ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಕೋವಿಡ್-19 ಅನ್ನು ಬೀಜಿಂಗ್ ನಿಭಾಯಿಸಿದ ರೀತಿಯ ಬಗ್ಗೆ ವರದಿ ಮಾಡಿದಕ್ಕೆ ಜಾಗತಿಕ ಮಟ್ಟದ ಬಿಬಿಸಿ ವರ್ಲ್ಡ್ ನ್ಯೂಸ್ (BBC World News) ಪ್ರಸಾರವನ್ನು ತಮ್ಮ ದೇಶದಲ್ಲಿ ನಿಷೇಧಿಸಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ರೇಡಿಯೋ ಹಾಗೂ ಟೆಲಿವಿಷನ್ ಅಡ್ಮಿನಿಸ್ಟ್ರೇಷನ್ (NRTA) ಹೇಳಿಕೆ ಉಲ್ಲೇಖಿಸಿ ಚೀನಾದ ಸರ್ಕಾರಿ ಮಾಧ್ಯಮ ಸಂಸ್ಥೆ ಸಿಜಿಟಿಎನ್ ಶುಕ್ರವಾರ ವರದಿ ಮಾಡಿದೆ. ಬಿಬಿಸಿ ನ್ಯೂಸ್ ನಲ್ಲಿ ಕೊರೋನಾ ವೈರಸ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಕಾರ್ಯವೈಖರಿ ಮತ್ತು ಚೀನಾದ ಆಡಳಿತದ ಬಗ್ಗೆ ವರದಿ ಮಾಡಲಾಗಿದೆ. ದೇಶದ ಗಂಭೀರ ವಿಷಯಗಳ ಬಗ್ಗೆ ಹೀಗೆ ವರದಿ ಮಾಡಿರುವುದು ಸರಿಯಲ್ಲ. ಸುದ್ದಿ ಸತ್ಯ ಮತ್ತು ನ್ಯಾಯಸಮ್ಮತವಾಗಿರಬೇಕು. ಬಿಬಿಸಿ ಬಿತ್ತರಿಸಿರುವ ಸುದ್ದಿಗಳಿಂದ ಚೀನಾದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಹಾನಿಯಾಗಿದೆ ಮತ್ತು ಇದು ರಾಷ್ಟ್ರೀಯ ಏಕತೆಯನ್ನು ದುರ್ಬಲಗೊಳಿಸಿತು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಚೀನಾದ ನಿಯಮಗಳನ್ನು ಉಲ್ಲಂಘನೆ ಮಾಡಿ ವರದಿ ಮಾಡಿದ್ದರಿಂದ ಚೀನಾದಲ್ಲಿ ವಿದೇಶಿ ನ್ಯೂಸ್ ಚಾನೆಲ್ ಗಳ ಅವಶ್ಯಕತೆ ಇಲ್ಲ. ಮುಂದಿನ ಒಂದು ವರ್ಷದವರೆಗೆ ಚೀನಾದಲ್ಲಿ ಬಿಬಿಸಿ ನ್ಯೂಸ್ ಅನ್ನು ಪ್ರಸಾರ ಮಾಡುವ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲವೆಂದು ಅದು ಹೇಳಿದೆ.
ಇದನ್ನು ಓದಿ: ಎಸ್ಬಿಐ ಗ್ರಾಹಕರೇ ನಿಮಗಿದು ಶುಭ ಸುದ್ದಿ..! ಜನ ಧನ್ ಖಾತೆದಾರರಿಗೆ 2 ಲಕ್ಷ ದವರೆಗೆ ಅಪಘಾತ ವಿಮೆ ಸೌಲಭ್ಯ
ಇಂಗ್ಲಿಷ್ ಭಾಷೆಯ ಬಿಬಿಸಿ ವರ್ಲ್ಡ್ ನ್ಯೂಸ್ ಅನ್ನು ಚೀನಾದಲ್ಲಿನ ಹೆಚ್ಚಿನ ಟಿವಿ ಚಾನೆಲ್ ಪ್ಯಾಕೇಜ್‌ಗಳಲ್ಲಿ ಸೇರಿಸಲಾಗಿಲ್ಲ. ಆದರೆ ಕೆಲವು ಹೋಟೆಲ್‌ಗಳು ಮತ್ತು ನಿವಾಸಗಳಲ್ಲಿ ಈ ಚಾನೆಲ್ ಲಭ್ಯವಿದೆ. ಬಿಬಿಸಿ ಮೇಲೆ ನಿಷೇಧ ಹೇರಿದ ಬಳಿಕ ತಮ್ಮ ಪರದೆಯ ಮೇಲೆ ಚಾನೆಲ್ ಮಾಯವಾಗಿದೆ ಎಂದು ಚೀನಾದ ಇಬ್ಬರು ರಾಯಿಟರ್ಸ್ ಪತ್ರಕರ್ತರು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕೋರಿದಾಗ ಬಿಬಿಸಿ ತಕ್ಷಣ ಪ್ರತಿಕ್ರಿಯಿಸಲಿಲ್ಲ.
ಫೆಬ್ರವರಿ 4 ರಂದು ಬ್ರಿಟಿಷ್ ಮಾಧ್ಯಮ ನಿಯಂತ್ರಕ ಆಫ್ಕಾಮ್ ಬ್ರಿಟನ್ ನಲ್ಲಿ ಚೀನಾದ ಸರ್ಕಾರಿ ಸ್ವಾಮ್ಯದ ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್ವರ್ಕ್ (ಸಿಜಿಟಿಎನ್) ಪರವಾನಗಿಯನ್ನು ಹಿಂಪಡೆದಿರುವ ಬೆನ್ನಲ್ಲೇ ಚೀನಾದಲ್ಲಿ ಬಿಬಿಸಿಗೆ ನಿಷೇಧ ವಿಧಿಸಲಾಗಿದೆ. ಚೀನಾ ಅಪೇಕ್ಷಿಸುವ ನಿಷ್ಪಕ್ಷಪಾತ, ನೈಜ ವರದಿಗಳ ವಿರುದ್ಧವಾಗಿ ಬಿಬಿಸಿ ನಡೆದುಕೊಂಡಿದೆ. ಅಲ್ಲದೇ ಚೀನಾದ ರಾಷ್ಟ್ರೀಯ ಹಿತಾಸಕ್ತಿಯನ್ನು ಅದು ಕಡೆಗಣಿಸಿದೆ ಎಂದು ಚೀನಾ, ಬಿಬಿಸಿ ವಿರುದ್ಧ ಆರೋಪ ಮಾಡಿದೆ. ಮುಂದಿನ ದಿನಗಳಲ್ಲಿ ಚೀನಾ ಪ್ರಾಂತ್ಯಗಳಲ್ಲಿ ಬಿಬಿಸಿ ಪ್ರಸಾರವಾಗುವುದಿಲ್ಲ ಎಂದು ಕೂಡ ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ