ಯಾವುದೇ ದೇಶದಲ್ಲಿ ಜನಸಂಖ್ಯೆ (Population) ಎಂಬುದು ಒಂದು ಮಹತ್ತರ ಅಂಶವಾಗಿದೆ. ಅದರಲ್ಲಿ ಆಗುವ ಏರಿಕೆ ಅಥವಾ ಇಳಿಕೆ ತನ್ನದೆ ಆದಂತಹ ಪ್ರಭಾವವನ್ನು ದೇಶದ ಮೇಲೆ ಬೀರುತ್ತದೆ. ಅತಿ ಹೆಚ್ಚಾಗಿ ಏರುತ್ತಿರುವ ಜನಸಂಖ್ಯೆ ಒಂದು ರೀತಿಯ ಸಂಕಷ್ಟ ಉಂಟು ಮಾಡಿದರೆ ಕುಸಿತವಾಗುತ್ತಿರುವ ಜನಸಂಖ್ಯೆಯೂ ಸಹ ಸಾಕಷ್ಟು ತೊಂದರೆ ಉಂಟು ಮಾಡುತ್ತದೆ ಎನ್ನಲಾಗಿದೆ. ಇದೀಗ ಬಹು ಸಮಯದಿಂದ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯ ಮನ್ನಣೆ ಪಡೆದು ಮೊದಲ ಸ್ಥಾನದಲ್ಲಿ ರಾರಾಜಿಸುತ್ತಿರುವ ಚೀನಾ ( China) ದೇಶದಲ್ಲಿ ಜನಸಂಖ್ಯೆ ತೀವ್ರವಾಗಿ ಕುಸಿಯುತ್ತಿದೆ. ಈ ಕುಸಿಯುತ್ತಿರುವ ಜನಸಂಖ್ಯೆಯನ್ನು ಸಮತೋಲನಕ್ಕೆ ತರಲು ಅಥವಾ ಏರಿಕೆಯ ಹಾದಿಯಲ್ಲಿ (Boost Birth Rate) ತರಲು ಚೀನಾ ಆಡಳಿತ ಸಾಕಷ್ಟು ಕಸರತ್ತು ನಡೆಸುತ್ತಿದೆ.
ಪ್ರಸ್ತುತ ಚೀನಾ ದೇಶದಲ್ಲಿ ಜನನ ದರ ತೀವ್ರ ಕುಸಿತವಾಗುತ್ತಿದೆ. ಇದನ್ನು ಹೇಗಾದರೂ ಮಾಡಿ ಸರಿಪಡಿಸಬೇಕೆಂಬ ಧೋರಣೆಯಲ್ಲಿರುವ ಚೀನಾದ ಆಯಾ ಪ್ರಾಂತ್ಯಗಳ ಪ್ರಾಧಿಕಾರಗಳು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದು ಅದರಲ್ಲಿ ಮದುವೆ ರಜೆಯ ನೀತಿಗಳನ್ನು ಗಮನಾರ್ಹವಾಗಿ ಬದಲಾಯಿಸುತ್ತಿದ್ದಾರೆಂದು ರ್‍ಯೂಟರ್ಸ್ ವರದಿ ಮಾಡಿದೆ.
ಈ ಹಿಂದೆ ಚೀನಾ ಆಡಳಿತದಡಿಯಲ್ಲಿ ಮದುವೆಗೆಂದು ವೇತನಸಹಿತ 3 ದಿನಗಳ ರಜೆಯನ್ನು ಅನುಮತಿಸಲಾಗುತ್ತಿತ್ತು. ಅದನ್ನೀಗ ಬದಲಾಯಿಸಲಾಗಿದ್ದು ಮೂರು ದಿನಗಳ ಬದಲು 30 ದಿನಗಳ ಪಾವತಿಸಿದ ರಜೆಯ ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಅಲ್ಲಿನ ಕಮ್ಯೂನಿಟಿ ಪಕ್ಷದ ಮುಖವಾಣಿಯಾದ ಪೀಪಲ್ಸ್ ಡೈಲಿ ಹೆಲ್ತ್ ಅನ್ನು ಉಲ್ಲೇಖಿಸಿ Reuters ವರದಿ ಮಾಡಿದೆ.
ಯಾಕೆ ಈ ಬದಲಾವಣೆ?
ಅಷ್ಟಕ್ಕೂ ಇಷ್ಟೊಂದು ಬದಲಾವಣೆಯನ್ನು ಚೀನಾ ಏಕೆ ಮಾಡುತ್ತಿದೆ ಎಂಬ ಒಂದು ಸಂದೇಹ ಮನದಲ್ಲಿ ಮೂಡದೆ ಇರದು. ಅದಕ್ಕೆ ಬಲು ಸರಳ ಉತ್ತರವೆಂದರೆ ಚೀನಾ ತನ್ನಲ್ಲಿ ಕುಸಿಯುತ್ತಿರುವ ಜನನ ದರ ಹಾಗೂ ಆ ಮೂಲಕ ಕ್ಷೀಣಿಸುತ್ತಿರುವ ಜನಸಂಖ್ಯೆಯನ್ನು ಬ್ಯಾಲೆನ್ಸ್ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ.
ಅದಕ್ಕಾಗಿ ಚೀನಾ ಯುವ ಜೋಡಿಗಳು ಮದುವೆಯಾಗಿ ಮಕ್ಕಳನ್ನು ಮಾಡಿಕೊಳ್ಳುವಂತೆ ಅವರನ್ನು ಹುರುದುಂಬಿಸಲು ಈ ರಜಾ ಯೋಜನೆಯನ್ನು ತರುತ್ತಿದೆ. ಕೆಲವು ಪ್ರಾಂತ್ಯಗಳಲ್ಲಿ ಮೂವತ್ತು ದಿನಗಳ ರಜೆಯ ಕೊಡುಗೆಯನ್ನು ನೀಡಿದರೆ ಇನ್ನು ಕೆಲವು ಪ್ರಾಂತ್ಯಗಳಲ್ಲಿ ಹತ್ತು ದಿನಗಳ ವೇತನ ಸಹಿತ ಮದುವೆ ರಜೆ ನೀತಿ ಜಾರಿಯಲ್ಲಿದೆ.
Reuters ವರದಿ ಮಾಡಿರುವಂತೆ ಗಾನ್ಸು ಹಾಗೂ ಶಾಂಕ್ಸಿ ಪ್ರಾಂತ್ಯಗಳಲ್ಲಿ 30 ದಿನಗಳ ಮದುವೆ ರಜೆಯನ್ನು ಅನುಷ್ಠಾನಗೊಳಿಸಿದರೆ ಶಾಂಘೈನಲ್ಲಿ ಕೇವಲ ಹತ್ತು ದಿನಗಳ ಮದುವೆರಜೆ ಹಾಗೂ ಸಿಚುವಾನ್ ನಲ್ಲಿ ಈಗಲೂ ಮೂರು ದಿನಗಳ ರಜೆ ಚಾಲ್ತಿಯಲ್ಲಿರುವುದಾಗಿ ತಿಳಿದುಬಂದಿದೆ.
ಇದಲ್ಲದೆ, ಚೀನಾದ ಆರ್ಥಿಕ ಮತ್ತು ಹಣಕಾಸಿನ ಸೌತ್ ವೆಸ್ಟ್ ಯುನಿವರ್ಸಿಟಿ ಆಫ್ ಫೈನಾನ್ಸ್ ನ ಸಾಮಾಜಿಕ ಅಭಿವೃದ್ಧಿ ಸಂಶೋಧನಾ ಕೇಂದ್ರದ ಡೀನ್ ಆಗಿರುವ ಯಾಂಗ್ ಹೇಯಾಂಗ್ ಅವರು "ಮೂವತ್ತು ದಿನಗಳವರೆಗೆ ಮದುವೆ ರಜೆಯನ್ನು ವಿಸ್ತರಿಸುವಂತಹ ಮಾರ್ಗವು ಫರ್ಟಿಲಿಟಿ ದರವನ್ನು ಹೆಚ್ಚಿಸಬಹುದಾದ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ" ಎಂದಿರುವುದಾಗಿ Reuters ಸುದ್ದಿಸಂಸ್ಥೆ ಉಲ್ಲೇಖಿಸಿದೆ.
ಚೀನಾ ಜನಸಂಖ್ಯೆ ಕುಸಿತಕ್ಕೆ ಕಾರಣ
80-90ರದಶಕಗಳಲ್ಲಿ ವಿಶ್ವದಲ್ಲಿ ಚೀನಾ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿತ್ತು. ಆ ಸಮಯದಲ್ಲಿ ಜನಸಂಖ್ಯಾ ಸ್ಫೋಟದ ಪರಿಣಾಮಗಳ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿತ್ತು. ಇದನ್ನು ಗಂಭೀರವಾಗಿ ತೆಗೆದುಕೊಂಡ ಚೀನಾ ತನ್ನ ಜನಸಂಖ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ಏಕ ಸಂತಾನ ಮಾತ್ರ ನೀತಿಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದಿತು.
ಈ ಪಾಲಿಸಿಯು ಚೀನಾದಲ್ಲಿ 1980-2015ರ ವರೆಗೆ ಕಟ್ಟುನಿಟ್ಟಾಗಿ ಜಾರಿಯಲ್ಲಿತ್ತು. ಇದರ ಫಲಶೃತಿಯಿಂದಾಗಿಯೇ ದೇಶದಲ್ಲಿ ಜನಸಂಖ್ಯೆಯ ಪ್ರಮಾಣ ಕುಸಿಯುತ್ತ ಸಾಗಿತು. ಇದೀಗ ಪ್ರಸ್ತುತ ಸಮಯದಲ್ಲಿ ಸಾಕಷ್ಟು ಜನನ ದರದ ಕುಸಿತ ಉಂಟಾಗುತ್ತಿದ್ದು ಇದು ದೇಶದ ಆರ್ಥಿಕತೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪರಿಣಿತರ ಅಂಕಿ-ಅಂಶಗಳ ಪ್ರಕಾರ ಪ್ರಸ್ತುತ ಚೀನಾದಲ್ಲಿ ಜನನ ದರವು ಪ್ರತಿ 1000 ಜನರಿಗೆ 6.77 ಮಕ್ಕಳ ಜನನ ಎಂದಾಗಿದೆ.
ಚೀನಾದಲ್ಲಿ ವೃದ್ಧಾಪ್ಯವೂ ತ್ವರಿತಗತಿಯಲ್ಲಿ ಏರುತ್ತಿದೆ. ಇದೊಂದು ಮುಂದೆ ಅತಿ ದೊಡ್ಡ ಅಪಾಯ ಉಂಟು ಮಾಡಬಹುದಾದ ಸಮಸ್ಯೆಗಳಂತಿದ್ದು ಚೀನಾ ಅದರ ಪ್ರಭಾವದಿಂದ ತಪ್ಪಿಸಿಕೊಳ್ಳಲು ತನ್ನ ಕೈಲಾದ ಪ್ರಯತ್ನ ಮಾಡುತ್ತಿದೆ. ಅಷ್ಟಕ್ಕೂ ಚೀನಾದ ಈ ಪ್ರಯತ್ನ ಯಶಸ್ಸಾಗುವುದೇ ಎಂಬುದನ್ನು ಕಾಲವೇ ಉತ್ತರಿಸಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ