ಅಭಿವೃದ್ಧಿಶೀಲ ದೇಶಗಳಿಗೆ ತಂತ್ರಜ್ಞಾನ, ಹಣಕಾಸು ನೆರವು ಸಿಕ್ಕರೆ ವಿಶ್ವದ ಪ್ರಗತಿ ಸಾಧ್ಯ: ನರೇಂದ್ರ ಮೋದಿ
ಹವಾಮಾನ ಬದಲಾವಣೆ ವಿರುದ್ಧ ಸಮಗ್ರ ರೀತಿಯ ಕ್ರಮಗಳ ಮೂಲಕ ಹೋರಾಟ ನಡೆಸಬೇಕು. ಏಕಾಂಗಿಯಾಗಿ ಹೋರಾಟ ಮಾಡಲು ಆಗುವುದಿಲ್ಲ ಎಂದು ಜಿ20 ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿ(ನ. 23): ಹವಾಮಾನ ಬದಲಾವಣೆ ವಿರುದ್ಧ ಏಕಾಂಗಿಯಾಗಿ ಹೋರಾಡಲು ಆಗುವುದಿಲ್ಲ. ಸಮಗ್ರ ರೀತಿಯ ಕ್ರಮಗಳ ಮೂಲಕ ಅದನ್ನು ಎದುರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವ ರಾಷ್ಟ್ರಗಳಿಗೆ ಕರೆ ನೀಡಿದರು. ಆನ್ಲೈನ್ನಲ್ಲಿ ಜಿ20 ಶೃಂಗಸಭೆ ಉದ್ದೇಶಿಸಿ ನಿನ್ನೆ ಮಾತನಾಡಿದ ಅವರು, ಅಭಿವೃದ್ಧಶೀಲ ದೇಶಗಳಿಗೆ ಸಾಕಷ್ಟು ತಂತ್ರಜ್ಞಾನ ಮತ್ತು ಹಣಕಾಸಿನ ಬಲ ಸಿಕ್ಕರೆ ಇಡೀ ವಿಶ್ವ ಇನ್ನೂ ಹೆಚ್ಚು ವೇಗದಲ್ಲಿ ಪ್ರಗತಿ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು. “ಗ್ರಹದ ರಕ್ಷಣೆ” ಎಂಬ ವಿಚಾರದ ಮೇಲೆ ನಡೆದ ಈ ಶೃಂಗ ಸಭೆಯಲ್ಲಿ ನರೇಂದ್ರ ಮೋದಿ, ಹವಾಮಾನ ಬದಲಾವಣೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕಿರುವ ಬದ್ಧತೆಯನ್ನು ಜಾಹೀರುಪಡಿಸಿದರು. ಪ್ಯಾರಿಸ್ ಒಪ್ಪಂದದಲ್ಲಿ ಇಟ್ಟುಕೊಳ್ಳಲಾಗಿರುವ ಗುರಿಯನ್ನು ಭಾರತ ಮೀರಿ ಸಾಧನೆ ಮಾಡಿದೆ ಎಂದು ತಿಳಿಸಿದರು.
“ಪರಿಸರದ ಜೊತೆ ಸಹಭಾಳ್ವೆ ಮಾಡುವ ನಮ್ಮ ಸಂಪ್ರದಾಯದ ಪ್ರಕಾರವಾಗಿ ಮತ್ತು ಸರ್ಕಾರದ ಬದ್ಧತೆಯಿಂದಾಗಿ ಭಾರತದಲ್ಲಿ ಕಡಿಮೆ ಇಂಗಾಲ (ಕಾರ್ಬನ್) ಹಾಗೂ ಹವಾಮಾನ ಪೂರಕ ಅಭಿವೃದ್ಧಿ ಕ್ರಮಗಳನ್ನ ಅನುಸರಿಸಲಾಗುತ್ತಿದೆ” ಎಂದು ಅವರು ಹೇಳಿದರು.
ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೆಚ್ಚಿನ ತಂತ್ರಜ್ಞಾನ ಮತ್ತು ಹಣಕಾಸಿನ ನೆರವು ಸಿಕ್ಕರೆ ಇಡೀ ವಿಶ್ವ ಇನ್ನಷ್ಟು ವೇಗದಲ್ಲಿ ಪ್ರಗತಿ ಸಾಧಿಸುತ್ತದೆ ಎಂದು ಅವರು ಈ ವೇಳೆ ಸಂದೇಶ ರವಾನಿಸಿದರು. “ಮಾನವಕುಲ ಪ್ರಗತಿ ಸಾಧಿಸಬೇಕಾದರೆ ಪ್ರತಿಯೊಬ್ಬ ವ್ಯಕ್ತಿಯೂ ಅಭಿವೃದ್ಧಿ ಹೊಂದಬೇಕು. ಕಾರ್ಮಿಕರನ್ನು ಉತ್ಪಾದನೆಯ ಒಂದು ಭಾಗ ಎಂದು ನೋಡುವುದಕ್ಕಿಂತ, ಪ್ರತಿಯೊಬ್ಬ ಕಾರ್ಮಿಕನಿಗೂ ಘನತೆ ಸಿಗುವಂತಾಗಬೇಕು” ಎಂದು ಜಿ20 ಶೃಂಗಸಭೆಯಲ್ಲಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ನವೀಕೃತ ಇಂಧನದ ವಿಚಾರವಾಗಿ ಮಾತನಾಡಿದ ಅವರು, 2030ರಷ್ಟರಲ್ಲಿ ಭಾರತದಲ್ಲಿ 450 ಗೀಗಾವ್ಯಾಟ್ಸ್ನಷ್ಟು ನವೀಕೃತ ಇಂಧನವನ್ನ ಉತ್ಪಾದನೆ ಮಾಡುವ ಮಹತ್ವಾಕಾಂಕ್ಷಿ ಗುರಿ ಇಟ್ಟುಕೊಳ್ಳಲಾಗಿದೆ. 2022ರಷ್ಟರಲ್ಲೇ 175 ಗೀಗಾವ್ಯಾಟ್ ಇಂಧನದ ಗುರಿಯನ್ನು ಮುಟ್ಟುತ್ತೇವೆ. ಅದಾದ ಬಳಿಕ 450 ಗೀಗಾವ್ಯಾಟ್ಸ್ ನವೀಕೃತ ಇಂಧನ ಉತ್ಪಾದನೆಗೆ ದೊಡ್ಡ ಕ್ರಮಗಳನ್ನ ತೆಗೆದುಕೊಳ್ಳುವ ಅಗತ್ಯ ಇದೆ ಎಂದು ಹೇಳಿದರು.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ