ಆಗ್ರಾದ ಮೊಘಲ್ ಮ್ಯೂಸಿಯಂಗೆ ಛತ್ರಪತಿ ಶಿವಾಜಿ ಹೆಸರಿಡಲು ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧಾರ
ಮೊಘಲರೆಂದೂ ನಮ್ಮ ಹೀರೋಗಳಾಗಲು ಸಾಧ್ಯವಿಲ್ಲ. ಆದರೆ, ಶಿವಾಜಿ ಮಹಾರಾಜ್ ನಮ್ಮ ನಾಯಕ. ಹೀಗಾಗಿ, ಮೊಘಲ್ ಮ್ಯೂಸಿಯಂಗೆ ಛತ್ರಪತಿ ಶಿವಾಜಿ ಮಹಾರಾಜ್ ಹೆಸರನ್ನಿಡಲು ನಿರ್ಧರಿಸಲಾಗಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ನವದೆಹಲಿ (ಸೆ. 15): ಉತ್ತರ ಪ್ರದೇಶದ ಆಗ್ರಾದಲ್ಲಿ ಮೊಘಲ್ ಸಾಮ್ರಾಜ್ಯದ ನೆನಪಿನಲ್ಲಿ 'ಮೊಘಲ್ ಮ್ಯೂಸಿಯಂ' ನಿರ್ಮಿಸಲಾಗುತ್ತಿದೆ. ಆದರೆ, ಈ ಮ್ಯೂಸಿಯಂಗೆ ಮೊಘಲ್ ಮ್ಯೂಸಿಯಂ ಎಂಬ ಹೆಸರಿನ ಬದಲು ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯಂ ಎಂಬ ಹೆಸರನ್ನಿಡಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ನಿರ್ಧರಿಸಿದೆ. ಈ ಬಗ್ಗೆ ಸೋಮವಾರ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಸಿಎಂ ಯೋಗಿ ಆದಿತ್ಯನಾಥ್ ಮೊಘಲ್ ಮ್ಯೂಸಿಯಂಗೆ ಮರಾಠ ದೊರೆ ಶಿವಾಜಿ ಮಹಾರಾಜ್ ಹೆಸರನ್ನಿಡಲು ನಿರ್ಧರಿಸಿರುವುದಾಗಿ ಘೋಷಿಸಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ್ ನಮ್ಮ ದೇಶದ ಹೆಮ್ಮೆ. ನಮ್ಮ ದೇಶದ ಹೆಮ್ಮೆಯನ್ನು ನಾವು ಪ್ರಚಾರ ಮಾಡಬೇಕೇ ಹೊರತು ಗುಲಾಮಗಿರಿಯ ಮನಸ್ಥಿತಿಯನ್ನು ಮುಂದುವರೆಸಿಕೊಂಡು ಹೋಗಬಾರದು. ಮೊಘಲರು ಎಂದಿಗೂ ನಮಗೆ ಆದರ್ಶಪ್ರಾಯರಾಗಲಾರರು. ರಾಷ್ಟ್ರೀಯತೆಯನ್ನು ಎಲ್ಲೆಡೆ ಹರಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಶಿವಾಜಿ ಮಹಾರಾಜ್ ನಮ್ಮ ನಾಯಕ. ಹೀಗಾಗಿ, ಮೊಘಲ್ ಮ್ಯೂಸಿಯಂಗೆ ಛತ್ರಪತಿ ಶಿವಾಜಿ ಮಹಾರಾಜ್ ಹೆಸರನ್ನಿಡಲು ನಿರ್ಧರಿಸಲಾಗಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಮರಾಠ ಸಾಮ್ರಾಟ ಛತ್ರಪತಿ ಶಿವಾಜಿ ಹೆಸರು ಕೇಳಿದೊಡನೆ ನಮ್ಮಲ್ಲಿ ರಾಷ್ಟ್ರೀಯತೆ ಮತ್ತು ಸ್ವಾಭಿಮಾನ ಮನಸ್ಥಿತಿ ನಿರ್ಮಾಣವಾಗುತ್ತದೆ. ಮೊಘಲರೆಂದೂ ನಮ್ಮ ಹೀರೋಗಳಾಗಲು ಸಾಧ್ಯವಿಲ್ಲ. ಆದರೆ, ಛತ್ರಪತಿ ಶಿವಾಜಿ ಮಹಾರಾಜ್ ನಮಗೆಲ್ಲ ಆದರ್ಶ. ರಾಷ್ಟ್ರೀಯತೆಯ ಪ್ರತೀಕವಾದ ಅವರ ಹೆಸರನ್ನೇ ಮ್ಯೂಸಿಯಂಗೆ ಇಡಲು ಹಲವು ಕಾರಣಗಳಿವೆ. 6 ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಈ ಮ್ಯೂಸಿಯಂ ಮೂಲಕ ಶಿವಾಜಿ ಮಹಾರಾಜ್ ಜೀವನವನ್ನು ತೆರೆದಿಡಲಾಗುವುದು ಎಂದು ಯೋಗಿ ಸರ್ಕಾರ ತಿಳಿಸಿದೆ.
ಆಗ್ರಾದ ತಾಜಮಹಲ್ ದ್ವಾರದ ಬಳಿ ಈ ಮ್ಯೂಸಿಯಂ ನಿರ್ಮಿಸಲಾಗುತ್ತಿದೆ. ಇದರಲ್ಲಿ ಶಿವಾಜಿ ಮಹಾರಾಜ್ಗೆ ಸಂಬಂಧಿಸಿದ ದಾಖಲೆಗಳು ಮತ್ತು ಭಾರತದಲ್ಲಿ ಮೊಘಲ್ ಆಡಳಿತಾವಧಿಯ ಇತಿಹಾಸವನ್ನು ಬಿತ್ತರಿಸಲಾಗುವುದು. 2016ರಲ್ಲಿ ಅಂದು ಸಿಎಂ ಆಗಿದ್ದ ಅಖಿಲೇಶ್ ಯಾದವ್ ಮೊಘಲ್ ಮ್ಯೂಸಿಯಂ ನಿರ್ಮಿಸಲು ಶಂಕು ಸ್ಥಾಪನೆ ಮಾಡಿದ್ದರು. ನಂತರ ಅದರ ಕಾಮಗಾರಿ ಆರಂಭವಾಗಿತ್ತು. ಶಿಲಾಗ್ರಾಮದ ಬಳಿ140 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಮ್ಯೂಸಿಯಂನ ಕಾಮಗಾರಿ ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸ ಬಾಕಿ ಇದೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ