ಚರಂಡಿಯಲ್ಲಿ ಬಿದ್ದ ಮಗುವಿಗೆ 'ಫ್ರೀಡಂ' ಎಂದು ನಾಮಕರಣ

news18
Updated:August 16, 2018, 3:48 PM IST
ಚರಂಡಿಯಲ್ಲಿ ಬಿದ್ದ ಮಗುವಿಗೆ 'ಫ್ರೀಡಂ' ಎಂದು ನಾಮಕರಣ
news18
Updated: August 16, 2018, 3:48 PM IST
ನ್ಯೂಸ್​18 ಕನ್ನಡ

ಚೆನ್ನೈ (ಆ. 16): ನಿನ್ನೆ ದೇಶದಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ. ಎಲ್ಲರೂ ಬಣ್ಣ-ಬಣ್ಣದ ಬಟ್ಟೆ ತೊಟ್ಟು ಸಂಭ್ರಮಿಸುತ್ತಿದ್ದರೆ ಆಗಷ್ಟೆ ಹುಟ್ಟಿದ ಆ ಮಗು ಚಳಿಯಿಂದ ಒಂದೇಸಮನೆ ಅಳುತ್ತಿತ್ತು. ಮೈಮೇಲೆ ತುಂಡು ಬಟ್ಟೆಯೂ ಇಲ್ಲದೆ, ಮೈಗೆಲ್ಲ ಮಣ್ಣು, ಗಲೀಜನ್ನು ಮೆತ್ತಿಕೊಂಡು ಚರಂಡಿಯಲ್ಲಿ ಬಿದ್ದಿದ್ದ ಆ ಮಗುವನ್ನು ಯಾರೊಬ್ಬರೂ ಮುಟ್ಟುವ ಮನಸು ಮಾಡಲಿಲ್ಲ. ಆಗ ಅಲ್ಲಿಗೆ ಬಂದ ಓರ್ವ ಮಹಿಳೆ ಆ ಮಗುವನ್ನು ಕೈಗೆತ್ತಿಕೊಂಡಳು, ಮನೆಗೆ ಕರೆದುಕೊಂಡು ಹೋಗಿ ಆರೈಕೆ ಮಾಡಿದಳು..

ಚೆನ್ನೈನಲ್ಲಿ ನಿನ್ನೆ ಚರಂಡಿಯಲ್ಲಿ ಬಿದ್ದಿದ್ದ ನವಜಾತ ಶಿಶುವನ್ನು ನೋಡಿದರೆ ಹುಟ್ಟಿ ಹೆಚ್ಚು ಹೊತ್ತಾದಂತಿರಲಿಲ್ಲ. ಕೊರೆವ ಚಳಿಗೆ, ಚರಂಡಿಯೊಳಗಿನ ನೀರಿನ ಥಂಡಿಗೆ ಜೀವ ಹೋಗುವಂತೆ ಅಳುತ್ತಿದ್ದ ಆ ಗಂಡುಮಗುವನ್ನು ಚೆನ್ನೈನ ಎಸ್​ವಿಎಸ್​ ನಗರದ ಕೆ. ಗೀತಾ ಎಂಬಾಕೆ ಎತ್ತಿಕೊಂಡು ಆರೈಕೆ ಮಾಡಿದ್ದಾರೆ. ಆ ಮಗುವಿಗೆ ಆಶ್ರಯ ನೀಡಿದ್ದು ಮಾತ್ರವಲ್ಲದೆ ಸ್ವಾತಂತ್ರ್ಯೋತ್ಸವ ದಿನದಂದು ಹುಟ್ಟಿದ ಆ ಮಗುವಿಗೆ ಫ್ರೀಡಂ ಎಂದು ಹೆಸರಿಟ್ಟಿದ್ದಾಳೆ!

ಹೊರಗೆ ಮಳೆ ಹನಿಯುತ್ತಿದ್ದಾಗ ಮನೆಯೊಳಗೆ ಕುಳಿತಿದ್ದ ಗೀತಾ ಅವರಿಗೆ ಹೊರಗೆ ಮಗು ಅಳುತ್ತಿದ್ದ ಶಬ್ದ ಕೇಳಿಸಿದೆ. ಹೊರಬಂದು ಹುಡುಕಾಡಿದಾಗ ಚರಂಡಿಯ ಎರಡು​ ಪೈಪುಗಳ ನಡುವೆ ಸಿಲುಕಿಕೊಂಡಿದ್ದ ಮಗುವನ್ನು ನೋಡಿದರು. ಮಣ್ಣು ಮತ್ತು ಹುಳಗಳಿಂದ ಮುತ್ತಿಕೊಂಡಿದ್ದ ಆ ಗಂಡುಮಗುವಿನ ಕುತ್ತಿಗೆ ಸುತ್ತ ಕರುಳುಬಳ್ಳಿ ಸುತ್ತಿಕೊಂಡಿತ್ತು.

ಆ ಮಗುವನ್ನು ಮನೆಗೆ ಕರೆದುಕೊಂಡು ಹೋದ ಗೀತಾ ಅವರು ಕರುಳುಬಳ್ಳಿಯನ್ನು ಕತ್ತರಿಸಿ, ಬಿಸಿನೀರಿನಿಂದ ಸ್ನಾನ ಮಾಡಿಸಿ ಸ್ವಚ್ಛಗೊಳಿಸಿದರು. ಬಳಿಕ, ಅಕ್ಕಪಕ್ಕದ ಮನೆಯವರೊಂದಿಗೆ ಮಗುವನ್ನು ಆಸ್ಪತ್ರೆ​ಗೆ ಕರೆದುಕೊಂಡು ಹೋಗಿ ಪರೀಕ್ಷಿಸಲಾಯಿತು. ಸದ್ಯಕ್ಕೆ ಆ ಮಗು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿಗಾದಲ್ಲಿದೆ. ಸ್ವಾತಂತ್ರ್ಯೋತ್ಸವ ದಿನದಂದೇ ಹುಟ್ಟಿದ ಆ ಮಗುವಿಗೆ 'ಸುತಾಂತಿರಂ' ಅಥವಾ ಫ್ರೀಡಂ ಎಂದು ಗೀತಾ ನಾಮಕರಣ ಮಾಡಿದ್ದಾರೆ.

ಸದ್ಯಕ್ಕೆ ಅದು ಯಾರ ಮಗು, ಯಾರು ಅದನ್ನು ಅಲ್ಲಿ ಬಿಸಾಡಿದ್ದು ಎಂಬ ಮಾಹಿತಿ ಸಿಕ್ಕಿಲ್ಲ. ಪೋಲೀಸರು ನಿನ್ನೆ ಮುಂಜಾನೆ ಆಸ್ಪತ್ರೆಯಲ್ಲಿ ಡೆಲಿವರಿಯಾದ ಮಕ್ಕಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಹಾಗೇ, ಆ ಪ್ರದೇಶದ ಸಿಸಿಟಿವಿಯನ್ನು ಸಹ ಪರಿಶೀಲಿಸುತ್ತಿದ್ದಾರೆ.
First published:August 16, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ