ದೆಹಲಿ: ಭಾರತ ಮತ್ತು ನೇಪಾಳ (India and Nepal) ದೇಶದ ಗಡಿ ಪಕ್ಕದಲ್ಲೇ ಚೀನಾ ದೇಶವು ಬೃಹತ್ ಗಾತ್ರದ ಅಣೆಕಟ್ಟು (China Building Dam) ನಿರ್ಮಾಣ ಮಾಡುತ್ತಿದ್ದು, ಸ್ಯಾಟಲೈಟ್ ಉಪಗ್ರಹ (Satellite Photo) ಕಳಿಸಿರುವ ಚಿತ್ರ ಚೀನಾ ನಿರ್ಮಿಸುತ್ತಿರುವ ಅಣೆಕಟ್ಟಿನ ದೃಶ್ಯವನ್ನು ಬಹಿರಂಗಪಡಿಸಿದೆ. ದೇಶದ ಗಡಿಭಾಗದಲ್ಲೇ ಬೃಹತ್ ಗಾತ್ರದ ಅಣೆಕಟ್ಟು ನಿರ್ಮಾಣ ಮಾಡುತ್ತಿರುವುದರಿಂದ ಭಾರತದ ಜಲ ವ್ಯವಸ್ಥೆಗೆ ಬಹುದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದ್ದು, ಈ ಅಣೆಕಟ್ಟಿನಿಂದ ಕೆಳಭಾಗದ ನೀರಿನ ಹರಿವನ್ನು ನಿಯಂತ್ರಿಸುವ ಸಾಧ್ಯತೆ ಇದೆ. ಇದರಿಂದ ಭಾರತಕ್ಕೆ ನೀರಿನ ಬರ ಎದುರಾಗುವ ಸಾಧ್ಯತೆ ಇದೆ ಎಂದು ಭಾರತ ಆಘಾತ ವ್ಯಕ್ತಪಡಿಸಿದೆ.
ಡ್ಯಾಂ ಯಶಸ್ವಿಯಾದರೆ ಭಾರತಕ್ಕೆ ಪೆಟ್ಟು?
ಅಚ್ಚರಿಯ ವಿಷಯವೆಂದರೆ ಜಗತ್ತಿನ ಅತೀದೊಡ್ಡ ಡ್ಯಾಂ ಥ್ರಿ ಗಾರ್ಜಸ್ ಅಣೆಕಟ್ಟಿಗಿಂತಲೂ ಮೂರು ಪಟ್ಟು ದೊಡ್ಡದಾದ ಡ್ಯಾಂ ಅನ್ನು ನಿರ್ಮಿಸಲು ಚೀನಾ ಉದ್ದೇಶಿಸಿದ್ದು, ಅರುಣಾಚಲ ಪ್ರದೇಶ ಹತ್ತಿರದಲ್ಲೇ ಟಿಬೆಟ್ನ ಮೆಡಾಗ್ ಗಡಿಯಲ್ಲಿ ಹಾದು ಹೋಗುವ ಗಂಗಾ ನದಿಯ ಉಪನದಿ ಯಾರ್ಲುಂಗ್ ತ್ಸಾಂಗೋ ನದಿಯಲ್ಲಿ ಬಹು ಸಾಮರ್ಥ್ಯದ ಅಣೆಕಟ್ಟು ನಿರ್ಮಾಣ ಮಾಡಲು ಚೀನಾ ಮುಂದಾಗಿದೆ. ಯಾರ್ಲುಂಗ್ ತ್ಸಾಂಗೋ ನದಿಯೇ ಭಾರತದಲ್ಲಿ ಬ್ರಹ್ಮಪುತ್ರ ನದಿ ಎಂದು ಕರೆಯಲ್ಪಡುತ್ತಿದ್ದು, ಒಂದು ವೇಳೆ ಈ ಅಣೆಕಟ್ಟು ನಿರ್ಮಾಣ ಯಶಸ್ವಿಯಾದರೆ ಭಾರತದಲ್ಲಿ ಬ್ರಹ್ಮಪುತ್ರ ನದಿ ಬತ್ತಿಹೋಗಿ ಬರದ ಪರಿಸ್ಥಿತಿ ನಿರ್ಮಾಣವಾಗಬಹುದು ಎನ್ನುವ ಆತಂಕ ಎದುರಾಗಿದೆ.
ಇದನ್ನೂ ಓದಿ: Indian Economy: ಜಾಗತಿಕ ಆರ್ಥಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರುವಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಲಿದ್ಯಾ?
ವಿಪರ್ಯಾಸವೆಂದರೆ ಭಾರತ-ನೇಪಾಳ-ಚೀನಾ ಮಧ್ಯೆಯ ಎಲ್ಎಸಿ ಗಡಿರೇಖೆಯ ಬಳಿ ಈ ಅಣೆಕಟ್ಟು ನಿರ್ಮಿಸಲು ಚೀನಾ ಮುಂದಾಗಿರುವುದರಿಂದ ಭಾರತದ ಪಾಲಿಗೆ ಹಲವು ರೀತಿಯಲ್ಲಿ ಸಮಸ್ಯೆಗಳನ್ನು ತಂದೊಡ್ಡುವ ಸಾಧ್ಯತೆ ಇದೆ. ಇಂಟೆಲ್ ಲ್ಯಾಬ್ನ ಜಿಯೋಸ್ಪೇಷಿಯಲ್ ಇಂಟೆಲಿಜೆನ್ಸ್ ವಿಭಾಗದ ಅಧ್ಯಯನಕಾರ ಡಾಮಿಯನ್ ಸೈಮನ್ ಅವರು ಗಡಿಭಾಗದಲ್ಲಿ ಚೀನಾ ನಿರ್ಮಾಣ ಮಾಡುತ್ತಿರುವ ಬೃಹತ್ ಡ್ಯಾಂನ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಇದರ ಜೊತೆಗೆ ಚೀನಾ ಈ ಭಾಗದಲ್ಲಿ ಅಣೆಕಟ್ಟು ನಿರ್ಮಿಸೋದು ಮಾತ್ರವಲ್ಲದೇ, ಭೂ ಭಾಗದ ಅಭಿವೃದ್ಧಿಯ ಚಟುವಟಿಕೆಗಳೂ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ನೀರಿನ ಮೇಲೆ ಚೀನಾ ನಿಯಂತ್ರಣ?
ಈ ಹಿಂದೆ ಚೀನಾ ದೇಶ ಗಡಿಭಾಗದ ಎಲ್ಎಸಿಯ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ಮಿಲಿಟರಿ ಪಡೆಯನ್ನು ಹೆಚ್ಚಿಸಿದ್ದು ಮಾತ್ರವಲ್ಲದೇ, ಅಲ್ಲಿ ಮೂಲ ಸೌಕರ್ಯ ಮತ್ತು ಹಳ್ಳಿಗಳನ್ನು ಸೃಷ್ಟಿಸಿದ ವಿಚಾರ ಉಪಗ್ರಹಗಳ ಚಿತ್ರದಿಂದ ತಿಳಿದು ಬಂದಿತ್ತು. ಇದೀಗ ಒಂದೊಂದೇ ಹೆಜ್ಜೆ ಚೀನಾ ಮುಂದಕ್ಕೆ ಹೋಗುತ್ತಿದ್ದು, ಇದರ ಮುಂದುವರಿದ ಭಾಗವಾಗಿ ಬೃಹತ್ ಗಾತ್ರದ ಅಣೆಕಟ್ಟನ್ನು ನಿರ್ಮಿಸಲು ಮುಂದಾಗಿದೆ. ಈ ಅಣೆಕಟ್ಟು ಯೋಜನೆ ಯಶಸ್ವಿಯಾದರೆ ನದಿಯ ಕೆಳಭಾಗದ ನೀರಿನ ಮೇಲೆ ಚೀನಾ ನಿಯಂತ್ರಣ ಸಾಧಿಸುವುದರಲ್ಲಿ ಅನುಮಾನವೇ ಇಲ್ಲ ಅನ್ನೋದು ಉಪಗ್ರಹ ಚಿತ್ರದ ಮೂಲಕ ತಿಳಿದುಬಂದಿದೆ.
ಇದನ್ನೂ ಓದಿ: Himalayan Gold: ಏನಿದು ಹಿಮಾಲಯನ್ ಗೋಲ್ಡ್ ? ಇದಕ್ಕಾಗಿ ಚೀನಾ ಭಾರತದ ಗಡಿಯಲ್ಲಿ ಅತಿಕ್ರಮಣ ಮಾಡಿತ್ತಾ?
ಒಟ್ಟು ಗಾತ್ರ ಈಗಲೇ ತಿಳಿಯಲಾಗದು
ಸ್ಯಾಟಲೈಟ್ ಚಿತ್ರವನ್ನು ಬಿಡುಗಡೆ ಮಾಡಿರುವ ಸಂಶೋಧಕ ಡಾಮಿಯನ್ ಸೈಮನ್ ಅವರು ಹೇಳುವ ಪ್ರಕಾರ, ಚೀನಾ ನಿರ್ಮಿಸುತ್ತಿರುವ ಈ ಅಣೆಕಟ್ಟು ಸುಮಾರು 350 ರಿಂದ 400 ಮೀಟರ್ ಉದ್ದವಿದೆ ಎಂದು ಹೇಳಲಾಗಿದ್ದು, ಅಣೆಕಟ್ಟು ಈಗ ನಿರ್ಮಾಣ ಹಂತದಲ್ಲಿರುವ ಕಾರಣ, ಡ್ಯಾಂನ ಒಟ್ಟು ಗಾತ್ರವನ್ನು ಈಗಲೇ ತಿಳಿಯಲಾಗದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತ-ನೇಪಾಳದ ಗಡಿ ನಿಯಂತ್ರಣ ರೇಖೆಯ ಬಳಿಯೇ ಚೀನಾ ಬೃಹತ್ ಗಾತ್ರದ ಅಣೆಕಟ್ಟು ನಿರ್ಮಾಣ ಮಾಡುತ್ತಿರುವುದರಿಂದ ಸಹಜವಾಗಿಯೇ ಭಾರತಕ್ಕೆ ಸಮಸ್ಯೆ ಎದುರಾಗುವ ಆತಂಕವಿದ್ದು, ಚೀನಾದ ನಡೆಯ ವಿರುದ್ಧ ಕೇಂದ್ರ ಸರ್ಕಾರ ಯಾವ ರೀತಿ ಪ್ರತಿಕ್ರಿಯೆ ನೀಡುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ