ಸುಪ್ರೀಂ ಕೋರ್ಟಿನ (Supreme court) ಆದೇಶದಂತೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ಅಕ್ರಮವಾಗಿ ತಲೆ ಎತ್ತಿದ್ದ ಸೂಪರ್ ಟೆಕ್ ಅಪೆಕ್ಸ್ ಮತ್ತು ಸಿಯಾನಿ ಅವಳಿ ಗೋಪುರಗಳನ್ನು (Twin Tower) ನೆಲಸಮ ಮಾಡಲು ಮೂಹೂರ್ತ ಫಿಕ್ಸ್ ಆಗಿದ್ದ, ಕಾರ್ಯಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ (ಆಗಸ್ಟ್ 28), ಮಧ್ಯಾಹ್ನ 2.30ಕ್ಕೆ ಭಾರಿ ಸ್ಫೋಟಕಗಳನ್ನು ಸಿಡಿಸುವ ಮೂಲಕ ಕಟ್ಟಡ ಧ್ವಂಸ ಕಾರ್ಯ ನಡೆಯಲಿದೆ. ಅವಳಿ ಗೋಪುರಗಳನ್ನು ಕೆಡವಲು (Demolish) ತಂತ್ರಜ್ಞಾನದಿಂದ ಹಿಡಿದು ಕಾರ್ಮಿಕರವರೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ತಿಳಿದಿರುವಂತೆ 103 ಮೀಟರ್ ಮತ್ತು 97 ಮೀಟರ್ ಎತ್ತರವಿರುವ ಈ ಗೋಪುರಗಳನ್ನು (Towers) ಪಲ್ವಾಲ್ (ಹರಿಯಾಣ) ನಿಂದ ತರಿಸಿಕೊಳ್ಳಲಾಗಿರುವ ಡೈನಮೈಟ್, ಎಮಲ್ಷನ್ ಮತ್ತು ಪ್ಲಾಸ್ಟಿಕ್ ಸ್ಫೋಟಕಗಳ ಮಿಶ್ರಣವಿರುವ 3,700 ಕೆಜಿ ಸ್ಫೋಟಕಗಳನ್ನು ಬಳಸಿ ಧ್ವಂಸ ಮಾಡಲಾಗುತ್ತದೆ.
ಹಾಗಾದರೆ ಈ ಸ್ಫೋಟಕಗಳನ್ನು ಯಾರು ಬ್ಲಾಸ್ಟ್ ಮಾಡುತ್ತಾರೆ ಎಂಬ ಪ್ರಶ್ನೆ ಸಹಜವಾಗಿ ಎಲ್ಲರನ್ನೂ ಕಾಡುತ್ತಿದೆ. ಹೌದು ಸ್ಫೋಟಕಗಳನ್ನು ಸಿಡಿಸಲು ಒಬ್ಬ ಬ್ಲಾಸ್ಟರ್ ಅನ್ನು ಎಡಿಫೈಸ್ ಇಂಜಿನಿಯರಿಂಗ್ ಕಂಪನಿ ನಿಯೋಜಿಸಿಕೊಂಡಿದೆ.
ಸ್ಫೋಟಕಗಳನ್ನು ಸಿಡಿಸಲು ಒಬ್ಬ ಬ್ಲಾಸ್ಟರ್ ಚೇತನ್ ದತ್ತಾ ನಿಯೋಜನೆ
ಸೂಪರ್‌ಟೆಕ್ ಟವರ್‌ಗಳನ್ನು ಉರುಳಿಸಲು ಸುಪ್ರೀಂ ಆದೇಶ ನೀಡುತ್ತಿದ್ದ ಹಾಗೇ ಬ್ಲಾಸ್ಟ್ ಮಾಡುವ ಕನಸನ್ನು ಕಂಡಿದ್ದರಂತೆ 49 ವರ್ಷದ ಚೇತನ್ ದತ್ತಾ. ಅವಳಿ ಗೋಪುರಗಳನ್ನು ಕೆಡವಲು ಎಡಿಫೈಸ್ ಇಂಜಿನಿಯರಿಂಗ್ ಕಂಪನಿ ಬ್ಲಾಸ್ಟರ್ ಆಗಿ ಚೇತನ್ ದತ್ತಾ ಅವರನ್ನು ನೇಮಿಸಿಕೊಂಡಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ನೋಯ್ಡಾದಲ್ಲಿ ಸೂಪರ್‌ಟೆಕ್‌ನ ಅವಳಿ ಗೋಪುರಗಳನ್ನು ಕೆಡವಲು ಸುಪ್ರೀಂ ಕೋರ್ಟ್ ಆದೇಶಿಸಿಸುತ್ತಿದ್ದ ಹಾಗೆ, ಬ್ಲಾಸ್ಟರ್ ಚೇತನ್ ದತ್ತಾ, ಕಟ್ಟಡಗಳನ್ನು ಉರುಳಿಸಲು ಗುಂಡಿಯನ್ನು ಒತ್ತುವ ಅವಕಾಶಕ್ಕಾಗಿ ದೇವರಲ್ಲಿ ಬೇಡಿಕೊಂಡಿದ್ದರಂತೆ. ಹರಿಯಾಣದ ಹಿಸಾರ್‌ನವರಾದ ದತ್ತಾ ನನ್ನ ಕನಸು ನನಸಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
"ಈ ಅವಕಾಶಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತಿದ್ದೆ"
"ಸುಪ್ರೀಂ ಕೋರ್ಟ್‌ನ ತೀರ್ಪು ಬಂದಾಗ, ಯಾರೋ ಒಬ್ಬರು ವಾಟ್ಸಾಪ್‌ನಲ್ಲಿ ಸಂದೇಶವನ್ನು ಅದರ ಬಗ್ಗೆ ಫಾರ್ವರ್ಡ್ ಮಾಡಿದ್ದರು. ಆಗಿನಿಂದ ಕಟ್ಟಡವನ್ನು ಬ್ಲಾಸ್ಟ್ ಮಾಡಲು ನನಗೆ ಅವಕಾಶ ಸಿಗಬೇಕೆಂದು ಬಯಸುತ್ತಿದ್ದೆ ಮತ್ತು ದೇವರಲ್ಲೂ ಪ್ರಾರ್ಥಿಸಿದೆ. ಆದರೆ ನಾನು ಆಯ್ಕೆಯಾಗುವ ನಿರೀಕ್ಷೆ ಇರಲಿಲ್ಲ. ಆದರೆ ಕೆಲವು ತಿಂಗಳುಗಳ ನಂತರ ಜುಲೈನಲ್ಲಿ, ಎಡಿಫೈಸ್ ಸ್ಫೋಟಕಗಳನ್ನು ಲೋಡ್ ಮಾಡಲು ನನ್ನನ್ನು ಸಂಪರ್ಕಿಸಿತು. ನನಗೆ ಆಗ ನನ್ನ ಕನಸು ನನಸಾಯಿತು ಎಂಬ ಭಾವನೆ ಮೂಡಿತು"ಎಂದು ಕಟ್ಟಡವನ್ನು ಕೆಡವುವಲ್ಲಿ ತೊಡಗಿರುವ ಸಂಸ್ಥೆಯನ್ನು ನಡೆಸುತ್ತಿರುವ ದತ್ತಾ ಹೇಳಿದರು. ಕಳೆದ ಹತ್ತು ದಿನಗಳಲ್ಲಿ, ನಾವು ಸ್ಫೋಟಕಗಳನ್ನು ಬಹಳ ಎಚ್ಚರಿಕೆಯಿಂದ ಕಟ್ಟಡದೊಳಗೆ ಲೋಡ್ ಮಾಡಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: Building Demolition: 9 ಸೆಕೆಂಡ್ಗಳಲ್ಲಿ ಕೊನೆಯಾಗಲಿದೆ 9 ವರ್ಷಗಳ ಹೋರಾಟ, ಇದು ಅವಳಿ ಕಟ್ಟಡದ ಕತೆ!
"ಧ್ವಂಸ ಕಾರ್ಯ ಯಶಸ್ವಿ ಮತ್ತು ಸುರಕ್ಷಿತವಾಗಿ ನಡೆಯಲಿದೆ"
ಚೇತನ್ ದತ್ತಾ ಬ್ಲಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮೊದಲ ವಸತಿ ಗೋಪುರ ಇದಾಗಿದೆ. "ನಾನು 2002 ರಿಂದ ಈ ವ್ಯವಹಾರದಲ್ಲಿ ತೊಡಗಿಕೊಂಡಿದ್ದೇನೆ. ನಾನು ಉಷ್ಣ ವಿದ್ಯುತ್ ಸ್ಥಾವರಗಳು, ಗಣಿಗಳು ಮತ್ತು ಇತರ ರಚನೆಗಳ ನೆಲಸಮ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ್ದೇನೆ. ಆದರೆ ಇದು ನಾನು ಬ್ಲಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮೊದಲ ವಸತಿ ಕಟ್ಟಡವಾಗಿದೆ" ಎಂದು ಅವರು ಹೇಳಿದರು. "ಕಾರ್ಯಾಚರಣೆಯನ್ನು ಕೈಗೊಳ್ಳಲು ನಾವು ಸಾಕಷ್ಟು ಸಿದ್ಧತೆಗಳನ್ನು ಮಾಡಿದ್ದೇವೆ. ಎಲ್ಲಾ ಸೂಕ್ಷ್ಮ ವಿವರಗಳು ಮತ್ತು ಸಮಸ್ಯೆಗಳ ಬಗ್ಗೆ ಗಮನಹರಿಸಿದ್ದೇವೆ. ಕಟ್ಟಡ ಧ್ವಂಸ ಕಾರ್ಯ ಯಶಸ್ವಿ ಮತ್ತು ಸುರಕ್ಷಿತ ರೀತಿಯಲ್ಲಿ ಕೈಗೊಳ್ಳುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ಅವಳಿ ಗೋಪುರಗಳನ್ನು ಸ್ಫೋಟಿಸಲು 3,700 ಕೆಜಿಗೂ ಹೆಚ್ಚು ಸ್ಫೋಟಕಗಳನ್ನು ಬಳಸಲಾಗುತ್ತಿದೆ. ಸಮೀಪದಲ್ಲಿ ವಾಸಿಸುವ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಹತ್ತಿರದ ಯಾವುದೇ ಕಟ್ಟಡಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು ನಮ್ಮ ಪ್ರಮುಖ ಕಾರ್ಯವಾಗಿದೆ ಎಂದಿದ್ದಾರೆ.
"ಸ್ಫೋಟಕಗಳನ್ನು ತುಂಬಿದ ನಂತರ, ಮೂರು ಬಾರಿ ತಪಾಸಣೆ ಮಾಡಲಾಗಿದೆ. ಸ್ಫೋಟದ ಸಂದರ್ಭದಲ್ಲಿ ಹಾರುವ ಅವಶೇಷಗಳು ಒಂದು ಪ್ರಮುಖ ಕಾಳಜಿಯಾಗಿದ್ದು ಅದನ್ನು ತಡೆಯಲು, ಸ್ಫೋಟದ ಪ್ರದೇಶವನ್ನು ನಾಲ್ಕು ಪದರಗಳ ಕಬ್ಬಿಣದ ಜಾಲರಿ ಮತ್ತು ಎರಡು ಪದರಗಳ ಕಂಬಳಿಯಿಂದ ಮುಚ್ಚಲಾಗಿದೆ. ಇದರಿಂದಾಗಿ ಯಾವುದೇ ಕಲ್ಲುಮಣ್ಣುಗಳು ಹಿಂದೆ ಹಾರುವುದಿಲ್ಲ, ಆದರೆ ಧೂಳು ಮೇಲೇರಬಹುದು," ಎಂದು ಅವರು ಹೇಳಿದರು.
ಡೆಮಾಲಿಷನ್ ಪ್ರಕ್ರಿಯೆಯನ್ನು ವಿವರಿಸಿದ ದತ್ತಾ
ಬ್ಲಾಸ್ಟ್ ಮಾಡುವ ಗುಂಡಿಯನ್ನು ಒತ್ತುವ ಸಂದರ್ಭದಲ್ಲಿ ಕಟ್ಟಡದಿಂದ ಸುಮಾರು 50-70 ಮೀಟರ್ ದೂರದಲ್ಲಿ ಇರಲಾಗುವುದು ಎಂದು ಎಂದು ದತ್ತಾ ವಿವರಿಸಿದ್ದಾರೆ. ಡೆಮಾಲಿಷನ್ ಪ್ರಕ್ರಿಯೆಯನ್ನು ವಿವರಿಸುತ್ತಾ, ದತ್ತಾ, "ಇದೊಂದು ಸರಳ ಪ್ರಕ್ರಿಯೆ. ನಾವು ಡೈನಮೋದಿಂದ ಕರೆಂಟ್ ಅನ್ನು ಉತ್ಪಾದಿಸುತ್ತೇವೆ ಮತ್ತು ನಂತರ ಗುಂಡಿಯನ್ನು ಒತ್ತುತ್ತೇವೆ. ನಂತರ ಅದು 9 ಸೆಕೆಂಡುಗಳಲ್ಲಿ ಎಲ್ಲಾ ಆಘಾತ ಟ್ಯೂಬ್‌ಗಳಲ್ಲಿ ಡಿಟೋನೇಟರ್‌ಗಳನ್ನು ಹೊತ್ತಿಸುತ್ತದೆ." ಎಂದು ತಿಳಿಸಿದರು.
ಇದನ್ನೂ ಓದಿ: Noida Twin Tower: 70 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಅವಳಿ ಗೋಪುರ ಧ್ವಂಸಕ್ಕೆ ಕಾರಣವಾಗಿದ್ದೇ ಈ ವಿಚಾರ
ಸುಮಾರು 100 ಮೀಟರ್ ಎತ್ತರದ ರಚನೆಗಳನ್ನು ಕೆಡವಲು ತೊಡಗಿರುವ ಭಾರತೀಯ ಮತ್ತು ವಿದೇಶಿ ಬ್ಲಾಸ್ಟರ್‌ಗಳ ತಂಡವನ್ನು ಹೊರತುಪಡಿಸಿ, ಅವಳಿ ಗೋಪುರಗಳ ಸುತ್ತಲೂ 500 ಮೀಟರ್ ತ್ರಿಜ್ಯದಲ್ಲಿ ಹೊರಗಿಡುವ ವಲಯವನ್ನು ರಚಿಸಲಾಗುವುದು, ಅಲ್ಲಿ ಯಾವುದೇ ಮಾನವ ಅಥವಾ ಪ್ರಾಣಿಗಳನ್ನು ಅನುಮತಿಸಲಾಗುವುದಿಲ್ಲ. ಎಲ್ಲಾ ರೀತಿಯ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅವಳಿ ಗೋಪುರಗಳು ನೆಲಸಮವಾಗುತ್ತಿರುವುದರಿಂದ ಸುತ್ತಮುತ್ತಲಿನ ನಿವಾಸಿಗಳನ್ನು ಆಗಸ್ಟ್ 28 ರಂದು ಬೆಳಿಗ್ಗೆ 7 ಗಂಟೆಯ ಮೊದಲು ಈ ಪ್ರದೇಶದಿಂದ ಬೇರೆಡೆಗೆ ಸ್ಥಳಾಂತರವಾಗುವಂತೆ ಆದೇಶಿಸಲಾಗಿದೆ.
ಒಟ್ಟಾರೆ ಚೇತನ್ ದತ್ತಾ ಅವರ ಬ್ಲಾಸ್ಟಿಂಗ್ ಕಾರ್ಯ ಯಶಸ್ವಿಯಾಗಲಿ ಎನ್ನುವುದೇ ಎಲ್ಲರ ಆಶಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ