ನವದೆಹಲಿ (ಜೂನ್ 26): ದೇಶದೆಲ್ಲೆಡೆ ಅದರಲ್ಲಿಯೂ ವಿಶೇಷವಾಗಿ ಗ್ರಾಮೀಣ ಮತ್ತು ಆದಿವಾಸಿ ಪ್ರದೇಶಗಳಲ್ಲಿ ತಾಂತ್ರಿಕ ಮತ್ತು ನ್ಯಾಯಾಂಗ ಮೂಲಸೌಕರ್ಯ ಹೆಚ್ಚಿಸಲು ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದಾರೆ.
ತಾವು ಇತ್ತೀಚೆಗೆ ದೇಶದ ಎಲ್ಲಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಸಂವಾದ ನಡೆಸಿದ್ದು, ಆ ಚರ್ಚೆಯಿಂದ ಹೊರಹೊಮ್ಮಿದ ಒಂದು ವಿಷಯವೆಂದರೆ ಡಿಜಿಟಲ್ ಕಂದರದಿಂದಾಗಿ ವಿಶೇಷವಾಗಿ ಗ್ರಾಮೀಣ ಮತ್ತು ಆದಿವಾಸಿ ಪ್ರದೇಶಗಳಲ್ಲಿ ನ್ಯಾಯದಾನ ಮಾಡಲು ನ್ಯಾಯಾಲಯಗಳಿಗೆ ಅಡ್ಡಿಯಾಗಿದೆ ಎನ್ನುವುದು. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಡಿಜಿಟಲ್ ಕಂದರ ನ್ಯಾಯಾಲಯಗಳ ಕಾರ್ಯ ನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವುದರಿಂದ, ಪ್ರಮುಖ ನಗರ ಕೇಂದ್ರಗಳಾಚೆಗೆ, ವಿಶೇಷವಾಗಿ ಗ್ರಾಮೀಣ ಮತ್ತು ಆದಿವಾಸಿ ಪ್ರದೇಶಗಳಲ್ಲಿ ನೆಟ್‌ವರ್ಕ್ ಮತ್ತು ಸಂಪರ್ಕವನ್ನು ಬಲಪಡಿಸುವಂತೆ ಅವರು ಕೇಂದ್ರ ಸರ್ಕಾರಕ್ಕೆ ಸೂಚಿಸಿದರು.
ಸಾಂಕ್ರಾಮಿಕ ರೋಗದಿಂದಾಗಿ ಕೆಲಸ ಇಲ್ಲದೆ ಎರಡೂ ಕಡೆಯೂ ಕಷ್ಟಪಡುತ್ತಿರುವ ವಕೀಲರಿಗೆ ಅದರಲ್ಲಿಯೂ ವಿಶೇಷವಾಗಿ ಕಿರಿಯ ವಕೀಲರಿಗೆ ಹಣಕಾಸಿನ ನೆರವು ನೀಡಲು ಕೇಂದ್ರದ ಮಧ್ಯಸ್ಥಿಕೆ ಅಗತ್ಯವಿದೆ ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. ಪೂರ್ಣ ಪ್ರಮಾಣದ ಕಾರ್ಯಚಟುವಟಿಕೆಗೆ ಅನುಕೂಲವಾಗುವಂತೆ ದೇಶದೆಲ್ಲೆಡೆ ಇರುವ ನ್ಯಾಯಾಲಯಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಮತ್ತು ಅವರ ಕುಟುಂಬಗಳಿಗೆ ರೋಗನಿರೋಧಕ ಚುಚ್ಚುಮದ್ದು ನೀಡಲು ಲಸಿಕೆಗಳನ್ನು ಒದಗಿಸುವಂತೆ ಪತ್ರದಲ್ಲಿ ಕೇಂದ್ರವನ್ನು ಕೇಳಲಾಗಿದೆ.
ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಪರಿಹಾರ ನೀಡುವ ಉದ್ದೇಶದಿಂದ ವಕೀಲರು ಸೇರಿದಂತೆ ನ್ಯಾಯಾಲಯಗಳ ಎಲ್ಲಾ ಸಿಬ್ಬಂದಿಗಳನ್ನು ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸುವ ಸಂಬಂಧ ಪರಿಶೀಲನೆ ನಡೆಸಬೇಕು. ಈ ಸಮಸ್ಯೆಗಳ ಕುರಿತಂತೆ ಸಂಬಂಧಪಟ್ಟ ಸಚಿವಾಲಯಗಳು / ಇಲಾಖೆಗಳೊಂದಿಗೆ ಉನ್ನತ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಿಜೆಐ, ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಸಿಜೆಐ ಎನ್.ಎನ್. ರಮಣ ಅವರು ಮನವಿ ಮಾಡಿದರು.
ಸೋಂಕು ಹರಡಿರುವ ಸಂದರ್ಭ ಮತ್ತು ನಂತರದಲ್ಲಿ ನ್ಯಾಯ ಪಡೆಯಲು ಅನುಕೂಲವಾಗುವಂತೆ ಇತ್ತೀಚಿನ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಾಧನಗಳೊಂದಿಗೆ ನ್ಯಾಯಾಂಗದ ಮೂಲಸೌಕರ್ಯವನ್ನು ಉನ್ನತೀಕರಿಸುವ ಅಗತ್ಯವಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
"ನ್ಯಾಯಾಂಗ ಮೂಲ ಸೌಕರ್ಯವನ್ನು ಸುಸಜ್ಜಿತಗೊಳಿಸಬೇಕು ಮತ್ತು ಬಾಕಿ ಇರುವ ಪ್ರಕರಣಗಳನ್ನು ಎದುರಿಸಲು ತಕ್ಕಂತೆ ಪರಿಷ್ಕರಿಸಬೇಕು. ರಾಷ್ಟ್ರೀಯ ನ್ಯಾಯಾಂಗ ಮೂಲಸೌಕರ್ಯ ನಿಗಮವನ್ನು (ಎನ್‌ಜೆಐಸಿ) ಸ್ಥಾಪಿಸುವ ಪ್ರಸ್ತಾವನೆಯ ನೀಲಿನಕ್ಷೆ ಅಂತಿಮ ಹಂತದಲ್ಲಿದ್ದು ಅದನ್ನು ಕೇಂದ್ರ ಸರ್ಕಾರದೊಂದಿಗೆ ಹಂಚಿಕೊಳ್ಳಲಾಗುವುದು. ಸಾಂಕ್ರಾಮಿಕ ರೋಗವನ್ನುಎದುರಿಸುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಈ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರಲು ಏಕೀಕೃತ ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂಬ ದೃಢವಾದ ನಂಬಿಕೆ ನನಗಿದೆ "ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: ಝೀರೋ ಟ್ರಾಫಿಕ್ ಹೀರೋಗಳಾದ ಹುಬ್ಬಳ್ಳಿ ಪೊಲೀಸರು; ಅಂಗಾಂಗ ಸಾಗಾಟಕ್ಕೆ ವೈದ್ಯರಿಗೆ ನೆರವು!
ಆಯಾ ಹೈಕೋರ್ಟ್‌ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕೊಲಿಜಿಯಂ ಮೂಲಕ ಶಿಫಾರಸುಗಳನ್ನು ಕಳುಹಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸುವ ಅಗತ್ಯತೆಯ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೊಂದಿಗಿನ ಸಂವಾದದ ಸಂದರ್ಭದಲ್ಲಿ ಸೂಚಿಸಿರುವುದಾಗಿ ಅವರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ