NEET ವಿರುದ್ಧದ ಹೋರಾಟಕ್ಕೆ ಸಿಎಂ ಸ್ಟಾಲಿನ್ ಹೊಸ ಅಸ್ತ್ರ; 12 ರಾಜ್ಯದ ಸಿಎಂಗಳಿಗೆ ಬೆಂಬಲಿಸುವಂತೆ ಪತ್ರ!

MK Stalin: ನೀಟ್‌ ಆಧಾರಿತ ಪ್ರವೇಶ ಪ್ರಕ್ರಿಯೆಯು, ಕಳೆದ ಕೆಲವು ವರ್ಷಗಳಲ್ಲಿ ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆಯೇ ಎಂದು ತಮಿಳುನಾಡು ಸರ್ಕಾರ ಅಧ್ಯಯನ ನಡೆಸಿತ್ತು. ಈ ಸಮಿತಿ ಸಲ್ಲಿಸಿದ ವರದಿಯನ್ನು ಸ್ಟಾಲಿನ್ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಲಗತ್ತಿಸಿದ್ದಾರೆ.

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್

  • News18
  • Last Updated :
  • Share this:
    ಚೆನ್ನೈ (ಅಕ್ಟೋಬರ್​ 05); ವೈದ್ಯಕೀಯ ಶಿಕ್ಷಣ (MBBS) ಕ್ಷೇತ್ರದಲ್ಲಿ ರಾಜ್ಯಗಳಿಗಿದ್ದ ಹಕ್ಕು ಸ್ವಾಮ್ಯವನ್ನು ಕೇಂದ್ರ ಸರ್ಕಾರ ಕಬಳಿಸಿ ಎರಡು ವರ್ಷಗಳಾಗಿವೆ. ವೈದ್ಯಕೀಯ ಶಿಕ್ಷಣಕ್ಕಾಗಿ ಮೊದಲು CET ಬರೆಯುತ್ತಿದ್ದ ವಿದ್ಯಾರ್ಥಿಗಳು ಈಗ ಕೇಂದ್ರ ಸರ್ಕಾರದ NEET ಪರೀಕ್ಷೆಯನ್ನು ಬರೆಯಬೇಕಾಗಿದೆ. ಇದು ಸಾಮಾನ್ಯವಾಗಿ ಗ್ರಾಮೀಣ ಭಾಗದ ಸರ್ಕಾರಿ ಮತ್ತು ಇತರೆ ಶಾಲೆಗಳಲ್ಲಿ ಓದಿದ ಸ್ಥಳೀಯ ವಿದ್ಯಾರ್ಥಿಗಳಿಗೆ ಕಷ್ಟಕರವಾಗಿದ್ದು, ರಾಜ್ಯದ ಬಹುಪಾಲು ಸೀಟುಗಳು ಖಾಸಗಿ ಶಾಲೆ ವಿದ್ಯಾರ್ಥಿಗಳ ಮತ್ತು ಶ್ರೀಮಂತರ ಪಾಲಾಗುತ್ತಿದೆ ಎಂಬ ಆರೋಗಳಿವೆ. ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆಗಳೂ ಕಂಡು ಬಂದಿದೆ. ಹೀಗಾಗಿ ಇದರ ವಿರುದ್ಧ ತಮಿಳುನಾಡಿನ ಡಿಎಂಕೆ ಪಕ್ಷ ಸತತ ಹೋರಾಟ ನಡೆಸುತ್ತಲೇ ಬಂದಿದೆ. ಇದೀಗ ತಮಿಳುನಾಡಿನ (Tamilnadu) ಅಧಿಕಾರ ಹಿಡಿದ ನಂತರವೂ ಡಿಎಂಕೆ ಪಕ್ಷ ಮತ್ತು ಸಿಎಂ ಎಂ.ಕೆ. ಸ್ಟಾಲಿನ್ NEET ವಿರುದ್ಧ ಹೋರಾಟವನ್ನು ಮುಂದುವರೆಸಿದ್ದಾರೆ. ಹೋರಾಟಕ್ಕೆ ಪೂರಕವಾಗಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) 12 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ನೀಟ್ ವಿರುದ್ಧದ ಹೋರಾಟಕ್ಕೆ ಬೆಂಬಲವನ್ನು ಕೋರಿದ್ದಾರೆ ಎಂದು ತಿಳಿದುಬಂದಿದೆ.

    ಸಂವಿಧಾನದಲ್ಲಿ ಕಲ್ಪಿಸಲಾಗಿರುವಂತೆ, ಶಿಕ್ಷಣ ಕ್ಷೇತ್ರವನ್ನು ನಿರ್ವಹಿಸುವಲ್ಲಿ ರಾಜ್ಯ ಸರ್ಕಾರಗಳ ಪ್ರಾಮುಖ್ಯತೆಯನ್ನು ಪುನಃಸ್ಥಾಪಿಸಲು ಒಗ್ಗಟ್ಟಿನ ಪ್ರಯತ್ನವನ್ನು ಮಾಡುವ ಅಗತ್ಯವನ್ನು ಎತ್ತಿ ತೋರಿಸುವ ಉದ್ದೇಶದಿಂದ ಈ ಪತ್ರವನ್ನು ಅವರು ಬರೆದಿದ್ದಾರೆ. ಮುಖ್ಯಮಂತ್ರಿ ಅವರು ತಮ್ಮ ಪತ್ರವನ್ನು ಹೆಚ್ಚಾಗಿ ವಿರೋಧ ಪಕ್ಷಗಳು ಆಳುವ ರಾಜ್ಯಗಳಿಗೆ ಬರೆದಿದ್ದಾರೆ ಎನ್ನಲಾಗಿದೆ.

    ಸ್ಟಾಲಿನ್ ಅವರು, ಆಂಧ್ರಪ್ರದೇಶ, ಛತ್ತೀಸ್‌ಗಡ, ದೆಹಲಿ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಗೋವಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಈ ನಿಟ್ಟಿನಲ್ಲಿ ತಮ್ಮ ಬೆಂಬಲವನ್ನು ನೀಡುವಂತೆ ವಿನಂತಿಸಿದ್ದಾರೆ.

    "ಗ್ರಾಮೀಣ ಪ್ರದೇಶದವರು ಮತ್ತು ಸಮಾಜದ ಅಂಚಿನಲ್ಲಿರುವ ವರ್ಗದವರು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಕಷ್ಟ ಪಡಬಾರದು. ನಮ್ಮ ಸಂವಿಧಾನದಲ್ಲಿ ಕಲ್ಪಿಸಲಾಗಿರುವಂತೆ ಶಿಕ್ಷಣ ಕ್ಷೇತ್ರವನ್ನು ನಿರ್ವಹಿಸುವಲ್ಲಿ, ರಾಜ್ಯ ಸರ್ಕಾರಗಳ ಪ್ರಾಮುಖ್ಯತೆಯನ್ನು ಪುನಃಸ್ಥಾಪಿಸಲು ನಾವು ಒಗ್ಗಟ್ಟಿನ ಪ್ರಯತ್ನವನ್ನು ಮಾಡಬೇಕಾಗಿದೆ" ಎಂದು ಸ್ಟಾಲಿನ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

    "ನೀಟ್‌ ಅನ್ನು ಪರಿಚಯಿಸುವ ಒಕ್ಕೂಟ ಸರ್ಕಾರದ ಕ್ರಮವು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ರಾಜ್ಯಗಳು ಸ್ಥಾಪಿಸಿರುವ ಮತ್ತು ನಡೆಸುತ್ತಿರುವ ವೈದ್ಯಕೀಯ ಸಂಸ್ಥೆಗಳಲ್ಲಿ ಪ್ರವೇಶದ ವಿಧಾನವನ್ನು ನಿರ್ಧರಿಸುವ ರಾಜ್ಯ ಸರ್ಕಾರಗಳ ಹಕ್ಕುಗಳನ್ನು ನಿರ್ಬಂಧಿಸುವುದು, ಸಾಂವಿಧಾನಿಕ ಅಧಿಕಾರದ ಸಮತೋಲನವನ್ನು ಉಲ್ಲಂಘಿಸುತ್ತದೆ ಎಂಬುದು ನಮ್ಮ ನಿಲುವು" ಎಂದು ಸ್ಟಾಲಿನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಇದನ್ನೂ ಓದಿ: CoronaVirus| ಕೇರಳ‌ ಮಾದರಿಯಲ್ಲಿ ಕೊರೋನಾ ಸೋಂಕು ಸ್ಪೋಟದ ಎಚ್ಚರಿಕೆ; ನವರಾತ್ರಿ ಹಬ್ಬಕ್ಕೆ ಕಡಿವಾಣ ಸಾಧ್ಯತೆ?

    ನೀಟ್‌ ಆಧಾರಿತ ಪ್ರವೇಶ ಪ್ರಕ್ರಿಯೆಯು, ಕಳೆದ ಕೆಲವು ವರ್ಷಗಳಲ್ಲಿ ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆಯೇ ಎಂದು ತಮಿಳುನಾಡು ಸರ್ಕಾರ ಅಧ್ಯಯನ ನಡೆಸಿತ್ತು. ಈ ಅಧ್ಯಯನಕ್ಕೆ, ತಮಿಳುನಾಡು ಸರ್ಕಾರ ನಿವೃತ್ತ ನ್ಯಾಯಮೂರ್ತಿ ಎ.ಕೆ. ರಾಜನ್ ಅವರ ನೇತೃತ್ವದಲ್ಲಿ ಸಮಿತಿಯನ್ನು ನೇಮಿಸಿತ್ತು. ಈ ಸಮಿತಿ ಸಲ್ಲಿಸಿದ ವರದಿಯನ್ನು ಸ್ಟಾಲಿನ್ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಲಗತ್ತಿಸಿದ್ದಾರೆ.
    Published by:MAshok Kumar
    First published: