ಬೆಂಗಳೂರು: ಚೆಕ್ ಬಳಕೆಗೆ ಸಂಬಂಧಿಸಿದಂತೆ ಆರ್ಬಿಐ ಬ್ಯಾಂಕ್ಗಳಲ್ಲಿ ಪಾಸಿಟಿವ್ ಪೇ ಸಿಸ್ಟಂ ಜಾರಿಗೊಳಿಸುವುದಾಗಿ ಘೋಷಿಸಿತ್ತು. ಈ ಹೊಸ ನಿಯಮಾವಳಿ ಪ್ರಕಾರ 2021ರ ಜನವರಿಯಿಂದ ಬ್ಯಾಂಕ್ಗಳಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ನೀವೇನಾದರೂ ಚೆಕ್ ಮೂಲಕ 50 ಸಾವಿರ ರೂ.ಗಿಂತ ಹೆಚ್ಚು ಹಣ ಪಾವತಿಸಬೇಕಾದರೆ ಹೊಸ ವರ್ಷದಿಂದ ಈ ನಿಯಮಗಳನ್ನು ಅನುಸರಿಸಲೇಬೇಕು. ಇದರಿಂದ ಚೆಕ್ ವಹಿವಾಟಿನಲ್ಲಿ ನಡೆಯುವ ವಂಚನೆಯನ್ನು ತಡೆಯಲು ಸಾಧ್ಯವಿದೆ ಎಂದು ಆರ್ಬಿಐ ತಿಳಿಸಿದೆ. ಹಾಗಿದ್ದರೆ ಆ ಹೊಸ ನಿಯಮಗಳೇನು? ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ...
ಜನವರಿ ತಿಂಗಳಿಂದ 50,000 ರೂ.ಗೂ ಅಧಿಕ ಮೊತ್ತವನ್ನು ಚೆಕ್ ಮೂಲಕ ಪಾವತಿ ಮಾಡುವುದಾದರೆ ಆಯಾ ಬ್ಯಾಂಕ್ಗಳು ಗ್ರಾಹಕರಿಂದ ಮರು ದೃಢೀಕರಿಸಿಕೊಳ್ಳುತ್ತವೆ. ಚೆಕ್ಗಳನ್ನು ನೀಡಿದವರು ಬ್ಯಾಂಕ್ಗಳಿಗೆ ಮೆಸೇಜ್, ಮೊಬೈಲ್ ಆ್ಯಪ್, ಇಂಟರ್ನೆಟ್ ಬ್ಯಾಂಕಿಂಗ್, ಎಟಿಎಂ ಅಥವಾ ಇತರೆ ಸಾಧನಗಳ ಬಳಸಿ ಚೆಕ್ನ ಮಾಹಿತಿಯನ್ನು ನೀಡಬೇಕು. 2021ರ ಜನವರಿ 1ರಿಂದ ಈ ಹೊಸ ನಿಯಮ ಜಾರಿಯಾಗಲಿದೆ.
50,000 ರೂ.ಗೂ ಅಧಿಕ ಹಣದ ವಹಿವಾಟನ್ನು ಚೆಕ್ ಮೂಲಕ ನಡೆಸುವುದಾದರೆ ಬ್ಯಾಂಕ್ಗಳಿಗೆ ಆ ಚೆಕ್ ಮಾಹಿತಿಯನ್ನು ನೀಡಿ, ಮರು ದೃಢೀಕರಿಸಬೇಕು. ಆ ಬಳಿಕವೇ ಆ ಹಣವನ್ನು ಡ್ರಾ ಮಾಡಲು ಸಾಧ್ಯ. ಇದರಿಂದ ಚೆಕ್ ಬಳಸಿ ವಂಚನೆ ಮಾಡುವುದನ್ನು ನಿಯಂತ್ರಿಸಲು ಸಾಧ್ಯ ಎಂದು ಆರ್ಬಿಐ ಹೇಳಿದೆ. ಆದರೆ, ಈ ನಿಯಮ ಎಲ್ಲ ಗ್ರಾಹಕರಿಗೂ ಕಡ್ಡಾಯವಲ್ಲ. ಅಧಿಕ ಹಣದ ವಹಿವಾಟು ನಡೆಸುವವರು ಹಾಗೂ ತಮ್ಮ ಹಣದ ವರ್ಗಾವಣೆಯಲ್ಲಿ ಹೆಚ್ಚಿನ ಭದ್ರತೆಯನ್ನು ಬಯಸುವವರು ಈ ಆಯ್ಕೆಯನ್ನು ಬಳಸಿಕೊಳ್ಳಬಹುದು.
ಬ್ಯಾಂಕ್ಗಳಲ್ಲಿ ಈ ಆಯ್ಕೆ ಪಡೆಯುವುದು ಹೇಗೆ?:
2021ರ ಜನವರಿಯಿಂದ ಪಾಸಿಟಿವ್ ಪೇ ಸಿಸ್ಟಂ ಮೂಲಕ ಚೆಕ್ ವಿತರಣೆ ಮಾಡಲು ಇಚ್ಛಿಸುವವರು ತಮ್ಮ ಮೊಬೈಲ್ನಿಂದ SMS ಕಳುಹಿಸುವ ಮೂಲಕ, ಮೊಬೈಲ್ನಲ್ಲಿ ಬ್ಯಾಂಕ್ನ ಆ್ಯಪ್ ಹಾಕಿಕೊಳ್ಳುವ ಮೂಲಕ, ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಎಟಿಎಂ ಮೂಲಕವೂ ಬ್ಯಾಂಕ್ ಕೇಳುವ ಮಾಹಿತಿಯನ್ನು ಆನ್ಲೈನ್ನಲ್ಲಿ ಸಲ್ಲಿಸಬೇಕು. ಆ ಎಲ್ಲ ಮಾಹಿತಿಯೂ ಬ್ಯಾಂಕ್ನಲ್ಲಿ ಅಪ್ಡೇಟ್ ಆದ ನಂತರ ಈ ಆಯ್ಕೆಯನ್ನು ಬಳಸಲು ಸಾಧ್ಯವಿದೆ. ಬಳಿಕ, ನಿಮ್ಮ ಖಾತೆಯಿಂದ ಚೆಕ್ ಮೂಲಕ 50 ಸಾವಿರ ರೂ.ಗೂ ಅಧಿಕ ಹಣ ಡ್ರಾ ಆಗುವ ವೇಳೆ ಬ್ಯಾಂಕ್ ನಿಮ್ಮ ಬಳಿ ಮರು ದೃಢೀಕರಿಸಿಕೊಳ್ಳುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ