• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಪಕ್ಷಾಂತರವೇ ಮಾರಕವಾಯ್ತಾ ಬಂಗಾಳ ಬಿಜೆಪಿಗೆ? ಅಧಿಕಾರಕ್ಕಾಗಿ ಮೂಲ-ವಲಸಿಗರ ನಡುವೆ ಮಾರಾಮಾರಿ, ವಾಹನಗಳಿಗೆ ಬೆಂಕಿ!

ಪಕ್ಷಾಂತರವೇ ಮಾರಕವಾಯ್ತಾ ಬಂಗಾಳ ಬಿಜೆಪಿಗೆ? ಅಧಿಕಾರಕ್ಕಾಗಿ ಮೂಲ-ವಲಸಿಗರ ನಡುವೆ ಮಾರಾಮಾರಿ, ವಾಹನಗಳಿಗೆ ಬೆಂಕಿ!

ಬಂಗಾಳದ ಬಿಜೆಪಿ ಕಚೇರಿಯ ಎದುರು ವಾಹನಗಳಿಗೆ ಬೆಂಕಿ ಹಚ್ಚಿರುವುದು.

ಬಂಗಾಳದ ಬಿಜೆಪಿ ಕಚೇರಿಯ ಎದುರು ವಾಹನಗಳಿಗೆ ಬೆಂಕಿ ಹಚ್ಚಿರುವುದು.

ಪಕ್ಷವನ್ನು ಕಟ್ಟಲು ತಾವು ರಕ್ತ ಮತ್ತು ಬೆವರು ನೀಡಿದ್ದೇವೆ ಎಂದು ಭಿನ್ನಮತೀಯರ ಗುಂಪು ಹೇಳಿಕೊಂಡಿದೆ. ಆದರೆ ತೃಣಮೂಲದಿಂದ ಬಂದ ಪಕ್ಷಾಂತರಿಗಳನ್ನು ಪ್ರೋತ್ಸಾಹಿಸುತ್ತಿರುವ ಜಿಲ್ಲಾಧ್ಯಕ್ಷ ನಂದಿ ತಮ್ಮನ್ನು ಬದಿಗೊತ್ತಿದ್ದಾರೆ ಎಂದು ಭಿನ್ನಮತೀಯರ ಗುಂಪು (ಮೂಲ ಬಿಜೆಪಿಗರ ಗುಂಪು) ಆರೋಪಿಸಿದೆ.

ಮುಂದೆ ಓದಿ ...
  • Share this:

ಕೋಲ್ಕತ್ತಾ (ಜನವರಿ 22): ಬಹು ನಿರೀಕ್ಷಿತ ಪಶ್ಚಿಮ ಬಂಗಾಳ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಆದರೆ, ಬಂಗಾಳದಲ್ಲಿ ಈ ಭಾರಿ ಸಿಎಂ ಮಮತಾ ಬ್ಯಾನರ್ಜಿಯನ್ನು ಅಧಿಕಾರದಿಂದ ಇಳಿಸಿ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಲೇಬೇಕು ಎಂದು ಬಿಜೆಪಿ ಹೈಕಮಾಂಡ್​ ತಿರ್ಮಾನಿಸಿದೆ. ಇದೇ ಕಾರಣಕ್ಕೆ ಈವರೆಗೆ ಸಾಕಷ್ಟು ತೃಣಮೂಲ ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕರು ಮತ್ತು ಸಚಿವರನ್ನೇ ತನ್ನೆಡೆಗೆ ಸೆಳೆದು ಪಕ್ಷಾಂತರ ಮಾಡಿಸಿತ್ತು. ಆದರೆ, ಇದೇ ಪಕ್ಷಾಂತರದ ಕೆಲಸ ಇದೀಗ ಬಂಗಾಳದ ಬಿಜೆಪಿಗೆ ಮಗ್ಗುಲದ ಮುಳ್ಳಾಗಿದೆ.  ಪಶ್ಚಿಮ ಬಂಗಾಳದ ಅಸಾನ್‌ಸೋಲ್‌ನಲ್ಲಿ ಬಿಜೆಪಿ ಪಕ್ಷದ ಕಚೇರಿಯಲ್ಲಿ ಗುರುವಾರ ನಡೆಸಿದ್ದ ವಿಶೇಷ ಸಭೆಯಲ್ಲಿ ಟಿಎಂಸಿಯಿಂದ ಬಂದ ವಲಸಿಗರು ಮತ್ತು ಮೂಲ ಬಿಜೆಪಿಗರ ನಡುವೆ ಹೊಡೆದಾಟ ಸಂಭವಿಸಿದೆ. ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅತುಲ್ ಮೆನನ್ ಸಮ್ಮುಖದಲ್ಲೇ ಈ ಬಡಿದಾಟ ನಡೆದಿದೆ. ಅಲ್ಲದೆ, ಘರ್ಷಣೆ ತಾರಕಕ್ಕೇರಿದ್ದು, ವಾಹನಗಳಗೂ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ.


ಬಂಗಾಳ ಬಿಜೆಪಿಯಲ್ಲಿ ಅಧಿಕಾರದ ವಿಚಾರಕ್ಕೆ ಸಂಬಂಧಿಸಿದಂತೆ ಮೂಲ ಮತ್ತು ವಲಸೆ ನಾಯಕರು ನಡುವೆ ಬುರ್ದ್ವಾನ್ ಪಟ್ಟಣದಲ್ಲಿ ಬಿಜೆಪಿ ಕಚೇರಿ ಹೊರಗೆ ಬೀದಿಯಲ್ಲಿಯೇ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಈ ವೇಳೆ ಪಾರ್ಟಿ ಕಚೇರಿಯ ಮೇಲೆ ಕಲ್ಲು ತೂರಲಾಗಿದೆ ಮತ್ತು ಕಚೇರಿ ಹೊರಗೆ ನಿಲ್ಲಿಸಿದ್ದ ಬೈಕ್ ಮತ್ತು ಇತರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಮಧ್ಯಪ್ರವೇಶಿಸಿದ ಪೊಲೀಸರ ಜೊತೆಯೂ ಘರ್ಷಣೆ ನಡೆದಿದೆ ಎನ್ನಲಾಗುತ್ತಿದೆ.


ಪಶ್ಚಿಮ ಬಂಗಾಳದಲ್ಲಿ ಇನ್ನೂ ಮೂರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದೆ. ಇಂತಹ ಸಂದರ್ಭದಲ್ಲಿ ಉಂಟಾಗಿರುವ ಆಂತರಿಕ ದ್ವೇಷವು ಪಕ್ಷದ ಉನ್ನತ ನಾಯಕರಿಗೆ ಕಳವಳ ಮೂಡಿಸಿದೆ. ಇದು ಪಕ್ಷದ ಶಿಸ್ತನ್ನು ಹಾಳು ಮಾಡುವುದಷ್ಟೇ ಅಲ್ಲ, "ಬಿಜೆಪಿಯ ಟಿಎಂಸಿಕರಣ"ದ ಪ್ರಕ್ರಿಯೆಯಿಂದ ನಷ್ಟವೂ ಸಂಭವಿಸಬಹುದು ಎಂದು ಬಿಜೆಪಿ ನಾಯಕರು ಆತಂಕಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.


"ಬಿಜೆಪಿ ಟಿಎಂಸಿ ಜನರಿಂದ ತುಂಬಿ ಹೋದರೆ, ನಮ್ಮ ಬಿಜೆಪಿ ಟಿಎಂಸಿ 'ಟೀಮ್ ಬಿ'ಯಂತೆ ಕಾಣಲು ಪ್ರಾರಂಭಿಸಿದರೆ, ಟಿಎಂಸಿಯನ್ನು ತಿರಸ್ಕರಿಸಲು ಮತ್ತು ಬಿಜೆಪಿಗೆ ಮತ ಚಲಾಯಿಸಲು ಬಯಸುವ ಮತದಾರರು ಎರಡು ಬಾರಿ ಯೋಚಿಸಬಹುದು" ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಮುಂಬರುವ ಚುನಾವಣೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 200 ಸ್ಥಾನಗಳ ಗುರಿಯನ್ನು ರಾಜ್ಯ ಬಿಜೆಪಿಗೆ ನಿಗದಿಪಡಿಸಿದ್ದನ್ನು ಇಲ್ಲಿ ಗಮನಿಸಬೇಕು.


ದೆಹಲಿಯಲ್ಲಿ ಇತ್ತೀಚೆಗೆ ನಡೆದ ಪಕ್ಷದ ಸಭೆಗಳಲ್ಲಿ, ಬಿಜೆಪಿಗೆ ಯಾರು ಸೇರಬಹುದು ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಗುರುವಾರ ಪೂರ್ವ ಬುರ್ದ್ವಾನ್‌ನ ಕಾಂಕ್ಸಾ, ಆಸ್ಗ್ರಾಮ್, ಮಂಗಲ್‌ಕೋಟ್, ಕಟ್ವಾ ಮತ್ತು ಇತರ ಸ್ಥಳಗಳಿಂದ ಹಲವಾರು ಬಿಜೆಪಿ ಕಾರ್ಯಕರ್ತರು ಪಕ್ಷದ ಬುರ್ದ್ವಾನ್ ಪಟ್ಟಣ ಕಚೇರಿಯ ಮುಂದೆ ಜಮಾಯಿಸಿ ಜಿಲ್ಲಾ ಮುಖ್ಯಸ್ಥ ಸಂದೀಪ್ ನಂದಿ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು ಮತ್ತು ಸಂದೀಪ್ ನಂದಿಯವರನ್ನು ತಕ್ಷಣ ತೆಗೆದುಹಾಕುವಂತೆ ಒತ್ತಾಯಿಸಿದರು. ಆಗ ಬುರ್ದ್ವಾನ್‌ನಲ್ಲಿ ಗೊಂದಲ ಉಂಟಾಯಿತು.


ಮೂಲಗಳ ಪ್ರಕಾರ, ಕಚೇರಿಯೊಳಗಿದ್ದ ನಂದಿಗೆ ನಿಷ್ಠರಾಗಿರುವ ಬಣವು ಕಚೇರಿಯ ಮಾಳಿಗೆ ಹತ್ತಿ ಪ್ರತಿಭಟಿಸುತ್ತಿದ್ದ ಭಿನ್ನಮತೀಯರ ಮೇಲೆ ಕಲ್ಲುಗಳನ್ನು ಎಸೆದರು. ಭಿನ್ನಮತೀಯ ಗುಂಪು ಕೂಡ ಕಚೇರಿಯ ಮೇಲೆ ಕಲ್ಲು ತೂರಾಟ ನಡೆಸಿ, ಕಚೇರಿಯ ಕಿಟಕಿಗಳನ್ನು ಒಡೆದಿದೆ. ಕೆಲವು ಬಿಜೆಪಿ ಕಾರ್ಯಕರ್ತರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.


ಪಕ್ಷವನ್ನು ಕಟ್ಟಲು ತಾವು ರಕ್ತ ಮತ್ತು ಬೆವರು ನೀಡಿದ್ದೇವೆ ಎಂದು ಭಿನ್ನಮತೀಯರ ಗುಂಪು ಹೇಳಿಕೊಂಡಿದೆ. ಆದರೆ ತೃಣಮೂಲದಿಂದ ಬಂದ ಪಕ್ಷಾಂತರಿಗಳನ್ನು ಪ್ರೋತ್ಸಾಹಿಸುತ್ತಿರುವ ಜಿಲ್ಲಾಧ್ಯಕ್ಷ ನಂದಿ ತಮ್ಮನ್ನು ಬದಿಗೊತ್ತಿದ್ದಾರೆ ಎಂದು ಭಿನ್ನಮತೀಯರ ಗುಂಪು (ಮೂಲ ಬಿಜೆಪಿಗರ ಗುಂಪು) ಆರೋಪಿಸಿದೆ.


ಎರಡು ವಾರಗಳ ಹಿಂದೆ ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಬುರ್ದ್ವಾನ್‌ಗೆ ಭೇಟಿ ನೀಡಿ ಬೃಹತ್ ರೋಡ್ ಶೋ ನಡೆಸಿದ್ದರು. ಅವರು ಕಳೆದ ತಿಂಗಳು ಬುರ್ದ್ವಾನ್ ಕಚೇರಿಯನ್ನು ಉದ್ಘಾಟಿಸಿದ್ದರು. ಇದು ಬಣಗಳ ಘರ್ಷಣೆ ಎಂಬುದನ್ನು ಬಿಜೆಪಿ ನಿರಾಕರಿಸಿದೆ.


ಈ ಕುರಿತು ಮಾತನಾಡಿರುವ ಬಿಜೆಪಿ ಮುಖಂಡ ರಾಜು ಬ್ಯಾನರ್ಜಿ, "ಜೆ.ಪಿ.ನಡ್ಡಾ ಅವರ ಬೃಹತ್ ರ‍್ಯಾಲಿಯನ್ನು ನೀವು ನೋಡಿದ್ದೀರಿ. ತೃಣಮೂಲ ಕಾಂಗ್ರೆಸ್​ ಈಗ ಭಯಭೀತವಾಗಿದೆ. ಆದ್ದರಿಂದ ಅವರು ಬಿಜೆಪಿ ಕಚೇರಿಯಲ್ಲಿ ಇಂತಹ ಗಲಭೆ ಮೂಡಲು ಸಂಚು ರೂಪಿಸಿದ್ದಾರೆ. ಈ ಕಾರ್ಯಾಚರಣೆಯನ್ನು ನಡೆಸಲು ಜನರನ್ನು ನೇಮಿಸಿಕೊಂಡಿದ್ದಾರೆ. ಮಮತಾ ಬ್ಯಾನರ್ಜಿ ಮತ್ತು 'ಪಿಕೆ' ತಂಡವೇ ಇದನ್ನು ಮಾಡಿದೆ. ಅಲ್ಲದೆ, ಈ ಘಟನೆಗೆ ಕಾರಣರಾದವರು ಯಾರು? ಎಂದು ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕು" ಎಂದು ತಿಳಿಸಿದ್ದಾರೆ.


ಅಸಾನ್‌ಸೋಲ್‌ನಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿತ್ತು ಎಂದು ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಒಪ್ಪಿಕೊಂಡಿದ್ದಾರೆ. "ಯಾವುದೇ ಕುಟುಂಬದಲ್ಲಿ, ಸಮಸ್ಯೆಗಳಿರುತ್ತವೆ, ಕೋಪವಿರುತ್ತದೆ, ಭಿನ್ನಾಭಿಪ್ರಾವಿದ್ದೇ ಇರುತ್ತದೆ. ನಮ್ಮ ಕಾರ್ಯಕರ್ತರು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರವಿಂದ್ ಮೆನನ್ ಮತ್ತು ನನ್ನನ್ನು ಒಟ್ಟಿಗೆ ಭೇಟಿಯಾದರು. ಇಂತಹ ಸಭೆ ಆಗಾಗ್ಗೆ ಆಗುವುದಿಲ್ಲ. ಆದ್ದರಿಂದ 10 ರಿಂದ 30 ಜನರು ಒಂದೇ ಸಮಯದಲ್ಲಿ ಮಾತನಾಡಲು ಪ್ರಾರಂಭಿಸಿದಾಗ, ಸ್ವಾಭಾವಿಕವಾಗಿ ಗೊಂದಲ ಏರ್ಪಡುತ್ತದೆ" ಎಂದು ಅವರು ತಿಳಿಸಿದ್ದಾರೆ.


ಆದರೆ ಮೂಲಗಳು ಹೇಳುವಂತೆ, ಇಲ್ಲಿಯೂ ತೃಣಮೂಲದಿಂದ ಬಂದವರೊಂದಿಗೆ ಸಂಘರ್ಷದಲ್ಲಿದ್ದ ಹಳೆಯ ಬಿಜೆಪಿ ಕಾರ್ಯಕರ್ತರು ಚುನಾವಣಾ ತಂತ್ರದ ಕುರಿತು ಮಾತುಕತೆಗಾಗಿ ಕಚೇರಿಗೆ ಬಂದಿದ್ದರು. ಆದರೆ ಈ ವೇಳೆ ಹೊಸದಾಗಿ ನೇಮಕಗೊಂಡ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಅರಿಜಿತ್ ರಾಯ್ ಅವರ ಬಗ್ಗೆ ವಿವಾದ ಭುಗಿಲೆದ್ದಿತ್ತು. ಅವರು ಭಾರತೀಯ ಜನತಾ ಯುವ ಮೋರ್ಚಾ ಜಿಲ್ಲಾ ಸಮಿತಿಯಿಂದ ಹಳೆಯ ಬಿಜೆಪಿ ಕಾರ್ಯಕರ್ತರನ್ನು ಹೊರಹಾಕಿದ್ದರು ಎಂದು ಆರೋಪಿಸಲಾಗಿದೆ.


ಇದನ್ನೂ ಓದಿ: Amit Shah: ಅಮಿತ್ ಶಾ ಟ್ವಿಟರ್ ಖಾತೆ ಬ್ಲಾಕ್; ಟ್ವಿಟರ್​ ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡ ಸಂಸದೀಯ ಸಮಿತಿ


ಬಿಜೆಪಿಯಲ್ಲಿ ಬಣಗಳ ಕಾದಾಟದ ಘಟನೆ ಇದೇ ಮೊದಲಲ್ಲ.  ಜನವರಿ 8 ರಂದು ನಂದಿಗ್ರಾಮದಲ್ಲಿ ಕೂಡ ಇಂಥದ್ದೇ ಘಟನೆ ನಡೆದಿತ್ತು. ಟಿಎಂಸಿಯಿಂದ ಬಿಜೆಪಿಗೆ ಪಕ್ಷಾಂತರಗೊಂಡ ಸುವೆಂಡು ಅಧಿಕಾರಿ ಮತ್ತು ಬಿಜೆಪಿ ಉನ್ನತ ನಾಯಕರಾದ ದಿಲೀಪ್ ಘೋಷ್, ಕೈಲಾಶ್ ವಿಜಯವರ್ಗಿಯಾ ಅವರು ಭಾಗವಹಿಸಿದ ರ‍್ಯಾಲಿಯಲ್ಲಿ, ಮೂಲ ಬಿಜೆಪಿ ಕಾರ್ಯಕರ್ತರಲ್ಲಿ ಒಂದು ಭಾಗವು ಕಲ್ಲು ತೂರಾಟ ನಡೆಸಿತ್ತು.


ಅಲ್ಲಿ ತೃಣಮೂಲ ಕಾರ್ಯಕರ್ತರು ವಿದ್ಯುಕ್ತವಾಗಿ ಬಿಜೆಪಿಗೆ ಸೇರಲು ಕಾಯುತ್ತಿದ್ದರು. "ನಮ್ಮನ್ನು (ಬಿಜೆಪಿ ಕಾರ್ಯಕರ್ತರನ್ನು) ಹಿಂಸಿಸಿದ ತೃಣಮೂಲದ ಜನರು ಈಗ ನಮ್ಮ ಪಕ್ಷಕ್ಕೆ ಸೇರಲು ಹೊರಟಿದ್ದಾರೆ. ಅದನ್ನು ಸಹಿಸಲು ನಾವು ಸಿದ್ಧರಿಲ್ಲ" ಎಂದು ಹಳೆಯ ಬಿಜೆಪಿ ಕಾರ್ಯಕರ್ತರೊಬ್ಬರು ಗುಡುಗಿದ್ದರು. ಈ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಹೀಗಾಗಿ ಮುಂದಿನ ದಿನಗಳಲ್ಲಿಯೂ ಸಹ ಬಂಗಾಳದಲ್ಲಿ ಮೂಲ ಮತ್ತು ವಲಸೆ ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆಯಲಿದೆ ಎನ್ನಲಾಗುತ್ತಿದೆ.

top videos
    First published: