West Bengal Assembly Election2021: ಬಿಜೆಪಿ ಕಾರ್ಯಕರ್ತರಿಂದ ನಂದಿಗ್ರಾಮ ಬೂತ್​ ವಶ: ಚುನಾವಣಾ ಆಯೋಗಕ್ಕೆ ಮಮತಾ ಬ್ಯಾನರ್ಜಿ ದೂರು!

ನಂದಿಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಬೂತ್ ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್​ ನಾಯಕ ಡೆರೆಕ್ ಒಬ್ರಿಯೆನ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಫೈಲ್​ ಫೋಟೋ.

ಫೈಲ್​ ಫೋಟೋ.

 • Share this:
  ನಂದಿಗ್ರಾಮ (ಏಪ್ರಿಲ್ 01); ಬಹು ನಿರೀಕ್ಷಿತ ಪಶ್ಚಿಮ ಬಂಗಾಳ ಚುನಾವಣೆ ಎರಡನೇ ಹಂತ ಇಂದು ಆರಂಭವಾಗಿದೆ. ಈವರೆಗೆ ಶೇ.63 ರಷ್ಟು ಮತದಾನವಾಗಿದೆ ಎಂಬ ಮಾಹಿತಿಗಳು ಹೊರ ಬೀಳುತ್ತಿವೆ. ಈ ನಡುವೆ ಟಿಎಂಸಿ ಅಭ್ಯರ್ಥಿ ಸಿಎಂ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ಅಭ್ಯರ್ಥಿ ಸುವೆಂದು ಅಧಿಕಾರಿ ನೇರಾ ನೇರ ಸ್ಪರ್ಧೆ ಮಾಡುತ್ತಿರುವ ನಂದಿಗ್ರಾಮದಲ್ಲಿ ಇಂದು ಚುನಾವಣೆ ನಡೆಯತ್ತಿದೆ. ಹೈವೋಲ್ಟೇಜ್ ಕಣದಲ್ಲಿ ವಿಜಯ ಲಕ್ಷ್ಮಿ ಯಾರ ಪಾಲಾಗಲಿದೆ? ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಆದರೆ, ನಂದಿಗ್ರಾಮದಲ್ಲಿಂದು ಮತದಾನದ ವೇಳೆ ಕಾರ್ಯಕರ್ತರ ಹತ್ಯೆ, ಕಲ್ಲುತೂರಾಟ, ಬೂತ್ ನಿಯಂತ್ರಣ ಆರೋಪಗಳು ಕೇಳಿ ಬರುತ್ತಿವೆ. ಅಲ್ಲದೆ, ಬಿಜೆಪಿ ಕಾರ್ಯಕರ್ತರು ಇಡೀ ನಂದಿಗ್ರಾಮದ ಹಲವು ಬೂತ್​ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಸಿಎಂ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ಭಾರತೀಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

  ನಂದಿಗ್ರಾಮದಲ್ಲಿ ಇಂದು ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಡೀ ದಿನ ನಂದಿಗ್ರಾಮವನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ ಎನ್ನಲಾಗುತ್ತಿದೆ. ಈ ನಡುವೆ ತಮ್ಮ ದೂರಿನ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಅವರು, "ಚುನಾವಣಾ ಆಯೋಗ ಈ ದೂರುಗಳ ವಿರುದ್ಧ ಕ್ರಮ ತೆಗೆದುಕೊಳ್ಳದಿರುವುದರ ಕುರಿತು ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ" ಎಂದು ಎಚ್ಚರಿಸಿದ್ದಾರೆ.  ಬಿಜೆಪಿ ಕಾರ್ಯಕರ್ತರು ನಂದಿಗ್ರಾಮ ಬೂತ್‌ಗಳನ್ನು ಸುತ್ತುವರೆದು ಸ್ಥಳೀಯರಿಗೆ ಮತದಾನ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ರಾಜ್ಯಪಾಲ ಜಗದೀಪ್ ಧಂಖರ್ ಅವರೊಂದಿಗೆ ನಂದಿಗ್ರಾಮದನ ಮತದಾನ ಕೇಂದ್ರದಿಂದಲೇ ಕರೆ ಮಾಡಿ ದೂರು ನೀಡಿದ್ದಾರೆ.

  "ಅವರು ಸ್ಥಳೀಯ ಜನರಿಗೆ ಮತ ಚಲಾಯಿಸಲು ಬಿಡುತ್ತಿಲ್ಲ. ಬೆಳಿಗ್ಗೆಯಿಂದ ನಾನು ದೂರು ನೀಡುತ್ತಿದ್ದೇನೆ. ಈಗ ನಾನು ನಿಮಲ್ಲಿ ಮನವಿ ಮಾಡುತ್ತಿದ್ದೇನೆ, ದಯವಿಟ್ಟು ನೀವು ಇದನ್ನು ನೋಡಿ" ಎಂದಿದ್ದಾರೆ.

  ನಂದಿಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಬೂತ್ ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್​ ನಾಯಕ ಡೆರೆಕ್ ಒಬ್ರಿಯೆನ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. "ಬಿಜೆಪಿ ಕಾರ್ಯಕರ್ತರ ಬೃಹತ್ ಗುಂಪೊಂದು ಬೂತ್ ಸಂಖ್ಯೆ 6, 7, 49, 27, 162, 21, 26, 13, 262, 256, 163, 20ಕ್ಕೆ ಪ್ರವೇಶಿಸಿದೆ. ಇವಿಎಂ ನಿಯಂತ್ರಣವನ್ನು ತೆಗೆದುಕೊಳ್ಳಲು ಪ್ರಯತ್ನಿಸುವ ಬಿಜೆಪಿ ಕಾರ್ಯಕರ್ತರು ಮತ್ತು ಬೂತ್ ಅನ್ನು ಸುತ್ತುವರೆದಿದ್ದಾರೆ" ಎಂದು ಪತ್ರ ಬರೆದಿದ್ದಾರೆ.

  ಇದನ್ನೂ ಓದಿ: Siddaramaiah: ಈಶ್ವರಪ್ಪನವರು ತಮ್ಮ ರಾಜಕೀಯ ಜೀವನದಲ್ಲಿ ಮೊದಲ ಬಾರಿ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ; ಸಿದ್ದರಾಮಯ್ಯ ಪ್ರಶಂಸೆ

  ಇನ್ನು ಸುಮಾರು 150ಕ್ಕೂ ಹೆಚ್ಚು ಇವಿಎಂಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಟಿಎಂಸಿ ಸಂಸದೆ ಮಹುವಾ ಮೊಹಿತ್ರ ಆರೋಪಿಸಿದ್ದರು. ಇದಕ್ಕೆ ಚುನಾವಣಾ ಆಯೋಗ ಪ್ರತಿಕ್ರಿಯೆ ನೀಡಿದ್ದು, ಬಹಳಷ್ಟನ್ನು ಸರಿಪಡಿಸಲಾಗಿದೆ ಎಂದಿದೆ.

  ಬಿಜೆಪಿ ಅಭ್ಯರ್ಥಿಯ ಕಾರಿಗೆ ಕಲ್ಲು ತೂರಾಟ ನಡೆದ ನಂತರ ನಂದಿಗ್ರಾಮದ ಕೇಶಪುರದಲ್ಲಿ ಭಾರಿ ಭದ್ರತೆ ನಿಯೋಜಿಸಲಾಗಿದೆ. ಬಂಗಾಳದಲ್ಲಿ ಚುನಾವಣೆಗಾಗಿ ಚುನಾವಣಾ ಆಯೋಗ ಬಂಗಾಳದ 10,620 ಬೂತ್‌ಗಳ ಭದ್ರತೆಗಾಗಿ ಕೇಂದ್ರ ಪಡೆಗಳ ಸುಮಾರು 651 ತಂಡಗಳನ್ನು ನಿಯೋಜಿಸಿದೆ. ನಂದಿಗ್ರಾಮದ 355 ಬೂತ್‌ಗಳನ್ನು ಅತಿಸೂಕ್ಷ್ಮ ಮತದಾನದ ಬೂತ್ ಎಂದು ಹೇಳಲಾಗಿದೆ. ಇಲ್ಲಿ ಕೇಂದ್ರ ಭದ್ರತಾ ಪಡೆಗಳ 22 ತಂಡಗಳನ್ನು ನಿಯೋಜಿಸಲಾಗಿದೆ. ಡ್ರೋನ್‌ಗಳು ಮತ್ತು ಹೆಲಿಕಾಪ್ಟರ್‌ಗಳೊಂದಿಗೆ ವೈಮಾನಿಕ ಸಮೀಕ್ಷೆ ನಡೆಸಲಾಗುತ್ತಿದೆ.
  Published by:MAshok Kumar
  First published: