ಸರ್ಕಾರಿ ದೇವಾಲಯಗಳಲ್ಲಿ ಮೀಸಲಾತಿ ವ್ಯವಸ್ಥೆ ಜಾರಿ; ಆಂಧ್ರಪ್ರದೇಶದ ಸಿಎಂ ಜಗನ್​​ ಮೋಹನ್​​ ರೆಡ್ಡಿ ಐತಿಹಾಸಿಕ ನಿರ್ಧಾರ

ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನಗಳು ಸರಕಾರದ ಆಡಳಿತಕ್ಕೆ ಒಳಪಟ್ಟಿವೆ. ಹಾಗಾಗಿ ಅರ್ಚಕರ ನೇಮಕದಲ್ಲಿ ಮೀಸಲು ನೀಡಲಾಗುತ್ತಿದೆ. ವಂಶ ಪಾರಂಪರಿಕವಾಗಿ ನೇಮಕ ಕೈಗೊಳ್ಳಲಾಗುತ್ತಿದ್ದ ಹಾಲಿ ಕಾಯ್ದೆ ಬದಲಾಯಿಸಲಾಗಿದೆ.

news18
Updated:September 13, 2019, 3:59 PM IST
ಸರ್ಕಾರಿ ದೇವಾಲಯಗಳಲ್ಲಿ ಮೀಸಲಾತಿ ವ್ಯವಸ್ಥೆ ಜಾರಿ; ಆಂಧ್ರಪ್ರದೇಶದ ಸಿಎಂ ಜಗನ್​​ ಮೋಹನ್​​ ರೆಡ್ಡಿ ಐತಿಹಾಸಿಕ ನಿರ್ಧಾರ
ಜಗನ್​ಮೋಹನ್​ ರೆಡ್ಡಿ
  • News18
  • Last Updated: September 13, 2019, 3:59 PM IST
  • Share this:
ಅಮರಾವತಿ(ಸೆ.13): ಸಮಾಜದಲ್ಲಿನ ಜಾತಿ ಗೋಡೆಯನ್ನು ಕೆಡವಲು ಮುಂದಾಗಿರುವ ಸಿಎಂ ಜಗನ್ ​ಮೋಹನ್ ರೆಡ್ಡಿ ನೇತೃತ್ವದ​  ಆಂಧ್ರಪ್ರದೇಶ ಸರ್ಕಾರ, ರಾಜ್ಯದ ಎಲ್ಲಾ ಸರ್ಕಾರಿ ದೇವಾಲಯಗಳಲ್ಲಿ ಶೇ.50 ರಷ್ಟು ಮೀಸಲಾತಿ ಜಾರಿಗೊಳಿಸುವ ನಿರ್ಣಯ ತೆಗೆದುಕೊಳ್ಳುವ ಮೂಲಕ ಇತಿಹಾಸ ಒಂದಕ್ಕೆ ಸಾಕ್ಷಿಯಾಗಿದೆ.

ಧಾರ್ಮಿಕ ದತ್ತಿ ಇಲಾಖೆ ಆಡಳಿತಕ್ಕೆ ಒಳಪಟ್ಟ ಇಲ್ಲಿನ ದೇವಾಲಯಗಳಲ್ಲಿ ಅರ್ಚಕ ಹುದ್ದೆಯಿಂದ ಎಲ್ಲಾ ಸ್ಥಾನಗಳಿಗೂ ಈವರೆಗೆ ವಂಶ ಪಾರಂಪರ್ಯ ನೇಮಕ ಮಾಡಲಾಗುತ್ತಿತ್ತು. ಆದರೆ, ಜಗನ್ ಮೋಹನ್ ರೆಡ್ಡಿ ಈ ಹಳೆ ಸಂಪ್ರದಾಯಕ್ಕೆ ಇತಿಶ್ರೀ ಹಾಡಿದೆ. ಅಲ್ಲದೆ,  ದೇವಸ್ಥಾನದ ಅರ್ಚಕರಿಂದ ಆಡಳಿತ ಮಂಡಳಿಯವರೆಗೆ ಎಲ್ಲಾ ಸದಸ್ಯ ನೇಮಕ ವಿಚಾರದಲ್ಲಿ ಶೇ.50ರಷ್ಟು ಹುದ್ದೆಗಳನ್ನು ಎಸ್​​ಸಿ-ಎಸ್​​ಟಿ ಹಾಗೂ ಇತರೆ ಹಿಂದುಳಿದ ವರ್ಗಗಗಳಿಗೆ ಮೀಸಲಿಡುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಇಂತಹ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳುವ ಮೂಲಕ ಜಗನ್ ಮೋಹನ್​ ರೆಡ್ಡಿ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ದಲಿತರು ಸೇರಿದಂತೆ ಎಲ್ಲಾ ಬ್ರಾಹ್ಮಣೇತರರು ಸಹ ದೇವಸ್ಥಾನದ ಉನ್ನತ ಹುದ್ದೆಗಳಿಗೆ ಏರುವ ಅವಕಾಶವನ್ನು ಕಲ್ಪಿಸಿದ್ದಾರೆ. ಈ ಮೂಲಕ ಸಮಾಜದಲ್ಲಿನ ಜಾತಿ ಗೋಡೆಯನ್ನು ಕೆಡವಲು ಪ್ರಬಲ ಅಸ್ತ್ರವನ್ನು ಬಳಸಿದ್ದಾರೆ.  ಅಲ್ಲದೆ ಇಲ್ಲಿನ ಕೆಲಸಗಳ ವಿಚಾರದಲ್ಲಿ ಯಾವುದೇ ರೀತಿಯ ರಾಜಕೀಯಕ್ಕೂ ಅವಕಾಶ ನೀಡಿದೆ ಮೀಸಲು ನಿಯಮಾವಳಿಗಳ ಅನುಸಾರ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪಾರದರ್ಶಕ ವಾತಾವರಣವನ್ನೂ ಸಹ ನಿರ್ಮಾಣ ಮಾಡಲಾಗಿದೆ ಎಂಬುದು ಉಲ್ಲೇಖಾರ್ಹ.

ದಶಕಗಳ ಹಿಂದೆಯೇ ಈ ಕ್ರಾಂತಿಯನ್ನು ಸಾಧ್ಯವಾಗಿಸಿದ್ದರು ದಿವಂಗತ ಕರುಣಾನಿಧಿ

ಜಗನ್ ಮೋಹನ್​ ರೆಡ್ಡಿ ಪ್ರಸ್ತುತ ಅಂಧ್ರಪ್ರದೇಶದ ದೇವಾಲಯಗಳಲ್ಲೂ ಮೀಸಲಾತಿಯನ್ನು ಜಾರಿಗೊಳಿಸುವ ಮೂಲಕ ಸಮ ಸಮಾಜದ ಹೋರಾಟಕ್ಕೆ ಮುನ್ನುಡಿ ಬರೆದಿದ್ದಾರೆ. ಆದರೆ, ಇಂತಹ ಒಂದು ಕ್ರಾಂತಿಕಾರಕ ಅಲೋಚನೆ ಮೊದಲು ಹುಟ್ಟಿದ್ದು ತಮಿಳುನಾಡಿನಲ್ಲಿ ಮತ್ತು ಈ ಆಲೋಚನೆಯ ಹರಿಕಾರ ದ್ರಾವಿಡ ಚಳುವಳಿ ಹಿನ್ನೆಲೆಯಲ್ಲಿ ಬೆಳೆದ ದಿವಂಗತ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ.

ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸರ್ಕಾರಿ ದೇವಾಲಯಗಳಲ್ಲಿ ತಮಿಳಿನಲ್ಲೇ ಮಂತ್ರೋಚ್ಛಾರಣೆ ನಡೆಯಬೇಕು ಎಂದು ಕಾನೂನು ಜಾರಿಗೊಳಿಸುವ ಮೂಲಕ ಮಡಿವಂತ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದ ಕರುಣಾನಿಧಿ. 2006ರಲ್ಲಿ ದೇವಾಲಯದ ಅರ್ಚಕ ಹುದ್ದೆಗಿದ್ದ ಜಾತಿ ತಡೆಯನ್ನು ತೆಗೆದು ಎಸೆದಿದ್ದರು. ದಲಿತ ವ್ಯಕ್ತಿ ಸಹ ದೇವರ ಪೂಜೆ ಮಾಡಬಹುದು ಎಂದು ಕಾನೂನನ್ನೇ ಜಾರಿಗೆ ತರುವ ಮೂಲಕ ದ್ರಾವಿಡ ನಾಡಿನಲ್ಲಿ ಹೊಸ ಕ್ರಾಂತಿಗೆ ಮೊದಲ ಬಾರಿಗೆ ಮುನ್ನುಡಿ ಬರೆದಿದ್ದರು.

ಆದರೆ, ಕರುಣಾನಿಧಿಯವರ ಈ ತೀರ್ಮಾನವನ್ನು ವಿರೋಧಿಸಿ ಅನೇಕರು ಕೋರ್ಟ್​ ಮೆಟ್ಟಿಲೇರಿದ್ದರು. ವರ್ಷಗಳ ಕಾಲ ವಿಚಾರಣೆ ನಡೆಸಿದ ಹೈ ಕೋರ್ಟ್​ ಕರುಣಾನಿಧಿ ಸಂಪುಟದ ನಿರ್ಧಾರವನ್ನು ಎತ್ತಿ ಹಿಡಿದಿತ್ತು. ಆಗ ಪ್ರತಿಕ್ರಿಯೆ ನೀಡಿದ್ದ ಕರುಣಾನಿಧಿ "ನ್ಯಾಯಾಲಯದ ಈ ತೀರ್ಪು ದ್ರಾವಿಡ ಚಳುವಳಿ ಹೋರಾಟದ ಹರಿಕಾರ ದಿವಂಗತ ಪೆರಿಯಾರ್​ ಅವರಿಗೆ ಸಂದ ಜಯ" ಎಂದು ಬಣ್ಣಿಸಿದ್ದರು.ಇದನ್ನೂ ಓದಿ: ಪಿಎನ್​​ಬಿ ಹಗರಣ: ನೀರವ್​​ ಮೋದಿ ಸಹೋದರ ನೇಹಾಲ್​ಗೆ ಇಂಟರ್​ಪೋಲ್​​ ರೆಡ್ ಕಾರ್ನರ್​​​ ನೋಟಿಸ್​​

ನ್ಯಾಯಾಲಯದ ತೀರ್ಪಿನ ಬಳಿಕ ಧಾರ್ಮಿಕ ಶಾಸ್ತ್ರದ ವಿದ್ಯಾಲಯವನ್ನೇ ಆರಂಭಿಸಿದ್ದರು. ಇದರ ಮೂಲಕ  2006ರಲ್ಲೇ  24 ದಲಿತರು ಸೇರಿದಂತೆ 206 ಜನ ಬ್ರಾಹ್ಮಣೇತರ ಸಮಾಜದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಪೌರೋಹಿತ್ಯದಿಂದ ಸಂಗೀತ ವಾದನದ ವರೆಗೆ ಧಾರ್ಮಿಕ ಶಾಸ್ತ್ರದ ಎಲ್ಲಾ ವಿಧಿ ವಿಧಾನ ಹಾಗೂ ಪದ್ಧತಿಗಳನ್ನು ಕಲಿಸಲಾಗಿತ್ತು. ಆದರೆ, ದೇವಾಲಯ ಕಾರ್ಯಕ್ಕೆ ದಲಿತರನ್ನು ನೇಮಕ ಮಾಡುವ ಮುನ್ನವೇ ಕರುಣಾನಿಧಿ ಸರ್ಕಾರ ಪತನವಾಗಿತ್ತು.

ತದನಂತರ ಸತತ ಒಂದು ದಶಕಗಳ ಕಾಲ ಅಧಿಕಾರದಲ್ಲಿದ್ದ ದಿವಂಗತ ಜಯಲಲಿತ ನೇತೃತ್ವದ ಸರ್ಕಾರ ಈ ಕುರಿತು ಹೆಚ್ಚು ಗಮನವಹಿಸಿರಲಿಲ್ಲ. ಆದರೆ, ಕಳೆದ ಮಾರ್ಚ್​ 1 ರಂದು 206 ಜನ ಅರ್ಚಕರಲ್ಲಿ ಒಬ್ಬರಾದ ಮರಿಸ್ವಾಮಿ (ಹೆಸರು ಬದಲಾಯಿಸಲಾಗಿದೆ) ಎಂಬಾತನನ್ನು ತಮಿಳುನಾಡು ಸರ್ಕಾರ ಅಧಿಕೃತವಾಗಿ ಮಧುರೈ ಅಯ್ಯಪ್ಪ ದೇವಸ್ಥಾನವೊಂದರಲ್ಲಿ ಅರ್ಚಕರನ್ನಾಗಿ ನೇಮಿಸಿತ್ತು.

ಇದೀಗ ತಮಿಳುನಾಡು ಮಾದರಿಯಲ್ಲೇ ಆಂಧ್ರಪ್ರದೇಶದ ಸರ್ಕಾರವೂ ಸಹ ಮಹತ್ವದ ಹೆಜ್ಜೆ ಇಟ್ಟಿದೆ. ಈ ಮೂಲಕ ಜಾತಿ ಎಲ್ಲೆ ಮೀರಿದ ಸಮ ಸಮಾಜದ ನಿರ್ಮಾಣಕ್ಕೆ ಕ್ರಾಂತಿಕಾರಕ ಹೋರಾಟವನ್ನು ರೂಪಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಈ ನಿಯಮ ಇತರೆ ರಾಜ್ಯಗಳಿಗೂ ವ್ಯಾಪಿಸುತ್ತಾ? ಎಲ್ಲಾ ರಾಜ್ಯದಲ್ಲೂ ದಲಿತರಿಗೆ ಅರ್ಚಕ ಹುದ್ದೆ ಲಭ್ಯವಾಗುತ್ತಾ? ಎಂಬುದನ್ನು ಕಾಲವೇ ಉತ್ತರಿಸಲಿದೆ.
--------
First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading