ನವದೆಹಲಿ, ಏ. 5: ರಾಜ್ಯದ ಸಚಿವ ಸಂಪುಟ ಪುನರ್ ರಚನೆ ಆಗಲಿದೆ. ಕೆಲವು ಸಚಿವರನ್ನು ಬಿಟ್ಟು ಕೆಲವು ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಮುಂದಿನ ಚುನಾವಣೆ ಹಿನ್ನೆಲೆಯಲ್ಲಿ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಹಾಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraja Bommai) ಅವರ ದೆಹಲಿ ಪ್ರಯಾಣದ ಮೇಲೂ ಭಾರೀ ಕುತೂಹಲ ನಿರ್ಮಾಣವಾಗಿತ್ತು. ಆದರೆ ಬಸವರಾಜ ಬೊಮ್ಮಾಯಿ ಅವರು ಸಂಪುಟ ಪುನರ್ ರಚನೆಯೋ ಅಥವಾ ವಿಸ್ತರಣೆಯೋ ಎಂಬ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ.
ಶಾ, ನಡ್ಡ ಭೇಟಿಗೆ ಯತ್ನ
ಮಂಗಳವಾರ ರಾತ್ರಿ ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು 'ತಾನು ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆ ಬಗ್ಗೆ ಚರ್ಚಿಸಲು ದೆಹಲಿಗೆ ಬಂದಿಲ್ಲ. ರಾಜ್ಯದ ಯೋಜನೆಗಳ ಬಗ್ಗೆ ಚರ್ಚೆಗೆ ಬಂದಿದ್ದೇನೆ. ಈ ಮಧ್ಯೆ ಹೈಕಮಾಂಡ್ ನಾಯಕರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇನೆ. ಹೈಕಮಾಂಡ್ ನಾಯಕರು ಪುನರ್ ರಚನೆ ಅಥವಾ ವಿಸ್ತರಣೆ ಬಗ್ಗೆ ನಿರ್ಧರಿಸುತ್ತಾರೆ. ಹೈಕಮಾಂಡ್ ನಾಯಕರು ಏನು ಮಾಡುತ್ತಾರೆ ಎಂಬುದನ್ನು ಕಾದುನೋಡಬೇಕು ಎಂದು ತಿಳಿಸಿದರಲ್ಲದೆ ಸಚಿವಾಕಾಂಕ್ಷಿಗಳು ದೆಹಲಿಗೆ ಬರುವುದು ಸಹಜ ಎಂದರು.
ನನ್ನ ಮೌನದ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ
ಮೌನಿ ಬಸವರಾಜ್ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ, 'ಕುಮಾರಸ್ವಾಮಿ ಯಾವಾಗ ಮೂಕರಾಗಿದ್ದರು, ಯಾವಾಗ ಮಾತನಾಡಿದ್ದಾರೆ ಎಂಬುದು ಗೊತ್ತಿದೆ. ನನ್ನ ಬಗ್ಗೆ ವೈಯಕ್ತಿಕವಾಗಿ ಹೇಳಿಕೆ ನೀಡಿದರೆ ಅದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅದರ ಬಗ್ಗೆ ರಾಜ್ಯದ ಜನರು ಪ್ರತಿಕ್ರಿಯೆ ನೀಡುತ್ತಾರೆ. ಯಾರು ಏನಾದರೂ ಅಂದುಕೊಳ್ಳಲಿ. ನಾನು ಏನು ಎಂಬುದನ್ನು ಜನ ತಿರ್ಮಾನ ಮಾಡುತ್ತಾರೆ' ಎಂದು ಹೇಳಿದರು.
ಇದನ್ನು ಓದಿ: ರಾಜಕೀಯದಿಂದ ಸನ್ಯಾಸತ್ವದ ಕಡೆಗೆ ಬಿ.ಜೆ ಪುಟ್ಟಸ್ವಾಮಿ, ಗಾಣಿಗ ಸ್ವಾಮೀಜಿಯಾಗಿ ಪಟ್ಟಾಭಿಷೇಕಕ್ಕೆ ಸಿದ್ಧತೆ
ಹೇಳಿಕೆ ನೀಡುವುದೇ ಆಡಳಿತವಲ್ಲ
ರಾಜ್ಯದಲ್ಲಿ ಇತ್ತೀಚೆಗೆ ಕೋಮು ಸಂಘರ್ಷ ಹೆಚ್ಚುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ 'ನಾನು ಯಾವಾಗ ಪ್ರತಿಕ್ರಿಯೆ ನೀಡಬೇಕು ನೀಡಿದ್ದೇನೆ. ಹೇಳಿಕೆ ನೀಡುವುದೇ ಆಡಳಿತವಲ್ಲ. ಹಿಜಾಬ್ ವಿಚಾರಗಳಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಈಗಲೂ ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ' ಎಂದು ತಿಳಿಸಿದರು.
ಇದನ್ನು ಓದಿ: ಪ್ರಧಾನಿ ಸ್ಥಾನ ಬಿಟ್ಟು ಬಂದ ಕುಟುಂಬ ನಮ್ಮದು; ಇದ್ಯಾವುದೋ ಸಿಎಂ ಕುರ್ಚಿ ಮೇಲೆ ಆಸೆನಾ?; HDK
ಮೇಕೆದಾಟು ಬಗ್ಗೆ ಚರ್ಚೆ
ಮೇಕೆದಾಟು ಸೇರಿ ರಾಜ್ಯದ ಜಲ ಯೋಜನೆಗಳ ಬಗ್ಗೆ ಚರ್ಚೆ ಮಾಡಲೆಂದು ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿಯಾಗಿದ್ದರು. ಈ ಬಗ್ಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ರಾಜ್ಯದ ಯೋಜನೆಗಳ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚೆ ಮಾಡಿದ್ದೇನೆ. ಮೇಕೆದಾಟು ಡಿಪಿಆರ್ ಒಪ್ಪಿಗೆ ನೀಡುವಂತೆ ಮನವಿ ಮಾಡಿದ್ಣೇನೆ. ಮೇಕೆದಾಟು ಯೋಜನೆ ಬಗ್ಗೆ ಸರಕಾರ ತೆಗೆದುಕೊಂಡ ನಿಲುವಿನ ಬಗ್ಗೆ ಮಾಹಿತಿ ನೀಡಿದ್ದೇನೆ.
ನಾವು ನ್ಯಾಯಸಮ್ಮತವಾಗಿ ಮೇಕೆದಾಟು ಯೋಜನೆ ಮಾಡುತ್ತಿದ್ದೇವೆ. ಯೋಜನೆಯಿಂದ ತಮಿಳುನಾಡಿಗೆ ತೊಂದರೆಯಾಗುವುದಿಲ್ಲ. ಅವರಿಗೆ ಹೆಚ್ಚುವರಿ ನೀರನ್ನು ಬಿಡಲಾಗುವುದು ಎಂದರು. ಅಲ್ಲದೆ ಕೇಂದ್ರ ಇಂಧನ ಸಚಿವ ಆರ್.ಕೆ. ಸಿಂಗ್ ಅವರನ್ನು ಭೇಟಿಯಾಗಿ ಗ್ರೀನ್ ಕಾರಿಡಾರ್ ಬಗ್ಗೆ ಚರ್ಚೆ ಮಾಡಿದ್ದೇನೆ. ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚುವರಿ ಅನುದಾನ ನೀಡವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ