ದೆಹಲಿ: 2020ರ ಜೂನ್ ತಿಂಗಳಲ್ಲಿ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಯ ಬಳಿಕ ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿತ್ಯ ನಿರಂತರವಾಗಿ ಮುಂದುವರಿದುಕೊಂಡು ಬಂದಿದೆ. ಆ ಬಳಿಕ ಚೀನಾ-ಭಾರತ ನಡುವಿನ ಸಂಬಂಧಗಳು ಕೂಡ ಹದಗೆಟ್ಟಿದೆ. ಈ ಮಧ್ಯೆ ಲಡಾಖ್ ಗಡಿಯಲ್ಲಿ ಬೀಜಿಂಗ್ ಮಿಲಿಟರಿ ಪಡೆಯನ್ನು ಚೀನಾ ನಿಯೋಜಿಸಿರುವುದರಿಂದ ಭಾರತ ಮತ್ತು ಚೀನಾ ನಡುವೆ ಮತ್ತಷ್ಟು ಸಂಘರ್ಷಗಳು ನಡೆಯುವ ಸಾಧ್ಯತೆಗಳಿವೆ ಎಂದು ವರದಿಗಳು ಹೇಳಿವೆ.
ಜನವರಿ 20ರಿಂದ 22ರ ತನಕ ನಡೆದ ಗುಪ್ತಚರ ಬ್ಯೂರೋ (ಐಬಿ) ಆಯೋಜಿಸಿದ್ದ ಉನ್ನತ ಪೊಲೀಸ್ ಅಧಿಕಾರಿಗಳ ಸಮ್ಮೇಳನದಲ್ಲಿ ‘ಭೂ ಗಡಿಗೆ ಸಂಬಂಧಿಸಿದ ಭದ್ರತಾ ಸಮಸ್ಯೆಗಳು’ ಎಂಬ ವಿಷಯದ ಕುರಿತು ಲಡಾಖ್ ಪೊಲೀಸರ ಹೊಸ, ಗೌಪ್ಯ ಸಂಶೋಧನಾ ಪ್ರಬಂಧ ಮಂಡಿಸಲಾಗಿತ್ತು. ಈ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದರು.
ಇದನ್ನೂ ಓದಿ: Pakistan: ಪಾಕ್ಗೆ ಮತ್ತೊಂದು ಕುತಂತ್ರಿ ಚೀನಾದಿಂದ ಮೋಸ; ತುಕ್ಕು ಹಿಡಿದ ರೈಲು ಕೊಟ್ಟು ವಂಚಿಸಿದ ಡ್ರ್ಯಾಗನ್ ರಾಷ್ಟ್ರ
ಇನ್ನಷ್ಟು ಘರ್ಷಣೆಗಳು ನಡೆಯುವ ಸಾಧ್ಯತೆ!
ಗಡಿ ಪ್ರದೇಶಗಳಲ್ಲಿ ಒಂದು ವರ್ಷದ ಅವಧಿಯಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದ ಘರ್ಷಣೆ ಮತ್ತು ಸ್ಥಳೀಯ ಪೊಲೀಸರ ಗುಪ್ತಚರ ಮೂಲಗಳ ಮಾಹಿತಿ ಆಧರಿಸಿ ನೀಡಿದ ಮಾಹಿತಿಯ ಪ್ರಕಾರ ಮುಂದಿನ ದಿನಗಳಲ್ಲಿ ಎರಡು ರಾಷ್ಟ್ರಗಳ ನಡುವೆ ಹೆಚ್ಚಿನ ಚಕಮಕಿಗಳು ನಡೆಯುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ವೆಬ್‌ಸೈಟ್‌ವೊಂದು ವರದಿ ಮಾಡಿದೆ. 2020ರಲ್ಲಿ ನಡೆದ ಭಾರತ- ಚೀನಾ ನಡುವಿನ ಘರ್ಷಣೆಯಲ್ಲಿ ಕನಿಷ್ಠ 24 ಸೈನಿಕರು ಸಾವನ್ನಪ್ಪಿದ್ದರು. ಬಳಿಕ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳ ನಂತರ ಉದ್ವಿಗ್ನತೆ ಕಡಿಮೆಯಾಗಿತ್ತು. ಈ ಮಧ್ಯೆ ಕಳೆದ ಡಿಸೆಂಬರ್‌ನಲ್ಲಿ ಅರುಣಾಚಲ ಪ್ರದೇಶದಲ್ಲಿ ಮತ್ತೆ ಉಭಯ ರಾಷ್ಟ್ರಗಳ ಸೈನಿಕರ ಮಧ್ಯೆ ಘರ್ಷಣೆ ಉಂಟಾಗಿತ್ತು. ಆದರೆ ಯಾವುದೇ ಸಾವು ನೋವು ಸಂಭವಿಸಿರಲಿಲ್ಲ.
ಚೀನಾ ಮತ್ತು ಭಾರತ ಗಡಿಭಾಗದಲ್ಲಿ ಎರಡೂ ಸೇನೆಗಳು ತಮ್ಮ ಮೂಲ ಸೌಕರ್ಯವನ್ನು ಹೆಚ್ಚಿಸಿದ್ದು ಪರಸ್ಪರ ಪ್ರತಿಕ್ರಿಯೆ, ಫಿರಂಗಿಗಳ ಶಕ್ತಿ ಮತ್ತು ಸೈನಿಕ ದಳವನ್ನು ಸಜ್ಜುಗೊಳಿಸುವ ಕೆಲಸದಲ್ಲಿ ಸೈನ್ಯಪಡೆ ತೊಡಗಿದೆ. ಈ ವರ್ಷ ಚೀನಾ ಭಾರತ ಮಧ್ಯೆ ಉದ್ವಿಗ್ನತೆ ಹೆಚ್ಚಾಗಿ ಘರ್ಷಣೆ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ವಿಶ್ಲೇಷಿಸಲಾಗಿದೆ.
LACಯ 26 ಪಾಯಿಂಟ್‌ಗಳಲ್ಲಿ ಭಾರತದ ಗಸ್ತು ಇಲ್ಲ!
ಪೂರ್ವ ಲಡಾಖ್‌ನ ನೈಜ ನಿಯಂತ್ರಣ ರೇಖೆ (LAC) ಯ ಉದ್ದಕ್ಕೂ ಕಾರಕೋರಂ ಪಾಸ್‌ನಿಂದ ಚುಮುರ್‌ವರೆಗೆ ಒಟ್ಟು 65 ಗಸ್ತು ಕೇಂದ್ರಗಳ ಪೈಕಿ 26 ಗಸ್ತು ಕೇಂದ್ರಗಳಲ್ಲಿ ಭಾರತದ ಸಶಸ್ತ್ರ ಪಡೆಗಳು ಈಗ ಕಾಣಿಸುತ್ತಿಲ್ಲ ಎಂದು ವರದಿಯಾಗಿದೆ. ಇದು ಐಎಸ್‌ಎಫ್‌ನ ನಿಯಂತ್ರಣದಲ್ಲಿರುವ ಗಡಿಯನ್ನು ಭಾರತದ ಕಡೆಗೆ ಬದಲಾಯಿಸಲು ಕಾರಣವಾಗುತ್ತದೆ. ಜೊತೆಗೆ ಅಂತಹ ಎಲ್ಲಾ ಕಡೆಗಳಲ್ಲಿ ‘ಬಫರ್ ಝೋನ್’ ರಚಿಸಲಾಗಿದ್ದು, ಇದು ಅಂತಿಮವಾಗಿ ಈ ಪ್ರದೇಶಗಳ ಮೇಲಿನ ನಿಯಂತ್ರಣವನ್ನು ಭಾರತ ಕಳೆದುಕೊಳ್ಳಲು ಕಾರಣವಾಗುತ್ತದೆ. ಇಂಚಿಂಚಿನಷ್ಟೇ ಭಾರತದ ಭೂಮಿಯನ್ನು ವಶಪಡಿಸಿಕೊಳ್ಳುವ ಚೀನಾ ಮಿಲಿಟರಿ ಪಡೆಯ ಈ ತಂತ್ರವನ್ನು ‘ಸಲಾಮಿ ಸ್ಲೈಸಿಂಗ್’ ಎಂದು ಕರೆಯಲಾಗುತ್ತದೆ ಎಂದು ವರದಿ ಹೇಳಿದೆ. ಸಮ್ಮೇಳನದಲ್ಲಿ ಮಂಡಿಸಲಾದ ಪ್ರಬಂಧದಲ್ಲಿ ಇದು ಕೂಡ ಸಂಶೋಧನೆಯ ಭಾಗವಾಗಿತ್ತು ಎಂದು ತಿಳಿದು ಬಂದಿದೆ.
ಅಚ್ಚರಿಯ ವಿಷಯ ಅಂದ್ರೆ ಚೀನಾದ ಪೀಪಲ್ಸ್ ಲಿಬರೇಶನ್ ಮಿಲಿಟರಿ ಪಡೆಯು ಗಡಿ ಭಾಗದ ಶಿಖರಗಳಲ್ಲಿ ಅತ್ಯುನ್ನತ ದರ್ಜೆಯ ಕ್ಯಾಮೆರಾಗಳನ್ನು ಕೂಡ ಅಳವಡಿಸಿದ್ದು, ಅದರ ಮೂಲಕ ಭಾರತದ ಸೇನಾಪಡೆಗಳ ಚಲನವಲನಗಳು ಮತ್ತು ಭಾರತದಲ್ಲಿ ನಡೆಯುವ ವಿಚಾರಗಳನ್ನು ಪರಿಶೀಲಿಸಿದ ಬಳಿಕವೇ ಚೀನಾ ಬಫರ್ ಝೋನ್ ಪ್ರದೇಶಗಳನ್ನು ತನ್ನ ತೆಕ್ಕೆಗೆ ಬಳಸಲು ಪ್ರಯತ್ನಪಟ್ಟಿದೆ ಎಂದು ತಿಳಿದು ಬಂದಿದೆ.
ಭಾರತ-ಚೀನಾ ಮಿಲಿಟರಿ ಮಾತುಕತೆ
ಪೂರ್ವ ಲಡಾಖ್ ಬಳಿ ಗಡಿ ಬಿಕ್ಕಟ್ಟು ಉಂಟಾದ ಬಳಿಕ ಭಾರತ ಮತ್ತು ಚೀನಾ ಮಿಲಿಟರಿ ಪಡೆ ಹೊಸದಾಗಿ ಮತ್ತೆ ಮಾತುಕತೆಗಳನ್ನು ನಡೆಸಿವೆ. ಆದರೆ ಈಗಾಗಲೇ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸುವ ವಿಚಾರದಲ್ಲಿ ಮಾತುಕತೆಗಳು ಯಾವುದೇ ಫಲಪ್ರದವಾಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ