‘ನೀವು ಎಷ್ಟೇ ಪ್ರತಿಭಟಿಸಿದರೂ ಪೌರತ್ವ ಕಾಯ್ದೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ‘: ಕೇಂದ್ರ ಗೃಹ ಸಚಿವ ಅಮಿತ್​​ ಶಾ

ಉತ್ತರಪ್ರದೇಶದ ಲಕ್ನೋದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪೌರತ್ವ ಕಾಯ್ದೆ ಕುರಿತು ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತಾಡಿದ ಅಮಿತ್​​ ಶಾ, ಸಿಎಎ ವಿರುದ್ಧ ಕಾಂಗ್ರೆಸ್​​ ಸೇರಿದಂತೆ ವಿರೋಧ ಪಕ್ಷಗಳು ಆಧಾರರಹಿತ ವದಂತಿ ಹರಡುತ್ತಿವೆ ಎಂದು ಆರೋಪಿಸಿದರು.

news18-kannada
Updated:January 21, 2020, 3:30 PM IST
‘ನೀವು ಎಷ್ಟೇ ಪ್ರತಿಭಟಿಸಿದರೂ ಪೌರತ್ವ ಕಾಯ್ದೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ‘: ಕೇಂದ್ರ ಗೃಹ ಸಚಿವ ಅಮಿತ್​​ ಶಾ
ಕೇಂದ್ರ ಗೃಹ ಸಚಿವ ಅಮಿತ್​​ ಶಾ
  • Share this:
ನವದೆಹಲಿ(ಜ.21): ನೀವು ಎಷ್ಟೇ ಪ್ರತಿಭಟಿಸಿದರೂ ಪೌರತ್ವ ಕಾಯ್ದೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್​​ ಶಾ ಖಡಕ್​​​​​ ಹೇಳಿಕೆ ನೀಡಿದ್ಧಾರೆ. ಇಂದು ಉತ್ತರಪ್ರದೇಶದ ಲಕ್ನೋದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪೌರತ್ವ ಕಾಯ್ದೆ ಕುರಿತು ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತಾಡಿದ ಅಮಿತ್​​ ಶಾ, ಸಿಎಎ ವಿರುದ್ಧ ಕಾಂಗ್ರೆಸ್​​ ಸೇರಿದಂತೆ ವಿರೋಧ ಪಕ್ಷಗಳು ಆಧಾರರಹಿತ ವದಂತಿ ಹರಡುತ್ತಿವೆ. ನೀವು ನಿಮ್ಮ ಪ್ರತಿಭಟನೆ ಮುಂದುವರೆಸಿ, ನಾವು ಮಾತ್ರ ಸಿಎಎ ಕಾಯ್ದೆ ವಾಪಸ್ಸು ಪಡೆಯುವ ಮಾತೇ ಇಲ್ಲ ಎಂದರು. 

ಪೌರತ್ವ ಕಾಯ್ದೆಯೂ ಭಾರತೀಯರ ಪೌರತ್ವ ಹೇಗೆ ಕಿತ್ತುಕೊಳ್ಳುತ್ತದೆ ಎಂಬುದನ್ನು ಸಾಬೀತುಪಡಿಸಲಿ. ಸಿಎಎ ಮತ್ತು ಎನ್​​ಆರ್​ಸಿ ಸಂಬಂಧ ಬಹಿರಂಗ ಚರ್ಚೆಗೆ ಯಾರು ಬೇಕಾದರೂ ಬರಲಿ. ತಾಕತ್ತಿದ್ದರೆ ನನ್ನೊಂದಿಗೆ ಸಿಎಎ ಕುರಿತಂತೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಅಮಿತ್​​ ಶಾ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​​ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​​ ಯಾದವ್​​ಗೆ ಸವಾಲ್​ ಎಸೆದರು.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಿದೆ. ತಿದ್ದುಪಡಿ ಮಸೂದೆಗೆ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಅನುಮೋದನೆ ಸಿಗುತ್ತಿದ್ದಂತೆಯೇ ದೇಶದ ಹಲವೆಡೆ ಪ್ರತಿಭಟನೆಗಳು ಭುಗಿಲೆದ್ದಿವೆ. ಈಶಾನ್ಯ ಭಾರತದ ರಾಜ್ಯಗಳಲ್ಲಿ ಪ್ರತಿಭಟನೆಗಳು ಮೊದಲಿಟ್ಟವು. ನಂತರ ಇದು ರಾಜಧಾನಿ ದೆಹಲಿಯಲ್ಲಿ ಮಾರ್ದನಿಸಿತು. ದೇಶದ ವಿವಿಧೆಡೆ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಲೇ ಇವೆ.

ಈಶಾನ್ಯ ರಾಜ್ಯಗಳ ಆಕ್ರೋಶಕ್ಕೆ ಕಾರಣವೇನು?

ಈಶಾನ್ಯ ರಾಜ್ಯಗಳು ಸಾಂಸ್ಕೃತಿಕವಾಗಿ ಮತ್ತು ನೈಸರ್ಗಿಕವಾಗಿ ವೈಶಿಷ್ಟ್ಯತೆಗಳನ್ನು ಹೊಂದಿವೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವ ಅನೇಕ ಜನರು ಈಶಾನ್ಯ ರಾಜ್ಯಗಳಲ್ಲಿ ಸೇರಿಕೊಂಡಿದ್ದಾರೆ. ಅಸ್ಸಾಮ್​ನಲ್ಲಿ ಈ ಸಮಸ್ಯೆ ಅತೀ ಹೆಚ್ಚು ಇದೆ. ಭಾರತದ ಇತರ ಭಾಗದಿಂದ, ಅದರಲ್ಲೂ ಪಶ್ಚಿಮ ಬಂಗಾಳದಿಂದಲೂ ಹೋಗಿ ನೆಲಸಿದವರಿದ್ಧಾರೆ. ಅಸ್ಸಾಮ್​ನಲ್ಲಿ ನೆಲಸಿರುವ ಹಿಂದೂ ಮತ್ತು ಮುಸ್ಲಿಮ್ ಬಂಗಾಳಿಗಳು ಯಾವತ್ತೂ ಕೂಡ ಸ್ಥಳೀಯ ಸಂಸ್ಕೃತಿಯನ್ನು ಅಪ್ಪಿಕೊಂಡವರಲ್ಲ. ಮೂಲ ನಿವಾಸಿಗರ ಪ್ರಮಾಣ ಶೇ. 50ರಷ್ಟು ಕೂಡ ಇಲ್ಲ. ಇದು ಅಲ್ಲಿನ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಅಲ್ಲಿ ಉಗ್ರ ಸಂಘಟನೆಗಳು ತಲೆ ಎತ್ತಿ ನಿಂತಿರುವುದು. ರಾಷ್ಟ್ರೀಯ ಪೌರತ್ವ ನೊಂದಣಿ ನಡೆಸಿ ವಿದೇಶಿ ಅಕ್ರಮ ವಲಸಿಗರನ್ನು ಹೊರಗೆ ಕಳುಹಿಸಬೇಕು ಎಂಬ ಆಗ್ರಹ ಹಲವು ದಶಕಗಳಿಂದಲೂ ಅಲ್ಲಿ ಇದೆ. ಈಗ ಅಲ್ಲಿ ಎನ್​ಆರ್​ಸಿ ಯೋಜನೆ ಜಾರಿಗೆ ಬಂದಿದೆ. ಆದರೆ, ಎನ್​ಆರ್​ಸಿ ಪಟ್ಟಿಯು ಸ್ಥಳೀಯರಿಗೆ ಸಮಾಧಾನ ತಂದಿಲ್ಲ. ಕೋಟಿಗಟ್ಟಲೆ ಅಕ್ರಮ ವಲಸಿಗರು ರಾಜ್ಯದಲ್ಲಿ ಇದ್ದಾರೆ ಎಂಬ ಅಂದಾಜು ಇದ್ದರೂ ಎನ್​ಆರ್​ಸಿ ಪಟ್ಟಿಯಿಂದ ಹೊರಗುಳಿದವರ ಸಂಖ್ಯೆ ಕೆಲವೇ ಲಕ್ಷ ಮಾತ್ರ. ಎನ್​ಆರ್​ಸಿ ಪಟ್ಟಿಯಲ್ಲಿ ಸ್ಥಳೀಯ ನಿವಾಸಿಗಳ ಹೆಸರೂ ಇಲ್ಲ ಎಂದು ಹೇಳಲಾಗುತ್ತಿದೆ. ಇದು ಅಸ್ಸಾಮಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಸಂಸದ, ಶಾಸಕರ ಅನರ್ಹತೆ ಅಧಿಕಾರ ಸ್ಪೀಕರ್​ಗೆ ಬೇಡ: ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ

ಯಾವುದೇ ಧರ್ಮಭೇದವಿಲ್ಲದೆ ಎಲ್ಲಾ ಅಕ್ರಮ ವಲಸಿಗರನ್ನೂ ಹೊರಹಾಕಬೇಕು. ನಮ್ಮ ಸಂಸ್ಕೃತಿ ಮತ್ತು ಪರಿಸರವನ್ನು ಉಳಿಸಿಕೊಳ್ಳಬೇಕು ಎಂಬುದು ಬಹುತೇಕ ಎಲ್ಲಾ ಈಶಾನ್ಯ ರಾಜ್ಯಗಳ ಒತ್ತಾಯವಾಗಿದೆ.ಮುಸ್ಲಿಮರ ಆಕ್ರೋಶಕ್ಕೆ ಏನು ಕಾರಣ?

ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರಕಾರ, ಅಕ್ರಮ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ವಿಚಾರದಲ್ಲಿ ಮುಸ್ಲಿಮರನ್ನು ಮಾತ್ರ ಹೊರಗಿಡಲಾಗಿದೆ ಎಂಬದು ಆ ಸಮುದಾಯದವರ ಆಕ್ರೋಶವಾಗಿದೆ. ಇದು ಮುಸ್ಲಿಮರನ್ನು ತುಳಿಯಲೆಂದೇ ಮಾಡಿರುವ ಚಿತಾವಣೆ ಎಂಬುದು ಅವರ ಭಾವನೆ. ಪೌರತ್ವ ಕಾಯ್ದೆಗಿಂತ ಎನ್​ಆರ್​ಸಿ ಯೋಜನೆಯೇ ಮುಸ್ಲಿಮರಲ್ಲಿ ಹೆಚ್ಚು ಆತಂಕ ತಂದಿರುವುದು. ರಾಷ್ಟ್ರೀಯ ಪೌರತ್ವ ನೊಂದಣಿ ಅಥವಾ ಎನ್​ಆರ್​ಸಿ ಯೋಜನೆ ಮೂಲಕ ಮುಸ್ಲಿಮರನ್ನು ಟಾರ್ಗೆಟ್ ಮಾಡುವ ಸಾಧ್ಯತೆ ಇರುತ್ತದೆ. ಸರಿಯಾದ ದಾಖಲೆ ಒದಗಿಸಿಲ್ಲ ಎಂಬ ನೆವ ಇಟ್ಟುಕೊಂಡು ಎನ್​ಆರ್​ಸಿ ಪಟ್ಟಿಯಿಂದ ತಮ್ಮ ಸಮುದಾಯದವರನ್ನು ಕೈಬಿಡಬಹುದು. ಅಕ್ರಮ ಮುಸ್ಲಿಮ್ ವಲಸಿಗರ ಜೊತೆಗೆ ಸ್ಥಳೀಯ ಮುಸ್ಲಿಮರನ್ನೂ ಹತ್ತಿಕ್ಕುವುದು ಎನ್​ಆರ್​ಸಿಯ ಹಿಡನ್ ಅಜೆಂಡಾ ಎಂಬ ಆತಂಕ ಸೃಷ್ಟಿ ಆಗಿದೆ.
First published:January 21, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ