ನವದೆಹಲಿ: ಬಿಜೆಪಿಯಿಂದ (BJP) ಅಮಾನತುಗೊಂಡಿದ್ದ ಪಕ್ಷದ ಮಾಜಿ ವಕ್ತಾರೆ ನೂಪುರ್ ಶರ್ಮಾ (Nupur Sharma) ಆತ್ಮ ರಕ್ಷಣೆಗಾಗಿ ಗನ್ ಲೈಸನ್ಸ್ ಪಡೆದುಕೊಂಡಿದ್ದಾರೆ. ಪ್ರವಾದಿ ಮೊಹಮ್ಮದ್ (Prophet Mohammed) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಸಾಕಷ್ಟು ವಿವಾದಕ್ಕೆ ಕಾರಣರಾಗಿದ್ದ ನೂಪುರ್ ಶರ್ಮಾ ಅವರಿಗೆ ಹಲವಾರು ಕೊಲೆ ಬೆದರಿಕೆ ಕರೆಗಳು ಬಂದ ಬಳಿಕ ಶಸ್ತ್ರಾಸ್ತ್ರ ಪರವಾನಿ ( gun licence) ಅರ್ಜಿ ಸಲ್ಲಿಸಿದ್ದರು. ಕಾರ್ಯಕ್ರಮವೊಂದರ ಸಂದರ್ಶನದಲ್ಲಿ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರಿಂದ ರಾಜಕೀಯದಲ್ಲಿ (Politics) ಬಿರುಗಾಳಿಯೇ ಎಬ್ಬಿತ್ತು. ದೇಶದಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಗಿತ್ತು. ನಂತರ ಈ ವಿವಾದಾತ್ಮಕ ಹೇಳಿಕೆಯನ್ನು ನೂಪುರ್ ಶರ್ಮಾ ಹಿಂಪಡೆದರು. ಅಲ್ಲದೇ ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ತರುವುದು ನನ್ನ ಉದ್ದೇಶವಾಗಿರಲಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದರು.
ನೂಪೂರ್ ಶರ್ಮಾ ವಿರುದ್ಧ ದಾಖಲಾಗಿತ್ತು ಅನೇಕ ಎಫ್ಐಆರ್ಗಳು
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಕ್ಕಾಗಿ ನೂಪೂರ್ ಶರ್ಮಾ ವಿರುದ್ಧ ಅನೇಕ ಎಫ್ಐಆರ್ಗಳನ್ನು ದಾಖಲಿಸಲಾಯಿತು ಮತ್ತು ದೇಶದ ಹಲವಾರು ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಹಲವಾರು ಗಲ್ಫ್ ರಾಷ್ಟ್ರಗಳು ತಮ್ಮ ಪ್ರತಿಭಟನೆಯನ್ನು ನಡೆಸುವುದಾಗಿ ಮತ್ತು ನೂಪುರ್ ಶರ್ಮಾ ಮಾಡಿದ ಟೀಕೆಗಳನ್ನು ಖಂಡಿಸಿ ಭಾರತೀಯ ರಾಯಭಾರಿಗಳಿಗೆ ಕರೆ ಮಾಡಿದ್ದವು.
ಕೊಲೆ ಮತ್ತು ಅತ್ಯಾಚಾರ ಬೆದರಿಕೆ ಎದುರಿಸುತ್ತಿದ್ದ ನೂಪುರ್ ಶರ್ಮಾ
ಇದೇ ಸಮಯದಲ್ಲಿ ನೂಪರ್ ಶರ್ಮಾ ಅವರ ವಿರುದ್ಧ ಹಲವು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ತಾನು ಕೊಲೆ ಮತ್ತು ಅತ್ಯಾಚಾರದ ಬೆದರಿಕೆಗಳನ್ನು ಎದುರಿಸುತ್ತಿದ್ದೇನೆ. ಅಲ್ಲದೇ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಒಟ್ಟುಗೂಡಿಸಿ ದೆಹಲಿಯಲ್ಲಿ ಈ ಎಲ್ಲಾ ಪ್ರಕರಣಗಳ ವಿಚಾರಣೆ ನಡೆಸುವಂತೆ ಕೋರಿ ನೂಪುರ್ ಶರ್ಮಾ ಸುಪ್ರೀಂಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿತ್ತು.
ಸಾರ್ವಜನಿಕರಿಗೆ ಕ್ಷಮೆಯಾಚಿಸಿದ್ದ ನೂಪುರ್ ಶರ್ಮಾ
ಬಳಿಕ ಸುಪ್ರೀಂ ಕೋರ್ಟ್ ಕೂಡ ಶರ್ಮಾ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು, ನಾಲಿಗೆ ಮೇಲೆ ಹಿಡಿತವಿಲ್ಲದೇ ಮಾತನಾಡಿದ್ದರಿಂದ ಇಡೀ ದೇಶವೇ ಹೊತ್ತಿ ಉರಿಯುತ್ತಿದೆ. ಹೀಗಾಗಿ ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಸೂಚಿಸಿತು.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರ ಪೀಠವು ನೂಪುರ್ ಶರ್ಮಾ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳಿಗೆ ಸಂಬಂಧಿಸಿ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಆದೇಶಿಸಿ ಈ ಮೂಲಕ ಮಧ್ಯಂತರ ಆದೇಶವನ್ನು ಸುಪ್ರೀಂಕೋರ್ಟ್ ಪ್ರಕಟಿಸಿತ್ತು.
ಶರ್ಮಾ ಮತ್ತು ಅವರ ಕುಟುಂಬಸ್ಥರಿಗೆ ಭದ್ರತೆ ಒದಗಿಸಿದ್ದ ದೆಹಲಿ ಪೊಲೀಸ್ರು
ಇಸ್ಲಾಂ ಧರ್ಮದ ಕುರಿತ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆ ನೂಪುರ್ ಶರ್ಮಾ ಅವರಿಗೆ ಕಿರುಕುಳ ಮತ್ತು ಕೊಲೆ ಬೆದರಿಕೆಗಳು ಎದುರಾಗಿತ್ತು. ಹೀಗಾಗಿ ದೆಹಲಿ ಪೊಲೀಸರು ಶರ್ಮಾ ಮತ್ತು ಅವರ ಕುಟುಂಬ ಸದಸ್ಯರಿಗೆ ಭದ್ರತೆಯನ್ನು ಒದಗಿಸಿದರು. ಜೊತೆಗೆ ನಿರಂತರವಾಗಿ ಬೆದರಿಕೆಗಳು ಕೇಳಿ ಬರುತ್ತಿರುವುದರಿಂದ ನೂಪೂರ್ ಶರ್ಮಾ ಅವರಿಗೆ ಸುರಕ್ಷತೆ ನೀಡುವಂತೆ ವಕೀಲರು ಮನವಿ ಮಾಡಿದ್ದರು. ಇದೀಗ ನೂಪುರ್ ಶರ್ಮಾ ಆತ್ಮ ರಕ್ಷಣೆಗಾಗಿ ಗನ್ ಲೈಸನ್ಸ್ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Explained: ಪ್ರವಾದಿ ಅವಹೇಳನ ಮಾಡಿದ ನೂಪುರ್ ಶರ್ಮಾ ಯಾರು? ಅವರು ಮಾಡಿರುವ ವಿವಾದವೇನು?
ಅಲ್ಲದೇ ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ್ದಕ್ಕಾಗಿ ಉದಯಪುರದಲ್ಲಿ ಟೈಲರ್ ಒಬ್ಬನನ್ನು ಕೊಲ್ಲಲಾಯಿತು ಮತ್ತು ಅಮರಾವತಿಯಲ್ಲಿ ರಸಾಯನಶಾಸ್ತ್ರಜ್ಞನ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈಯ್ಯಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ