Explainer: ಭಾರತೀಯ ನ್ಯಾಯಾಲಯಗಳಲ್ಲಿ 4.5 ಕೋಟಿ ಪ್ರಕರಣಗಳು ಬಾಕಿ ಎಂದ ಸಿಜೆಐ: ಇದಕ್ಕೆ ಮುಖ್ಯ ಕಾರಣಗಳು ಹೀಗಿವೆ

25 ಹೈಕೋರ್ಟ್‌ಗಳಲ್ಲಿ 400ಕ್ಕೂ ಹೆಚ್ಚು ನ್ಯಾಯಾಧೀಶರ ಹುದ್ದೆಗಳು ಖಾಲಿ ಇವೆ ಎಂದು ವರದಿಗಳು ಸೂಚಿಸಿದರೆ, ಕೆಳ ಹಂತದ ನ್ಯಾಯಾಂಗದಲ್ಲಿ 5,000 ನ್ಯಾಯಾಧೀಶರ ಹುದ್ದೆಗಳು ಖಾಲಿಯಾಗಿವೆ. ಸುಪ್ರೀಂಕೋರ್ಟ್ ಕೂಡ ನಾಲ್ಕು ಹುದ್ದೆಗಳನ್ನು ಹೊಂದಿದೆ. 2021 ರ ಏಪ್ರಿಲ್ 1 ರ ಹೊತ್ತಿಗೆ, ಸುಪ್ರೀಂ ಕೋರ್ಟ್‌ನಲ್ಲಿ ಐದು ನ್ಯಾಯಾಧೀಶರ ಹುದ್ದೆಗಳು ಖಾಲಿ ಇವೆ

ಸುಪ್ರೀಂ ಕೋರ್ಟ್​

ಸುಪ್ರೀಂ ಕೋರ್ಟ್​

 • Share this:

  "ಭಾರತೀಯ ನ್ಯಾಯಾಂಗದಲ್ಲಿರುವ ಬಾಕಿ ಪ್ರಕರಣಗಳನ್ನು ನಿಭಾಯಿಸಲು ಅಸಮರ್ಥತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಭಾರತದ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.


  ಭಾರತೀಯ ನ್ಯಾಯಾಂಗ ವ್ಯವಸ್ಥೆಯ ವಿವಿಧ ಹಂತಗಳಲ್ಲಿ ಬಾಕಿ ಉಳಿದಿರುವ ಕೋಟ್ಯಂತರ ಪ್ರಕರಣಗಳನ್ನು ಸೂಚಿಸುತ್ತದೆ, ಮತ್ತು ಬ್ಯಾಕ್‌ಲಾಗ್ ಅನ್ನು ಪರಿಹರಿಸುವ ತುರ್ತು ಅವಶ್ಯಕತೆಯಿದೆ ಎಂದು ಗುರುತಿಸಲಾಗಿದೆ. ಈ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ.


  ಎಷ್ಟು ಪ್ರಕರಣಗಳು ಬಾಕಿ ಉಳಿದಿವೆ..?
  ಭಾರತ-ಸಿಂಗಾಪುರ ಮಧ್ಯಸ್ಥಿಕೆ ಶೃಂಗಸಭೆಯಲ್ಲಿ ಮುಖ್ಯ ಭಾಷಣ ಮಾಡಿದ ಸಿಜೆಐ ಎನ್.ವಿ. ರಮಣ, ಭಾರತೀಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ 45 ಮಿಲಿಯನ್‌ ಅಂದರೆ 4.5 ಕೋಟಿ ತಲುಪಿದೆ ಎಂದು ಅಂಕಿಅಂಶಗಳನ್ನು ಉಲ್ಲೇಖಿಸಿದ್ದರು. ಕೋವಿಡ್ -19-ಪ್ರೇರಿತ ಲಾಕ್‌ಡೌನ್‌ಗಳು ಮತ್ತು ನಿರ್ಬಂಧಗಳೊಂದಿಗೆ, ಭಾರತದ ಎಲ್ಲಾ ನ್ಯಾಯಾಲಯಗಳಾದ್ಯಂತ ಬಾಕಿ ಉಳಿದಿರುವ ಪ್ರಮಾಣವು 4.4 ಕೋಟಿ ಪ್ರಕರಣಗಳನ್ನು ದಾಟಿದೆ. ಈ ಪೈಕಿ ಕಳೆದ ವರ್ಷ ಮಾರ್ಚ್‌ನಿಂದ ಕನಿಷ್ಠ 19 ಶೇಕಡಾ ಏರಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ.


  ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ ಮತ್ತು ಸುಪ್ರೀಂ ಕೋರ್ಟ್‌ ಅಂಕಿ-ಅಂಶಗಳನ್ನು ಉಲ್ಲೇಖಿಸಿರುವ ವರದಿಗಳ ಪ್ರಕಾರ, ಜಿಲ್ಲೆ ಮತ್ತು ಅಧೀನ ನ್ಯಾಯಾಲಯಗಳಲ್ಲಿ 3.9 ಕೋಟಿ ಪ್ರಕರಣಗಳು, ವಿವಿಧ ಹೈಕೋರ್ಟ್‌ಗಳಲ್ಲಿ 58.5 ಲಕ್ಷ ಪ್ರಕರಣಗಳು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ 69,000 ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ.


  ಸುಪ್ರೀಂ ಕೋರ್ಟ್‌ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ (ನಿವೃತ್ತ) ಮಾರ್ಕಂಡೇಯಾ ಕಟ್ಜು ಅವರು 2019 ರಲ್ಲಿ ದಿ ಟ್ರಿಬ್ಯೂನ್‌ನಲ್ಲಿ ಬರೆದ ಲೇಖನವೊಂದರಲ್ಲಿ, “ಯಾವುದೇ ಹೊಸ ಪ್ರಕರಣ ದಾಖಲಾಗದಿದ್ದರೆ, ಅಖಿಲ ಭಾರತದಲ್ಲಿನ ಪ್ರಕರಣಗಳ ಬ್ಯಾಕ್‌ಲಾಗ್ ಕ್ಲಿಯರ್‌ ಮಾಡಲು ನ್ಯಾಯಾಲಯಗಳು ಸುಮಾರು 360 ವರ್ಷಗಳು ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ ಎಂದಿದ್ದರು. ಅವರು ಲೇಖನ ಬರೆದ ಸಮಯದಲ್ಲಿ ಸುಮಾರು 3.3 ಕೋಟಿ ಪ್ರಕರಣಗಳು ಬಾಕಿ ಉಳಿದಿದ್ದವು.

  ಮುಖ್ಯ ಕಾರಣಗಳು ಯಾವುವು..?
  ನ್ಯಾಯಾಲಯಗಳ ವಿಳಂಬಕ್ಕೆ ಕಾರಣವಾಗುವ ಹಲವಾರು ಅಂಶಗಳಲ್ಲಿ "ಐಷಾರಾಮಿ ದಾವೆ" ಎಂಬ ಭಾರತೀಯ ವಿದ್ಯಮಾನವಾಗಿದೆ ಎಂದು ಸಿಜೆಐ ರಮಣ ಅವರು ತಮ್ಮ ಭಾಷಣದಲ್ಲಿ ಹೇಳಿದರು. ಯಾವುದೇ ರೀತಿಯ ದಾವೆ ನ್ಯಾಯಾಧೀಶರ ಮುಂದೆ ಬಂದಾಗ ಪ್ರತಿ ವಿಚಾರಣೆ ಹಂತದಲ್ಲೂ ಸಾಕ್ಷ್ಯಗಳನ್ನು ಒದಗಿಸುವಾಗ ಮತ್ತು  ಮೇಲ್ವಿಚಾರಣೆ  ಸಲ್ಲಿಸುವ ಮೂಲಕ ವಿಳಂಬಗೊಳಿಸಲು ಪ್ರಯತ್ನಿಸಲಾಗುತ್ತದೆ. ಅಲ್ಲದೇ ಕೊರೋನಾ ಸಾಂಕ್ರಾಮಿಕ ರೋಗದಿಂದ ಇನ್ನಷ್ಟು ವಿಳಂಬವಾಗಲಿದೆ ಎಂದಿದ್ದಾರೆ.

  ಆಗಾಗ್ಗೆ ವಿಳಂಬಕ್ಕೆ ಕಾರಣವಾಗುವ ಮತ್ತೊಂದು ಅಂಶವೆಂದರೆ ನ್ಯಾಯಾಂಗ ವ್ಯವಸ್ಥೆಯಾದ್ಯಂತ ಖಾಲಿ ಹುದ್ದೆಗಳಿರುವುದು. 25 ಹೈಕೋರ್ಟ್‌ಗಳಲ್ಲಿ 400ಕ್ಕೂ ಹೆಚ್ಚು ನ್ಯಾಯಾಧೀಶರ ಹುದ್ದೆಗಳು ಖಾಲಿ ಇವೆ ಎಂದು ವರದಿಗಳು ಸೂಚಿಸಿದರೆ, ಕೆಳ ಹಂತದ ನ್ಯಾಯಾಂಗದಲ್ಲಿ 5,000 ನ್ಯಾಯಾಧೀಶರ ಹುದ್ದೆಗಳು ಖಾಲಿಯಾಗಿವೆ. ಸುಪ್ರೀಂಕೋರ್ಟ್ ಕೂಡ ನಾಲ್ಕು ಹುದ್ದೆಗಳನ್ನು ಹೊಂದಿದೆ. 2021 ರ ಏಪ್ರಿಲ್ 1 ರ ಹೊತ್ತಿಗೆ, ಸುಪ್ರೀಂ ಕೋರ್ಟ್‌ನಲ್ಲಿ ಐದು ನ್ಯಾಯಾಧೀಶರ ಹುದ್ದೆಗಳು ಖಾಲಿ ಇವೆ ಎಂದು ಡಿಪಾರ್ಟ್‌ಮೆಂಟ್‌ ಆಫ್ ಜಸ್ಟೀಸ್ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.


  ಅಧೀನ ನ್ಯಾಯಾಲಯಗಳಲ್ಲಿ ಮೂಲಸೌಕರ್ಯಗಳ ಅಸಮರ್ಪಕತೆಯು ಪ್ರಕರಣಗಳ ವಿಳಂಬಕ್ಕೆ ಕಾರಣವಾಗುವ ದೊಡ್ಡ ಅಂಶವೆಂದು ಸೂಚಿಸಿದ್ದಾರೆ. ದೇಶದ ನ್ಯಾಯಾಲಯಗಳಲ್ಲಿ ದಾವೆ ಹೂಡುವವರಿಗೆ ಮೂಲ ಸೌಲಭ್ಯಗಳಿಲ್ಲ. ಹೆಚ್ಚಿನ ಅಧೀನ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿ ಮತ್ತು ದಾವೆ ಹೂಡುವವರಿಗೆ ಮೂಲಸೌಕರ್ಯಗಳಿಲ್ಲ ಎಂದು ಅಂದಿನ ಸಿಜೆಐ ದೀಪಕ್ ಮಿಶ್ರಾ 2018 ರಲ್ಲಿ ಹೇಳಿದ್ದರು.


  ವಿಳಂಬಕ್ಕೆ ಕಾರಣವಾಗುವ ಮತ್ತೊಂದು ಅಂಶವೆಂದರೆ ಮುಂದೂಡುವ ಸಂಸ್ಕೃತಿ. ಈ ಬಗ್ಗೆ ಮಾತನಾಡಿದ್ದ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್ 2018 ರಲ್ಲಿ “ಒಂದು ಸಾರಿಗಿಂತ ಹೆಚ್ಚಾಗಿ ಮುಂದೂಡುವ ಸಂಸ್ಕೃತಿ ಇದೆ'', ಈ ಅಭ್ಯಾಸವನ್ನು ನಿಗ್ರಹಿಸಲು ನ್ಯಾಯಾಂಗವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದೆ” ಎಂದು ಹೇಳಿದ್ದರು.


  ಬ್ಯಾಕ್‌ಲಾಗ್ ಕ್ಲಿಯರ್‌ ಮಾಡಲು ಸೂಚಿಸಲಾದ ತಂತ್ರಗಳು ಯಾವುವು..?
  ನ್ಯಾಯ ವಿಳಂಬವಾದರೆ ನ್ಯಾಯವು ಹಿಂದೆ ಉಳಿಯುತ್ತದೆ (Justice delayed is justice denied) ಎಂಬ ಮಾತನ್ನು ಪ್ರಕರಣಗಳ ಬಾಕಿ ಇರುವ ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ಉಲ್ಲೇಖಿಸಲಾಗುತ್ತದೆ. ಭಾರತೀಯ ಸಂವಿಧಾನದ ಕೆಲವು ಮೂಲಭೂತ ಉದ್ದೇಶಗಳ ಪರಿಣಾಮಕಾರಿ ಜಾರಿಗೆ ಈ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಕೂಡ ಹಿನ್ನಡೆ ಉಂಟು ಮಾಡುತ್ತಿದೆ.


  ನ್ಯಾಯ ವಿತರಣಾ ಕಾರ್ಯವಿಧಾನದಲ್ಲಿನ ವಿಳಂಬವನ್ನು ಕಡಿಮೆ ಮಾಡಲು ತೆಗೆದುಕೊಂಡ ಕ್ರಮಗಳ ಕುರಿತ ಪ್ರಶ್ನೆಗೆ ನೀಡಿದ ಉತ್ತರದಲ್ಲಿ, ಕೇಂದ್ರ ಕಾನೂನು ಸಚಿವಾಲಯವು ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಮತ್ತು ಪ್ರಕರಣಗಳ ಬಾಕಿ ಇಳಿಕೆಗೆ ಬದ್ಧವಾಗಿದೆ ಎಂದಿದೆ. ಈ ನಿಟ್ಟಿನಲ್ಲಿ 2011 ರಲ್ಲಿ ಕೇಂದ್ರ ಸಚಿವ ಸಂಪುಟದಿಂದ ಸ್ಥಾಪಿಸಲ್ಪಟ್ಟ ನ್ಯಾಷನಲ್ ಮಿಷನ್ ಫಾರ್ ಜಸ್ಟೀಸ್ ವಿತರಣೆ ಮತ್ತು ಕಾನೂನು ಸುಧಾರಣೆಗಳು
  ಅನೇಕ ಕಾರ್ಯತಂತ್ರದ ಉಪಕ್ರಮಗಳನ್ನು ಅಳವಡಿಸಿಕೊಂಡಿದೆ ಎಂದೂ ತಿಳಿಸಿದೆ.

  ಕಾನೂನು ಸಚಿವಾಲಯವು ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸುವ ಮಟ್ಟಿಗೆ, ನ್ಯಾಯಾಲಯದ ಸಭಾಂಗಣಗಳ ಸಂಖ್ಯೆ 2014ರಲ್ಲಿ 16,000ರಿಂದ ಮತ್ತು 2020ರಲ್ಲಿ 19,500ಕ್ಕಿಂತ ಹೆಚ್ಚಾಗಿದೆ ಎಂದು ಹೇಳಿದರು. ಪ್ರಕರಣಗಳ ವಿಲೇವಾರಿಗೆ ನೆರವಾಗಲು ಡಿಜಿಟಲ್ ಪರಿಹಾರಗಳನ್ನು ಅಳವಡಿಸಿಕೊಳ್ಳುವ ದಿಕ್ಕಿನಲ್ಲಿ ಮತ್ತೊಂದು ಮಹತ್ವದ ನಡೆ ಬಂದಿದೆ. ದೇಶಾದ್ಯಂತ ಇ-ಕೋರ್ಟ್ಸ್ ಮಿಷನ್ ಮೋಡ್ ಯೋಜನೆಯನ್ನು ಜಾರಿಗೊಳಿಸುತ್ತಿದೆ ಮತ್ತು ಗಣಕೀಕೃತ ಜಿಲ್ಲಾ ಹಾಗೂ ಅಧೀನ ನ್ಯಾಯಾಲಯಗಳ ಸಂಖ್ಯೆ 2014 ಮತ್ತು 2020 ರ ನಡುವೆ 13,672 ರಿಂದ 16,845 ಕ್ಕೆ ಏರಿದೆ ಎಂದು ಕೇಂದ್ರ ಹೇಳಿದೆ.


  ಐದು ವರ್ಷಗಳಿಗಿಂತ ಹೆಚ್ಚು ಕಾಲ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಹೈಕೋರ್ಟ್‌ಗಳಲ್ಲಿ ‘ಬಾಕಿ ಸಮಿತಿಗಳನ್ನು’ ಸ್ಥಾಪಿಸಲಾಗಿದೆ ಎಂದು ಕಾನೂನು ಸಚಿವಾಲಯ ಹೇಳಿದೆ. ಜಿಲ್ಲಾ ನ್ಯಾಯಾಧೀಶರ ಅಡಿಯಲ್ಲಿ ಬಾಕಿ ಸಮಿತಿಗಳನ್ನು ರಚಿಸಲಾಗಿದೆ ಮತ್ತು ಅವುಗಳನ್ನು ಹೈಕೋರ್ಟ್‌ಗಳು ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಕಡಿಮೆ ಮಾಡಲು ಕ್ರಮಗಳನ್ನು ರೂಪಿಸಲು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಸಮಿತಿಗಳನ್ನು ರಚಿಸಲಾಗಿದೆ.


  ಇದನ್ನೂ ಓದಿ: ಕೋವಿಡ್‌ ರೂಪಾಂತರಗಳು; ಅವುಗಳ ವಿರುದ್ಧ ಪರಿಣಾಮಕಾರಿಯಾದ ಲಸಿಕೆಗಳ ಬಗ್ಗೆ ಇಲ್ಲಿದೆ ಮಾಹಿತಿ

  ಇನ್ನೊಂದೆಡೆ, ಸಮಯಸೂಚಿಯನ್ನು ನಿಗದಿಪಡಿಸುವ ಮೂಲಕ ವಿವಾದಗಳ ತ್ವರಿತ ಪರಿಹಾರವನ್ನು ತ್ವರಿತಗೊಳಿಸುವುದಕ್ಕಾಗಿ ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆ 1996ಕ್ಕೆ 2015ರಲ್ಲಿ ತಿದ್ದುಪಡಿ ಜಾರಿಗೆ ಬಂದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: