China Troops Shelters: ಲಡಾಕ್ ಗಡಿಯಲ್ಲಿ ಸೇನಾ ಶಿಬಿರ ನಿರ್ಮಾಣಕ್ಕೆ ಮುಂದಾದ ಚೀನಾ; 8 ಕಡೆ 84 ಟೆಂಟ್​​ಗಳು!

ಚೀನಾ ಹೊಸ ಶೆಲ್ಟರ್ ಗಳ ನಿರ್ಮಾಣಕ್ಕೆ ಮುಂದಾಗಿದೆ. ಚೀನಾದ ಈ ಬೆಳವಣಿಗೆಯಿಂದ ಅದು ತನ್ನ ಸೇನೆಯನ್ನು ಹಿಂಪಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ. ದೀರ್ಘ ಸಮಯದವರೆಗೆ ಚೀನಾ ತನ್ನ ಸೈನಿಕರನ್ನು ನಿಯೋಜಿಸಲು ಮುಂದಾಗಿದೆ ಎಂದು ವರದಿಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ: ನೆರೆಯ ಡ್ರ್ಯಾಗನ್ ದೇಶ ಚೀನಾ (China) ಮತ್ತೆ ಭಾರತ (india)ದ ಗಡಿಯಲ್ಲಿ ಸಕ್ರಿಯವಾಗುತ್ತಿದೆ. 17 ತಿಂಗಳ ಮೊದಲು ಪೂರ್ವ ಲಡಾಕ್ (Ladakh) ನಲ್ಲಿಯ ಸಂಘರ್ಷದ ಬಳಿಕ ಮತ್ತೆ ಚೀನಾ ಗಡಿ ಬಳಿಯಲ್ಲಿಯೇ ತನ್ನ ಸೇನಾ ಬಂಕರ್ ಗಳ ನಿರ್ಮಾಣಕ್ಕೆ ಮುಂದಾಗುತ್ತಿದೆ. ಗುಪ್ತಚರ ಮಾಹಿತಿ ಪ್ರಕಾರ, ಚೀನಾ ಪೂರ್ವ ಲಡಾಕ್ ಬಳಿಯಲ್ಲಿಯ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ-LAC Border)ಯ ಎಂಟು ಸ್ಥಳಗಳಲ್ಲಿ ಹೊಸ 84 ಮ್ಯಾಡ್ಯೂಲರ್ ಕಂಟೇನರ್ (ತಾತ್ಕಾಲಿಕ ಟೆಂಟ್) ನಿರ್ಮಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದು ವರದಿಯಾಗಿದೆ.

  ಹೊಸ ಶೆಲ್ಟರ್ ಗಳ ನಿರ್ಮಾಣ

  ಮಾಧ್ಯಮಗಳ ವರದಿ ಪ್ರಕಾರ, ಪೀಪುಲ್ಸ್ ಲಿಬರೇಶನ್ ಆರ್ಮಿ (People's Liberation Army) ಉತ್ತರ ಕಾರಾಕೋರಮ್ ಸಮೀಪ ವಹಾಬ್ ಜಿಲ್ಗಾದಿಂದ ಪಿಯು, ಹಾಟ್ ಸ್ಪ್ರಿಂಗ್ಸ್, ಚಂಗ್ ಲಾ, ನಾಶಿಗಾಂಗ್, ಮಾನ್ಜಾ ಮತ್ತು ಚುರೂಪ್ ವರೆಗೆ ಸೈನಿಕರ ಶೆಲ್ಟರ್ ನಿರ್ಮಿಸುತ್ತಿದೆ. ಈಗಾಗಲೇ ಅಲ್ಲಿ ಹಳೆಯ ಟೆಂಟ್ ಗಳಿದ್ರೂ ಮತ್ತೆ ಹೊಸ ಶೆಲ್ಟರ್ ಗಳ ನಿರ್ಮಾಣಕ್ಕೆ ಮುಂದಾಗಿದೆ. ಚೀನಾದ ಈ ಬೆಳವಣಿಗೆಯಿಂದ ಅದು ತನ್ನ ಸೇನೆಯನ್ನು ಹಿಂಪಡೆಯುವುದು ಅನುಮಾನ ಎಂದು ಹೇಳಲಾಗುತ್ತಿದೆ. ದೀರ್ಘ ಸಮಯದವರೆಗೆ ಚೀನಾ ತನ್ನ ಸೈನಿಕರನ್ನು ನಿಯೋಜಿಸಲು ಮುಂದಾಗಿದೆ ಎಂದು ವರದಿಯಾಗಿದೆ.

  ಗಡಿಯಲ್ಲಿ ಎರಡೂ ದೇಶಗಳ ಸೈನಿಕರ ನಿಯೋಜನೆ 

  ಭಾರತ ಮತ್ತು ಚೀನಾ ಎರಡೂ ರಾಷ್ಟ್ರಗಳು ಪೂರ್ವ ಲಡಾಕ್ ನಲ್ಲಿ ಸುಮಾರು 50 ಸಾವಿರ ಸೈನಿಕರನ್ನು ನಿಯೋಜಿಸಿವೆ. ಇಂತಹ ಅಸಹಜ ಪರಿಸ್ಥಿತಿಯಲ್ಲಿ ಎರಡೂ ರಾಷ್ಟ್ರಗಳು ನಿಯಮಿತ ರೂಪದಲ್ಲಿ ಸೈನಿಕರನ್ನು ಬದಲಿಸಿಕೊಳ್ಳುತ್ತಿವೆ. ಈ ಪ್ರದೇಶದಲ್ಲಿಯೇ ಚೀನಾ ಕೆಲ ಏರ್ ಸ್ಟ್ರಿಪ್ಸ್, ಹೆಲಿಪ್ಯಾಡ್ ಗಳನ್ನು ನಿರ್ಮಿಸಿಕೊಂಡಿದೆ. ಇವರ ಸೇನಾ ತುಕಡಿಗಳು ಲಡಾಕ್ ನಿಂದ ಅರುಣಾಚಲ ಪ್ರದೇಶದವರೆಗೂ ಹರಡಿಕೊಂಡಿವೆ. ಇದರ ಜೊತೆಗೆ ಚೀನಾ ಇಲ್ಲಿ ಏರ್ ಬೇಸ್ ಗಳನ್ನು ಅಪ್ಗ್ರೇಡ್ ಮಾಡಿಕೊಂಡಿದೆ.

  2020ರಲ್ಲಿ ಎರಡೂ ದೇಶಗಳ ನಡುವೆ ಮಹಾ ಸಂಘರ್ಷ 

  2020 ಜೂನ್ 15ರಂದು ಎರಡೂ ದೇಶಗಳ ನಡುವೆ ಮಹಾ ಸಂಘರ್ಷ ಏರ್ಪಟ್ಟಿತ್ತು. ಜೂನ್ 15-16ರ ಮಧ್ಯ ರಾತ್ರಿ ಚೀನಾ ಸೈನಿಕರು ವೈ-ಜಂಕ್ಷನ್ ಬಳಿಯ ಅಬ್ಸವೇರ್ಷನ್ ಪೋಸ್ಟ್ ಬಳಿ ಅತಿಕ್ರಮಪ್ರವೇಶಕ್ಕೆ ಮುಂದಾಗಿದ್ದರು. ಚೀನಿಯರನ್ನು ನಮ್ಮ ಸೈನಿಕರು ಮುಂದಾದಾಗ ಸಂಘರ್ಷ ಏರ್ಪಟ್ಟಿತ್ತು. ಈ ಸಂಘರ್ಷದಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ವೀರಮರಣ ಅಪ್ಪಿದ ಸೈನಿಕರ ನೆನಪಿಗಾಗಿ ಅಂತರಾಷ್ಟ್ರೀಯ ಗಡಿ ಗಲ್ವಾನದಲ್ಲಿಯೇ ಸ್ಮಾರಕ ನಿರ್ಮಾಣ ಮಾಡುವ ಮೂಲಕ ಗೌರವ ಸಲ್ಲಿಸಲಾಗಿದೆ. ಈ ಸಂಘರ್ಷದ ಬಳಿಕ ಗಡಿಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಶತ್ರು ದೇಶಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದರು.

  ಇದನ್ನೂ ಓದಿ: Amazon| ಅಮೆಜಾನ್ ಅನ್ನು ಈಸ್ಟ್​ ಇಂಡಿಯಾ ಕಂಪೆನಿಗೆ ಹೋಲಿಕೆ ಮಾಡಿ ಟೀಕಿಸಿದ ಆರ್​ಎಸ್​ಎಸ್​ ಮುಖವಾಣಿ ಪಾಂಚಜನ್ಯ

  ಹುತಾತ್ಮ ಯೋಧರು

  ಕರ್ನಲ್ ಬಿ. ಸಂತೋಷ್ ಬಾಬು, ಹವಾಲ್ದಾರ್ ಸುನಿಲ್ ಕುಮಾರ್, ನಾಯಬ್ ಸುಬೇದಾರ್ ಸತ್ನಮ್ ಸಿಂಗ್, ನಾಯಬ್ ಸುಬೇದಾರ್ ಮಂದೀಪ್ ಸಿಂಗ್, ಕಾನ್ಸ್ ಟೇಬಲ್ ಕುಂದನ್ ಕುಮಾರ್, ಕಾನ್ಸ್ ಟೇಬಲ್ ಅಮನ್ ಕುಮಾರ್, ದೀಪಕ್ ಕುಮಾರ್, ಕಾನ್ಸ್ ಟೇಬಲ್ ಚಂದನ್ ಕುಮಾರ್, ಸಿಪಾಯಿ ಸಿ.ಕೆ.ಪ್ರಧಾನ್, ನಾಯಬ್ ಸುಬೇದಾರ್ ನಂದುರಾಮ್, ಕಾನ್ಸ್ ಟೇಬಲ್ ಗುರ್ತೇಜ್ ಸಿಂಗ್, ಕಾನ್ಸ್ ಟೇಬಲ್ ಗಣೇಶ ಕುಂಜಮ್, ಕಾನ್ಸ್ ಟೇಬಲ್ ರಾಜೇಶ್ ಒರಾನ್,  ಸಿಪಾಯಿ ಅಂಕುಷ್, ಕಾನ್ಸ್ ಟೇಬಲ್ ಗುರ್ವಿಂದರ್ ಸಿಂಗ್, ಕಾನ್ಸ್ ಟೇಬಲ್ ಜೈಕಿಶೋರ್ ಸಿಂಗ್, ಹವಾಲ್ದಾರ್ ಬಿಪುಲ್ ರಾಯ್, ಹವಾಲ್ದಾರ್ ಕೆ.ಪಳನಿ ಕಾನ್ಸ್ ಟೇಬಲ್ ಗಣೇಶ ರಾಮ್, ಕಾನ್ಸ್ ಟೇಬಲ್ ಕೆ.ಕೆ. ಓಜಾ, ಹುತಾತ್ಮ ಯೋಧರಾಗಿದ್ದಾರೆ.

  ವರದಿ: ಮಹ್ಮದ್​ ರಫೀಕ್​​ ಕೆ
  Published by:Kavya V
  First published: