ದೆಹಲಿ ಮತ್ತೆ ಉದ್ವಿಗ್ನ; ಪ್ರತಿಭಟನಾನಿರತ ರೈತರ ವಿರುದ್ಧ ‘ಸ್ಥಳೀಯ ಜನರ’ ಆಕ್ರೋಶ; ಕಲ್ಲು ತೂರಾಟ

ರೈತರಿಂದ ರಾಷ್ಟ್ರಧ್ವಜಕ್ಕೆ ಅವಮಾನ ಆಗಿದೆ. ಅವರ ನಿರಂತರ ಪ್ರತಿಭಟನೆಯಿಂದ ಸ್ಥಳೀಯರಿಗೆ ಅನನುಕೂಲವಾಗಿದೆ ಎಂದು ಆಕ್ಷೇಪಿಸಿ ಸ್ಥಳೀಯ ಜನರ ಗುಂಪು ಇಂದು ಪ್ರತಿಭಟನಾನಿರತ ರೈತರ ವಿರುದ್ಧ ಕಲ್ಲುತೂರಾಟ ನಡೆಸಿರುವ ಘಟನೆ ಆಗಿದೆ.

ದೆಹಲಿಯಲ್ಲಿ ಸ್ಥಳೀಯರು ಮತ್ತು ರೈತರ ಮಧ್ಯೆ ಸಂಘರ್ಷ

ದೆಹಲಿಯಲ್ಲಿ ಸ್ಥಳೀಯರು ಮತ್ತು ರೈತರ ಮಧ್ಯೆ ಸಂಘರ್ಷ

 • News18
 • Last Updated :
 • Share this:
  ನವದೆಹಲಿ(ಜ. 29): ಕೇಂದ್ರದ ಕೃಷಿ ಕಾಯ್ದೆಗಳನ್ನ ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಇಂದು ಮತ್ತೊಂದು ತಿರುವು ಪಡೆದಿದೆ. ಗಣರಾಜ್ಯೋತ್ಸವ ದಿನದಂದು ಹಿಂಸಾಚಾರ ನಡೆಸಿದ ಬೆನ್ನಲ್ಲೇ ಗಡಿಭಾಗದಲ್ಲಿ ಪ್ರತಿಭಟನೆ ಮುಂದುವರಿಸಿರುವ ರೈತರ ವಿರುದ್ಧ ಸಿಂಘು ಗಡಿಭಾಗದಲ್ಲಿ ಬೇರೊಂದು ಗುಂಪು ಆಕ್ರೋಶ ವ್ಯಕ್ತಪಡಿಸಿದೆ. ಸ್ಥಳೀಯ ಜನರು ಎಂದು ಹೇಳಲಾಗುತ್ತಿರುವ ಈ ಗುಂಪು ಕೈಯಲ್ಲಿ ದೊಣ್ಣೆ, ಕಲ್ಲುಗಳನ್ನ ಹಿಡಿದುಬಂದು ಪ್ರತಿಭಟನಾನಿರತ ರೈತರನ್ನು ಸ್ಥಳದಿಂದ ತೆರವುಗೊಳಿಸಬೇಕೆಂದು ಆಗ್ರಹಿಸಿದೆ. ರೈತರ ಮೇಲೆ ಕಲ್ಲುತೂರಾಟ ಕೂಡ ಆಗಿದೆ. ಇದಕ್ಕೆ ಪ್ರತಿಯಾಗಿ ಪ್ರತಿಭಟನಾನಿರತ ರೈತರಿಂದಲೂ ಕಲ್ಲು ತೂರಾಟ ನಡೆದಿದೆ. ಇದೀಗ ಸಿಂಘು ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

  ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಪರಿಸ್ಥಿತಿ ನಿಭಾಯಿಸಲು ಹೈರಾಣಾಗಿದ್ಧಾರೆ. ಹಿಂಸಾನಿರತ ಜನರ ಮೇಲೆ ಲಾಠಿ ಪ್ರಹಾರ ನಡೆದಿದೆ. ಅಲಿಪುರ್ ಠಾಣೆ ಅಧಿಕಾರಿಯೊಬ್ಬರು ಈ ಗಲಭೆಯಲ್ಲಿ ಗಾಯಗೊಂಡಿದ್ದಾರೆ. ಸ್ಥಳೀಯರು ಎಂದು ಹೇಳಿಕೊಳ್ಳುತ್ತಿರುವ ಗುಂಪು, ರೈತರಿಂದ ರಾಷ್ಟ್ರಧ್ವಜಕ್ಕೆ ಅವಮಾನ ಆಗಿದೆ. ಎರಡು ತಿಂಗಳಿಂದ ನಡೆಸುತ್ತಿರುವ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ಬಹಳ ಅನನುಕೂಲವಾಗಿದೆ. ಸ್ಥಳವನ್ನು ಕೂಡಲೇ ತೆರವುಗೊಳಿಸಿ ತಮ್ಮ ತಮ್ಮ ಊರಿಗೆ ಮರಳಬೇಕೆಂದು ವಾದ ಮುಂದಿಡುತ್ತಿದೆ.

  ಇದನ್ನೂ ಓದಿ: ರೈತರ ಟ್ರ್ಯಾಕ್ಟರ್​ ರ‍್ಯಾಲಿ ವೇಳೆ ಪ್ರಚೋದನಾತ್ಮಕ ಟ್ವೀಟ್​; ಶಶಿ ತರೂರ್​ ಸೇರಿದಂತೆ 6 ಜನರ ವಿರುದ್ಧ ದೇಶದ್ರೋಹ ಪ್ರಕರಣ!

  ಇದೇ ವೇಳೆ, ದೆಹಲಿ ಗಡಿಭಾಗದ ಸಿಂಘು, ಘಾಜಿಯಾಬಾದ್ ಮೊದಲಾದ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನ ತೆರವುಗೊಳಿಸಲು ಉತ್ತರ ಪ್ರದೇಶ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಜ. 26ರಂದು ಕೆಲ ರೈತ ಪ್ರತಿಭಟನಾಕಾರರು ಹಿಂಸಾಚಾರ ನಡೆಸಿದ ಘಟನೆ ಬಳಿಕ ಪ್ರತಿಭಟನಾಕಾರರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಕೆಲ ರೈತ ಸಂಘಟನೆಗಳು ಈ ಹೋರಾಟದಿಂದ ಹಿಂದೆ ಸರಿದಿವೆ. ಆದರೂ ಹಲವು ಸಂಘಟನೆಗಳು ತಮ್ಮ ಪ್ರತಿಭಟನೆಗಳನ್ನ ಮುಂದುವರಿಸಲು ಪಣತೊಟ್ಟಿವೆ.

  ಇದೇ ವೇಳೆ, ಹರಿಯಾಣದ ಹಲವು ಭಾಗಗಳಿಂದ ರೈತರು ದೆಹಲಿ ಗಡಿ ಬಳಿ ಪ್ರತಿಭಟನೆಗಳಿಗೆ ಬೆಂಬಲ ನೀಡಲು ಹೋಗುತ್ತಿದ್ಧಾರೆ. ರೈತ ಮುಖಂಡರ ಮೇಲೆ ಕೇಂದ್ರ ಸರ್ಕಾರ ಲುಕೌಟ್ ನೋಟೀಸ್ ನೀಡುತ್ತಿರುವುದನ್ನು ಆಕ್ಷೇಪಿಸಿ ಹೊಸ ಹೊಸ ರೈತರು ಈ ಪ್ರತಿಭಟನೆಯಲ್ಲಿ ಭಾಗಿಯಾಗಲು ಹೋಗುತ್ತಿದ್ದಾರೆ. ಹರಿಯಾಣದ ಜಿಂದ್, ರೋಹ್ಟಕ್, ಕೈತಾಲ್ ಹಿಸಾರ್, ಭಿವಾನಿ, ಸೋನಿಪತ್ ಜಿಲ್ಲೆಗಳಿಂದ ಸಾವಿರಾರು ರೈತರು ಪ್ರತಿಭಟನೆಗೆ ಕೈಜೋಡಿಸಲು ತೆರಳುತ್ತಿದ್ದಾರೆ.

  ಇದನ್ನೂ ಓದಿ: President Speech - ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ದುರದೃಷ್ಟಕರ: ರಾಷ್ಟ್ರಪತಿ ರಾಮನಾಥ್ ಕೋವಿಂದ್

  ಗಣರಾಜ್ಯೋತ್ಸವ ದಿನದ ಹಿಂಸಾಚಾರ:

  ಜನವರಿ 26, ಗಣರಾಜ್ಯೋತ್ಸವ ದಿನದಂದು ಪ್ರತಿಭಟನಾನಿರತ ರೈತರ ಒಂದು ಗುಂಪು ಅನುಮತಿ ನೀಡಿದ ಅವಧಿಗೆ ಮುನ್ನ ಮತ್ತು ನಿಗದಿಗಿಂತ ಬೇರೆ ಮಾರ್ಗದಲ್ಲಿ ಟ್ರಾಕ್ಟರ್ ಮೆರವಣಿಗೆ ನಡೆಸಿತು. ಪೊಲೀಸರು ಹಾಕಿದ್ದ ಬ್ಯಾರಿಕೇಡ್​ಗಳನ್ನ ಬೀಳಿಸಿ ಮುನ್ನುಗ್ಗಿತು. ಹಲವು ಬಸ್ಸುಗಳನ್ನ ಜಖಂಗೊಳಿಸಿದರು. ಪೊಲೀಸರ ಮೇಲೆಯೇ ಟ್ರಾಕ್ಟರ್ ಹತ್ತಿಸಲು ಯತ್ನಿಸಿದರು, ಹಲ್ಲೆ ನಡೆಸಿದರು. ಪೊಲೀಸರು ಬಹಳಷ್ಟು ತಾಳ್ಮೆ ಪ್ರದರ್ಶಿಸಿ ಲಾಠಿ ಪ್ರಹಾರ ಮತ್ತು ಆಶ್ರುವಾಯು ಪ್ರಯೋಗಕ್ಕೆ ಮಾತ್ರ ತಮ್ಮ ಕ್ರಮಗಳನ್ನ ಸೀಮಿತಗೊಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಇದ್ದರಿಂದ ಲಾಠಿಚಾರ್ಜ್, ಟಿಯರ್ ಗ್ಯಾಸ್ ಪ್ರಯೋಗದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರಿಗೆ ಸಾಧ್ಯವಾಗಲಿಲ್ಲ.

  ನಂತರ ಕೆಂಪುಕೋಟೆಯ ಮೇಲೆ ಲಗ್ಗೆ ಹಾಕಿದ ಪ್ರತಿಭಟನಾಕಾರರು ಅಲ್ಲಿ ದಾಂದಲೆ ನಡೆಸಿದರು. ಅಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿ ಧ್ವಜಸ್ತಂಭದಲ್ಲಿ ಧಾರ್ಮಿಕ ಧ್ವಜವನ್ನ ಹಾಕಿದರು. ಈ ಘಟನೆಗೆ ಮಿಶ್ರ ಪ್ರತಿಕ್ರಿಯೆ ಬಂದಿದೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವ ಮೂಲಕ ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಸಿದವರ ಮುಖವಾಡ ಕಳಚಿದೆ ಎಂಬ ಅಭಿಪ್ರಾಯಗಳು ಒಂದೆಡೆಯಾದರೆ, ರೈತರ ಸಹನೆಯ ಕಟ್ಟೆ ಒಡೆದು ಇಂಥ ಘಟನೆ ಸಂಭವಿಸಿದೆ ಎಂಬ ವಾದಗಳೂ ನಡೆದಿವೆ.

  ಇದೇ ವೇಳೆ, ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರದಲ್ಲಿ 300ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ಧಾರೆ. ಈ ಗಲಭೆ ಸಂಬಂಧ ದೆಹಲಿಯ ವಿವಿಧ ಠಾಣೆಗಳಲ್ಲಿ 22 ಎಫ್​ಐಆರ್ ದಾಖಲಾಗಿವೆ. ಹಲವು ರೈತ ಮುಖಂಡರ ಮೇಲೆ ದೇಶದ್ರೋಹ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
  Published by:Vijayasarthy SN
  First published: