Nabanna Chalo: ಬಿಜೆಪಿ ಕಾರ್ಯಕರ್ತರು ಪಶ್ಚಿಮ ಬಂಗಾಳ ಪೊಲೀಸರ ನಡುವೆ ಘರ್ಷಣೆ: ಟಿಯರ್​ ಗ್ಯಾಸ್​ ಪ್ರಯೋಗ

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ನೇಮಕಗೊಂಡಿರುವ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಪಶ್ಚಿಮ ಬಂಗಾಳದಲ್ಲಿ ಈ ಪ್ರತಿಭಟನಾ ಮೆರವಣಿಗೆ ನಡೆಸಲಾಗಿತ್ತು.

ಪ್ರತಿಭಟನೆ ಚಿತ್ರ

ಪ್ರತಿಭಟನೆ ಚಿತ್ರ

 • Share this:
  ಕೊಲ್ಕತ್ತಾ (ಅ.8):  ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರತಿಭಟನಾ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಹಿನ್ನಲೆ ಬಿಜೆಪಿ ಕಾರ್ಯಕರ್ತರನ್ನು ಚದುರಿಸಲು ಜಲಫಿರಂಗಿ ಪ್ರಯೋಗ ಮಾಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಇಂದು ಬಿಜೆಪಿ ಕಾರ್ಯಕರ್ತರು ಕೊಲ್ಕತ್ತಾ ಮತ್ತು ಹೌರಾದಿಂದ ನಬನ್ನಾದವರೆಗೆ  ಪ್ರತಿಭಟನಾ ಮೆರವಣಿಗೆ ಆಯೋಜಿಸಿದ್ದರು. ಈ ವೇಳೆ ಅವರು ಬ್ಯಾರಿಕೇಡ್​ಗಳನ್ನು ಮುರಿದು, ಮುಖ್ಯಮಂತ್ರಿ ಕಚೇರಿಗೆ ಮುನ್ನುಗುವ ಯುತ್ನ ನಡೆಸಿದ್ದಾರೆ.  ಈ ವೇಳೆ ಕೇಸರಿಪಾಳಯದ ನಾಯಕರನ್ನು ತಡೆಯಲು ಮುಂದಾದ ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದಾರೆ.

  ಹೌರಾ ಸೇತುವೆ ಮೇಲೆ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್​ ಕೂಡ ಮಾಡಿದ್ದಾರೆ. ಈ ಘರ್ಷಣೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜು ಬ್ಯಾನರ್ಜಿ ಮತ್ತು ಸಂಸದ ಜ್ಯೂತಿರ್ಮೊಯಿ ಸಿಂಗ್​ ಮಹತೊ ಗಾಯಗೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರವಿಂದ್​ ಮೆನನ್​ ಕೂಡ ಗಾಯಗೊಂಡಿದ್ದಾರೆ.

  ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿ ನಾಯಕರ ಹತ್ಯೆ ಖಂಡಿಸಿ ಇಂದು 'ನಬನ್ನಾ ಚಲೋ' ರ‍್ಯಾಲಿಗೆ ಕರೆ ನೀಡಲಾಗಿತ್ತು. ಪ್ರತಿಭಟನೆಯಲ್ಲಿ ಎರಡು ಲಕ್ಷ ಜನರು ಭಾಗಿಯಾಗುವ ನಿರೀಕ್ಷೆ ಇತ್ತು. ಪ್ರತಿಭಟಾನಾಕಾರರನ್ನು ಕರೆತರಲು ಪ್ರತಿ ಮಂಡಲ್​ಗೂ ಸೂಚನೆ ನೀಡಲಾಗಿದ್ದು, ಇದಕ್ಕಾಗಿ 10 ಬಸ್​ಗಳ ವ್ಯವಸ್ಥೆಯನ್ನು ಮಾಡುವಂತೆ ಪ್ರತಿ ಮಂಡಲ್​ ಬಿಜೆಪಿ ನಾಯಕರಿಗೆ ಸೂಚಿಸಲಾಗಿತ್ತು.

  ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ನೇಮಕಗೊಂಡಿರುವ ಸಂಸದ ತೇಜಸ್ವಿ ಸೂರ್ಯ ಮೆರವಣಿಗೆ ನಾಯಕತ್ವ ವಹಿಸಿದ್ದರು. ಬಿಜೆಪಿ ಕಾರ್ಯಕರ್ತರ ಮೇಲೆ ಟಿಯರ್​ ಗ್ಯಾಸ್​ ಮತ್ತು ಜಲಫಿರಂಗಿಗಳ ಪ್ರಯೋಗ ಮಾಡಲಾಗಿದೆ.  ಫ್ಯಾಸಿಸಂ ಹೀಗಿದೆ, ಟಿಎಂಸಿ ಗೂಂಡಾಗಳು ಬಿಜೆಪಿ ರ್ಯಾಲಿ ಮೇಲೆ ಬಾಂಬ್​ಗಳನ್ನು ಎಸೆದರು. ಶಾಂತಿಯುತ ಮೆರವಣಿಗೆ ಮೇಲೆ ಜಲಫಿರಂಗಿ, ಟಿಯರ್​ ಗ್ಯಾಸ್​ ಪ್ರಯೋಗ ಮಾಡಲಾಗಿದೆ. ಈ ನಿರಂಕುಶ ಅಧಿಕಾರ ಕೊನೆಗೊಳ್ಳಲಿದೆ ಎಂದು ತೇಜಸ್ವಿ ಸೂರ್ಯ ಟ್ವಿಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಈ ಕುರಿತು ನ್ಯೂಸ್​ 18ನೊಂದಿಗೆ ಮಾತನಾಡಿರುವ ಅವರು, ಮಮತಾ ಬ್ಯಾನರ್ಜಿ ಸರ್ಕಾರವನ್ನು ಪಶ್ಚಿಮ ಬಂಗಾಳದ ಜನತೆ ಇಚ್ಚಿಸುತ್ತಿಲ್ಲ. ಪ್ರಜಾಪ್ರಭುತ್ವದ ಅಪಹಾಸ್ಯವುದು ಎಂದಿದ್ದಾರೆ.

  ಇನ್ನು ಈ ಪ್ರತಿಭಟನೆಯಲ್ಲಿ ಗುಂಪುಗೂಡುವುದನ್ನು ಮಮತಾ ಬ್ಯಾನರ್ಜಿ ಸರ್ಕಾರ ವಿರೋಧಿಸಿತ್ತು. ಕೊರೋನಾ ಹಿನ್ನಲೆ ಜನರು  ಸಾಮಾಜಿಕ ಅಂತರ ಮರೆತು ಈ ರೀತಿ ಸಾಮೂಹಿಕವಾಗಿ ಹೀಗೆ ಪ್ರತಿಭಟನೆ ಮಾಡುವುದು ಕಾನೂನು ಉಲ್ಲಂಘನೆ ಎಂದು ಸರ್ಕಾರ ತಿಳಿಸಿತ್ತು.
  Published by:Seema R
  First published: