿ ಸೇರ್ಪಡೆಯಾಗಿದ್ದರು.
ದೆಹಲಿ ಉಪಮುಖ್ಯಮಂತ್ರಿ ಹಾಗೂ ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರು ಉತ್ತರಾಖಂಡದಲ್ಲಿ ಇದಕ್ಕೂ ಮೊದಲು ಈ ರಾಜ್ಯದ ಜನರಿಗೆ ಕೊಥಿಯಾಲ್ ಅವರಂತಹ ಪ್ರಾಮಾಣಿಕ ನಾಯಕರು ಬೇಕಾಗಿದೆ ಎಂದು ಹೇಳಿದ್ದರು. ಉತ್ತರಾಖಂಡದ ಜನರ ಮುಂದೆ, ಒಂದು ಕಡೆ, ಬಿಜೆಪಿಯ ಭ್ರಷ್ಟ ಮುಖ್ಯಮಂತ್ರಿ ಇದ್ದಾರೆ. ಮತ್ತೊಂದೆಡೆ, ಕಟ್ಟಾ ದೇಶಭಕ್ತ ಕರ್ನಲ್ ಅಜಯ್ ಕೊಥಿಯಾಲ್ ಇದ್ದಾರೆ. ನಾನು ಮತದಾರರನ್ನು ಕೇಳುತ್ತೇನೆ, ಕರ್ನಲ್ ಕೊಥಿಯಾಲ್ ಅವರಂತಹ ವ್ಯಕ್ತಿ ಉತ್ತರಾಖಂಡದ ಭವಿಷ್ಯದ ಮುಖ್ಯಮಂತ್ರಿಯಾಗಬೇಕೇ ಅಥವಾ ಬಿಜೆಪಿಯಿಂದ ಭ್ರಷ್ಟ ನಾಯಕರಾಗಬೇಕೇ? ಸಿಸೋಡಿಯಾ ಅವರು ಹೇಳಿದ್ದರು.
ಉತ್ತರಾಖಂಡಕ್ಕೆ ಭೇಟಿ ನೀಡಿದ ಕೇಜ್ರಿವಾಲ್ ಅವರು, ಉತ್ತರಾಖಂಡವನ್ನು ಪ್ರಪಂಚದಾದ್ಯಂತದ ಹಿಂದೂಗಳ ಆಧ್ಯಾತ್ಮಿಕ ರಾಜಧಾನಿಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ದೆಹಲಿ ಸಿಎಂ ಕೇಜ್ರಿವಾಲ್ ಅವರು, 300 ಯೂನಿಟ್ ಉಚಿತ ವಿದ್ಯುತ್, ರೈತರಿಗೆ ಉಚಿತ ವಿದ್ಯುತ್ ಪೂರೈಕೆ, ಹಳೆ ಬಾಕಿ ಮನ್ನಾ ಮತ್ತು ರಾಜ್ಯದ ಜನರಿಗೆ 24 ಗಂಟೆ ಉಚಿತ ವಿದ್ಯುತ್ ಪೂರೈಕೆ ಮಾಡುವ ಭರವಸೆಯನ್ನು ನೀಡಿದ್ದಾರೆ. ಉತ್ತರಾಖಂಡದಲ್ಲಿ ಎಎಪಿಯ ದೆಹಲಿ ಮಾದರಿಯ ಆಡಳಿತವನ್ನು ಪುನರಾವರ್ತಿಸುವ ಕುರಿತು ಮಾತನಾಡಿದ ಕೇಜ್ರಿವಾಲ್, ಪಕ್ಷವು ಅಧಿಕಾರಕ್ಕೆ ಬಂದರೆ, ಶಾಲೆಗಳು ಮತ್ತು ಆರೋಗ್ಯ ಮೂಲಸೌಕರ್ಯಗಳಲ್ಲಿ ಪ್ರಮುಖ ಬದಲಾವಣೆಯನ್ನು ತರುತ್ತದೆ ಎಂದು ಹೇಳಿದ್ದರು. "ಇಲ್ಲಿ ನಮ್ಮ ನಾಯಕರು ಯುವಕರೊಂದಿಗೆ ಮಾತನಾಡುತ್ತಿದ್ದಾರೆ, ಒಂದು ತಿಂಗಳೊಳಗೆ, ನಾವು ರಾಜ್ಯದ ಯುವಕರಿಗೆ ಉದ್ಯೋಗದ ಬಗ್ಗೆ ದೊಡ್ಡ ಘೋಷಣೆ ಮಾಡುತ್ತೇವೆ" ಎಂದು ಅವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ