ಸಿಎಎ ವಿರುದ್ಧ ಆಂದೋಲನ; ಮಾಯಾವತಿ, ಮಮತಾ ಭಿನ್ನಸ್ವರದ ಮಧ್ಯೆ ವಿಪಕ್ಷಗಳಿಂದ ಇಂದು ಸಭೆ

ಮಾಯಾವತಿ, ಮಮತಾ ಅಪಸ್ವರದ ಹೊರತಾಗಿಯೂ ಬಾಕಿ ವಿಪಕ್ಷಗಳು ಬಹುತೇಕ ಒಗ್ಗಟ್ಟಿನಿಂದಿವೆ. ಕಾಂಗ್ರೆಸ್ ಪಕ್ಷ ಇವರೆಲ್ಲರ ಮುಂದಾಳತ್ವ ವಹಿಸಿದೆ. ಸಿಎಎ, ಎನ್​ಆರ್​ಸಿ ಮತ್ತು ಎನ್​ಪಿಆರ್ ಹಿಂಪಡೆಯುವವರೆಗೂ ಆಂದೋಲನ ನಿಲ್ಲಿಸದೇ ಮುಂದುವರಿಸಲು ಪಣತೊಟ್ಟಿದೆ.

Vijayasarthy SN | news18
Updated:January 13, 2020, 7:05 AM IST
ಸಿಎಎ ವಿರುದ್ಧ ಆಂದೋಲನ; ಮಾಯಾವತಿ, ಮಮತಾ ಭಿನ್ನಸ್ವರದ ಮಧ್ಯೆ ವಿಪಕ್ಷಗಳಿಂದ ಇಂದು ಸಭೆ
ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ
  • News18
  • Last Updated: January 13, 2020, 7:05 AM IST
  • Share this:
ನವದೆಹಲಿ(ಜ. 13): ಪೌರತ್ವ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕರ ನೊಂದಣಿ (ಎನ್​ಆರ್​ಸಿ) ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಹೋರಾಟಗಳ ಹಿನ್ನೆಲೆಯಲ್ಲಿ ಇನ್ನೂ ದೊಡ್ಡ ಆಂದೋಲನವಾಗಿ ರೂಪಿಸುವ ಕೈಂಕರ್ಯ ನಡೆದಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸೇರಿದಂತೆ ಅನೇಕ ವಿಪಕ್ಷಗಳು ಇಂದು ಸೋಮವಾರ ಮಧ್ಯಾಹ್ನ ಸಭೆ ಸೇರಿ ಕಾರ್ಯತಂತ್ರ ರೂಪಿಸಲು ಯತ್ನಿಸಲಿವೆ. ಆದರೆ, ವಿಪಕ್ಷಗಳ ಈ ಒಗ್ಗಟ್ಟಿನಲ್ಲಿ ಒಂದು ಸಣ್ಣ ಬಿರುಕು ಮೂಡಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಅವರು ಈ ಸಭೆಗೆ ಗೈರಾಗಲು ನಿರ್ಧರಿಸಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ. ಸಿಎಎ ವಿರುದ್ಧ ಉಗ್ರ ನಿಲುವು ತಳೆದಿರುವ ಈ ಇಬ್ಬರು ನಾಯಕರು ವಿಪಕ್ಷಗಳ ಸಭೆಗೆ ಹಾಜರಾಗದೇ ಇರುತ್ತಿರುವುದು ಕುತೂಹಲ ಮೂಡಿಸಿದೆ.

ವಿಪರ್ಯಾಸವೆಂದರೆ ಮಮತಾ ಬ್ಯಾನರ್ಜಿ ಅವರೇ ಮುತುವರ್ಜಿ ವಹಿಸಿ ಈ ವಿಪಕ್ಷಗಳ ಸಭೆ ಸೇರುವ ಕೆಲಸ ಪ್ರಾರಂಭಿಸಿದ್ದರು. ಈಗ ಏಕಾಏಕಿ ಈ ಸಭೆಯಲ್ಲಿ ಅವರು ಪಾಲ್ಗೊಳ್ಳುತ್ತಿಲ್ಲದಿರುವುದು ಅಚ್ಚರಿ ಮೂಡಿಸಿದೆ. ಮಮತಾ ಬ್ಯಾನರ್ಜಿ ಅವರು ಈ ಸಭೆಯಲ್ಲಿ ಪಾಲ್ಗೊಳ್ಳದಿರಲು ಪ್ರಬಲ ಕಾರಣ ಇಲ್ಲದಿಲ್ಲ. ಸಿಎಎ ವಿಚಾರದಲ್ಲಿ ಅವರ ನಿರ್ಧಾರವೇನೂ ಬದಲಾಗಿಲ್ಲ. ಆದರೆ, ಕಳೆದ ವಾರ ದೇಶವ್ಯಾಪಿ ನಡೆದ ಕಾರ್ಮಿಕ ಮುಷ್ಕರದ ವೇಳೆ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಎಡಪಕ್ಷಗಳ ಕಾರ್ಯಕರ್ತರ ಮಧ್ಯೆ ಹಿಂಸಾರೂಪಿ ಸಂಘರ್ಷ ನಡೆದಿತ್ತು. ಇದು ದೀದಿಯನ್ನು ರೊಚ್ಚಿಗೆಬ್ಬಿಸಿದೆ.

ಇದನ್ನೂ ಓದಿ: ಪ್ರತಿಯೊಬ್ಬರಿಗೆ ಪೌರತ್ವ ಸಿಗುವವರೆಗೂ ವಿರಮಿಸುವುದಿಲ್ಲ: ಜಬಲ್​ಪುರ್​ನಲ್ಲಿ ಅಮಿತ್ ಶಾ

“ಸಿಎಎ, ಎನ್​ಆರ್​ಸಿ ವಿರುದ್ಧ ಆಂದೋಲನ ಪ್ರಾರಂಭಿಸಿದವರಲ್ಲಿ ನಾನು ಮೊದಲಿಗಳು. ಆದರೆ, ಸಿಎಎ ಎನ್​ಆರ್​ಸಿ ಹೆಸರಲ್ಲಿ ಎಡಪಕ್ಷಗಳು ಮತ್ತು ಕಾಂಗ್ರೆಸ್ ಪಕ್ಷ ಮಾಡುತ್ತಿರುವುದು ಗೂಂಡಾಗಿರಿಯಾಗಿದೆ” ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಗುಡುಗಿದ್ದಾರೆ.

ಇನ್ನು, ಮಾಯಾವತಿ ಅವರ ನಿರ್ಧಾರದ ಹಿಂದೆ ಬೇರೆಯೇ ಕಾರಣವಿದೆ. ರಾಜಸ್ಥಾನದ ಕೋಟ ಪಟ್ಟಣದ ಆಸ್ಪತ್ರೆಯಲ್ಲಿ ಹಲವಾರು ಮಕ್ಕಳು ಸಾವನ್ನಪ್ಪಿದ ದುರಂತ ಸಂಭವಿಸಿತ್ತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಈ ಆಸ್ಪತ್ರೆಗೆ ಭೇಟಿ ಕೊಡದೇ ಹೋಗಿದ್ದು ಮಾಯಾವತಿಯವರಿಗೆ ಆಕ್ರೋಶ ತರಿಸಿದೆ.

“ಕಾಂಗ್ರೆಸ್​ನ ಮಹಿಳಾ ಪ್ರಧಾನ ಕಾರ್ಯದರ್ಶಿಯು ಕೋಟಾದಲ್ಲಿ ಸಾವಿಗೀಡಾದ ಮಕ್ಕಳ ತಾಯಂದಿರನ್ನು ಭೇಟಿಯಾಗುವುದಿಲ್ಲ. ಆದರೆ, ಉತ್ತರ ಪ್ರದೇಶದಲ್ಲಿ ಪೊಲೀಸ್ ಗೋಲಿಬಾರ್​ನಲ್ಲಿ ಮೃತಪಟ್ಟವರ ಕುಟುಂಬಗಳನ್ನು ಇವರು ಭೇಟಿ ಮಾಡುತ್ತಾರೆ. ಇದನ್ನು ರಾಜಕೀಯ ಹಿತಾಸಕ್ತಿ ಮತ್ತು ನಾಟಕ ಎನ್ನದೇ ಇನ್ನೇನು” ಎಂದು ಮಾಯಾವತಿ ಖಾರವಾಗಿ ಪ್ರಶ್ನಿಸುತ್ತಾರೆ.

ಇದನ್ನೂ ಓದಿ: ಕಾಲೇಜು ಶುಲ್ಕ ಪಾವತಿಸುತ್ತೇವೆ, ಆದ್ರೆ ಹಾಸ್ಟೆಲ್​ ಶುಲ್ಕವನ್ನು ಈಗಲೇ ಕಟ್ಟುವುದಿಲ್ಲ; ಜೆಎನ್​ಯುಎಸ್​ಯು ಅಧ್ಯಕ್ಷೆ ಐಶೆ ಘೋಷ್ಇವರಿಬ್ಬರ ಅಪಸ್ವರದ ಹೊರತಾಗಿಯೂ ಬಾಕಿ ವಿಪಕ್ಷಗಳು ಬಹುತೇಕ ಒಗ್ಗಟ್ಟಿನಿಂದಿವೆ. ಕಾಂಗ್ರೆಸ್ ಪಕ್ಷ ಇವರೆಲ್ಲರ ಮುಂದಾಳತ್ವ ವಹಿಸಿದೆ. ಸಿಎಎ, ಎನ್​ಆರ್​ಸಿ ಮತ್ತು ಎನ್​ಪಿಆರ್ ಹಿಂಪಡೆಯುವವರೆಗೂ ಆಂದೋಲನ ನಿಲ್ಲಿಸದೇ ಮುಂದುವರಿಸಲು ಪಣತೊಟ್ಟಿದೆ. ಹಲವು ದಿನಗಳ ಬಳಿಕ ಸೋನಿಯಾ ಗಾಂಧಿ ಅವರು ರಾಜಕೀಯ ಹೋರಾಟಕ್ಕೆ ಪೂರ್ಣಪ್ರಮಾಣದಲ್ಲಿ ಧುಮುಕಲು ಅಣಿಯಾಗಿದ್ದಾರೆ. ಈಗಾಗಲೇ ಕೆಲವು ಕಡೆ ಅವರು ಸಿಎಎ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

“ಸಿಎಎ ಒಂದು ತಾರತಮ್ಯಕಾರಿ, ವಿಭಜನಕಾರಿ ಕಾಯ್ದೆಯಾಗಿದೆ. ಇದರ ಹಿಂದಿರುವ ದುರುದ್ದೇಶವು ಪ್ರತಿಯೊಬ್ಬ ದೇಶಪ್ರೇಮಿ, ಸಹಿಷ್ಣು ಮತ್ತು ಜಾತ್ಯತೀತ ಭಾರತೀಯನಿಗೆ ಸ್ಪಷ್ಟವಾಗಿ ತಿಳಿದಿದೆ. ಧಾರ್ಮಿಕ ಆಧಾರದ ಮೇಲೆ ಭಾರತೀಯರನ್ನು ವಿಭಜಿಸುವ ಕಾನೂನು ಇದಾಗಿದೆ” ಎಂದು ದೆಹಲಿಯಲ್ಲಿ ನಡೆದಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸೋನಿಯಾ ಗಾಂಧಿ ಗುಡುಗಿದ್ದರು.

ಇದನ್ನೂ ಓದಿ: ಸ್ವಾಮಿ ವಿವೇಕಾನಂದ ಸಂಸ್ಥಾಪಿತ ಬೇಲುರ್ ಮಠದಲ್ಲಿ ಪ್ರಧಾನಿ ಮೋದಿಯಿಂದ ಸಿಎಎ ಪ್ರತಿಪಾದನೆ

ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ ರೂಪಿಸಿ ಸಂಸತ್​ನಲ್ಲಿ ಅನುಮೋದನೆ ಪಡೆದ ನಂತರ ಈಶಾನ್ಯ ಭಾರತದಲ್ಲಿ ಅದರದ್ದೇ ಕಾರಣಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಅದಾದ ಬಳಿಕ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಆಲಿಗಡ್ ಮುಸ್ಲಿಮ್ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳಿಗೆ ಕಿಡಿ ಹೊತ್ತಿಕೊಂಡವು. ಪ್ರತಿಭಟನೆ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದು ಇನ್ನಷ್ಟು ಪ್ರಚೋದನೆ ಕೊಟ್ಟಿತು. ಉತ್ತರ ಪ್ರದೇಶದಲ್ಲಿ ಪ್ರತಿಭಟನೆಗಳು ಹಿಂಸಾರೂಪ ಪಡೆದವು. ಪೊಲೀಸರ ಮೇಲೆ ಕಲ್ಲುತೂರಾಟ ನಡೆದವು. ಕೆಲ ಕಿಡಿಗೇಡಿಗಳು ಸಾರ್ವಜನಿಕ ಆಸ್ತಿಗಳಿಗೆ ಧಕ್ಕೆ ಮಾಡಿದರು. ಪೊಲೀಸ್ ಗೋಲಿಬಾರ್​ನಲ್ಲಿ 15ಕ್ಕೂ ಹೆಚ್ಚು ಪ್ರತಿಭಟನಾಕಾರರು ಮೃತಪಟ್ಟರು.

ಅ ಬಳಿಕ ಪ್ರತಿಭಟನೆ ದೇಶವ್ಯಾಪಿ ಹರಡಿತು. ಬಹುತೇಕ ಎಲ್ಲಿಯೂ ಹಿಂಸಾರೂಪ ಪಡೆಯದೇ ಪ್ರತಿಭಟನೆ ಶಾಂತಿಯುತವಾಗಿ ಹಾಗೂ ನಿರಂತರವಾಗಿ ನಡೆಯುತ್ತಾ ಬಂದಿದೆ. ಸಿಎಎ ವಿರೋಧಿ ಪ್ರತಿಭಟನಾಕಾರರು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಹೋರಾಟ ನಡೆಸುತ್ತಾ ಬಂದಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Published by: Vijayasarthy SN
First published: January 13, 2020, 7:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading