ಚೀನಾದ ಆಗಸದಲ್ಲಿ ಡ್ರೋನ್ ಹಕ್ಕಿಗಳ ಹಿಂಡು; ಇದರ ಟಾರ್ಗೆಟ್ ಮುಸ್ಲಿಮರಾ?


Updated:August 21, 2018, 3:54 PM IST
ಚೀನಾದ ಆಗಸದಲ್ಲಿ ಡ್ರೋನ್ ಹಕ್ಕಿಗಳ ಹಿಂಡು; ಇದರ ಟಾರ್ಗೆಟ್ ಮುಸ್ಲಿಮರಾ?

Updated: August 21, 2018, 3:54 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 21): ಚೀನಾದ ದೇಶದ ನಾಲ್ಕೈದು ಪ್ರಾಂತ್ಯಗಳಲ್ಲಿ ಇತ್ತೀಚೆಗೆ ಡ್ರೋನ್ ಹಕ್ಕಿಗಳ ಹಾರಾಟ ಕಂಡುಬರುತ್ತಿದೆ. ನೋಡಲು ಥೇಟ್ ನೈಜ ಹಕ್ಕಿಗಳಂತೆಯೇ ಇರುವ ಹಾಗೂ ವರ್ತಿಸುವ ಈ ಡ್ರೋನ್ ಹಕ್ಕಿಗಳ ಬಗ್ಗೆ ದೊಡ್ಡದೊಡ್ಡ ಕಥೆಗಳೇ ಹೆಣೆದುಕೊಳ್ಳುತ್ತಿವೆ. ಅಲ್ಪಸಂಖ್ಯಾತರು, ಅದರಲ್ಲೂ ಮುಸ್ಲಿಮರ ಮೇಲೆ ನಿಗಾ ಇಡಲು ಚೀನಾ ಸರಕಾರ ಈ ಮೆಷಿನ್ ಹಕ್ಕಿಗಳನ್ನ ಛೂ ಬಿಟ್ಟಿದೆ ಎನ್ನಲಾಗಿದೆ. ಕ್ಸಿನ್​ಜಿಯಾಂಗ್ ಪ್ರದೇಶದಲ್ಲಿ ಈ ಡ್ರೋನ್​ಗಳ ಹಾರಾಟ ಹೆಚ್ಚಾಗಿರುವುದು ಈ ಮಾತಿಗೆ ಪುಷ್ಟಿ ಕೊಟ್ಟಿದೆ. ಚೀನಾಗೆ ತುಸು ತಲೆನೋವಾಗಿರುವ ಉಯ್ಗುರ್ ಮುಸ್ಲಿಮರು ಹೆಚ್ಚಾಗಿ ನೆಲಸಿರುವುದು ಇದೇ ಕ್ಸಿನ್​ಜಿಯಾಂಗ್ ಪ್ರಾಂತ್ಯದಲ್ಲಿ. ಬಹಳಷ್ಟು ವರ್ಷಗಳಿಂದ ಇಲ್ಲಿನ ಮುಸ್ಲಿಮರು ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ ಮುಂದಿಟ್ಟು ಹೋರಾಟಗಳನ್ನ ಮಾಡುತ್ತಾ ಬಂದಿದ್ದಾರೆ; ಹಿಂಸಾಚಾರಗಳನ್ನೂ ನಡೆಸಿಕೊಂಡು ಬರುತ್ತಿದ್ದಾರೆ. ಚೀನಾ ಕೂಡ ಅವರ ಹೋರಾಟವನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕುತ್ತಾ ಬರುತ್ತಿದೆ. ತತ್​ಪರಿಣಾಮವಾಗಿ ಉಯ್ಗುರ್ ಮುಸ್ಲಿಮರ ಪ್ರತ್ಯೇಕತಾ ಕೂಗು ದಿನೇದಿನೇ ಕ್ಷೀಣಿಸುತ್ತಾ ಬರುತ್ತಿದೆ. ಆದರೆ, ಇಷ್ಟಕ್ಕೇ ರಿಲ್ಯಾಕ್ಸ್ ಆಗಲು ಚೀನಾವೇನೂ ಭಾರತವಲ್ಲ. ಕ್ಸಿನ್​ಜಿಯಾಂಗ್ ಪ್ರಾಂತ್ಯದಲ್ಲಿ ಮತ್ತೆಂದೂ ಪ್ರತಿರೋಧಗಳು ವ್ಯಕ್ತವಾಗಬಾರದು ಎಂಬ ಮುಂಜಾಗ್ರತೆಯಾಗಿ ಚೀನಾ ಸರಕಾರವು ಡ್ರೋನ್ ಹಕ್ಕಿಗಳ ಸೇನೆಯನ್ನೇ ನಿರ್ಮಿಸಿದೆ. ಇದಕ್ಕೆ ಆಪರೇಷನ್ ಡವ್ ಎಂದು ಹೆಸರಿಡಲಾಗಿದೆ.

ಹೇಗೆ ಕಾರ್ಯನಿರ್ವಹಿಸುತ್ತದೆ?

ಮೊದಲೆ ಹೇಳಿದಂತೆ ಈ ಡ್ರೋನ್ ಹಕ್ಕಿಗಳು ನೋಡಲು ನಿಜವಾದ ಹಕ್ಕಿಗಳಂತೆಯೇ ಇರುತ್ತವೆ. ತುಸು ದೂರದಿಂದ ನೋಡಿದರೆ ಯಾರಿಗೂ ವ್ಯತ್ಯಾಸ ಗೊತ್ತಾಗದಷ್ಟು ನೈಜವಾಗಿದೆ ಈ ಡ್ರೋನ್ ಹಕ್ಕಿಗಳು. ನಿಜವಾದ ಹಕ್ಕಿಗಳಂತೆಯೇ ರೆಕ್ಕೆ ಬಡಿಯುತ್ತವೆ. ಬ್ಯಾಟರಿಯಿಂದ ಸಾಗುವ ಈ ಕೃತಕ ಹಕ್ಕಿಗಳು ಕೆಲ ಗಂಟೆಗಳಷ್ಟೇ ಹಾರಾಟ ನಡೆಸಬಲ್ಲವು. ಹೀಗಾಗಿ, ಇವಕ್ಕೆ ನಿರ್ದಿಷ್ಟ ಗುರಿ ಕೊಟ್ಟು ಹಾರಿಬಿಡಲಾಗುತ್ತದೆ. ಇದರ ಯಾಂತ್ರಿಕ ಶಬ್ದ ಹೊರಹೊಮ್ಮುವುದೂ ಕೂಡ ನಗಣ್ಯವೇ. ನಿಜವಾದ ಹಕ್ಕಿಗಳ ಹಿಂಡಿಗೆ ಈ ಡ್ರೋನ್ ಹಕ್ಕಿಯನ್ನು ಹಾರಿಸಿ ಪರೀಕ್ಷಿಸಲಾಗಿದೆ. ಆ ಹಕ್ಕಿಗಳಿಗೂ ಅನುಮಾನವಾಗದಷ್ಟು ನೈಜವಾಗಿದೆ ಈ ಡ್ರೋನ್ ಹಕ್ಕಿಗಳು. ಬಹಳ ಸೂಕ್ಷ್ಮವಿರುವ ಪ್ರಾಣಿಗಳ ಸಮೀಪವೂ ಈ ಕೃತಕ ಹಕ್ಕಿಗಳನ್ನ ಹಾರಿಸಿ ಪರೀಕ್ಷೆಯಲ್ಲಿ ಪಾಸ್ ಮಾಡಲಾಗಿದೆ.

ಈ ಡ್ರೋನ್​ಗಳಲ್ಲಿ ಹೈಡೆಫಿನಿಷನ್ ಕ್ಯಾಮೆರಾ ಇರುತ್ತದೆ. ಫೇಸ್ ರೆಕಗ್ನಿಷನ್ ತಂತ್ರಜ್ಞಾನವನ್ನೂ ಈ ಡ್ರೋನ್​ಗಳಿಗೆ ಅಳವಡಿಸಲಾಗಿರುತ್ತದೆ. ಇದು ಜನರ ಚಲನವಲನಗಳ ಮೇಲೆ ನಿಗಾ ಇಡಬಲ್ಲುದು. ಇವು ನೈಜ ಹಕ್ಕಿಗಳಂತೆ ವರ್ತಿಸುವುದರಿಂದ ರೇಡಾರ್ ಮೊದಲಾದವುಗಳನ್ನ ಏಮಾರಿಸಬಹುದು.

ಭಾರತಕ್ಕೆ ಡೇಂಜರ್..?
ಚೀನಾದ ಈ ಡ್ರೋನ್ ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಿಗೆ ಸರಬರಾಜಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಪಾಕಿಸ್ತಾನಕ್ಕೆ ಸಿಕ್ಕರೆ, ಭಾರತದ ಗಡಿಭಾಗದೊಳಗೆ ಡ್ರೋನ್ ಹಕ್ಕಿಗಳನ್ನ ಹಾರಿಸಿ ಸೇನಾ ನೆಲೆ ಮೊದಲಾದ ಸೂಕ್ಷ್ಮ ವಿವರಗಳನ್ನ ಕಲೆಹಾಕಬಹುದಾಗಿದೆ. ಹೀಗಾಗಿ, ಭಾರತವು ಈ ವಿಚಾರದಲ್ಲಿ ಸದಾ ಜಾಗ್ರತೆಯಿಂದಲೇ ಇರಬೇಕಾಗುತ್ತದೆ.
Loading...

ಇನ್ನು, ಇಂಥ ಡ್ರೋನ್​ಗಳನ್ನು ಶತ್ರು ದೇಶಗಳೂ ತಯಾರಿಸಿ ತಮ್ಮ ಮೇಲೆ ಛೂ ಬಿಡಬಹುದೆಂಬ ಅಂದಾಜು ಚೀನಾಗೂ ಇದೆ. ಹೀಗಾಗಿ, ಈ ಡ್ರೋನ್​ಗಳ ಜಾಡುಹಿಡಿಯುವ ವ್ಯವಸ್ಥೆಯನ್ನ ಕಂಡುಹಿಡಿಯಲು ಚೀನಾ ಪ್ರಯತ್ನಿಸುತ್ತಿದೆ.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...