ಚಂದ್ರನ ಮೇಲೆ ಅಡಿ ಇಟ್ಟ ಚೀನಾದ ಚುಂಗು-5; ಚಂದ್ರನಲ್ಲಿ ನೆಲೆ ಸ್ಥಾಪಿಸುವ ಡ್ರ್ಯಾಗನ್ ದೇಶದ ಹೆಗ್ಗುರಿ
ಚೀನಾ ಇದೀಗ ಚಂದ್ರನ ನೆಲದ ಮೇಲೆ ನೌಕೆಯನ್ನು ಇಳಿಸಿದ್ದು ಎರಡು ವಾರಗಳ ನಂತರ ಅಲ್ಲಿನ ಕಲ್ಲು ಮಣ್ಣು ಹೊತ್ತು ಭೂಮಿಗೆ ಮರಳಲಿದೆ. 2030ರಷ್ಟರಲ್ಲಿ ಚಂದ್ರನಲ್ಲಿ ನೆಲೆ ಸ್ಥಾಪಿಸುವ ಮಹತ್ವಾಕಾಂಕ್ಷಿ ಗುರಿ ಚೀನಾಗೆ ಇದೆ.
ಬೆಂಗಳೂರು(ಡಿ. 03): ಬಾಹ್ಯಾಕಾಶ ಯೋಜನೆಗಳಲ್ಲಿ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಲೇ ಇರುವ ಚೀನಾ ಈಗ ಮತ್ತೊಂದು ಮೈಲಿಗಲ್ಲಿನ ಸಮೀಪದಲ್ಲಿದೆ. ಚೀನಾದ ಚಂದ್ರ ಯೋಜನೆ ಚುಂಗು-5 (Chang’e-5) ಚಂದ್ರನ ನೆಲದ ಮೇಲೆ ಯಶಸ್ವಿಯಾಗಿ ಇಳಿದಿದೆ. ಇನ್ನೂ ಕೆಲ ದಿನಗಳ ಕಾಲ ಚಂದ್ರನ ಅಂಗಳವನ್ನು ಜಾಲಾಡಿ ಚುಂಗು ಭೂಮಿಗೆ ವಾಪಸ್ ಬರಲಿದೆ. ಇದು ಇನ್ನೆರಡು ವಾರವಾಗಬಹುದು. ಭೂಮಿಗೆ ಬರುವಾಗ ಚಂದ್ರನ ಅಂಗಳದಿಂದ 2 ಕಿಲೋ ಕಲ್ಲು ಮಣ್ಣುಗಳನ್ನೂ ಹೊತ್ತು ತರಲಿದೆ. ಅಂದುಕೊಂಡಂತೆ ಈ ಯೋಜನೆ ಯಶಸ್ವಿಯಾದರೆ ಚೀನಾಗೆ ಕಿರೀಟಕ್ಕೆ ಹೊಸ ಗರಿ ಮೂಡುತ್ತದೆ. 20ನೇ ಶತಮಾನದ ಸೋವಿಯತ್ ರಷ್ಯಾ ಹಾಗೂ ಅಮೆರಿಕ ರಾಷ್ಟ್ರಗಳು ಮಾತ್ರ ಇಂಥದ್ದೊಂದು ಸಾಧನೆ ಮಾಡಿರುವುದು. ಚಂದ್ರನಿಂದ ಭೂಮಿಗೆ ವಾಪಸ್ ಬರುವ ಯೋಜನೆ ಕಳೆದ 44 ವರ್ಷಗಳಿಂದ ಆಗೇ ಇಲ್ಲ. 1976ರಲ್ಲಿ ಸೋವಿಯತ್ ರಷ್ಯಾದ ಲೂನಾ 24 ಯೋಜನೆಯೇ ಕೊನೆಯಾಗಿತ್ತು. ಈಗ ಚೀನಾ ಈ ಸಾಹಸ ಮಾಡುತ್ತಿದೆ.
ಚಂದ್ರನ ಪಶ್ಚಿಮ ಭಾಗದಲ್ಲಿರುವ ಮಾನ್ಸ್ ರೀಮ್ಕರ್ ಎಂಬ ಜ್ವಾಲಾಮುಖಿ ಬಂಡೆಯ ಮೇಲೆ ಚೀನಾದ ಚುಂಗು-5ನ ಲ್ಯಾಂಡರ್ ಇದೀಗ ಇಳಿದಿದೆ. ಇದೀಗ ಅಲ್ಲಿನ ಕಲ್ಲು ಮತ್ತು ಮಣ್ಣುಗಳನ್ನ ಕಲೆಹಾಕುವ ಲ್ಯಾಂಡರ್ ಆ ವಸ್ತುಗಳನ್ನ ಚಂದ್ರನ ಪರಿಧಿಯಲ್ಲಿರುವ ಆರ್ಬಿಟರ್ಗೆ ಸಾಗಿಸುತ್ತದೆ. ನಂತರ ಆರ್ಬಿಟರ್ ವಾಹನ ಈ ಸ್ಯಾಂಪಲ್ಗಳ ಸಮೇತ ಭೂಮಿಗೆ ವಾಪಸ್ ಬಂದು ಇಳಿಯಲಿದೆ. ಚೀನಾದ ವಿಜ್ಞಾನಿಗಳು ಚಂದ್ರನ ಮಣ್ಣುಗಳನ್ನ ಅವಲೋಕಿಸಿ ಅಧ್ಯಯನ ನಡೆಸಲಿದ್ದಾರೆ.
First-person view: China's #ChangE5 probe touching down on the moon. The spacecraft successfully landed on the near side of the moon late Tuesday and sent back images. #exclusivepic.twitter.com/A86WxW5c0l
ಚಂದ್ರನಲ್ಲಿ ಗಗನಯಾತ್ರಿಗಳಿಗೆ ನೆಲೆ ಸ್ಥಾಪಿಸಲು ಚೀನಾ ಸಾಹಸ:
ಚೀನಾ ದೂರಗಾಮಿಯ ಚಂದ್ರ ಯೋಜನೆಯನ್ನ ಹಮ್ಮಿಕೊಂಡಿದೆ. ಅದರ ಒಂದು ಭಾಗ ಮಾತ್ರ ಈ ಚುಂಗು-2 ಯಾನ. 2030ರಷ್ಟರಲ್ಲಿ ಚಂದ್ರನಲ್ಲಿ ಗಗನಯಾತ್ರಿಗಳ ನೆಲೆ ಸ್ಥಾಪಿಸುವುದು ಹಾಗೂ ಚಂದ್ರನ ನೆಲದ ಮೇಲೆ ತನ್ನ ಅಧಿಪತ್ಯ ಹೆಚ್ಚೆಚ್ಚು ಸ್ಥಾಪಿಸುವುದು ಚೀನಾದ ಉದ್ದೇಶ. ಈ ನಿಟ್ಟಿನಲ್ಲಿ ಚಂದ್ರನ ಬಳಿ ಒಂದೊಂದೇ ಬಾಹ್ಯಾಕಾಶ ನೌಕೆಗಳನ್ನ ಕಳುಹಿಸುತ್ತಾ ಇದೀಗ ಎರಡನೇ ಬಾರಿಗೆ ಚಂದ್ರನ ನೆಲದ ಮೇಲೆ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಇಳಿಸಿದೆ. 2024ರಲ್ಲಿ ಚುಂಗು-6 ಕೂಡ ಇದೇ ರೀತಿ ಚಂದ್ರನ ಅಂಗಳದಿಂದ ಕಲ್ಲು, ಮಣ್ಣುಗಳನ್ನ ತರುವ ಯೋಜನೆ ಇದೆ. ಚೀನಾದ ಚಂದ್ರ ಯೋಜನೆಯ ಕೊನೆಯ ಹಂತದಲ್ಲಿ ಚಂದ್ರನ ಮೇಲೆ ಒಂದು ವೈಜ್ಞಾನಿಕ ಕೇಂದ್ರ ಸ್ಥಾಪಿಸುವ ಗುರಿ ಇದೆ. ಚಂದ್ರದ ದಕ್ಷಿಣ ಧ್ರುವದಲ್ಲಿ ಬಳಕೆಯೋಗ್ಯ ನೈಸರ್ಗಿಕ ಸಂಪನ್ಮೂಲಗಳನ್ನ ಶೋಧಿಸಲಿದೆ. ಹಾಗೂ ಅಂತಿಮವಾಗಿ ಚಂದ್ರನ ಮೇಲೆ ಮಾನವರನ್ನ ಇಳಿಸಿ ದಕ್ಷಿಣ ಧ್ರುವದಲ್ಲಿ ಸಿಬ್ಬಂದಿ ಸಹಿತ ಔಟ್ಪೋಸ್ಟ್ ನಿರ್ಮಿಸುವುದು ಚೀನಾದ ಗುರಿ. ಅದೂ 2030ರಷ್ಟರಲ್ಲಿ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ