ಬಿಹಾರ: ಟಿಬೆಟಿಯನ್ (Tibetan) ಬೌದ್ಧರ (Buddhists) ಆಧ್ಯಾತ್ಮಿಕ ನಾಯಕ ಮತ್ತು ನೊಬೆಲ್ (Nobel) ಪ್ರಶಸ್ತಿ ವಿಜೇತಗಾರ 86 ವರ್ಷದ ದಲೈ ಲಾಮಾ (Dalai Lama) ಮೇಲೆ ಬೇಹುಗಾರಿಕೆ (Spying) ನಡೆಸುತ್ತಿದ್ದ ಶಂಕಿತ ಚೀನಾ (China) ಮಹಿಳೆಯನ್ನು ಬಿಹಾರ (Bihar) ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಿಹಾರದಲ್ಲಿ ಇಂದು ಬೆಳಗ್ಗೆ ದಲೈಲಾಮಾ ಅವರು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರಿಂದ ಸ್ಥಳೀಯ ಪೊಲೀಸರು ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನು ವಹಿಸಿದ್ದರು. ಶಂಕಿತ ಮಹಿಳೆಯನ್ನು ಕ್ಸಿಯೋಲಾನ್ ಎಂದು ಗುರುತಿಸಲಾಗಿದ್ದು, ಈ ಚೀನೀ ಮಹಿಳೆ, ಟಿಬೆಟ್ನ ಅಧ್ಯಾತ್ಮ ಗುರುವಿಗೆ ಹಾನಿ ಮಾಡಲು ಸಂಚು ನಡೆಸಿದ್ದಳು ಎನ್ನಲಾಗಿದೆ.
ಚೀನಾ ಮಹಿಳೆಯ ರೇಖಾಚಿತ್ರ ಬಿಡುಗಡೆ ಮಾಡಿದ್ದ ಪೊಲೀಸ್ರು
ಈ ಮುನ್ನ ಗುರು ದಲೈಲಾಮಾ ಅವರು ಬುದ್ಧ ಗಯಾಕ್ಕೆ ಭೇಟಿ ನೀಡಿದ್ದಾಗಲೇ ಅವರ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದಾಳೆ ಎಂಬ ಅನುಮಾನವಿದ್ದಿದ್ದರಿಂದ ಪೊಲೀಸರು ಚೀನಾ ಮಹಿಳೆಯ ರೇಖಾಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದ್ದರು ಮತ್ತು ಆಕೆಯ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದರು.
ಚೀನಾ ಮಹಿಳೆ ನೆಲೆಸಿದ್ದ ಸ್ಥಳದ ಬಗ್ಗೆ ಮಾಹಿತಿ ಇಲ್ಲ
ಮೂಲಗಳ ಪ್ರಕಾರ, ಶಂಕಿತ ಚೀನೀ ಗೂಢಚಾರಿ ಒಂದು ವರ್ಷಕ್ಕೂ ಹೆಚ್ಚು ಕಾಲ ಬುದ್ಧಗಯಾ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದಳು. ಆದರೆ ಈ ಚೀನಾ ಮಹಿಳೆ ವಾಸ್ತವವಾಗಿ ಎಲ್ಲಿ ನೆಲೆಸಿದ್ದಳು ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ದಲೈ ಲಾಮಾ ಅವರು ಭಾರತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ತಮ್ಮ ವಾರ್ಷಿಕ ಪ್ರವಾಸವನ್ನು ಪುನಾರಂಭಿಸಿದ್ದಾರೆ. ಈ ಹಿನ್ನೆಲೆ ಮಹಾಬೋಧಿ ದೇಗುಲ ಸಂಕೀರ್ಣ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿತ್ತು.
ಜಿಲ್ಲಾ ಮ್ಯಾಜಿಸ್ಟ್ರೇಟ್ ತ್ಯಾಗರಾಜನ್ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹರ್ಪ್ರೀತ್ ಕೌರ್ ಅವರ ನೇತೃತ್ವದ ಅಧಿಕಾರಿಗಳು ಗಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಲೈಲಾಮಾ ಅವರನ್ನು ಭವ್ಯವಾಗಿ ಸ್ವಾಗತಿಸಿದ್ದರು. ಈ ವೇಳೆ ಅವರ ನೂರಾರು ಅನುಯಾಯಿಗಳು ನೆರೆದಿದ್ದರು.
ದಲೈಲಾಮಾ ಅವರು ಇಂದು ಬೆಳಗ್ಗೆ 'ಕಾಲ್ ಚಕ್ರ' ಮೈದಾನದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಡಿಸೆಂಬರ್ 31 ರವರೆಗೆ ಮೂರು ದಿನಗಳ ಭಾರತ ಪ್ರವಾಸ ನಡೆಸುತ್ತಿದ್ದಾರೆ. ಈ ಮುನ್ನ 2018ರ ಜನವರಿಯಲ್ಲಿ ಕಡಿಮೆ ತೀವ್ರತೆಯ ಸ್ಫೋಟವೊಂದು ದಲೈಲಾಮಾ ಅವರ ಪ್ರವಚನ ಕಾರ್ಯಕ್ರಮಕ್ಕೆ ಅಡ್ಡಿ ಉಂಟುಮಾಡಿತ್ತು.
ಚೀನಾಕ್ಕೆ ಹಿಂತಿರುಗುವುದರಲ್ಲಿ ಯಾವುದೇ ಅರ್ಥವಿಲ್ಲ
ಇತ್ತೀಚೆಗಷ್ಟೇ, ಚೀನಾಕ್ಕೆ ಹಿಂತಿರುಗುವುದರಲ್ಲಿ ಯಾವುದೇ ಅರ್ಥವಿಲ್ಲ. ನಾನು ಭಾರತಕ್ಕೆ ಆದ್ಯತೆ ನೀಡುತ್ತೇನೆ. ಭಾರತ ಅತ್ಯುತ್ತಮ ಸ್ಥಳ. ಕಾಂಗ್ರಾ, ಪಂಡಿತ್ ನೆಹರೂ ಅವರ ಆಯ್ಕೆ, ಈ ಸ್ಥಳವು ನನ್ನ ಶಾಶ್ವತ ನಿವಾಸವಾಗಿದೆ ಎಂದು ದಲೈ ಲಾಮಾ ಹೇಳಿದ್ದರು.
ಜೂನ್ 6, 1935 ರಂದು ಲಾಮೋ ಥೋಂಡಪ್ ಆಗಿ ಜನಿಸಿದ ಅವರು ಎರಡು ವರ್ಷಗಳ ನಂತರ ದಲೈ ಲಾಮಾ ಅವರ 14 ನೇ ಅವತಾರವೆಂದು ಗುರುತಿಸಲ್ಪಟ್ಟರು. ಟಿಬೆಟ್ನ ರಾಜಧಾನಿಯಾದ ಲಾಸಾದ ಪವಿತ್ರ ನಗರಕ್ಕೆ ಸ್ಥಳಾಂತರಗೊಂಡರು. ಟಿಬೆಟ್ನ 14 ನೇ ದಲೈಲಾಮಾ ಅವರು 1959 ರಿಂದ ಭಾರತದ ಹಿಮಾಚಲದ ಧರ್ಮಶಾಲಾದಲ್ಲಿ ವಾಸಿಸುತ್ತಿದ್ದಾರೆ. ಚೀನೀ ಪಡೆಗಳು ಲಾಸಾದಲ್ಲಿ ಟಿಬೆಟಿಯನ್ ಪ್ರಜೆಗಳನ್ನು ಕ್ರೂರವಾಗಿ ನಿಗ್ರಹಿಸಿದ ನಂತರ ಅಂದರೆ ತಪ್ಪಿಸಿಕೊಂಡು ಬಲವಂತವಾಗಿ ಗಡಿಪಾರಾಗಬೇಕಾಗಿ ಬಂದಾಗ ದಲೈಲಾಮಾ ಧರ್ಮಶಾಲಾಗೆ ಬಂದಿದ್ದಾರಂತೆ. ಭಾರತದಲ್ಲಿರುವ ಇವರು ತಾನು ಚೀನಾಕ್ಕೆ ಮರಳುವುದರಲ್ಲಿ ಅರ್ಥವಿಲ್ಲ ಭಾರತದಲ್ಲಿ ಇರುತ್ತೇನೆ ಎಂದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ