ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎದುರೇ ಎದ್ದು ನಿಂತು "ನೀವು ನಿಮ್ಮ ಖಾಲಿ ಮಾತುಗಳಿಂದ ಅಮೂಲ್ಯವಾದ ನನ್ನ ಬಾಲ್ಯವನ್ನು ಕಸಿದು ಬಿಟ್ಟಿರಿ” ಎಂದು ಅಳುತ್ತಲೇ ದಿಟ್ಟತನದಿಂದ ಹೇಳಿದ 16ರ ಪೋರಿ ವಿಶ್ವ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ ಇಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲಿನ ಸನಿಹದಲ್ಲಿರುವ ಡೊನಾಲ್ಡ್ ಟ್ರಂಪ್ಗೆ ಅವರು ಬಳಸಿದ ಪದಗಳನ್ನೇ ಬಳಸಿ ಟ್ವೀಟ್ ಮಾಡುವ ಮೂಲಕ, ಭರ್ಜರಿ ಟ್ರೋಲ್ ಮಾಡಿ ಸೇಡು ತೀರಿಸಿಕೊಂಡಿದ್ದಾರೆ.
ಪ್ರತಿವರ್ಷದಂತೆ ಸೆಪ್ಟೆಂಬರ್. 24 ರಂದು ಸಹ ವಿಶ್ವಸಂಸ್ಥೆ ನ್ಯೂಯಾರ್ಕ್ ನಗರದಲ್ಲಿ ವಿಶ್ವ ಹವಾಮಾನ ಶೃಂಗಸಭೆ ಆಯೋಜಿಸಿತ್ತು. ಈ ಸಮ್ಮೇಳನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ವಿಶ್ವಸಂಸ್ಥೆಯಲ್ಲಿನ ಸದಸ್ಯ ರಾಷ್ಟ್ರದ ಎಲ್ಲಾ ಪ್ರಧಾನಿಗಳು, ಅಧ್ಯಕ್ಷರುಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಏರುತ್ತಿರುವ ತಾಪಮಾನ ಹಾಗೂ ಅಭಿವೃದ್ಧಿಯ ಕುರಿತು ಚರ್ಚೆ ನಡೆಸಿದರು. ಆದರೆ, ಕೊನೆಯಲ್ಲಿ ಮಾತನಾಡಿದ ಆ 16ರ ಪೋರಿ ತಮಗೆ ಇಷ್ಟು ದೊಡ್ಡ ಆಘಾತವನ್ನು ನೀಡುತ್ತಾಳೆ ಎಂದು ಯಾರೆಂದರೆ ಯಾರೂ ಸಹ ಊಹಿಸಿರಲಿಲ್ಲ.
2019ರ ವಿಶ್ವಸಂಸ್ಥೆ ಹವಾಮಾನ ಶೃಂಗಸಭೆಯಲ್ಲಿ ಮಾತನಾಡಿದ ಗ್ರೇಟಾ ಥನ್ಬರ್ಗ್ ಮಾತು ಆರಂಭಿಸುತ್ತಿದ್ದಂತೆ, “ನೀವು ನಿಮ್ಮ ಖಾಲಿ ಮಾತುಗಳಿಂದ ನನ್ನ ಕನಸುಗಳನ್ನು, ನನ್ನ ಬಾಲ್ಯವನ್ನು ಕಸಿದುಕೊಂಡು ಬಿಟ್ಟಿರಿ. ಇಡೀ ಪರಿಸರದ ವ್ಯವಸ್ಥೆ ಇಂದು ಕುಸಿಯುತ್ತಿದೆ. ಜನರು ಸಾಯುತ್ತಿದ್ದಾರೆ, ನಾವೆಲ್ಲರೂ ಸಾಮೂಹಿಕವಾಗಿ ಅಳಿವಿನ ಅಂಚಿನ ಆರಂಭದಲ್ಲಿದ್ದೇವೆ. ಆದರೆ, ನೀವಿನ್ನೂ ಹಣ, ಶಾಶ್ವತ ಆರ್ಥಿಕತೆ ಎಂಬ ಪೊಳ್ಳು ಖಾಲಿ ಮಾತುಗಳನ್ನೇ ಆಡುತ್ತಿದ್ದೀರಿ.
ಕಳೆದ 30 ವರ್ಷದಿಂದ ವಿಜ್ಞಾನ ಈ ಪರಿಸರವನ್ನು ಹಾಳು ಮಾಡಿದ್ದು ಸಾಕು. ಇದು ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ಎಲ್ಲವೂ ಕೈಮೀರಿ ಹೋಗಲಿದೆ. ಇನ್ನಾದರೂ ಎಚ್ಚೆತ್ತುಕೊಳ್ಳಿ. ರಾಜಕೀಯವನ್ನು ನಿಲ್ಲಿಸಿ ಎಲ್ಲರೂ ಒಟ್ಟಾಗಿ ಪರಿಸರವನ್ನು ಉಳಿಸಲು ಮುಂದಾಗಿ” ಎಂದು ಆಕೆ ಇಡೀ ವಿಶ್ವಕ್ಕೆ ಕೇಳುವಂತೆ ಮೊರೆ ಇಟ್ಟಿದ್ದಳು.
ಈ ಘಟನೆಯ ಬಳಿಕ ಇಡೀ ವಿಶ್ವವೇ ಗ್ರೇಟಾ ಥನ್ಬರ್ಗ್ ಕಡೆಗೆ ತಿರುಗಿ ನೋಡಿತ್ತು. ಇದನ್ನ ಗಮನಿಸಿದ್ದ ಟೈಮ್ ಮ್ಯಾಗಜಿನ್ 2019ರಲ್ಲಿ ಟೈಮ್ ಮ್ಯಾಗಜಿನ್ನ ವರ್ಷದ ವ್ಯಕ್ತಿಯಾಗಿ ಗ್ರೇಟಾ ಥನ್ಬರ್ಗ್ ಅವರನ್ನು ಆಯ್ಕೆ ಮಾಡಿ ಗೌರವಿಸಿತ್ತು. ಆ ಮೂಲಕ ಪರಿಸರದ ಕುರಿತು ಕಾಳಜಿಗೆ ಮಹತ್ವ ನೀಡಿತ್ತು. ಈ ವೇಳೆ ವಿಶ್ವದ ದೊಡ್ಡ ದೊಡ್ಡ ನಾಯಕರೂ ಸಹ ಗ್ರೇಟಾ ಥನ್ಬರ್ಗ್ಗೆ ಶುಭಾಶಯಗಳನ್ನು ತಿಳಿಸಿದ್ದರು. ಆದರೆ ಟ್ರಂಪ್ ಮಾತ್ರ ಚಿಕ್ಕ ಹುಡುಗಿಯ ವಿರುದ್ಧ ‘ನಿನ್ನ ಅಹಂಕಾರ ಬಿಡು’ ಎಂದು ಟ್ವೀಟ್ ಮಾಡಿ ಅವಮಾನ ಮಾಡಿದ್ದರು.
11 ತಿಂಗಳಿನಿಂದ ತಾಳ್ಮೆಯಿಂದ ಕಾಯ್ದಿದ್ದ ಗ್ರೇಟಾ ಥನ್ಬರ್ಗ್ ಅಂದು ಟ್ರಂಪ್ ಬಳಸಿದ್ದ ಪದಗಳನ್ನೇ ಬಳಸಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನೇ ಟ್ರೋಲ್ ಮಾಡಿದ್ದಾರೆ. ಮತ ಎಣಿಕೆ ನಿಲ್ಲಿಸಿ ಎಂದು ಟ್ರಂಪ್ ಮಾಡಿದ್ದ ಟ್ವೀಟ್ಗೆ ಗ್ರೇಟಾ ಇದೇ ರೀತಿಯ ಪ್ರತಿಕ್ರಿಯೆ ನೀಡಿದ್ದಾಳೆ.
“ಎಷ್ಟೊಂದು ಹಾಸ್ಯಾಸ್ಪದ. ಡೊನಾಲ್ಡ್ ತನ್ನ ಕೋಪ ನಿರ್ವಹಣಾ ಸಮಸ್ಯೆಯ ಬಗ್ಗೆ ಕೆಲಸ ಮಾಡಬೇಕು, ನಂತರ ಸ್ನೇಹಿತನೊಂದಿಗೆ ಹಳೆಯ ಹಳೆಯ ಶೈಲಿಯ ಸಿನಿಮಾಗೆ ಹೋಗಬೇಕು! ಚಿಲ್, ಡೊನಾಲ್ಡ್, ಚಿಲ್!” ಎಂದು ಗ್ರೇಟಾ ಥನ್ಬರ್ಗ್ ಟ್ವೀಟ್ ಮಾಡಿದ್ದಾಳೆ.
ಈ ಟ್ವೀಟ್ಗೆ 12 ಲಕ್ಕಕ್ಕೂ ಅಧಿಕ ಜನ ಲೈಕ್ ಮಾಡಿರುವುದಲ್ಲದೇ ಲಕ್ಷಕ್ಕೂ ಅಧಿಕ ಮಂದಿ ಅದನ್ನು ರೀಟ್ವೀಟ್ ಮಾಡಿದ್ದಾರೆ. ಆ ಮೂಲಕ ಗ್ರೇಟಾ ಹೇಳಿಕೆಗೆ ಭಾರೀ ಬೆಂಬಲ ವ್ಯಕ್ತವಾಗಿದೆ.
2019ರ ಡಿಸೆಂಬರ್ನಲ್ಲಿ ಗ್ರೇಟಾ ವಿರುದ್ಧ ಟ್ರಂಪ್ “ಎಷ್ಟೊಂದು ಹಾಸ್ಯಾಸ್ಪದ. ಗ್ರೇಟಾ ತನ್ನ ಕೋಪ ನಿರ್ವಹಣಾ ಸಮಸ್ಯೆಯ ಬಗ್ಗೆ ಕೆಲಸ ಮಾಡಬೇಕು, ನಂತರ ಸ್ನೇಹಿತನೊಂದಿಗೆ ಹಳೆಯ ಹಳೆಯ ಶೈಲಿಯ ಸಿನಿಮಾಗೆ ಹೋಗಬೇಕು! ಚಿಲ್, ಗ್ರೇಟಾ, ಚಿಲ್!” ಎಂದು ಟ್ರಂಪ್ ಮಾಡಿದ್ದರು. ಅದಕ್ಕೆ 2 ಲಕ್ಷ ಜನ ಲೈಕ್ ಒತ್ತಿದ್ದರು.
ಈಗ ಗ್ರೇಟಾ ತಿರುಗೇಟಿಗೆ ನೆಟ್ಟಿಗರು ಥ್ರಿಲ್ ಗೊಳಗಾಗಿದ್ದಾರೆ. ಒಂದೆಡೆ ಟ್ರಂಪ್ ಸೋಲುತ್ತಿದ್ದಂತೆ ಇನ್ನೊಂದೆಡೆ ಈ ಟ್ವೀಟ್ ಬಂದಿದ್ದು, ನೂರಾರು ಜನ ಗ್ರೇಟಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ವಿಶ್ವಸಂಸ್ಥೆಯಲ್ಲಿ ಅಮೆರಿಕ ಅಧ್ಯಕ್ಷರ ಎದುರು ನಿಂತು ನನ್ನ ಬಾಲ್ಯವನ್ನೇ ಕಸಿದುಬಿಟ್ಟಿರಿ ಎಂದು ಕಣ್ಣೀರಿಟ್ಟ ಈ 16ರ ಪೋರಿ ಗ್ರೇಟಾ ಥನ್ಬರ್ಗ್ ಯಾರ್ ಗೊತ್ತಾ?
ಇದು ತಪ್ಪು. ನಾನಿಲ್ಲಿ ಇರಬಾರದಾಗಿತ್ತು. ನಾನೀಗ ನನ್ನ ಶಾಲೆಯಲ್ಲಿ, ಸಾಗರದಾಚೆ ಇರಬೇಕಿತ್ತು. ಆದರೂ ನೀವು ನಮ್ಮ ಕಡೆ, ಯುವಜನರ ಕಡೆ ಬರುತ್ತೀರ, ನಿಮ್ಮ ಭರವಸೆ, ನಿರೀಕ್ಷೆಗಳನ್ನು ಹುಡುಕಿಕೊಂಡು. ನಿಮಗೆಷ್ಟು ಧೈರ್ಯ? ನೀವು ನಮ್ಮನ್ನು ವಿಫಲಗೊಳಿಸುತ್ತಿದ್ದೀರಿ. ಆದರೆ ಯುವಜನರು ನಿಮ್ಮ ದ್ರೋಹವನ್ನು ಅರಿಯಲು ಪ್ರಾರಂಭಿಸಿದ್ದಾರೆ.
ಮುಂದಿನ ಪೀಳಿಗೆಗಳ ಎಲ್ಲಾ ಕಣ್ಣುಗಳು ನಿಮ್ಮ ಮೇಲಿವೆ. ಒಂದು ವೇಳೆ ನೀವು ನಮ್ಮನ್ನು ವಿಫಲಗೊಳಿಸುವುದನ್ನು ಆಯ್ಕೆ ಮಾಡಿಕೊಂಡರೆ, ನಾವು ನಿಮ್ಮನ್ನು ಎಂದೆಂದಿಗೂ ಕ್ಷಮಿಸಲಾರೆವು ಎಂದು ಈ ಹಿಂದೆ ವಿಶ್ವಸಂಸ್ಥೆಯಲ್ಲಿ ಗ್ರೇಟಾ ಮಾಡಿದ ಭಾಷಣಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ