ನಿಮ್ಮ ಕೈಲಿರುವ ಗರಿಗರಿ ನೋಟು ಚೀನಾದಲ್ಲೇ ಪ್ರಿಂಟ್ ಆಗಿದ್ಯಾ?


Updated:August 13, 2018, 4:04 PM IST
ನಿಮ್ಮ ಕೈಲಿರುವ ಗರಿಗರಿ ನೋಟು ಚೀನಾದಲ್ಲೇ ಪ್ರಿಂಟ್ ಆಗಿದ್ಯಾ?

Updated: August 13, 2018, 4:04 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 13): ಹಲವು ಕ್ಷೇತ್ರಗಳಲ್ಲಿ ವಿಶ್ವ ಮಾರುಕಟ್ಟೆಯಲ್ಲಿ ಪಾರಮ್ಯ ಸಾಧಿಸುತ್ತಾ ಬಂದಿರುವ ಚೀನಾ ದೇಶ ಇದೀಗ ನೋಟು ಮುದ್ರಣ ವಲಯಕ್ಕೂ ಲಗ್ಗೆ ಇಟ್ಟಿದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಕರೆನ್ಸಿ ನೋಟುಗಳ ಮುದ್ರಣ ಗುತ್ತಿಗೆಯನ್ನು ಚೀನೀ ಕಂಪನಿಗಳು ಪಡೆದುಕೊಂಡಿವೆ. ಚೀನಾ ಬ್ಯಾಂಕ್​ನೋಟ್ ಪ್ರಿಂಟಿಂಗ್ ಅಂಡ್ ಮಿಂಟಿಂಗ್ ಕಾರ್ಪೊರೇಷನ್ ಎಂಬ ಚೀನೀ ಕಂಪನಿಯಲ್ಲಿ ಭಾರತ, ಬಾಂಗ್ಲಾದೇಶ, ಥಾಯ್ಲೆಂಡ್, ಮಲೇಷ್ಯಾ, ಶ್ರೀಲಂಕಾ, ಬ್ರೆಜಿಲ್ ಮತ್ತು ಪೋಲ್ಯಾಂಡ್ ದೇಶಗಳ ಕರೆನ್ಸಿ ಪ್ರಿಂಟ್ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಚೀನೀ ಮಾಧ್ಯಮಗಳಲ್ಲಿ ವರದಿಯೊಂದು ಪ್ರಕಟವಾಗಿದೆ.

ಚೀನಾದಲ್ಲಿ ಭಾರತದ ನೋಟುಗಳನ್ನ ಮುದ್ರಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವವಾಗಿದೆ. ಭಾರತದ ಕರೆನ್ಸಿಯ ನಕಲಿ ನೋಟುಗಳನ್ನ ಪಾಕಿಸ್ತಾನ ಮುದ್ರಿಸಿ ಭಯೋತ್ಪಾದನಾ ಕೃತ್ಯಗಳಿಗೆ ಬಳಸುತ್ತಿದೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲೇ ಚೀನಾದ ನೋಟು ಮುದ್ರಣದ ಸುದ್ದಿ ಬಂದಿರುವುದು ಗಮನಾರ್ಹ. ಚೀನಾದೊಂದಿಗೆ ನಿಕಟ ಸಂಬಂಧ ಹೊಂದಿರುವ ಪಾಕಿಸ್ತಾನಕ್ಕೆ ಈಗ ಖೋಟಾ ನೋಟು ಮುದ್ರಿಸುವ ದಾರಿ ಇನ್ನಷ್ಟು ಸುಗಮವಾಗುವ ಆತಂಕವಿದೆ. ಕಾಂಗ್ರೆಸ್ ಮುಖಂಡ ಶಶಿ ತರೂರ್ ಕೂಡ ಇದೇ ಆತಂಕ ವ್ಯಕ್ತಪಡಿಸಿದ್ದಾರೆ. ಭಾರತದ ನೋಟುಗಳನ್ನ ಮುದ್ರಿಸಲು ಚೀನಾಗೆ ಅವಕಾಶ ಮಾಡಿಕೊಟ್ಟರೆ ನಮ್ಮ ಭದ್ರತೆಗೆ ಅಪಾಯ ತಂದೊಡ್ಡಿದಂತಾಗುತ್ತದೆ ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ.


Loading...

ಆರ್​ಬಿಐ ಸ್ಪಷ್ಟನೆ
ಆದರೆ, ಚೀನಾದಲ್ಲಿ ರೂಪಾಯಿ ಕರೆನ್ಸಿ ನೋಟನ್ನು ಮುದ್ರಿಸಲಾಗುತ್ತಿದೆ ಎಂಬ ಸುದ್ದಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟವಾಗಿ ತಳ್ಳಿಹಾಕಿದೆ. ಭಾರತದ ಎಲ್ಲಾ ನೋಟುಗಳೂ ದೇಶದೊಳಗೆಯೇ ಮುದ್ರಿತವಾಗುತ್ತಿವೆ. ಬೇರೆ ಯಾವ ದೇಶದ ಕಂಪನಿಗಳಿಗೆ ಗುತ್ತಿಗೆ ನೀಡಿಲ್ಲ ಎಂದು ಆರ್​ಬಿಐನ ಅಧಿಕಾರಿಯೊಬ್ಬರು ಮನಿಕಂಟ್ರೋಲ್ ವೆಬ್​ಸೈಟ್​ಗೆ ಮಾಹಿತಿ ನೀಡಿದ್ದಾರೆ.

ಹೊರದೇಶದಲ್ಲಿ ಮುದ್ರಣ ಯಾಕೆ?

ನೋಟುಗಳ ಮುದ್ರಣಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ದುಬಾರಿ ಪರಿಕರಗಳ ಅಗತ್ಯವಿರುತ್ತದೆ. ಲೋಹದ ರಿಬ್ಬನ್(Metallic Ribbon), ಹುದುಗಿದ ಎಳೆ(Embedded Thread); ಬಣ್ಣ ಬದಲಿಸುವ ಇಂಕು (Colour changing ink) ಇತ್ಯಾದಿ ವಸ್ತುಗಳು ಬೇಕಾಗುತ್ತದೆ. ಇದಕ್ಕೆ ತಗಲುವ ವೆಚ್ಚವೂ ಅಧಿಕವಾಗಿರುತ್ತದೆ. ಹೀಗಾಗಿ ಅನೇಕ ರಾಷ್ಟ್ರಗಳು ತಮ್ಮ ಕರೆನ್ಸಿ ಮುದ್ರಣಕ್ಕೆ ಹೊರಗುತ್ತಿಗೆ ನೀಡುತ್ತವೆ. ಅಮೆರಿಕ, ಬ್ರಿಟನ್ ಮತ್ತು ಜರ್ಮನಿಯಲ್ಲಿ ಅತಿ ಹೆಚ್ಚು ವಿದೇಶಿ ಕರೆನ್ಸಿಗಳ ಮುದ್ರಣವಾಗುತ್ತದೆ. ಈ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಲು ಚೀನಾ ಹವಣಿಸುತ್ತಿದೆ. ವಿದೇಶೀ ನೋಟುಗಳ ಮುದ್ರಣದ ಮೂಲಕ ವಿಶ್ವದ ಆರ್ಥಿಕತೆಯ ಮೇಲೆ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುವುದು ಚೀನಾದ ಉದ್ದೇಶ.

ಚೀನಾದಲ್ಲಿ ಡಿಜಿಟಲ್ ಮಾರುಕಟ್ಟೆ ಪ್ರವರ್ಧಮಾನಕ್ಕೆ ಬರುತ್ತಿರುವಂತೆಯೇ ಅಲ್ಲಿ ನೋಟುಗಳ ಬಳಕೆ ಕಡಿಮೆಯಾಗುತ್ತಿದೆ. ನೋಟುಗಳ ಮುದ್ರಣವೂ ಕಡಿಮೆಯಾಗಿದೆ. ಅಲ್ಲಿಯ ನೋಟು ಪ್ರಿಂಟಿಂಗ್ ಕೇಂದ್ರಗಳಲ್ಲಿ ಮಾಡಲು ಹೆಚ್ಚು ಕೆಲಸ ಇಲ್ಲದೆ ವಿವಾಹ ಪ್ರಮಾಣಪತ್ರ, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿಗಳನ್ನ ಮುದ್ರಿಸುವ ಕೆಲಸವಾಗುತ್ತಿತ್ತು. ಆದರೆ, ಈಗ ವಿದೇಶಿ ಕರೆನ್ಸಿ ಮುದ್ರಣದ ಕಾರ್ಯಕ್ಕೆ ಕೈಹಾಕಿರುವ ಚೀನಾ ಈಗ ಕ್ರಮೇಣ ಹಿಡಿತ ಸಾಧಿಸುತ್ತಿದೆ. 2013ರಲ್ಲಿ ಬೆಲ್ಟ್ ಅಂಡ್ ರೋಡ್ ಯೋಜನೆಗೆ ಚೀನಾ ಚಾಲನೆ ಕೊಟ್ಟ ಬಳಿಕ ಈ ಯೋಜನೆಯೊಂದಿಗೆ ಭಾಗಿಯಾದ ರಾಷ್ಟ್ರಗಳು ತಮ್ಮ ಕರೆನ್ಸಿ ಮುದ್ರಣದ ಗುತ್ತಿಗೆಗಳನ್ನ ಚೀನಾಗೆ ಕೊಡುತ್ತಿವೆ. ಬ್ರೆಜಿಲ್​ನಂತಹ ವಿಶ್ವದ ಪ್ರಮುಖ ಅಭಿವೃದ್ಧಿಶೀಲ ರಾಷ್ಟ್ರಗಳೂ ಕೂಡ ನೋಟು ಮುದ್ರಣಕ್ಕೆ ಚೀನಾಗೆ ಎಡತಾಕಿವೆ ಎನ್ನಲಾಗಿದೆ. ಪಾಶ್ಚಿಮಾತ್ಯ ದೇಶಗಳಿಗಿಂತ ಕಡಿಮೆ ದರದಲ್ಲಿ ಚೀನಾ ಈ ನೋಟುಗಳನ್ನ ಮುದ್ರಿಸುತ್ತಿದೆ. ಚೀನಾದ ನೋಟು ಮುದ್ರಣ ಘಟಕಗಳಲ್ಲಿ ಬರೋಬ್ಬರಿ 18 ಸಾವಿರ ಜನರು ಕೆಲಸ ಮಾಡುತ್ತಿದ್ದಾರೆ.
First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...