ನವದೆಹಲಿ(ಫೆ.11): ಬಹುನಿರೀಕ್ಷಿತ ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶವೂ ಹೊರಬಿದ್ದಿದೆ. ಚುಣಾವಣೋತ್ತರ ಸಮೀಕ್ಷೆಗಳಂತೆಯೇ ಕಾಂಗ್ರೆಸ್ ಮತ್ತು ಬಿಜೆಪಿನ್ನು ಆಮ್ ಆದ್ಮಿ ಪಕ್ಷವೂ ಗುಡಿಸಿ ಗುಂಡಾಂತರ ಮಾಡಿದೆ. ಇಲ್ಲಿನ 70 ವಿಧಾನಭಾ ಕ್ಷೇತ್ರಗಳ ಪೈಕಿ 60ಕ್ಕೂ ಹೆಚ್ಚು ಸ್ಥಾನಗಳಲ್ಲಿ ಆಪ್ ಗೆಲುವು ಸಾಧಿಸಿದೆ. ಇನ್ನೇನು ಮೂರನೇ ಬಾರಿಗೆ ಅಧಿಕಾರಕ್ಕೇರಬೇಕಿರುವ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಮಾತ್ರ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಮಧ್ಯೆಯೇ ಭಾರತ ಮುನ್ನಡೆಬೇಕಿರುವುದು ಜನ್ ಕೀ ಬಾತ್ನಿಂದಲೇ ಹೊರತು ಮನ್ ಕೀ ಬಾತ್ನಿಂದಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ತಪರಾಕಿ ಬಾರಿಸಿದ್ಧಾರೆ.
ದೆಹಲಿ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಟ್ವೀಟ್ ಮಾಡಿರುವ ಸಿಎಂ ಉದ್ಧವ್ ಠಾಕ್ರೆ, ಅಭೂತಪೂರ್ವ ಗೆಲುವು ದಾಖಲಿಸಿದ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಧನ್ಯವಾದಗಳು. ದೇಶ ಜನ್ ಕೀ ಬಾತ್ ಮೂಲಕ ಮುನ್ನಡೆಯಬೇಕೇ ಹೊರತು, ಮನ್ ಕೀ ಬಾತ್ನಿಂದಲ್ಲ. ಹೀಗೊಂದು ಸಂದೇಶ ಇಂದಿನ ದೆಹಲಿ ಚುನಾವಣಾ ಫಲಿತಾಂಶ ಸಾರಿದೆ ಎಂದು ಟ್ವೀಟ್ ಮಾಡಿದ್ಧಾರೆ.
ಇನ್ನು, ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಬಿಜೆಪಿ ಭಯೋತ್ಪಾದಕ ಎಂದು ಕರೆಯುತ್ತಿತ್ತು. ಆದರೀಗ ಅವರನ್ನೇ ಬಿಜೆಪಿಗೆ ಸೋಲಿಸಲಾಗಲಿಲ್ಲ. ದೆಹಲಿಗರು ಬಿಜೆಪಿ ಹೊಡೆದಾಳುವ ನೀತಿಯನ್ನು ಸಂಪೂರ್ಣ ತಿರಸ್ಕರಿಸಿದ್ದಾರೆ ಎನ್ನುವುದಕ್ಕೆ ಇಂದಿನ ಫಲಿತಾಂಶವೇ ಸಾಕ್ಷಿ ಎಂದರು ಠಾಕ್ರೆ.
ಇದನ್ನೂ ಓದಿ: ದೆಹಲಿ ಫಲಿತಾಂಶ: ‘ಸೋಲು ಬಿಜೆಪಿಗೆ ಹೊಸತಲ್ಲ, ಒಂದು ಸೀಟು ಗೆಲ್ಲದ ಕಾಂಗ್ರೆಸ್ ಬುದ್ದಿ ಕಲಿಯಲಿ‘ ಎಂದ ಸಿ.ಟಿ ರವಿ
ಸತತ ಹದಿನೈದು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಎರಡನೇ ಬಾರಿಗೂ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿದೆ. ಆರಂಭದಿಂದಲೂ ದೆಹಲಿ ಗದ್ದುಗೆಗಾಗಿ ಆಪ್ ಮತ್ತು ಬಿಜೆಪಿ ನಡುವೆ ಭಾರಿ ಪೈಪೋಟಿ ನಡೆಯುತ್ತಿದ್ದರೂ, ಕಾಂಗ್ರೆಸ್ ಮಾತ್ರ ಒಂದೆಜ್ಜೆ ಹಿಂದೆ ಇತ್ತು. ಚುನಾವಣಾ ಪ್ರಚಾರದ ಸಮಯದಿಂದಲೂ ಹಿಂದೆ ಇದ್ದ ಕಾಂಗ್ರೆಸ್ ಕೊನೆಗೂ ಚುನಾವಣೆಯಲ್ಲೀಗ 1 ಸ್ಥಾನವೂ ಗೆಲ್ಲದೆ ಹಿನ್ನಡೆ ಅನುಭವಿಸಿದೆ.
ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಆಮ್ ಆದ್ಮಿ ಪಕ್ಷ ರಾಷ್ಟ್ರ ರಾಜಧಾನಿಯಲ್ಲಿ ಸ್ಪಷ್ಟ ಬಹುಮತ ಪಡೆದಿದೆ. ಬಿಜೆಪಿಗೆ ಮುಖಭಂಗವಾಗಿದ್ದು, ಎರಡು ಅಂಕಿಗಳಷ್ಟು ಸ್ಥಾನವನ್ನು ಗೆದ್ದಿಲ್ಲ. 70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 60ಕ್ಕೂ ಅಧಿಕ ಸ್ಥಾನಗಳನ್ನು ಪಡೆದು ಮತ್ತೆ ಅಧಿಕಾರ ಹಿಡಿದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ