ಕೋಲ್ಕತ್ತಾ (ಜೂನ್ 17); ಟ್ವಿಟರ್ ವಿರುದ್ಧ ಭಾರತದಲ್ಲಿ ಕೇಂದ್ರ ಸರ್ಕಾರ ನಿರಂತರವಾಗಿ ದಾಳಿ ನಡೆಸುತ್ತಲೇ ಇದೆ. ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿದಂತೆ ಕಳೆದ ತಂಗಳು ಹೊಸ ಐಟಿ ನೀತಿಯೊಂದನ್ನು ಜಾರಿಗೆ ತರುವ ಮೂಲಕ ಟ್ವಿಟರ್ ನಿಯಂತ್ರಣಕ್ಕೆ ಮುಂದಾಗಿದ್ದ ಕೇಂದ್ರ ಸರ್ಕಾರ, ಉತ್ತರಪ್ರದೇಶದಲ್ಲಿ ಮುಸ್ಲೀಂ ವೃದ್ಧನ ಮೇಲಿನ ಹಲ್ಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ಟ್ವಿಟರ್ ವಿರುದ್ಧವೇ ಕೇಸ್ ದಾಖಲಿಸಿತ್ತು. ಈ ಸಂಬಂಧ ಇಂದು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ಒಕ್ಕೂಟ ಸರ್ಕಾರವು ಟ್ವಿಟರ್ ಮೇಲೆ ಪ್ರಭಾವ ಬೀರಲು ವಿಫಲವಾಗಿದೆ ಆದ್ದರಿಂದ ಇದೀಗ ಅವನ್ನು ಧ್ವಂಸ ಮಾಡಲು ಪ್ರಯತ್ನಿಸುತ್ತಿದೆ" ಎಂದು ಆರೋಪಿಸಿದ್ದಾರೆ.
"ಸುದ್ದಿಗಾರೊಂದಿಗೆ ಮಾತನಾಡಿ ಅವರು, “ಒಕ್ಕೂಟ ಸರ್ಕಾರಕ್ಕೆ ಟ್ವಿಟರ್ ಅನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ಅದನ್ನು ಧ್ವಂಸ ಮಾಡಲು ಪ್ರಯತ್ನಿಸುತ್ತಿದೆ. ಇದನ್ನು ನಾನು ಖಂಡಿಸುತ್ತೇನೆ. ಒಕ್ಕೂಟಕ್ಕೆ ನಿರ್ವಹಿಸಲು ಸಾಧ್ಯವಾಗದ ಎಲ್ಲರೊಂದಿಗೆ ಹಾಗೆ ಮಾಡಲು ಪ್ರಯತ್ನಿಸುತ್ತಿದೆ. ಅವರಿಗೆ ನನ್ನನ್ನು ನಿಯಂತ್ರಿಸಲು ಸಾಧ್ಯಗಿಲ್ಲ, ಅದಕ್ಕಾಗಿಯೇ ಅವರು ನನ್ನ ಸರ್ಕಾರವನ್ನು ಧ್ವಂಸ ಮಾಡಲು ಪ್ರಯತ್ನಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.
ಐಟಿ ನಿಯಮಗಳನ್ನು ಪಾಲಿಸದಿರುವುದು ಮತ್ತು ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕಡ್ಡಾಯವಾಗಿರುವ ಪ್ರಮುಖ ಸಿಬ್ಬಂದಿಯನ್ನು ನೇಮಿಸುವಲ್ಲಿ ವಿಫಲವಾದ ಕಾರಣ ಟ್ವಿಟರ್ ಭಾರತದಲ್ಲಿ ಕಾನೂನು ರಕ್ಷಣೆಯನ್ನು ಕಳೆದುಕೊಂಡಿದೆ. ಆದ್ದರಿಂದ ಈಗ ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬರು ಯಾವುದೆ ಆಕ್ಷೇಪಾರ್ಹ ವಿಷಯಗಳನ್ನು ಹಾಕಿದರೆ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಟ್ವಿಟರ್ ಮೇಲೆ ಕೂಡಾ ಕ್ರಮ ಕೈಗೊಳ್ಳಬಹುದಾಗಿದೆ.
ರಾಜ್ಯದಲ್ಲಿ ರಾಜಕೀಯ ಹಿಂಸಾಚಾರ ಮುಂದುವರೆಸಿದೆ ಎಂಬ ಬಿಜೆಪಿಯ ಆರೋಪಗಳ ಕುರಿತು ಬೆಳಕು ಚೆಲ್ಲಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, "ಇದು ಬಿಜೆಪಿಯ ಗಿಮಿಕ್ ಆಗಿದ್ದು, ಮಾಡಲ್ಪಟ್ಟ ಎಲ್ಲಾ ಆರೋಪಗಳು ಸಂಪೂರ್ಣವಾಗಿ ಆಧಾರರಹಿತ" ಎಂದು ಹೇಳಿದ್ದಾರೆ.
"ರಾಜ್ಯದಲ್ಲಿ ಈಗ ಯಾವುದೇ ರಾಜಕೀಯ ಹಿಂಸಾಚಾರಗಳು ನಡೆಯುತ್ತಿಲ್ಲ. ಒಂದು ಅಥವಾ ಎರಡು ವಿರಳ ಘಟನೆಗಳು ನಡೆದಿರಬಹುದು, ಆದರೆ ಅವುಗಳನ್ನು ರಾಜಕೀಯ ಹಿಂಸಾಚಾರದ ಘಟನೆಗಳೆಂದು ಹಣೆಪಟ್ಟಿ ಕಟ್ಟಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ