news18india Updated:July 28, 2020, 11:31 AM IST
ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್.
ಬೀಜಿಂಗ್; ಕೊರೋನಾ ವೈರಸ್ ನಿರ್ಮೂಲನೆ, ಆರ್ಥಿಕ ಚೇತರಿಕೆ, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಪ್ರಮುಖ ನಾಲ್ಕು ಅಂಶಗಳ ಕುರಿತು ಚರ್ಚೆ ನಡೆಸುವ ಸಲುವಾಗಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಸೋಮವಾರ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ನೇಪಾಳ ದೇಶದ ವಿದೇಶಾಂಗ ಸಚಿವರುಗಳ ಜೊತೆಗೆ ಮೊದಲ ಜಂಟಿ ವರ್ಚುವಲ್ ಸಮ್ಮೇಳನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ವರ್ಚುವಲ್ ಸಭೆಯಲ್ಲಿ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಮೊಹಮ್ಮದ್ ಹನೀಫ್ ಮತ್ತು ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗಯಾವಲಿ ಭಾಗವಹಿಸಿದ್ದರು ಎಂದು ಚೀನಾದ ವಿದೇಶಾಂಗ ಸಚಿವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ. ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಸಭೆಯಲ್ಲಿ ಭಾಗವಹಿಸಲಿಲ್ಲ. ಹೀಗಾಗಿ ಸಭೆಯಲ್ಲಿ ಪಾಕಿಸ್ತಾನದ ಆರ್ಥಿಕ ವ್ಯವಹಾರಗಳ ಸಚಿವ ಮಖ್ದೂಮ್ ಖುಸ್ರೊ ಬಕ್ತಿಯಾರ್ ಪ್ರತಿನಿಧಿಸಿದ್ದರು ಎಂದು ತಿಳಿದುಬಂದಿದೆ.
ನಾಲ್ಕು ದೇಶಗಳನ್ನು ಒಳಗೊಂಡ ಮೊದಲ ಸಭೆಯನ್ನುದ್ದೇಶಿಸಿ ಮಾತನಾಡಿದ ವಾಂಗ್, “ಎಲ್ಲಾ ದೇಶಗಳು ಒಟ್ಟಾಗಿ ಏಕತೆಯಿಂದ ಕೊರೋನಾ ವೈರಸ್ ವಿರುದ್ಧ ಹೋರಾಡಬೇಕು. ಕೊರೋನಾ ಇತ್ತೀಚಿನ ದಿನಗಳಲ್ಲಿ ರಾಜಕೀಕರಣಗೊಳ್ಳುತ್ತಿದೆ. ಈ ಕಳಂಕವನ್ನು ಮೊದಲು ತಪ್ಪಿಸಬೇಕು. ಈ ವಿಚಾರದಲ್ಲಿ ವಿಶ್ವಸಂಸ್ಥೆಯನ್ನು ಬೆಂಬಲಿಸಬೇಕು. ಜಾಗತಿಕ ಆರೋಗ್ಯ ಸಮುದಾಯವನ್ನು ಜಂಟಿಯಾಗಿ ನಿರ್ಮಿಸುವಲ್ಲಿ ಶ್ರಮಿಸಬೇಕು ಎಂಬ ನಾಲ್ಕು ಕ್ರಿಯಾ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ.
ಕೊರೋನಾ ವಿಚಾರದಲ್ಲಿ ವಿಶ್ವಸಂಸ್ಥೆಯ ಕಾರ್ಯ ವೈಖರಿ ವಿರುದ್ಧ ಅಸಮಾಧಾನಗೊಂಡಿದ್ದ ಅಮೆರಿಕ ಈ ತಿಂಗಳ ಆರಂಭದಲ್ಲೇ ವಿಶ್ವಸಂಸ್ಥೆಯಿಂದ ಹಿಂದೆ ಸರಿಯುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಕೊರೋನಾ ವೈರಸ್ ಅಮೆರಿಕದಲ್ಲಿ ಉಲ್ಭಣಗೊಂಡಿದ್ದ ಸಂದರ್ಭದಲ್ಲೂ ಡೊನಾಲ್ಡ್ ಟ್ರಂಪ್ ಅವರ ಈ ನಿರ್ಧಾರ ಇಡೀ ವಿಶ್ವಕ್ಕೆ ಅಚ್ಚರಿ ಮೂಡಿಸಿತ್ತು. ಆದರೆ, ಈ ನಡುವೆ ವಿಶ್ವಸಂಸ್ಥೆಗೆಬೆಂಬಲವಾಗಿ ನಿಲ್ಲಬೇಕು ಎಂಬ ಚೀನಾ ನಡೆ ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ವರ್ಷಾಂತ್ಯದಲ್ಲಿ ಚೀನಾದ ವುಹಾನ್ ನಗರದಲ್ಲಿ ಹುಟ್ಟಿಕೊಂಡ ಕೊರೋನಾ ವೈರಸ್ ಸ್ಫೋಟಕ್ಕೆ ಸಂಬಂಧಿಸಿದಂತೆ WHO ಚೀನಾದೊಂದಿಗೆ ಕೈಜೋಡಿಸಿದೆ ಎಂಬುದು ಅಮೆರಿಕ ಆರೋಪ. ಇದೇ ಕಾರಣಕ್ಕೆ ಅಮೆರಿಕ ವಿಶ್ವಸಂಸ್ಥೆಯಿಂದ ಹೊರಗುಳಿಯುವ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗುತ್ತಿದೆ.
ಇದಲ್ಲದೆ ಸಭೆಯಲ್ಲಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಕುರಿತು ಮಾತನಾಡಿರುವ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, “ಟ್ರಾನ್ಸ್-ಹಿಮಾಲಯನ್ ಕನೆಕ್ಟಿವಿಟಿ ನೆಟ್ವರ್ಕ್ (ಟಿಹೆಚ್ಸಿಎನ್) ನಿರ್ಮಾಣವನ್ನು ಚೀನಾ ಸಕ್ರಿಯವಾಗಿ ಉತ್ತೇಜಿಸುತ್ತಿದೆ. ಈ ಕಾರಿಡಾರ್ ಅನ್ನು ಅಫ್ಘಾನಿಸ್ತಾನಕ್ಕೆ ವಿಸ್ತರಿಸಲು ಬೆಂಬಲಿಸುತ್ತೇವೆ ಮತ್ತು ಪ್ರಾದೇಶಿಕ ಸಂಪರ್ಕದ ಲಾಭಾಂಶವನ್ನು ಮತ್ತಷ್ಟು ಸಡಿಲಿಸುತ್ತೇವೆ" ಎಂದು ಆಶ್ವಾಸನೆ ನೀಡಿದ್ದಾರೆ.
ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು 2013 ರಲ್ಲಿ ಅಧಿಕಾರಕ್ಕೆ ಬಂದಾಗ ಪ್ರಾರಂಭಿಸಿದ ಬಹು-ಶತಕೋಟಿ ಡಾಲರ್ ಉಪಕ್ರಮವಾಗಿದೆ. ಇದು ಆಗ್ನೇಯ ಏಷ್ಯಾ, ಮಧ್ಯ ಏಷ್ಯಾ, ಕೊಲ್ಲಿ ಪ್ರದೇಶ, ಆಫ್ರಿಕಾ ಮತ್ತು ಯುರೋಪ್ಗಳನ್ನು ಭೂ ಮತ್ತು ಸಮುದ್ರ ಮಾರ್ಗಗಳ ಜಾಲದೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ : ಲಾಹೋರ್ ಗುರುದ್ವಾರವನ್ನು ಮಸೀದಿಯಾಗಿ ಪರಿವರ್ತಿಸಲು ಮುಂದಾಗಿರುವ ಪಾಕಿಸ್ತಾನ; ಪ್ರತಿಭಟನೆ ದಾಖಲಿಸಿದ ಭಾರತ
ಇದು 60 ಬಿಲಿಯನ್ ಯುಎಸ್ ಡಾಲರ್ ಮೊತ್ತದ ಪ್ರಮುಖ ಯೋಜನೆಯಾಗಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮೂಲಕ ಆರ್ಥಿಕ ಕಾರಿಡಾರ್ ಹಾದು ಹೋಗಲಿದೆ. ಇದೇ ಕಾರಣಕ್ಕೆ ಕಳೆದ ಹಲವು ವರ್ಷಗಳಿಂದ ಭಾರತ ಸರ್ಕಾರ ಈ ಯೋಜನೆಯನ್ನು ವಿರೋಧಿಸುತ್ತಲೇ ಬಂದಿದೆ. ಈ ನಡುವೆ ಸೋಮವಾರ ಚೀನಾ ಸರ್ಕಾರ ಭಾರತದ ನೆರೆಯ ನಾಲ್ಕೂ ದೇಶಗಳ ಜೊತೆಗೆ ಜಂಟಿ ಅಧಿವೇಶನ ನಡೆಸಿರುವುದು ಭಾರತ ಪಾಲಿಗೆ ಕಳವಳಕಾರಿಯಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
Published by:
MAshok Kumar
First published:
July 28, 2020, 11:31 AM IST